ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಕ್ಷಣೆ ಮತ್ತು ಗೋಮಾಂಸ ಭಕ್ಷಣೆ ಸುತ್ತ...

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲ ಕಟ್ಟೆ ಎಂಬಲ್ಲಿ  ನಡೆದ ಘಟನೆ ಇದು. 2015ರ ನವೆಂಬರ್‌ 17ರಂದು ಗಸ್ತಿನಲ್ಲಿದ್ದ ಪೊಲೀಸರು ಮಿನಿಲಾರಿಯೊಂದನ್ನು ತಡೆದರು. ಅದರಲ್ಲಿ ಒಂದು ಹಸು, ಐದು ಕೋಣ ಹಾಗೂ ಒಂದು ಎಮ್ಮೆಯನ್ನು ಸಾಗಿಸಲಾಗುತ್ತಿತ್ತು. ವಾಹನದಲ್ಲಿದ್ದ ಮೂವರ ವಿರುದ್ಧ  ಪ್ರಕರಣ ದಾಖಲಾಯಿತು. ಈ ಆರೋಪಿಗಳು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯವರು. ಅವರು ಬಜರಂಗದಳದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು ಎಂಬ ವಿಚಾರ ನಂತರ ಬಹಿರಂಗವಾಯಿತು.

2015ರ ಜುಲೈ 17ರಂದು ನಡೆದ ಇನ್ನೊಂದು ಘಟನೆ; ಪುತ್ತೂರು ತಾಲ್ಲೂಕಿನ ಸವಣೂರು ಗ್ರಾಮದಲ್ಲಿ ಆಟೊ ರಿಕ್ಷಾದಲ್ಲಿ ಕರುವನ್ನು ಸಾಗಿಸಲಾಗುತ್ತಿತ್ತು. ಸ್ಥಳೀಯರು ರಿಕ್ಷಾ ತಡೆದು ಪೊಲೀಸರನ್ನು ಸ್ಥಳಕ್ಕೆ ಕರೆಸಿದರು. ಕರು ಸಾಗಣೆಯ ಹಿಂದೆ ಮೂವರು ಯುವಕರ ಕೈವಾಡ ಇರುವುದು ಬೆಳಕಿಗೆ ಬಂತು. ಅಚ್ಚರಿ ಎಂದರೆ ಅವರೂ ಬಜರಂಗ ದಳಕ್ಕೆ ಸೇರಿದ್ದವರು.
 
ಸುಳ್ಯ ತಾಲ್ಲೂಕಿನ ಸಂಪಾಜೆಯಲ್ಲಿ 2015ರ ಜನವರಿ 15ರಂದು ನಡೆದ ಮತ್ತೊಂದು ಘಟನೆ– ಮೂರು ಹಸುಗಳನ್ನು ಸಾಗಿಸುತ್ತಿದ್ದ ವಾಹನವನ್ನು ಬಜರಂಗದಳದ ಕಾರ್ಯಕರ್ತರು ತಡೆದರು. ವಾಹನದಲ್ಲಿದ್ದ ಕೇರಳದ ಬದಿಯಡ್ಕ ಮೂಲದ ಇಬ್ಬರು ವ್ಯಕ್ತಿಗಳ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದರು. ನಂತರ ತಿಳಿದುಬಂದಿದ್ದೆಂದರೆ ಸುಧಾಕರ್‌ ಎಂಬಾತ ಮೂರು ಹಸುಗಳನ್ನು ಅವರಿಗೆ ಮಾರಾಟ ಮಾಡಿದ್ದ. ನಂತರ ಆತನೇ ಬಜರಂಗದಳದವರಿಗೆ ಸುದ್ದಿ ಮುಟ್ಟಿಸಿದ್ದ.

ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವುದು, ಸಂಘ ಪರಿವಾರದ ಸಂಘಟನೆಗಳ ಕಾರ್ಯಕರ್ತರು ಸಾಗಾಟಗಾರರನ್ನು  ತಡೆದು  ಹಲ್ಲೆ ನಡೆಸುವುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಮಾಮೂಲಿ ವಿದ್ಯಮಾನ ಎಂಬಂತಾಗಿದೆ. ಆದರೆ ಮೇಲೆ ಉದಾಹರಣೆ ನೀಡಿದ ಮೂರು ಘಟನೆಗಳು ಇಂತಹ ಪ್ರಕರಣಗಳ ಭಿನ್ನ ಆಯಾಮಗಳನ್ನು ತೆರೆದಿಡುತ್ತವೆ. ಹಸುವಿನ ಹೆಸರಿನಲ್ಲಿ ನಡೆಯುವ ರಾಜಕೀಯ, ವಸೂಲಿ ದಂಧೆ, ಹಲ್ಲೆ, ಬೆದರಿಕೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೊಸ ತಲ್ಲಣಗಳಿಗೆ ಕಾರಣವಾಗಿವೆ. ಒಂದು ಕಾಲದಲ್ಲಿ ಹೆಗಲಿಗೆ ಹೆಗಲುಕೊಟ್ಟು ಒಗ್ಗಟ್ಟಿನಿಂದ  ಬದುಕುತ್ತಿದ್ದ ಹಿಂದೂ–ಮುಸ್ಲಿಮರ ನಡುವೆ ಕಂದರ ಸೃಷ್ಟಿಸಿವೆ.

ಕರಾವಳಿಯಲ್ಲಿ ನಡೆಯುವ ಗೋ ಸಾಗಾಟದ ವಿಚಾರ ದೊಡ್ಡಮಟ್ಟದಲ್ಲಿ ಗಮನಸೆಳೆದಿದ್ದು 2005ರ ಮಾರ್ಚ್‌ನಲ್ಲಿ. ಉಡುಪಿ ಸಮೀಪದ ಆದಿ ಉಡುಪಿಯಲ್ಲಿ ದನದ ವ್ಯಾಪಾರಿಗಳಿಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ವಿಧಾನ ಮಂಡಲದಲ್ಲೂ ಸದ್ದು ಮಾಡಿತ್ತು. 13 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಿಂದ ಮಾನಸಿಕವಾಗಿ ಜರ್ಝರಿತಗೊಂಡ ದನದ ವ್ಯಾಪಾರಿಗಳು ಕಾನೂನು ಹೋರಾಟದಲ್ಲಿ ಆಸಕ್ತಿ ವಹಿಸಲಿಲ್ಲ. 2008ರಲ್ಲಿ ಈ ಪ್ರಕರಣದ 12 ಆರೋಪಿಗಳು ಖುಲಾಸೆಗೊಂಡರು. ಒಬ್ಬ ಆರೋಪಿ ಅಪಘಾತದಿಂದ ಮೃತಪಟ್ಟಿದ್ದ.

ಗೋವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಪರಿಸ್ಥಿತಿ ಕರಾವಳಿಯಲ್ಲಿ ಸೃಷ್ಟಿಯಾಗಿದ್ದು ಸುಮಾರು 25 ವರ್ಷಗಳಿಂದ ಈಚೆಗೆ. ಹಿಂದೆ ಮುಸ್ಲಿಂ ವ್ಯಾಪಾರಿಗಳು ಊರಿಂದ ಊರಿಗೆ ಹೋಗಿ ದನ, ಎತ್ತು, ಎಮ್ಮೆ, ಕೋಣಗಳನ್ನು ಖರೀದಿಸುತ್ತಿದ್ದರು. ಮುಸ್ಲಿಮರು ದನದ ಮಾಂಸ ತಿನ್ನುತ್ತಾರೆ ಎಂಬುದು ತಿಳಿದಿದ್ದರೂ ಬೇಸಾಯಗಾರರು ವಯಸ್ಸಾದ ಹಾಗೂ ಬೆದೆಗೆ ಬಾರದ ಹಸುಗಳನ್ನು ಅವರಿಗೆ  ಮಾರುತ್ತಿದ್ದರು. ಕೆಲವೊಮ್ಮೆ ಕೊಟ್ಟಿಗೆಯಲ್ಲಿ ದನಗಳ ಸಂಖ್ಯೆ ಹೆಚ್ಚಾಗಿ ಸಾಕಲು ಸಾಧ್ಯವಿಲ್ಲದ ಸ್ಥಿತಿ ಬಂದಾಗ ಹಾಲು ನೀಡುವ ಹಸುಗಳನ್ನೂ ಮಾರುತ್ತಿದ್ದರು. ಇಂತಹ ದನಗಳನ್ನು ವ್ಯಾಪಾರಿಗಳು ಬೇರೆಯವರಿಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದುದೂ ಉಂಟು.

ರೈತರು ಹಾಗೂ ಮುಸ್ಲಿಂ ವ್ಯಾಪಾರಿಗಳ ನಂಟು ಕೇವಲ ಜಾನುವಾರುಗಳ ಮಾರಾಟಕ್ಕೆ ಸೀಮಿತವಾಗಿರಲಿಲ್ಲ. ರೈತರು ಜಾನುವಾರು ಖರೀದಿಸುವ ಬಗ್ಗೆಯೂ ಅವರಿಂದ ಸಲಹೆ ಪಡೆಯುತ್ತಿದ್ದರು. ಉತ್ತಮ ದನ, ಎತ್ತು ಅಥವಾ ಕೋಣ ಸಿಗುತ್ತದೆ ಎಂಬ ಮಾಹಿತಿ ದೊರಕುತ್ತಿದ್ದುದು ಊರೂರು ಸುತ್ತುವ ಈ ವ್ಯಾಪಾರಿಗಳಿಂದಲೇ.   

‘ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಬಳಿಕ ಮುಸ್ಲಿಂ ಸಮುದಾಯದವರನ್ನು ಖಳ ನಾಯಕರನ್ನಾಗಿ ಬಿಂಬಿಸಲು ಗೋವಿನ ವಿಚಾರವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆಗಾಗ್ಗೆ ಗೋವುಗಳ ವಿಷಯ ಪ್ರಸ್ತಾಪಿಸಿ ಯುವ ಮನಸ್ಸುಗಳನ್ನು ಕೆರಳಿಸಲಾಗುತ್ತಿದೆ’ ಎಂದು ಆರೋಪಿಸುತ್ತಾರೆ ಕರಾವಳಿಯಲ್ಲಿ ಕೋಮು ಸೌಹಾರ್ದ ಕದಡುತ್ತಿರುವ ಬಗ್ಗೆ ಅಧ್ಯಯನ ನಡೆಸುತ್ತಿರುವ ಸುರೇಶ ಭಟ್‌ ಬಾಕ್ರಬೈಲ್‌.

ಕಾನೂನಿನಲ್ಲಿರುವ ಕೆಲವು ಅಂಶಗಳು ಜಾನುವಾರುಗಳ ಸಾಗಾಟ ತಡೆಗೆ  ಪೂರಕವಾಗಿವೆ. ಹಫ್ತಾ ಪಡೆದ ಬಜರಂಗದಳದ ಕಾರ್ಯಕರ್ತರು, ಲಂಚ ಪಡೆದ ಪೊಲೀಸರೇ ದನ ಸಾಗಿಸುವವರಿಗೆ ಮಾಹಿತಿ ನೀಡುತ್ತಿರುವುದೂ ಗುಟ್ಟಾಗಿ ಉಳಿದಿಲ್ಲ.

‘ಸಂಘ ಪರಿವಾರದ ಸಂಘಟನೆಗಳ ಜೊತೆ ದನದ ವ್ಯಾಪಾರಿಗಳಿಗೆ ನೇರ ನಂಟಿದೆ. ಅವರಿಗೆ ಹಫ್ತಾ ನೀಡಿದರೆ ಗೋವುಗಳ ಸಾಗಣೆಗೆ ಅಡ್ಡಿ ಇಲ್ಲ. ಕಮಿಷನ್‌ ಕಡಿಮೆಯಾದರೆ ಅವರು ಇನ್ನೊಂದು ಗುಂಪಿಗೆ ಮಾಹಿತಿ ನೀಡಿ ಜಾನುವಾರುಗಳನ್ನು ಹಿಡಿಸುತ್ತಾರೆ. ಹಣ ಹಂಚಿಕೊಳ್ಳುವ ವಿಷಯದಲ್ಲಿ  ಈ  ಮುಖಂಡರು ಜಗಳಮಾಡಿಕೊಳ್ಳುವುದೂ ಇದೆ’ ಎನ್ನುತ್ತಾರೆ ದನದ ವ್ಯಾಪಾರಿಯೊಬ್ಬರು.

ಈ ಲಾಭ–ನಷ್ಟದ ಲೆಕ್ಕಾಚಾರದ ನಡುವೆಯೂ, ಕೊಟ್ಟಿಗೆಯಿಂದಲೇ ದನಗಳನ್ನು ಕದ್ದು ತರುವ ಪ್ರಕರಣಗಳೂ ವ್ಯಾಪಕವಾಗಿ ನಡೆದಿವೆ. ಸುರತ್ಕಲ್‌ ಸಮೀಪ ಮನೆಯವರಿಗೆ ತಲವಾರು ತೋರಿಸಿ ದನಗಳನ್ನು ಕದ್ದೊಯ್ದ ಘಟನೆ ಭಾರಿ ಪ್ರಚಾರ ಪಡೆದಿತ್ತು. ದನವನ್ನು ಸಾಗಿಸುತ್ತಿದ್ದ ವಾಹನದಲ್ಲಿದ್ದವರು ಅದನ್ನು ತಡೆದ ಪೊಲೀಸ್‌ ಸಿಬ್ಬಂದಿಯ ಕೈ ಕಡಿದ ಪ್ರಕರಣಕ್ಕೂ ಕರಾವಳಿ ಸಾಕ್ಷಿಯಾಗಿದೆ. ಇಂತಹ ಘಟನೆಗಳನ್ನು ವೈಭವೀಕರಿಸಿ ಸಾಮಾಜಿಕ ಮಾಧ್ಯಮಗಳ ಮೂಲಕ ವದಂತಿಗಳನ್ನು ಹಬ್ಬಿಸುವ ಮೂಲಕ ಜನರಲ್ಲಿ ವೈಷಮ್ಯ ಕೆರಳಿಸಲಾಗುತ್ತಿದೆ. ಇದು ಎರಡು ಕೋಮುಗಳ ನಡುವಿನ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

‘ಮುಸ್ಲಿಮರಿಗೆ ಗೋವು ಆಹಾರ. ಅದನ್ನು ತಿನ್ನಬಾರದು ಎಂದು ತಡೆಯುವುದು ಸರಿ ಅಲ್ಲ. ಆದರೆ ಒಬ್ಬರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ ದನವನ್ನು ಕದ್ದು ತರುವುದನ್ನು ಯಾರೂ ಒಪ್ಪುವುದಕ್ಕಾಗದು. ವಯಸ್ಸಾದ ಜಾನುವಾರುಗಳನ್ನು ಆಹಾರಕ್ಕಾಗಿ ಬಳಸಿಕೊಳ್ಳುವುದಕ್ಕೆ ಅಡ್ಡಿಯಾಗಿರುವ ಕಾನೂನು ಸಡಿಲಿಸಬೇಕು. ಅಂತಹ ಗೋವುಗಳ ಸಾಗಾಟಕ್ಕೆ ಇರುವ ಅಡ್ಡಿ ಆತಂಕಗಳಿಗೆ ಕಡಿವಾಣ ಹಾಕಬೇಕು. ಆಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಒತ್ತಾಯಿಸುತ್ತಾರೆ ಡಿವೈಎಫ್‌ಐ ಮುಖಂಡ ಮುನೀರ್‌ ಕಾಟಿಪಳ್ಳ.

ರಾಜಕಾರಣ ಪ್ರವೇಶಕ್ಕೆ ಸುಲಭ ಮಾರ್ಗ
ಈಗಲೂ ರಾಜಕೀಯವಾಗಿ ಗುರುತಿಸಿಕೊಳ್ಳುವ ಮಹತ್ವಾಕಾಂಕ್ಷೆಯುಳ್ಳ ಅನೇಕರಿಗೆ ಸುಲಭದ ದಾರಿ ಎಂದರೆ ಗೋಸಾಗಾಟಕ್ಕೆ ತಡೆಯೊಡ್ಡುವುದು. ಇದಕ್ಕೆ ಯಾವುದೇ ಖರ್ಚಿಲ್ಲ. ಹುಂಬ ಧೈರ್ಯವಿದ್ದರೆ ಸಾಕು. ಗೋಸಾಗಣೆ ಮಾಡುವವರ ಮೇಲೆ ಹಲ್ಲೆ ನಡೆಸಿದ್ದನ್ನೇ ಪ್ರಚಾರದ ತಂತ್ರವನ್ನಾಗಿ ಬಳಸಿ ಸ್ಥಳೀಯ ಸಂಸ್ಥೆಗಳಲ್ಲಿ ಸದಸ್ಯರಾದವರ ದೊಡ್ಡ ಪಟ್ಟಿಯೇ ಕರಾವಳಿ ಜಿಲ್ಲೆಗಳಲ್ಲಿ ಸಿಗುತ್ತದೆ.

ಆದಿ ಉಡುಪಿ ಬೆತ್ತಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಈ ಘಟನೆಯ ಬಳಿಕ ನಗರಸಭೆ ಸದಸ್ಯನಾಗಿ ಬಿಜೆಪಿ ನಾಯಕನಾಗಿ ಗುರುತಿಸಿಕೊಂಡಿದ್ದು ಇದಕ್ಕೆ ಉತ್ತಮ ಉದಾಹರಣೆ. ಗೋಸಾಗಣೆಗೆ ಹಾಗೂ ಅದನ್ನು ತಡೆಯುವ ಕಾರ್ಯಕ್ಕೆ ಬಳಕೆಯಾಗುತ್ತಿರುವವರಲ್ಲಿ ಸುಶಿಕ್ಷಿತರಲ್ಲದ ಯುವಕರೇ ಹೆಚ್ಚು.

ಸಾಗಣೆಗೆ ಮಾನದಂಡಗಳೇನು?
ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಜಾನುವಾರುಗಳ ಸಾಗಾಟಕ್ಕೆ ಸಂಬಂಧಿಸಿ ಕೇಂದ್ರ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಿದೆ. 2016ರ ಜನವರಿ 1ರಿಂದ ಈ ನಿಯಮಗಳು ಜಾರಿಗೆ ಬಂದಿವೆ:

* ವಾಹನದಲ್ಲಿ ಪ್ರತಿ ಜಾನುವಾರಿಗೂ ಪ್ರತ್ಯೇಕ ವಿಭಾಗವಿರಬೇಕು. ದನ ಹಾಗೂ ಎಮ್ಮೆ ಗೆ ಕನಿಷ್ಠ 2 ಮೀಟರ್‌ ಸ್ಥಳಾವಕಾಶ ಇರಬೇಕು.
* ಜಾನುವಾರು ಸಾಗಿಸುವ ವಾಹನದಲ್ಲಿ ಇತರ ಸರಕುಗಳನ್ನು ಸಾಗಿಸಬಾರದು.
* ಜಾನುವಾರು ಸಾಗಿಸುವ ವಾಹನಗಳು ಅದಕ್ಕೆ ಸೂಕ್ತವಾಗಿವೆ ಎಂಬುದನ್ನು ದೃಢೀಕರಿಸಿದ ಬಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಯಿಂದ ವಿಶೇಷ ಪರವಾನಗಿ ಪಡೆಯಬೇಕು.

ಕಾನೂನು ಏನು ಹೇಳುತ್ತದೆ?
ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964’ರ ಸೆಕ್ಷನ್‌ 4ರ ಪ್ರಕಾರ ಯಾವುದೇ ಹಸು ಅಥವಾ ಎಮ್ಮೆಯ ಕರುವನ್ನು ಮಾಂಸಕ್ಕಾಗಿ ಕೊಲ್ಲುವುದು ನಿಷಿದ್ಧ.  12 ವರ್ಷ ಮೀರಿದ  ಅಥವಾ ಅಂಗಊನವಾದ ಎತ್ತು, ಎಮ್ಮೆ ಮತ್ತು ಕೋಣವನ್ನು ಅಥವಾ ಹಾಲುಕೊಡುವುದನ್ನು ಸಂಪೂರ್ಣ ನಿಲ್ಲಿಸಿದ, ಗೊಡ್ಡು ಎಮ್ಮೆಯನ್ನು ಪಶುವೈದ್ಯಾಧಿಕಾರಿಯ ಪ್ರಮಾಣಪತ್ರ ಪಡೆದು ಮಾಂಸಕ್ಕಾಗಿ ಕೊಲ್ಲಬಹುದು.

ಈ ಕಾಯ್ದೆಯ ಸೆಕ್ಷನ್‌ 8 ಹಾಗೂ 9ರ ಪ್ರಕಾರ ಹಸು ಹಾಗೂ ಎಮ್ಮೆಯ ಕರುಗಳನ್ನು ಮಾಂಸಕ್ಕಾಗಿ ಕೊಲ್ಲುವ ಸಲುವಾಗಿ  ಸಾಗಾಟ ಅಥವಾ ಮಾರಾಟ ಮಾಡುವುದಕ್ಕೂ ಅವಕಾಶ ಇಲ್ಲ.

ಸಾಂಕ್ರಾಮಿಕ ರೋಗವನ್ನು ಹೊಂದಿರುವ (ರೇಬಿಸ್‌, ಕಂದುರೋಗ ಇತ್ಯಾದಿ) ಯಾವುದೇ ಪ್ರಾಣಿಗಳನ್ನು  ಕೊಲ್ಲುವುದಕ್ಕೆ ಈ ಕಾಯ್ದೆಯ          ಸೆಕ್ಷನ್‌ 16  ಅವಕಾಶ ಕಲ್ಪಿಸುತ್ತದೆ.

-ಆರ್‌.ಕೆ.ಚೆಲುವಯ್ಯ, ಹೆಚ್ಚುವರಿ ನಿರ್ದೇಶಕ, ಪಶುಸಂಗೋಪನಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT