ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಸ್ಥರಿಗೆ ಸ್ಮಶಾನದ ಚಿಂತೆ

ತೆಗ್ಗುದಿಣ್ಣೆಯ ರಸ್ತೆಯಲ್ಲಿ ನಡೆಯುವುದು ಕಷ್ಟ
Last Updated 3 ಸೆಪ್ಟೆಂಬರ್ 2015, 11:31 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯಗಳಿಲ್ಲ. ಸ್ಮಶಾನವಿದ್ದರೂ ಅವು ಒತ್ತುವರಿಯಾಗಿವೆ. ಆದರೆ ನಮ್ಮ ಗ್ರಾಮದಲ್ಲಿ ಸಮಸ್ಯೆಯೇ ಭಿನ್ನವಾದದ್ದು. ಇಲ್ಲಿ ಸ್ಮಶಾನವಿದ್ದರೂ ಒತ್ತುವರಿಯಾಗುವ ಭೀತಿಯಿದೆ. ಅಲ್ಲದೆ ಸಮರ್ಪಕ ರಸ್ತೆ ಸಂಪರ್ಕವೂ ಇಲ್ಲ’.

ತಾಲ್ಲೂಕಿನ ಮುದ್ದೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಡಹಳ್ಳಿ ಗ್ರಾಮಸ್ಥರು ವ್ಯಕ್ತಪಡಿಸುವ ನೋವಿದು. 150ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮನೆಗಳಿರುವ ಈ ಗ್ರಾಮದಲ್ಲಿ ಪುಟ್ಟ ಸ್ಮಶಾನವಿದ್ದು, ಅದು ಒತ್ತುವರಿಯಾಗುವ ಆತಂಕ ಗ್ರಾಮಸ್ಥರಲ್ಲಿ ಆವರಿಸಿದೆ.

ನಡೆಯುವುದೇ ಕಷ್ಟ: 25 ವರ್ಷಗಳಿಂದ ಇದೇ ಸ್ಮಶಾನ ಸ್ಥಳದಲ್ಲಿ ಮೃತ ಗ್ರಾಮಸ್ಥರ ಅಂತ್ಯಕ್ರಿಯೆ ನಡೆಸುತ್ತಿದ್ದೇವೆ. ಅತ್ಯಂತ ಕಿರಿದಾದ ಮತ್ತು ತೆಗ್ಗುದಿಣ್ಣೆಗಳಿಂದ ಕೂಡಿರುವ ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕು. ಜೋರಾಗಿ ಮಳೆ ಸುರಿದಾಗಲಂತೂ ರಸ್ತೆಯು ಕೆಸರಿನ ಗೆದ್ದೆಯಾಗಿ ಮಾರ್ಪಡುತ್ತದೆ. ಆಗಲಂತೂ ಒಂದೊಂದು ಹೆಜ್ಜೆಯಿಡುತ್ತ ನಡೆಯುವುದು ಇನ್ನಷ್ಟು ಕಷ್ಟಮಯವಾಗುತ್ತದೆ ಎಂದು ಗ್ರಾಮಸ್ಥ ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತ್ಯೇಕ ಸಿಮೆಂಟ್‌ ರಸ್ತೆ ನಿರ್ಮಿಸಲು ಕೋರಿ ಜಿಲ್ಲಾಧಿಕಾರಿ, ಶಾಸಕರು, ಸಂಸದರು ಮತ್ತು ಸಚಿವರಿಗೆ ಈಗಾಗಲೇ ಹಲವು ಬಾರಿ ಮನವಿಪತ್ರ ಸಲ್ಲಿಸಿದ್ದೇವೆ. ಮನವಿಪತ್ರ ಸ್ವೀಕರಿಸಿ ಭಾರಿ ಭರವಸೆಗಳನ್ನು ನೀಡುತ್ತಾರೆ ಹೊರತು ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳುವುದಿಲ್ಲ. ಇಂದಲ್ಲ, ನಾಳೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಎರಡೂವರೆ ದಶಕ ಕಳೆದಿದ್ದೇವೆ ಎಂದು ಅವರು ತಿಳಿಸಿದರು.

ಮನವಿಪತ್ರ ಸಲ್ಲಿಕೆ: ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ.ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಮುದ್ದೇನಹಳ್ಳಿಯಲ್ಲಿ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲಿ ಸ್ಮಶಾನ ಸೌಲಭ್ಯಕ್ಕೆ ಸಂಬಂಧಿಸಿದಂತೆ ಮನವಿಪತ್ರ ಸಲ್ಲಿಸಿದ್ದೆವು. ಆದರೆ ಈವರೆಗೆ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ನಮಗೆ ತೊಂದರೆಯಾಗಿದೆ. ಜತೆಗೆ ಬೇಸರವೂ ಆಗಿದೆ. ನಮಗೆ ಕಾಡುತ್ತಿರುವ ಸಮಸ್ಯೆಯನ್ನು ಸಂಬಂಧಪಟ್ಟವರು ಅರಿಯಬೇಕು ಎಂದು ಅವರು ತಿಳಿಸಿದರು.

ಗ್ರಾಮಸ್ಥ ಗೋಪಾಲ್‌ ಮಾತನಾಡಿ, ಪ್ರತಿಯೊಂದು ಗ್ರಾಮದಲ್ಲೂ ಸ್ಮಶಾನಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಸಮಸ್ಯೆಗಳಿದ್ದು ಅವುಗಳ ಬಗ್ಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಅಧಿಕಾರಿಗಳು ಗಂಭೀರವಾಗಿ ಪರಿಶೀಲನೆ ನಡೆಸಬೇಕು. ಗ್ರಾಮಸ್ಥರ ಸಭೆ ನಡೆಸಿ, ಅವರಿಂದ ಅಭಿಪ್ರಾಯವೂ ಪಡೆಯಬೇಕು ಎಂದರು.

ಸಲ್ಲಿಕೆಯಾಗಿರುವ ಮನವಿಪತ್ರಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು. ನಗರಪ್ರದೇಶದವರಿಗೆ ಅಲ್ಲದೇ ಗ್ರಾಮಸ್ಥರಿಗೂ ಸಮಸ್ಯೆಗಳಿವೆ ಎಂಬುದನ್ನು ಅರಿಯಬೇಕು.
–ವೇಣುಗೋಪಾಲ್‌, 
ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT