ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಕಸುಬು ಹಾಗೂ ಜಾತೀಯತೆಯ ಪಿಡುಗು

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಗ್ರಾಮೀಣ ಕಸುಬುಗಳನ್ನು ಜಾತಿಗಳೆಂದು ಗುರುತಿ­ಸಬೇಕಾಗಿ ಬಂದಿರುವುದು ಒಂದು ದುರಂತವೇ ಸರಿ. ಮತ್ತೂ ದೊಡ್ಡ ದುರಂತ­ವೆಂದರೆ, ಹಾಗೆಯೇ ಗುರುತಿಸಬೇಕೆಂದು ಹಟ ಹಿಡಿಯು­ತ್ತಿರುವ ಪಟ್ಟಭದ್ರ ಹಿತಾಸಕ್ತಿಗಳು. ಇವರದ್ದು ಅದೆಂತಹ ಅತಿರೇಕವೆಂದರೆ, ಚಪ್ಪಲಿ ಹೊಲೆಯು­ವವನು ಚಮ್ಮಾರ ಜಾತಿಯಿಂದಲೇ ಬಂದಿ­­ರ­­ಬೇಕು, ನೇಕಾರಿಕೆ ಮಾಡುವವಳು ದೇವಾಂಗ­ ಜಾತಿಯಿಂದಲೇ ಬಂದಿರಬೇಕು ಎಂದು ಫರ್ಮಾನು ಹೊರಡಿಸುತ್ತಿದ್ದಾರೆ. ಆದರೆ, ಫರ್ಮಾ­ನುಗಳ ಮೂಲವಿರುವುದು ಬಡ­ ಚಮ್ಮಾ­ರ­­ನಲ್ಲೂ ಅಲ್ಲ ಅಥವಾ ಬಡ­ಕುಂಬಾರ­ನಲ್ಲೂ ಅಲ್ಲ. ಅದಿರುವುದು ಜಾತಿ ಪದ್ಧತಿಯೆಂಬ ಅನಿಷ್ಟದಲ್ಲಿ. ಜಾತಿ ಸಂಘಟನೆಗಳು, ಜಾತಿಗಳ ರಾಜಕೀಯ ಧ್ರುವೀಕರಣ ಮಾಡಹೊರಟವರು ಹಾಗೂ ವ್ಯಾಪಾರಿಗಳ ಹುನ್ನಾರವಿದು. ಗ್ರಾಮೀಣ­ ಕಸುಬುಗಳು ಓಬೀರಾಯನ ಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿಯೇ ಉಳಿದಿರಲಿ ಎಂದು ಇವರು ಬಯಸುತ್ತಿದ್ದಾರೆ. ಈ ವಿಷ ವರ್ತುಲ­ದಿಂದಾ­ಗಿಯೇ ಶ್ರಮಜೀವಿಗಳು ತೀವ್ರತರವಾದ ಬಡತನ ಹಾಗೂ ಶೋಷಣೆಗೆ ಗುರಿಯಾಗಿರುವುದು.

ನಾನು ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿಬಂದ­ವನು. ಬುದ್ಧಿಜೀವಿ ವೃತ್ತಿಯಲ್ಲಿರಬೇಕಾದವನು. ನಾನೇಕೆ ಕೈಮಗ್ಗ ಸತ್ಯಾಗ್ರಹದಲ್ಲಿ ಭಾಗವಹಿಸು­ತ್ತಿದ್ದೇನೆ? ನೇಕಾರಿಕೆಯ ವೃತ್ತಿಯೊಳಗೇಕೆ ಮೂಗು­ತೂರಿಸುತ್ತಿದ್ದೇನೆ ಎಂದು ಹಲವರು ಪ್ರಶ್ನೆ ಮಾಡಿ­ದ್ದಾರೆ. ಬಸವಣ್ಣನೂ ಬುದ್ಧಿಜೀವಿ ಜಾತಿಯಿಂದ ಬಂದ­ವನು. ಜಾತಿವೃತ್ತಿಯನ್ನು ತಿರಸ್ಕರಿಸಿ ಕಾಯಕ­ವೃತ್ತಿ ಸ್ವೀಕರಿಸಿದವನು. ಬಸವಣ್ಣ ದೊಡ್ಡವನು, ನಾನು ಸಣ್ಣವನು. ಸಣ್ಣ ರೀತಿಯಲ್ಲಾದರೂ ಸರಿ, ನಾನೂ ಜನಿವಾರ ಹರಿದೊಗೆದು ಕಾಯಕವೃತ್ತಿ ಸ್ವೀಕರಿಸುವ ಪ್ರಯತ್ನ ಮಾಡಬಾರದೆ?
ನಾನು ಕೆಲಸ ಮಾಡುತ್ತಿರುವುದು ನೇಕಾರರ ಸಹಕಾರ ಸಂಘವೊಂದರಲ್ಲಿ. ‘ಚರಕ’ ಸಹಕಾರ ಸಂಘದ ನೂರಾರು ಮಹಿಳೆಯರು ಜಾತಿ­ನೇಕಾ­ರರಲ್ಲ. ಅವರು ದಲಿತರು ಹಾಗೂ ಇತರೆ ಹಿಂದು­ಳಿದ ವರ್ಗಗಳಿಗೆ ಸೇರಿದವರು. ಎಲ್ಲಕ್ಕಿಂತ ಮಿಗಿ­ಲಾಗಿ ಗ್ರಾಮೀಣ ಮಹಿಳೆಯರು. ತಿಂಗಳಿಗೆ ಇಪ್ಪತ್ತು ಸಾವಿರ ಮೀಟರು ನೈಸರ್ಗಿಕ ಬಣ್ಣದ ಕೈಮಗ್ಗಬಟ್ಟೆ ಉತ್ಪಾದಿಸಿ ಮಾರಾಟ ಮಾಡುತ್ತಿ­ರುವವರು ಇವರು. ನೈಸರ್ಗಿಕ ಬಣ್ಣದ ಬಟ್ಟೆಯ ಉತ್ಪಾದನೆಯಲ್ಲಿ ಚರಕ ಸಹಕಾರ ಸಂಘದ್ದು ದೇಶದಲ್ಲಿಯೇ ಒಂದು ವಿಕ್ರಮವಾಗಿದೆ. ನಾವು, ಇತರೆ ಜಾತಿಗಳವರು, ನೇಕಾರಿಕೆಯ ಕಸುಬಿ­ನೊಳಗೆ ಮೂಗು ತೂರಿಸಬಾರದೆ?

ನಾವೇಕೆ ಕೈಮಗ್ಗ ಸತ್ಯಾಗ್ರಹದಲ್ಲಿ ಭಾಗಿಯಾಗಿ­ದ್ದೇವೆ ಎಂದು ಹೇಳಲೇಬೇಕಾದ ಅಗತ್ಯ ಬಂದಿದೆ ಇಂದು. ನಾವು ಉತ್ಪಾದಿಸುತ್ತಿರುವ ಅಪ್ಪಟ ಕೈಮಗ್ಗ ಬಟ್ಟೆ ಹಸುವಿನ ಹಾಲಿನಿಂದ ತಯಾರಿಸಿದ ತುಪ್ಪವಿದ್ದಂತೆ. ಕೈಮಗ್ಗ ಮಾರುಕಟ್ಟೆಯ ತುಂಬಾ ಡಾಲ್ಡಾ ಮಾದರಿಯ ಕಲಬೆರಕೆ ವಸ್ತ್ರ ತುಂಬಿ­ಕೊಂಡಿದೆ. ನೈಜತುಪ್ಪವೆಂದೇ ಬಿಂಬಿಸಿ ಡಾಲ್ಡಾ ಮಾರಾಟ ಮಾಡಲಾಗುತ್ತಿದೆ. ಕಲಬೆರಕೆ­ಯಿಂದಾಗಿ ನೈಜ ತುಪ್ಪದ ಬೆಲೆ ಕುಸಿದಿದೆ, ನಮ್ಮ ಹೊಟ್ಟೆ ಚುರ್ ಎನ್ನುತ್ತಿದೆ. ನಮ್ಮ ಹೊಟ್ಟೆ ಚುರುಗುಡುತ್ತಿದೆ ಎಂದು ನಾವು ಹೇಳಬಾರದೆ?
ಕೈಮಗ್ಗ ಸತ್ಯಾಗ್ರಹವು ವಿದ್ಯುತ್‌ಮಗ್ಗಗಳ ವಿರೋಧಿ ಎಂದು ಅಪಪ್ರಚಾರ ಮಾಡಲಾಗು­ತ್ತಿದೆ. ವಿದ್ಯುತ್‌ಮಗ್ಗಗಳಿಗೆ ಸಿಕ್ಕುತ್ತಿರುವ ಸಬ್ಸಿಡಿ ನಿಲ್ಲಿಸಿ ಎಂದು ನಾವು ಬೇಡಿಕೆ ಇಟ್ಟಿದ್ದೇವೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ.

ವಿದ್ಯುತ್‌­ಮಗ್ಗ­ಗಳಿಗೆ ಸರ್ಕಾರದಿಂದ ಸಲ್ಲುತ್ತಿರುವ ಯಾವುದೇ ನ್ಯಾಯಯುತವಾದ ಸಹಾಯವನ್ನೂ ನಾವು ವಿರೋಧಿಸುತ್ತಿಲ್ಲ. ಮಾತ್ರವಲ್ಲ, ವಿದ್ಯುತ್ ಮಗ್ಗ­ಗಳ ಕಾರ್ಮಿಕರ ಬೇಡಿಕೆಗಳೂ ನಮ್ಮ ಬೇಡಿಕೆ­ಗಳೊಳಗೆ ಅಂತರ್ಗತವಾಗಿವೆ. ನೇಕಾರರ ಬೇಡಿಕೆ­ಗಳನ್ನು ಸರ್ಕಾರವು ಒಪ್ಪಿಕೊಂಡಿದೆ. ಹೀಗಿರುವಾಗ ಜಾತಿ­ನೇಕಾರಿಕೆಯ ಮುಖವಾಡ ಧರಿಸಿರುವ ಮಾಲೀಕ ವ್ಯಾಪಾರಿಗಳು ಒಪ್ಪಂದ ಮುರಿದು ಬೀಳಲಿ ಎಂದು ಪ್ರಯತ್ನಿಸುತ್ತಿರಬಹುದೇ ಎಂಬ ಗಾಢವಾದ ಅನುಮಾನವು ನೇಕಾರರನ್ನು ಕಾಡತೊಡಗಿದೆ.

ಸತ್ಯಾಗ್ರಹದ ಪ್ರಮುಖ ಬೇಡಿಕೆಯನ್ನೇ ತೆಗೆದು­ಕೊಳ್ಳಿ. ಕರ್ನಾಟಕ ಸರ್ಕಾರವು ತನ್ನ ವಿವಿಧ ಇಲಾಖೆಗಳ ಅಗತ್ಯವನ್ನು ಪೂರೈಸಲಿಕ್ಕೆಂದು ವಾರ್ಷಿಕ ಸರಿಸುಮಾರು ನಾಲ್ಕುನೂರು ಲಕ್ಷ ಮೀಟರುಗಳಷ್ಟು ವಸ್ತ್ರವನ್ನು ಖರೀದಿ ಮಾಡು­ತ್ತಿದೆ. ಹೆಚ್ಚೂ ಕಡಿಮೆ ಇಷ್ಟೂ ವಸ್ತ್ರವನ್ನೂ ಅದು ದಲ್ಲಾಳಿಗಳ ಮೂಲಕ ಹೊರರಾಜ್ಯಗಳಿಂದ ಖರೀದಿ ಮಾಡುತ್ತಿದೆ. ನಮ್ಮ ರಾಜ್ಯದ ನೇಕಾರರೇ (ಕೈಮಗ್ಗ ಮತ್ತು ವಿದ್ಯುತ್‌ಮಗ್ಗ) ಈ ಎಲ್ಲ ವಸ್ತ್ರವನ್ನೂ ಪೂರೈಸುವಂತಾಗಲಿ, ಏಕಗವಾಕ್ಷಿ ಪದ್ಧತಿಯಿಂದ ವಸ್ತ್ರಖರೀದಿ ಪಾರದರ್ಶಕ ನೀತಿ ಜಾರಿಗೆ ಬರಲಿ ಎಂದು ನಾವಿಟ್ಟಿದ್ದ ಬೇಡಿಕೆಯನ್ನು ಸರ್ಕಾರ ಮಾನ್ಯ ಮಾಡಿದೆ. ಇದು ಸಾಧ್ಯವಾದರೆ, ಕರ್ನಾಟಕದ ಎಲ್ಲ ನೇಕಾರರು - ವಿದ್ಯುತ್ ಮಗ್ಗ­ವಿರಲಿ, ಕೈಮಗ್ಗವಿರಲಿ, ಬದುಕಿಕೊಳ್ಳುತ್ತಾರೆ.

ಕೈಮಗ್ಗ ಸತ್ಯಾಗ್ರಹವು ಒಂದು ಅಖಿಲ ಭಾರತ ಚಳವಳಿ­ಯಾಗಿದೆ, ಎಲ್ಲ ನೇಕಾರರು ಹಾಗೂ ಗ್ರಾಹಕರ ಚಳವಳಿಯಾಗಿದೆ. ನೀವೂ ಬನ್ನಿ, ನಿಮ್ಮ ಸಮಸ್ಯೆಗಳನ್ನೂ ಸರ್ಕಾರದ ಮುಂದಿಡಿ, ನಿಮ್ಮ ನ್ಯಾಯಯುತ ಬೇಡಿಕೆಗಳ ಬಗ್ಗೆ ಕೈಮಗ್ಗ ಸತ್ಯಾ­ಗ್ರಹವು ನಿಮ್ಮ ಜೊತೆಗಿರುತ್ತದೆ ಎಂದು ಮಾಲೀಕ ವ್ಯಾಪಾರಿಗಳಿಗೆ ಈ ಮೂಲಕ ಕಳಕಳಿಯ ಮನವಿ ಮಾಡಲು ನಾನು ಬಯಸುತ್ತೇನೆ. ಮತ್ತೂ ಒಂದು ಮಾತನ್ನು ಇಲ್ಲಿ ಹೇಳಲು ಬಯಸುತ್ತೇನೆ. ಒಂದೊಮ್ಮೆ ನನ್ನ ‘ತಲೆದಂಡ’ದಿಂದಲೇ ನೇಕಾರರ­ಸಮಸ್ಯೆ ಪರಿಹಾರವಾಗುವುದಾದರೆ ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ನಮ್ರವಾಗಿ ಸೂಚಿಸ­ಬಯಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT