ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ದಸರಾ: ಮುಗಿಲು ಮುಟ್ಟಿದ ಸಂಭ್ರಮ

Last Updated 22 ಸೆಪ್ಟೆಂಬರ್ 2014, 6:09 IST
ಅಕ್ಷರ ಗಾತ್ರ

ಮೈಸೂರು: ತಾಲ್ಲೂಕಿನ ವರುಣಾ ಗ್ರಾಮದಲ್ಲಿ ಗ್ರಾಮೀಣ ದಸರಾವನ್ನು ಸಡಗರ–ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.
ಗ್ರಾಮೀಣ ದಸರಾದ ಅಂಗವಾಗಿ ತಾಲ್ಲೂಕಿನ ವಾಜಮಂಗಲ ಗ್ರಾಮದ ಗೇಟಿನಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಾರೋಟಿನಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ವರುಣಾ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.

ವಾಜಮಂಗಲ ಗೇಟ್ ಬಳಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ.ಪುಷ್ಪಾವತಿ ಅಮರನಾಥ್ ಅವರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಪೂಜಾ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ಕಾಡು ಕುಣಿತ, ಮಾರಿ ಕುಣಿತ, ವೀರಮಕ್ಕಳ ಕುಣಿತ, ವೀರಗಾಸೆ, ಗೊರವರ ಕುಣಿತ, ಕೋಲಾಟ ಸೇರಿದಂತೆ ವಿವಿಧ ಜನಪದ ಕಲಾತಂಡಗಳು ಸಾಗಿ ಮೆರವಣಿಗೆಗೆ ಮೆರುಗು ನೀಡಿದವು.

ಸಜ್ಜೆಹುಂಡಿ ಗ್ರಾಮದ ಬೀರೇಶ್ವರ ವೀರಗಾಸೆ ಜನಪದ ಕಲಾವಿದರ ಸಂಘದದವರು ಮೆರವಣಿಗೆಯಲ್ಲಿ ವೀರಗಾಸೆ ನೃತ್ಯ ಮಾಡಿದ್ದು ಕಣ್ಮನ ಸೆಳೆಯಿತು. ಕತ್ತಿಯನ್ನು ಝಳಪಿಸುತ್ತಾ, ಮೈ ನವಿರೇಳಿಸುವಂತೆ ನೃತ್ಯ ಮಾಡಿ ಗಮನ ಸೆಳೆದರು.

ಸಿದ್ದಪ್ಪಾಜಿ, ರಾಚಪ್ಪಾಜಿ, ಮಂಟೆಸ್ವಾಮಿ ಜೀವನ ಚರಿತ್ರೆ ಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿದವು. ಬಳಿಕ ಪೂರ್ಣಕುಂಭ ಕಳಶವನ್ನು ಹೊತ್ತ ನೂರಾರು ಮಹಿಳೆಯರು ಹಾಗೂ ವಿವಿಧ ವೇಷಧಾರಿ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದರು. ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಂಡು ಸಾರೋಟಿನಲ್ಲಿ ವಿರಾಜಮಾನಳಾಗಿದ್ದ ನಾಡದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿ ಮೆರವಣಿಗೆಯ ಕೇಂದ್ರಬಿಂದುವಾಗಿತ್ತು. ಗ್ರಾಮೀಣ ದಸರಾ ಕಾರ್ಯಕ್ರಮ ವರುಣಾದಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಿತ್ತು.
ವರುಣಾ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಗ್ರಾಮೀಣ ದಸರಾ ವೇದಿಕೆ ಸಿದ್ಧಗೊಂಡಿತ್ತು. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಅನುಪಸ್ಥಿತಿಯಲ್ಲಿ ವಿವಿಧ ಜನಪದ ಕಲಾತಂಡಗಳು ತಮ್ಮ ಕಲಾ ಪ್ರದರ್ಶನ ಪ್ರದರ್ಶಿಸಿ, ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದವು. ಈ ಸಂದರ್ಭದಲ್ಲಿ ಗ್ರಾಮೀಣ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷ ಎಸ್.ಸಿ. ಮಹೇಶ್, ಉಪಾಧ್ಯಕ್ಷರುಗಳಾದ ಮಾಲೇಗೌಡ, ನಂದಕುಮಾರ್, ವಸಂತಕುಮಾರ್, ತಹಶೀಲ್ದಾರ್ ನವೀನ್ ಜೋಸೆಫ್, ತಾಲ್ಲೂಕು ಪಂಚಾಯಿತಿ ಇಒ ಎಸ್. ಕುಸುಮಕುಮಾರಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಲೋಕಮಣಿ, ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ವಸ್ತುಪ್ರದರ್ಶನ: ಗ್ರಾಮೀಣ ದಸರಾ ಅಂಗವಾಗಿ ಸರ್ಕಾರಿ ಶಾಲೆಯ ಆವರಣದಲ್ಲಿ ವಿವಿಧ ಇಲಾಖೆಗಳಿಂದ ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು. ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆ, ರೇಷ್ಮೆ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಆರೋಗ್ಯ ಇಲಾಖೆಗಳಿಂದ ಪ್ರತ್ಯೇಕ ಮಳಿಗೆ ತೆರೆದು ಇಲಾಖೆಯಿಂದ ನೀಡಲಾಗುವ ಸವಲತ್ತುಗಳ ಬಗ್ಗೆ ವಸ್ತುಪ್ರದರ್ಶನ ಏರ್ಪಡಿಸಿ ಮಾಹಿತಿ ನೀಡಲಾಯಿತು. ವಿವಿಧ ಮಹಿಳಾ ಸಂಘಟನೆಗಳು ತಾವು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದವು.

ಟೂರಿಸ್ಟ್ ಸರ್ಕ್ಯೂಟ್ಸ್ ಬಿಡುಗಡೆ
ಮೈಸೂರು:
‘5 ಜಿಲ್ಲೆಗಳ ಪ್ರವಾಸಿ ಕೇಂದ್ರಗಳ ಮಾಹಿತಿಗಳನ್ನು ಒಳಗೊಂಡ ಟೂರಿಸ್ಟ್ ಸರ್ಕ್ಯೂಟ್ಸ್‌ಗಳು ಪ್ರವಾಸಿಗರಿಗೆ ಅನುಕೂಲವಾಗಲಿವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಟೂರಿಸ್ಟ್ ಸರ್ಕ್ಯೂಟ್ಸ್ ಅನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಮೈಸೂರು, ಮಂಡ್ಯ, ಹಾಸನ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ಪ್ರವಾಸಿ ಕೇಂದ್ರಗಳ ಮಾಹಿತಿಯನ್ನು ಸರ್ಕ್ಯೂರ್ಟ್ಸ್‌ಗಳಲ್ಲಿದೆ. ಇವುಗಳನ್ನು ರೈಲು ನಿಲ್ದಾಣ, ಪ್ರವಾಸಿ ಕೇಂದ್ರ, ಹೋಟೆಲು, ಟ್ರಾವೆಲ್‌ ಏಜೆನ್ಸಿಗಳಲ್ಲಿ ಇಡಲಾಗುತ್ತದೆ. ಪ್ರವಾಸಿಗರು ಉಚಿತವಾಗಿ ತೆಗೆದುಕೊಳ್ಳಬಹುದು’ ಎಂದು ತಿಳಿಸಿದರು.

‘ದಸರಾ ಮಹೋತ್ಸವಕ್ಕೆ ಬರುವ ಪ್ರವಾಸಿಗರಿಗೆ ನೆರವಾಗಲು ಮಹಾಜನ ಹಾಗೂ ವಿದ್ಯಾವರ್ಧಕ ಕಾಲೇಜುಗಳ 80 ಎಂಬಿಎ ವಿದ್ಯಾರ್ಥಿಗಳನ್ನು ಮತ್ತು 64 ವಿದೇಶಿ ವಿದ್ಯಾರ್ಥಿಗಳನ್ನು ಆಯ್ಕೆಗೊಳಿಸಲಾಗಿದೆ. ಇವರು ನಗರದ 18 ಮಾರ್ಗದರ್ಶಿ (ಕಿಯೋಸ್ಕ್‌) ಕೇಂದ್ರಗಳಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇವರಿಗೆಲ್ಲ ಸೋಮವಾರ ತರಬೇತಿ ನೀಡಲಾಗುತ್ತದೆ. ಇವರೊಂದಿಗೆ 31 ಮಂದಿ ಗೈಡ್‌ ಇದ್ದು ಮಾರ್ಗದರ್ಶನ ನೀಡಲಿದ್ದಾರೆ. ಇವರಿಗೆಲ್ಲ ಜಾಕೆಟ್‌ ನೀಡಲಾಗುತ್ತದೆ. ಇದರಿಂದ ಅವರು ಗೈಡ್‌ ಎಂದು ಗುರುತಿಸಲು ಸಾಧ್ಯವಾಗುತ್ತದೆ’ ಎಂದು  ಪ್ರವಾಸೋದ್ಯಮ ಉಪಸಮಿತಿ ಅಧ್ಯಕ್ಷ ಸುಧಾಕರ್‌ ಶೆಟ್ಟಿ ವಿವರಿಸಿದರು.

‘ಪ್ರವಾಸಿ ಕೇಂದ್ರಗಳ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ.  ಇದರೊಂದಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತದೆ. ಪಾರ್ಕಿಂಗ್‌ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಕಸ ವಿಲೇವಾರಿಗೆ ಬುಟ್ಟಿಗಳನ್ನು ಇರಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT