ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಭಾರತದ ದೃಷ್ಟಿಯಲ್ಲಿ ಕೇಂದ್ರ ಬಜೆಟ್

Last Updated 20 ಜುಲೈ 2014, 19:30 IST
ಅಕ್ಷರ ಗಾತ್ರ

2014–15 ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಗ್ರಾಮ ಮತ್ತು ಗಾಂಧಿ ಪೂರ್ಣ­ವಾಗಿ ಹಿನ್ನೆಲೆಗೆ ಸೇರಿದಂತೆ ನಿಸುತ್ತದೆ. ಈಗ ನಡೆದಿರುವ ಔದ್ಯೋಗೀಕರಣ ಮತ್ತು ನಗ­ರೀ­­ಕರಣಗಳ ನಂತರವೂ ಗ್ರಾಮೀಣ ಭಾರತ ವೆಂಬು­ದೊಂದಿದೆ. ಪಿ.ವಿ.ನರಸಿಂಹ ರಾವ್ ಪ್ರಧಾನಿಯಾಗಿದ್ದಾಗ ಪ್ರಾರಂಭಿಸಿದ್ದ ಹೊಸ ಆರ್ಥಿಕ ನೀತಿಯ ಕಾರಣದಿಂದಾಗಿ ದೇಶದಲ್ಲಿ ನಗ­ರ­ಭಾರತ ಮತ್ತು ಗ್ರಾಮಭಾರತ ಎಂಬ ಭೇದ ಉಂಟಾಯಿತು. ಸ್ವಾತಂತ್ರ್ಯ ಬರುವವರೆಗೆ ಭಾರತ ಗ್ರಾಮೀಣ ಭಾರತವೇ ಆಗಿತ್ತು.

ಔದ್ಯೋಗೀಕರಣ ಹಾಗೂ ಶೈಕ್ಷಣಿಕ ಪ್ರಸಾರದ ನಂತರವೂ ದೇಶದ ಜನಸಂಖ್ಯೆಯಲ್ಲಿ ನೂರಕ್ಕೆ ಸುಮಾರು ಎಪ್ಪತ್ತರಷ್ಟು ಜನ ಹಳ್ಳಿಗಳಲ್ಲಿದ್ದಾರೆ. ಕೈಗಾರಿಕೆಗೆ ಬೇಕಾಗುವ ಕಚ್ಚಾ ಪದಾರ್ಥ­ಗ­ಳನ್ನು ಹಳ್ಳಿಗಳಲ್ಲಿ ವಾಸಿಸುತ್ತಿರುವ ಬಹು­ಸಂಖ್ಯಾತ ರೈತರು ಉತ್ಪಾದಿಸುತ್ತಿದ್ದಾರೆ. ಜೊತೆಗೆ ದೇಶಕ್ಕೆ ಅಗತ್ಯವಾದ ಮಾನವ ಸಂಪನ್ಮೂಲ­ಗ­ಳನ್ನು ಗ್ರಾಮಗಳೇ ಒದಗಿಸುತ್ತಿವೆ. ಇಂದು ಕೂಡ ಹಳ್ಳಿಗಳು ‘ದೇಶದ ಬೆನ್ನೆಲುಬು’. ಹೀಗಿರುವಾಗ ಕೇಂದ್ರ ಬಜೆಟ್, ಗ್ರಾಮಗಳನ್ನು ಪೂರ್ಣವಾಗಿ ಉಪೇ­ಕ್ಷಿಸಿ ದೇಶದ ಅಭಿವೃದ್ಧಿ ಮಾಡುವ ಕ್ರಮ ತರವಲ್ಲ.

ದೇಶದ ಗ್ರಾಮಗಳು ವ್ಯವಸಾಯವನ್ನೇ ಪ್ರಧಾನವಾಗಿಟ್ಟುಕೊಂಡು 21ನೇ ಶತಮಾನಕ್ಕೆ  ಅನು­­­ಗುಣ­ವಾಗಿ ಗಾಂಧೀಜಿ ಕಂಡಿದ್ದ ‘ಕನಸಿನ ಭಾರತ’ದ ರೀತಿಗೆ ತಕ್ಕಂತೆ ಮಾರ್ಪಡಿ­ಸು­ವುದರ ಬಗ್ಗೆ ಹಣಕಾಸು ಸಚಿವರು  ಯಾವ ಕ್ರಮ­­ವನ್ನೂ ಕೈಗೊಳ್ಳದಿರುವುದು ವಿಷಾದನೀಯ.
ಗ್ರಾಮಸ್ವರಾಜ್ಯ ಸಿದ್ಧಾಂತ ಮೇರೆಗೆ ಸರ್ವಾಂಗ ಸುಂದರ ಗ್ರಾಮಗಳನ್ನು ನಿರ್ಮಿಸುವ ಬದಲು ನೂರು ಹೊಸ ಸುಸಜ್ಜಿತ ನಗರಗಳನ್ನು (ಸ್ಮಾರ್ಟ್‌­­ಸಿಟಿ) ನಿರ್ಮಿಸಲು ಮುಂದಾಗಿರು­ವುದು ಒಳ್ಳೆಯ ಮುನ್ಸೂಚನೆಯಲ್ಲ.

ಈಗಾಗಲೇ ಬೆಳೆ­ದಿರುವ ಮಹಾನಗರಗಳು ಸೈತಾನನ ಕಾರ್ಖಾನೆಗಳಾಗಿವೆ. ದೇಶದಲ್ಲಿರುವ 500ಕ್ಕೂ ಹೆಚ್ಚು ಜಿಲ್ಲೆ­­ಗಳಲ್ಲಿ ಜಿಲ್ಲೆಗೆ ಹತ್ತರಂತೆಯಾದರೂ ಸರ್ವಾಂಗ ಸುಂದರ ಗ್ರಾಮಗಳನ್ನು ನಿರ್ಮಿಸಿದ್ದರೆ ನಗ­ರೀಕರಣಕ್ಕೆ ಪರ್ಯಾಯವಾಗಿ ಇನ್ನೊಂದು ವ್ಯವಸ್ಥೆಯನ್ನು ಕಲ್ಪಿಸಬಹುದಾಗಿತ್ತು. ಇಂಥ ಯೋಚನೆ ಮಾಡದೆ ಕೇವಲ ನಗರಗಳ ಮತ್ತು ಅಲ್ಲಿನ ಜನರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಸ್ಥಾನ ಕೊಟ್ಟಿರುವುದು ಸರಿಯಲ್ಲ. ಬಜೆಟ್‌ನಲ್ಲಿ ಗ್ರಾಮ­ಗಳ ಉದ್ಧಾರದ ಚಿಂತನೆ ಮಾಡದೆ ರೈತರಿಗೆ ₨ 8 ಲಕ್ಷ ಕೋಟಿ ಸಾಲ ನೀಡುವುದರ ಮೂಲಕ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಲು ಪ್ರಯತ್ನಿಸಿ ರುವುದು ವಿಷಾದನೀಯ.

ರೈತರ ಆತ್ಮಹತ್ಯೆಯನ್ನು ತಡೆಯುವ ಬಗ್ಗೆ ನಿಜವಾದ ಕಳಕಳಿ ಬಜೆಟ್‌ನಲ್ಲಿ ಬಿಂಬಿತವಾಗಿಲ್ಲ. ವ್ಯವ­ಸಾಯ ಮತ್ತು ಗ್ರಾಮಾಭಿವೃದ್ಧಿಗಾಗಿ ವಾರ್ಷಿ­ಕ­ವಾಗಿ ಸರಾಸರಿ ₨ 98ಸಾವಿರ ಕೋಟಿ  ಮೀಸಲಿಟ್ಟಿದ್ದರೂ ಗ್ರಾಮೀಣ ಪ್ರದೇಶದ ರೈತರ ವಾರ್ಷಿಕ ಆದಾಯ ಕಡಿಮೆ ಇದೆ ಇಲ್ಲವೇ ಕುಸಿ­­ಯುತ್ತಿದೆ. ಜೀವನದ ನಿರ್ವಹಣೆಗೆ ಅಗತ್ಯ­ವಾದ ಕನಿಷ್ಠ ಆದಾಯ ಮಿತಿಯನ್ನು ಗೊತ್ತು­ಮಾ­ಡಲು ಸರ್ಕಾರದ ಬಜೆಟ್ ಸಮರ್ಥ­ವಾಗಿಲ್ಲ.

ಅಲ್ಲದೇ ಕೃಷಿಗೆ ಪೂರಕವಾದ ಎಣ್ಣೆ, ಬಟ್ಟೆ, ಮರ–ಮುಟ್ಟು, ಉತ್ಪಾದನೆ ಮತ್ತು ದಿನ­ಬಳಕೆಯ ವಸ್ತುಗಳ ಉತ್ಪಾದನೆಗಳಿಗೆ ಸಂಬಂಧಿ­ಸಿದಂತೆ ಗ್ರಾಮೋದ್ಯೋಗಗಳ ಬಗ್ಗೆ ಈ ಬಜೆಟ್ ಚಿಂತನೆ ಮಾಡೇ ಇಲ್ಲ. ಕೇವಲ ನಗರಗಳಲ್ಲಿ ಉಂಟಾಗಬಹುದಾದ ನಿರುದ್ಯೋಗಕ್ಕೆ ಉದ್ಯೋಗ ನಿರ್ಮಿಸುವ ಆಲೋ­ಚನೆ ಮಾಡಲಾಗಿದೆ.

2011ರ ಜನಗಣತಿಯ ವರ­ದಿಯ ಪ್ರಕಾರ 25 ರಿಂದ 29 ವರ್ಷದ ಒಳ­ಗಿನ ನಿರುದ್ಯೋಗಿ ಯುವಕರ ಸಂಖ್ಯೆ ಶೇಕಡ 18ಕ್ಕೆ ಏರಿದೆ. ನಾಲ್ಕು ಕೋಟಿಗೂ ಹೆಚ್ಚು ಯುವ­ಕರು ನಿರುದ್ಯೋಗಿಗಳಾಗಿದ್ದಾರೆ. ಚುನಾವಣೆ ಮುಗಿದ ಕೂಡಲೇ ಪ್ರಧಾನ ಮಂತ್ರಿ ನರೇಂದ್ರ ಮೋದಿ­ಯವರು ಒಳ್ಳೆಯ ದಿನಗಳು ಬರಲಿವೆ­ಯೆಂದು ಭರವಸೆ ಕೊಟ್ಟಿರುವುದರಿಂದ ದೇಶ­ದಲ್ಲಿ ಈಗ ಕಷ್ಟದಲ್ಲಿರುವ ಜನರೆಲ್ಲರೂ ಒಳ್ಳೆಯ ದಿನಗಳಿಗಾಗಿ ನಿರೀಕ್ಷಿಸುತ್ತಿರುವುದು ಸಹಜವೇ  ಇದೆ.

ಜನಸಾಮಾನ್ಯರಲ್ಲಿ ಮತ್ತು ನಿರುದ್ಯೋಗಿ ಯುವಕರಲ್ಲಿ ಸೃಷ್ಟಿಯಾಗಿರುವ ಈ ನಿರೀಕ್ಷೆ ಕೈಗೂಡಬೇಕಾದರೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಕೇಂದ್ರ ಬಜೆಟ್ ತನ್ನ ದೃಷ್ಟಿಯನ್ನು ಹರಿಸಬೇಕಿತ್ತು. ಆದರೆ ಅದು ಬುಲೆಟ್ ರೈಲು ಸಂಚಾರದ ಮೂಲಕ ದೇಶದ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸಿದೆ.  ಕೆಲವು ರಾಜ್ಯಗಳಲ್ಲಿ ಕೃಷಿ ಮತ್ತು ತೋಟಗಾರಿಕೆಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿ­ಸಲು ₨ 200 ಕೋಟಿ ತೆಗೆದಿರಿಸಲಾಗಿದೆ.

ಈಗಾ­ಗಲೇ ದೇಶದಲ್ಲಿರುವ ಅಂತಹ ವಿಶ್ವವಿ­ದ್ಯಾ­ಲ­ಯಗಳಿಂದ ಎಂಥ ಬಗೆಯ ಪ್ರಯೋ­ಜ­ನವಾ­ಗಿದೆ ಎಂಬುದು ವಿವಾದದ ವಿಷಯ. ಅನೇಕ ಸಲ ಈ ವಿಶ್ವವಿದ್ಯಾಲಯಗಳು ಹೊರ­ತ­ರುವ ಸಂಶೋ­ಧ­ನೆ­ಗಳು ರೈತರ ದಾರಿ ತಪ್ಪಿಸಿವೆ.  ಬಿ.ಟಿ. ಹತ್ತಿ, ಬಿ.ಟಿ. ಬದನೆ ಮುಂತಾದ ಅನೇಕ ಜೀವಶಾಸ್ತ್ರ ತಳಿಗಳು  ಮತ್ತು ಎಂಡೊ­ಸ­ಲ್ಫಾನ್‌ ಏನೆಲ್ಲಾ ಸಮಸ್ಯೆಗಳನ್ನು ಸೃಷ್ಟಿಸಿದೆ ಎಂಬು­ದನ್ನು ಸರ್ಕಾರ ಗಮನಿಸಿಲ್ಲ. ಅಂತಹ ಸಮಸ್ಯೆಗಳ ಬಗ್ಗೆ  ವ್ಯವಸ್ಥಿತ ಮೌಲ್ಯಮಾಪನ ನಡೆದಿಲ್ಲ.

ಪ್ರಯೋ­ಗಾ­ಲ­ಯದಲ್ಲಿ ಸಂಶೋಧನೆಗೊಂಡದ್ದು  ನಿಜವಾಗಿ ಭೂಮಿ ಮೇಲೆ ಬಂದಾಗ ಕಾಣಿಸುವ ಫಲಿತಾಂಶಗಳೇ ಬೇರೆ. ನೈಜ ಸ್ಥಿತಿಯ ಅರಿವಿಲ್ಲ­ದೆಯೇ ರೈತರ ಅಭಿವೃದ್ಧಿಯ ಹೆಸರಿನಲ್ಲಿ ಇಂಥ ಉಪ­ಕ್ರಮ­ಗಳನ್ನು ಸರ್ಕಾರ ಕೈಗೊಳ್ಳುವುದು ಗ್ರಾಮೀಣ ಜೀವನದ ಮೇಲೆ ಬರೆ ಎಳೆದಂತೆ. ಹೊಸ ಬದಲಾವಣೆ ತರುವ ದೃಷ್ಟಿಯಿಂದ ಮತ್ತು ತಮ್ಮೆಲ್ಲರ ಬದುಕು ಹಸನಾಗಲೆಂಬ ಮಹದಾಸೆಯಿಂದ ಜನರು ಹೊಸ ಸರ್ಕಾರ ಬರುವಂತೆ ಮಾಡಿದರು. ಆದರೆ ಹೊಸ ಸರ್ಕಾರದ ಬಜೆಟ್ ಕೂಡ ಹಿಂದಿನ ಸರ್ಕಾರ ಮಂಡಿಸಿದ್ದ ಬಜೆಟ್‌ಗಳಂತೆಯೇ ಅಭಿ­ವೃದ್ಧಿಯೆಂಬ ‘ಕಾಡು ಕುದುರೆ’ ಹತ್ತಿ ಬಂದಿದೆ.

ಆದ್ದರಿಂದ ಗ್ರಾಮಭಾರತಕ್ಕೆ ಈ ಬಜೆಟ್‌ನಲ್ಲಿ  ಯಾವ ಹೊಸತನವೂ ಕಾಣುತ್ತಿಲ್ಲ. ಪಾಶ್ಚಾತ್ಯ ಮಾದರಿಯ ಆರ್ಥಿಕ ನೀತಿ ಮತ್ತು ಕೈಗಾರಿಕಾ ನೀತಿಗಳನ್ನೊಳಗೊಂಡ ಕಾರ್ಬನ್ ಕಾಪಿ ಇದಾ­ಗಿದೆ. ಗ್ರಾಮ ಪ್ರಧಾನ, ಕೃಷಿ ಆಧಾರಿತ ಮತ್ತು  ವಿಕೇಂದ್ರೀಕರಣದಿಂದ ಕೂಡಿದ, ಎಲ್ಲಕ್ಕಿಂತ ಹೆಚ್ಚಾಗಿ ಪರಿಸರಸ್ನೇಹಿ ಉದ್ಯೋಗಸೃಷ್ಟಿ ಮಾಡುವ ಹೊಸಹಾದಿಯ ಅಭಿವೃದ್ಧಿಯನ್ನು ಈ ಬಜೆಟ್ ಪ್ರಾರಂಭಿಸಿದ್ದಿದ್ದರೆ ಗ್ರಾಮಭಾರತ ನಿಟ್ಟು­ಸಿರು ಬಿಡುತ್ತಿತ್ತು. ಆದರೆ ಹಾಗಾಗದೆ ಗ್ರಾಮಭಾರತವನ್ನು ಪ್ಯಾರಿಸ್‌–ಸಿಂಗಪುರ–ನ್ಯೂಯಾರ್ಕ್‌ ಭಾರತವನ್ನಾಗಿ ಮಾಡಲು ಹೊರ­­ಟಿರುವುದು ಮತದಾರರು ಇಟ್ಟು­ಕೊಂಡಿದ್ದ ಆಶೋತ್ತರಗಳಿಗೆ ವಿರುದ್ಧವಾಗಿದೆ.

ಈ ಮೊದಲಿದ್ದ ಸರ್ಕಾರವೂ ರೈತರ ಅಭಿ­ವೃದ್ಧಿ­ಗಾಗಿ ಕೋಟಿಗಟ್ಟಲೆ ಹಣವನ್ನು ಕಡಿಮೆ ಬಡ್ಡಿ ದರ­ದಲ್ಲಿ ಕೊಟ್ಟಿತ್ತಾದರೂ ಇತ್ತೀಚೆಗೆ ಪ್ರಕಟ­ವಾದ ರಾಷ್ಟೀಯ ಅಪರಾಧ ದಾಖಲೆಗಳ ಬ್ಯೂರೊದ  2013ರ ವರದಿಯಂತೆ 11,772 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಅನು­ಕೂಲಕ್ಕೆ ಕೊಟ್ಟ ಸಾಲ ಅವರ ಜೀವನಕ್ಕೆ ಮುಳುವಾಗುತ್ತಿರುವಾಗ ಬಜೆಟ್‌ನಲ್ಲಿ ತೆಗೆದಿ­ರಿಸಿ­ರುವ ₨ ೮ ಲಕ್ಷ ಕೋಟಿ, ರೈತರನ್ನು ನಿಜ­­ವಾಗಲೂ ಉದ್ಧರಿಸುವುದೇ? ಸಾಲ ಕೊಡು­ವುದ­ರಿಂದಲೇ ರೈತರ ಮತ್ತು ಬಡವರ ಉದ್ಧಾರವಾ­ಗುತ್ತದೆ ಎಂಬುದೇ ತಪ್ಪು.

‘ಕೃಷಿ–ನೀರಾವರಿ ಯೋಜನೆ’ಗಾಗಿ ₨ 14,398 ಕೋಟಿ ಹಣವನ್ನೇನೋ ಮೀಸಲಿ­ಡ­ಲಾ­ಗಿದೆಯಾದರೂ ನಗರಗಳ ಅತಿಯಾದ ಬೆಳ­ವ­ಣಿಗೆಯಿಂದ ಕೆರೆಗಳು ಮತ್ತು ಇತರೆ ನೀರಿನ ಮೂಲ­ಗಳು ನಶಿಸಿ ಹೋಗುತ್ತಿವೆ. ನೀರಾವ­ರಿ­ಗೋ­­ಸ್ಕರ ಕಟ್ಟಲಾಗುವ ಹೊಸ ಅಣೆಕಟ್ಟು ಮತ್ತು ಇರುವ ಹಳೆ ಅಣೆಕಟ್ಟುಗಳ ಎತ್ತರ ಎತ್ತರಿ­ಸುವು­ದರಿಂದ ಅನೇಕ ಗ್ರಾಮಗಳು ಮುಳುಗುವುದರ ಜೊತೆಗೆ ಸಾವಿರಾರು ಎಕರೆ ಕಾಡು ನಾಶವಾಗುತ್ತದೆ.

ರಕ್ಷಣಾ ಇಲಾಖೆಗೆ ಕಳೆದ ಸಾಲಿಗಿಂತ ಶೇಕಡ ೧೨.೪೩ರಷ್ಟು ಹೆಚ್ಚು ಹಣ ಮೀಸಲಿಡಲಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ಮಂಡಿತವಾದ ಕೇಂದ್ರ ಬಜೆಟ್‌ಗಳೆಲ್ಲವೂ ರಕ್ಷಣಾ ಇಲಾಖೆಗೆ ಹೆಚ್ಚು ಹಣ ಕೊಡುತ್ತಲೇ ಬಂದಿವೆ. ಜಾಗತಿಕ ರಾಜಕಾರ­ಣ­ದಿಂದಾಗಿ ರಕ್ಷಣಾವ್ಯವಸ್ಥೆಗೆ ಹೆಚ್ಚು ಹಣ ಮೀಸ­ಲಿಡುತ್ತಿರಬಹುದು. ಆದರೆ ಅದರಿಂದ ಮೂಲ ಸಂಪನ್ಮೂಲಗಳ ಮೇಲೆ ಉಂಟಾಗುತ್ತಿರುವ ಭಾರ, ಪರಿಸರಹಾನಿ ಹಾಗೂ ಸಮಾಜದ ಆರೋ­ಗ್ಯ­ಪೂರ್ಣ ಬೆಳವಣಿಗೆ ಕುಂಠಿತವಾಗು­ವು­ದರ ಬಗ್ಗೆ ಆಲೋಚನೆ ಮಾಡುವುದು ಅಗತ್ಯ. ಆಧು­ನಿಕ ಯುಗದಲ್ಲಿ ದೇಶದ ರಕ್ಷಣೆಯ ವಿಚಾ­ರಕ್ಕೆ ಅಂತ್ಯವೇ ಇಲ್ಲ. ತಂತ್ರಜ್ಞಾನ ಬೆಳೆದಂತೆಲ್ಲಾ ರಕ್ಷಣೆಯ ವಿಚಾರ ಸಂರ್ಕೀರ್ಣವಾಗುತ್ತಲೇ ಇದೆ.

ದೇಶದ ರಕ್ಷಣೆಯ ವಿಚಾರದಲ್ಲಿ ಗ್ರಾಮಗಳು ಯಾವ ರೀತಿ ನೆರವಾಗಬಲ್ಲವೆಂದು ಯೋಚಿಸು­ವುದು ಅಗತ್ಯ. ರಕ್ಷಣಾ ಪಡೆ ದೇಶದ ಗಡಿಗಳನ್ನು ಕಾಯುವುದರಲ್ಲಿ ಮುಂಚೂಣಿಯಲ್ಲಿದ್ದರೆ, ಗ್ರಾಮ­­ಗಳು  ಎರಡನೇ ಸುತ್ತಿನ ರಕ್ಷಣೆಯ ಕೋಟೆ­ಗ­ಳಾಗಿವೆ. ದೇಶದ ಎಲ್ಲಾ ಗ್ರಾಮಗಳು ಆರ್ಥಿಕವಾಗಿ ಬಲಿಷ್ಠವಾದರೆ, ಆಹಾರ ಮತ್ತು ಬಟ್ಟೆ ಇತ್ಯಾದಿ ವಿಷಯಗಳಲ್ಲಿ ಸ್ವಾವಲಂಬಿ­ಯಾ­ದರೆ ದೇಶದ ರಕ್ಷಣೆಗೆ  ದೊಡ್ಡ ಬಲ ಬಂದಂತಾ­ಗು­ತ್ತದೆ.

ಈ ಅಂಶವನ್ನು ಸ್ವತಂತ್ರ ಭಾರತದ ಯಾವ ಸರ್ಕಾರವೂ ಗಮನಕ್ಕೆ ತೆಗೆದು ಕೊಂಡಂತೆ ಕಾಣುತ್ತಿಲ್ಲ. ಕೇವಲ ಬಾಹ್ಯಶಕ್ತಿ­ಯನ್ನೇ ಬಲಪಡಿಸಲು ಹೊರಟಿವೆಯೇ ಹೊರತು ಆಂತರಿಕ ಶಕ್ತಿಯನ್ನು ಬಲಪಡಿಸಲು ಚಿಂತಿಸಿಲ್ಲ. ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರುವಾಗ ಅವು­ಗಳನ್ನು ಉಪಯೋಗಿಸಿ ಗ್ರಾಮಗಳನ್ನು ದೇಶದ ಭದ್ರ ಕೋಟೆಯನ್ನಾಗಿ ರೂಪಿಸುವುದು ಅಗತ್ಯ. ಆಗ ದೇಶದ ರಕ್ಷëಣಾ ವ್ಯವಸ್ಥೆಗೆ ಆಗುತ್ತಿರುವ ಸಿಂಹ­ಪಾಲು ಖರ್ಚು ತಗ್ಗಿ ಗ್ರಾಮಾಭಿವೃದ್ಧಿ ಮೂಲಕ ಭಾರತವನ್ನು ಸಶಕ್ತ ಮತ್ತು ಸಬಲ ರಾಷ್ಟ್ರವನ್ನಾಗಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT