ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಹಾರ್‌ ಖಾನ್‌ ‘ಫೀವರ್‌’

Last Updated 29 ಜುಲೈ 2016, 19:30 IST
ಅಕ್ಷರ ಗಾತ್ರ

ಮಾಲ್‌ನ ಹೊರಗೆ ಜಿಟಿಜಿಟಿ ಮಳೆ, ಒಳಗೆ ‘ಫೀವರ್‌’ನ ಬಿಸಿ. ಒಂದು ಗಂಟೆಯಿಂದ ಕಾಯುತ್ತಿದ್ದ ಪ್ರೇಕ್ಷಕರಿಗೆ ನೆಚ್ಚಿನ ನಟ, ನಟಿಯರನ್ನು ಕಣ್ತುಂಬಿಕೊಂಡ ಖುಷಿ. ಗೌನ್‌ ಧರಿಸಿದ್ದ ನಟಿ ಹಾಗೂ ಸಿನಿಮಾದ ಹೆಸರಿರುವ ಟೀಶರ್ಟ್‌ ಧರಿಸಿದ್ದ ನಟ ವೇದಿಕೆಯತ್ತ ಬರುತ್ತಲೇ ಎಲ್ಲರತ್ತ ಕೈಬೀಸಿ ಹಾಯ್‌ ಹೇಳಿದರು. ಮಾತಿಗಿಂತ ಮೊದಲು ಸಿನಿಮಾದ ಟೀಸರ್‌ ಪ್ರದರ್ಶನ ನಡೆಯಿತು.

ಗರುಡಾ ಮಾಲ್‌ನ ಐನಾಕ್ಸ್ ಸಭಾಂಗಣಕ್ಕೆ ‘ಫೀವರ್‌’ ಹಿಂದಿ ಚಿತ್ರದ ಪ್ರಚಾರಕ್ಕೆಂದು ಶುಕ್ರವಾರ ಚಿತ್ರತಂಡ ಬಂದಿತ್ತು.  ನಟಿ ಗೌಹಾರ್‌ ಖಾನ್‌ ಸಿನಿಮಾ ಬಗ್ಗೆ ಮಾತನಾಡಿದರು.

2009ರಲ್ಲಿ ರಣಬೀರ್‌ ಕಪೂರ್‌ ನಾಯಕನಾಗಿದ್ದ ‘ರಾಕೆಟ್‌ ಸಿಂಗ್‌: ಸೇಲ್ಸ್‌ಮನ್‌ ಆಫ್ ದ ಇಯರ್‌’ ಚಿತ್ರದ ಮೂಲಕ ಬಾಲಿವುಡ್‌ ಪ್ರವೇಶಿಸಿದ ಗೌಹಾರ್‌ ಮೊದಲ ಚಿತ್ರದಿಂದಲೇ ಗಮನ ಸೆಳೆದ ಪ್ರತಿಭಾವಂತೆ. ಪುಣೆ ಮೂಲದ ಈ ನಟಿ. ಮಾಡೆಲಿಂಗ್‌ನಲ್ಲಿ ಸಾಕಷ್ಟು ಹೆಸರು ಸಂಪಾದಿಸಿದ್ದರು.

ಈಕೆ ಬಿಗ್‌ಬಾಸ್‌ 7 ಆವೃತ್ತಿಯ ವಿಜೇತರೂ ಹೌದು. ‘ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಮುಂಬೈ’, ‘ಗೇಮ್‌’, ‘ಇಷ್ಕ್‌ಜಾದೆ’, ‘ಕ್ಯಾ ಕೂಲ್‌ ಹೈ ಹಮ್‌’ ಗೌಹಾರ್‌ ನಟಿಸಿರುವ ಕೆಲವು ಪ್ರಮುಖ ಚಿತ್ರಗಳು

‘ಫೀವರ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಸ್ವಿಟ್ಜರ್ಲೆಂಡ್‌ನಲ್ಲಿ ಚಿತ್ರೀಕರಣವಾಗಿದೆ. ನನ್ನದು ಕಾವ್ಯಾ ಚೌಧರಿ ಪಾತ್ರ. ಇನ್ನುಳಿದಂತೆ ಸಿನಿಮಾ ನೋಡಿ ಎಂಜಾಯ್‌ ಮಾಡಿ’ ಎಂದು ಮುಗುಳ್ನಕ್ಕರು ಗೌಹಾರ್‌. ಅವರೊಂದಿಗೆ ನಡೆಸಿದ ಚುಟುಕು ಮಾತುಕತೆ ಇಲ್ಲಿದೆ.

* ಬಿಗ್‌ಬಾಸ್‌ನಿಂದ ಏನು ಕಲಿತಿರಿ?
ನನಗೆ ಮರೆಯಲಾಗದ ನೆನಪುಗಳನ್ನು ಕಟ್ಟಿಕೊಟ್ಟ ಷೋ ಅದು. ಅಲ್ಲಿ ಎಲ್ಲರೂ ಸ್ನೇಹಿತರಾದರು. ನನ್ನನ್ನು ನಾನು ಅರ್ಥ ಮಾಡಿಕೊಳ್ಳಲು ಸಮಯ ಸಿಕ್ಕಿತು.

* ಐಟಂ ಹಾಡುಗಳಲ್ಲಿ ನಟಿಸುವುದು, ಬಿಕಿನಿ ಧರಿಸುವುದಕ್ಕೆ ವಿರೋಧ ವ್ಯಕ್ತವಾಗಿದೆಯಾ?
ಧರ್ಮದ ಬಗ್ಗೆ  ನಾನು ಮಾತನಾಡುವುದಿಲ್ಲ. ಇಸ್ಲಾಂ ಧರ್ಮವನ್ನು ನಂಬುತ್ತೇನೆ, ಗೌರವಿಸುತ್ತೇನೆ. ಇದು ಬಹಳ ಸೂಕ್ಮ ವಿಚಾರ, ಹಾಗಾಗಿ ಹೆಚ್ಚು ಚರ್ಚೆ ಬೇಡ.

* ಬೆಂಗಳೂರು ಬಗ್ಗೆ ಹೇಳಿ...
ಬಹಳಷ್ಟು ಬಾರಿ ಬೆಂಗಳೂರಿಗೆ ಬಂದಿದ್ದೇನೆ. ಎಲ್ಲ ಪ್ರದೇಶಗಳನ್ನೂ ನೋಡಿಲ್ಲ. ನನ್ನ ಸೋದರಿ ಇಲ್ಲಿನ ಹುಡುಗನನ್ನೇ ಮದುವೆಯಾಗಿದ್ದಾಳೆ. ಇಲ್ಲಿಗೆ ಬಂದಾಗ ದಾಲ್‌ ಫಾಲ್‌ ಹಾಗೂ ಮಟನ್‌ ತಿನ್ನುತ್ತೇನೆ.

* ನಿಮ್ಮ ಫಿಟ್‌ನೆಸ್‌ ಮಂತ್ರ?
ಜಿಮ್‌ಗೆ ಹೋಗುತ್ತೇನೆ, ಭಾರ ಎತ್ತುವುದು, ಕಾರ್ಡಿಯೊ ಹಾಗೂ ಜಾಗಿಂಗ್‌ ಮಾಡುತ್ತೇನೆ. ಪ್ರತಿದಿನ ಒಂದರಿಂದ ಒಂದೂವರೆ ಗಂಟೆ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತೇನೆ.

* ನಿಮಗೇ ಇಷ್ಟವಾದ ನಿಮ್ಮ ಅಭಿನಯದ ಅತ್ಯುತ್ತಮ ಚಿತ್ರ?
ನನ್ನ ಅಭಿನಯದ ಎಲ್ಲಾ ಸಿನಿಮಾಗಳು ನನ್ನ ಹೃದಯಕ್ಕೆ ಹತ್ತಿರವಾಗಿವೆ.

* ಕನ್ನಡದ ಯಾವುದಾದರೂ ಸಿನಿಮಾ ನೋಡಿದ್ದೀರಾ?
ನಾನು ಯಾವ ಕನ್ನಡ ಸಿನಿಮಾವನ್ನೂ ನೋಡಿಲ್ಲ.

ಆಗಸ್ಟ್‌ 5ಕ್ಕೆ ಬಿಡುಗಡೆ
‘ಫೀವರ್‌’ ಚಿತ್ರದ ಮುಖ್ಯಪಾತ್ರದಲ್ಲಿ ರಾಜೀವ್‌ ಖಂಡೇಲ್‌ವಾಲ್‌, ಕ್ಯಾಥರಿನಾ ಮರಿನೊ ಅಭಿನಯಿಸಿದ್ದಾರೆ. ರಾಜೀವ್‌ ಜವೇರಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆಗಸ್ಟ್‌ 5ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

ಡ್ಯಾನ್ಸರ್ ಹಂಟ್‌
ಸೋನಿ ಎಂಟರ್‌ಟೈನ್‌ಮೆಂಟ್ ಚಾನೆಲ್‌ ಮಕ್ಕಳಿಗಾಗಿ ಡ್ಯಾನ್ಸರ್ ಹಂಟ್ ಸ್ಪರ್ಧೆಯನ್ನು ಆಯೋಜಿಸಿದ್ದು, ಇದಕ್ಕಾಗಿ ದೇಶಾದ್ಯಂತ ಆಡಿಷನ್ ಆರಂಭವಾಗಿದೆ.ನಗರದಲ್ಲಿ ಇತ್ತೀಚೆಗೆ ಡ್ಯಾನ್ಸರ್ ಹಂಟ್‌ಗಾಗಿ ಆಡಿಷನ್‌ ನಡೆಸಲಾಯಿತು.  ಇದರಲ್ಲಿ ಒಟ್ಟು 200 ಮಕ್ಕಳು ಭಾಗವಹಿಸಿದ್ದರು. 6 ಮಕ್ಕಳು ಮುಂದಿನ ಹಂತಕ್ಕೆ ಆಯ್ಕೆಯಾದರು. ಡ್ಯಾನ್ಸರ್ ಹಂಟ್‌ ಸ್ಪರ್ಧೆಯಲ್ಲಿ ಬಾಲಿವುಡ್‌ ಕೊರಿಯಾಗ್ರಾಫರ್ ಗೀತಾ ಕಪೂರ್, ಚಿತ್ರ ನಿರ್ದೇಶಕ ಅನುರಾಗ್ ಬಸು ಮತ್ತು ನಟಿ ಶಿಲ್ಪಾಶೆಟ್ಟಿ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT