ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸ್ವರಾಜ್ಯ ಅಥವಾ ರಾಮರಾಜ್ಯ?

ವಿಶ್ಲೇಷಣೆ
Last Updated 29 ಮೇ 2015, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಪಂಚಾಯ್ತಿ ಚುನಾವಣೆ ನಡೆಯುತ್ತಿರುವ ಮತ್ತು ಸ್ಥಳೀಯ ಸರ್ಕಾರಗಳು ರೂಪುಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಸ್ಥಳೀಯ ಸಂಸ್ಥೆಗಳು ಯಾವ ‘ರೂಪು’ ಪಡೆದುಕೊಳ್ಳಬೇಕು ಎಂಬ ಬಗ್ಗೆ ಮತದಾರರಾದ ನಾವು ಸ್ಪಷ್ಟವಾಗಿರಬೇಕು.

ಸಂವಿಧಾನದ ಮೂಲಕ ನಮಗೆ ನಾವೇ ನೀಡಿಕೊಂಡ ಕಾರ್ಯಕ್ರಮಗಳನ್ನು ಯೋಜಿಸುವ, ಅನುದಾನಗಳನ್ನು ನಿಗದಿಪಡಿಸುವ ಮತ್ತು ನಮ್ಮ ಕಾಳಜಿಗಳಿಗೆ ಆದ್ಯತೆ ರೂಪಿಸುವ ಅಧಿಕಾರವನ್ನು ಚಲಾಯಿಸುವ ಸಾಮರ್ಥ್ಯವನ್ನು ಮತದಾರರು ಮತ್ತು ಗ್ರಾಮಸಭೆಗಳ ಸದಸ್ಯರಾಗಿರುವ ನಾವು ನಿಜವಾಗಿಯೂ ಹೊಂದಿದ್ದೇವೆಯೇ ಅಥವಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿನ್ಯಾಸಗೊಳಿಸಿದ ಯೋಜನೆಗಳು ಮತ್ತು ಅವುಗಳಿಗೆ ಫಲಾನುಭವಿಗಳನ್ನು ಪಟ್ಟಿ ಮಾಡುವ ರಬ್ಬರ್ ಸ್ಟ್ಯಾಂಪ್‌ಗಳಾಗಿ ಉಳಿದಿದ್ದೇವೆಯೇ; ನಮ್ಮ ಹಕ್ಕುಗಳಿಗೆ ಒತ್ತಾಯಿಸುವ ಮತ್ತು ಅವುಗಳಿಗಾಗಿ ಹೋರಾಡುವ ಪ್ರತಿನಿಧಿಗಳನ್ನು ನಾವು ಆಯ್ಕೆ ಮಾಡುತ್ತೇವೆಯೇ ಅಥವಾ ರಾಜ್ಯಗಳ ಆಣತಿಗಳಿಗೆ ತಲೆದೂಗುವ ‘ಹೌದಪ್ಪ’ ಗಂಡು ಹೆಣ್ಣುಗಳನ್ನು ಆಯ್ಕೆ ಮಾಡುತ್ತಿದ್ದೇವೆಯೇ?  ಸಂವಿಧಾನದ 243 ಜಿ ಕಲಂ ಪ್ರಕಾರ ಇರುವ 29 ಅಧಿಕಾರಗಳನ್ನು ಪಡೆಯುವುದಕ್ಕಾಗಿ (3 ಎಫ್‌ಗಳು) ಕಾರ್ಯನಿರ್ವಹಣೆ, ಹಣಕಾಸು ಮತ್ತು ಕಾರ್ಯನಿರ್ವಾಹಕರ ಸಂಪೂರ್ಣ ವಿಕೇಂದ್ರೀಕರಣಕ್ಕೆ ನಮ್ಮ ಆಯ್ಕೆಯ ಅಭ್ಯರ್ಥಿಯು  ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂಬ ಗ್ರಹಿಕೆಯನ್ನು ಹೊಂದಿದ್ದೇವೆಯೇ ಅಥವಾ ಅಧಿಕಾರಹಿತರಾಗಿ ಮತ್ತು ಸಿನಿಕರಾಗಿ ಉಳಿದಿದ್ದೇವೆಯೇ?

ಬಹುತೇಕ ಶಾಸಕರಲ್ಲಿ ‘ವಿಕೇಂದ್ರೀಕರಣ’ ಮತ್ತು ‘ಅಧಿಕಾರ ಹಂಚಿಕೆ’ಗೆ ಸಂಬಂಧಿಸಿದ ಈ ವಿಷಯಗಳಲ್ಲಿ ಗೊಂದಲ ಇದೆ. ಈಗ ಇರುವ ವಿಕೇಂದ್ರೀಕರಣ ಏನೆಂದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೂಪಿಸುವ ಯೋನೆಗಳನ್ನು ಪಂಚಾಯತ್‌ರಾಜ್ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸುವುದು ಮತ್ತು ಗ್ರಾಮಸಭೆಗಳು ಮಂಜೂರಾದ ಹತ್ತು ಶೌಚಾಲಯಗಳನ್ನು ಯಾರಿಗೆ ನೀಡಬೇಕು ಎಂಬುದಕ್ಕಷ್ಟೇ ಸೀಮಿತವಾಗಿವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ಸಂವಿಧಾನದಲ್ಲಿ ಹೇಳಿರುವಂತೆ ಅಧಿಕಾರ ವಿಕೇಂದ್ರೀಕರಣ ಎಂದರೆ, ‘ಸ್ವಾಯತ್ತ ಸರ್ಕಾರವಾಗಿ ಕಾರ್ಯನಿರ್ವಹಿಸಲು ಮತ್ತು ತನ್ನ ಹಂತಕ್ಕೆ ಅನುಗುಣವಾಗಿ ರಾಜ್ಯ ಸರ್ಕಾರದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯವಾದ ಅಧಿಕಾರಗಳನ್ನು ಹೊಂದಿರಬೇಕು’.

ಈ ವಿಷಯದ ಬಗ್ಗೆ ಮಹಾತ್ಮ ಗಾಂಧಿ ಅವರ ಚಿಂತನೆಗಳು ರಾಮರಾಜ್ಯದ ಪರಿಕಲ್ಪನೆ ಮತ್ತು ಗ್ರಾಮ ಸ್ವರಾಜ್ಯದ ದೃಷ್ಟಿಕೋನಗಳಿಂದ ರೂಪುಗೊಂಡಿವೆ. ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ 1929ರಲ್ಲಿ ಗಾಂಧೀಜಿ ರಾಮರಾಜ್ಯದ ಪರಿಕಲ್ಪನೆಯನ್ನು ಬಳಸಿದರು. ಅವರ ಪ್ರಕಾರ, ‘ಪ್ರತಿಯೊಬ್ಬ ವ್ಯಕ್ತಿಗೂ ದೀರ್ಘವಾದ ಮತ್ತು ದುಬಾರಿ ಪ್ರಕ್ರಿಯೆ ಇಲ್ಲದೆ ನ್ಯಾಯ ದೊರಕುವುದರ ಖಾತರಿ ಇರಬೇಕು. ರಾಮರಾಜ್ಯದಲ್ಲಿ ನಾಯಿಗೂ ನ್ಯಾಯ ದೊರೆಯುತ್ತಿತ್ತು’.

ಈ ಪರಿಕಲ್ಪನೆಯಲ್ಲಿ ರಾಮ ಜನಕಲ್ಯಾಣಕ್ಕಾಗಿ ಕೆಲಸ ಮಾಡುವ ಒಬ್ಬ ದೊರೆ.  ಹಾಗಿದ್ದರೂ ಅದು ಊಳಿಗಮಾನ್ಯ ವ್ಯವಸ್ಥೆಯನ್ನು ಹೊಂದಿರುವ ರಾಜಪ್ರಭುತ್ವ. ಅದು ಜನರಿಂದ ಆಯ್ಕೆಯಾದುದಲ್ಲ. 1937ರ ಹೊತ್ತಿಗೆ ಗಾಂಧೀಜಿ ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಹೊಂದಿದ್ದರು. ‘ನಾನು ರಾಮರಾಜ್ಯವನ್ನು ವಿವರಿಸಿರುವುದು ನೈತಿಕ ಅಧಿಕಾರದ ಮೇಲೆ ಮಾತ್ರ ಅವಲಂಬಿತವಾಗಿರುವ ಜನರ ಸಾರ್ವಭೌಮತ್ವದ ವ್ಯವಸ್ಥೆಯಾಗಿ’ ಎಂದು ಗಾಂಧೀಜಿ ಹೇಳಿದ್ದಾರೆ.

1942ರ ಹೊತ್ತಿಗೆ ಅವರ ನಿಲುವುಗಳು ಖಚಿತ ರೂಪು ಪಡೆದುಕೊಂಡವು. ಅವರು ಗ್ರಾಮರಾಜ್ಯ ಮತ್ತು ಗ್ರಾಮ ಸ್ವರಾಜ್ಯ ಎಂಬ ಪರಿಕಲ್ಪನೆಗಳನ್ನು ಬಳಸತೊಡಗಿದರು. ಅವುಗಳ ಮೂಲ ಅಂಶಗಳು ಹೀಗಿದ್ದವು.

1. ಗ್ರಾಮ ಸ್ವರಾಜ್ಯವೆಂದರೆ ಮೂಲಭೂತ ಅಗತ್ಯಗಳಿಗಾಗಿ ನೆರೆಯವರನ್ನು ಅವಲಂಬಿಸದೆ, ಹಾಗಿದ್ದೂ ಇತರ ಅಗತ್ಯಗಳಿಗಾಗಿ ಪರಸ್ಪರ ಅವಲಂಬನೆ ಹೊಂದಿರುವ ಸಂಪೂರ್ಣ ಗಣರಾಜ್ಯ.

2. ಗ್ರಾಮದ ವಯಸ್ಕ ಮತದಾರರು ವರ್ಷಕ್ಕೊಮ್ಮೆ ಆಯ್ಕೆ ಮಾಡುವ ಪಂಚಾಯ್ತಿ ಗ್ರಾಮದ ಆಡಳಿತವನ್ನು ನೋಡಿಕೊಳ್ಳಬೇಕು. ಅಗತ್ಯ ಇರುವ ಎಲ್ಲ ಅಧಿಕಾರ ಮತ್ತು ವ್ಯಾಪ್ತಿ ಅವರಿಗೆ ಇದೆ.

3. ಪರಿಪೂರ್ಣ ಪ್ರಜಾಸತ್ತೆಯು ತನ್ನ ಸರ್ಕಾರದ ಶಿಲ್ಪಿಯು ತಾನೇ ಆಗಿರುವ ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಅವಲಂಬಿತವಾಗಿದೆ.

ಕೊನೆಗೆ 1948ರಲ್ಲಿ ಗಾಂಧೀಜಿ ಹೀಗೆ ಹೇಳಿದರು: ‘ನಿಜವಾದ ಜನತಂತ್ರದ ಪಂಚಾಯತ್‌ರಾಜ್‌ನ ನಮ್ಮ ಕನಸು ಸಾಕಾರಗೊಂಡರೆ ಅಲ್ಲಿ ನಾವು ಅತ್ಯಂತ ವಿನೀತ ಮತ್ತು ತಳಮಟ್ಟದ ಭಾರತೀಯ ಮತ್ತು ದೇಶದ ಅತ್ಯಂತ ದೊಡ್ಡ ವ್ಯಕ್ತಿಯನ್ನು ಸಮಾನ ಆಡಳಿತಗಾರರು ಎಂದು ಪರಿಗಣಿಸುತ್ತೇವೆ’.

ಅತ್ಯಂತ ನಿರ್ಣಾಯಕವಾದ ವಿಷಯದಲ್ಲಿಯೇ ನಾವು ತಪ್ಪಿದ್ದೇವೆ- ಗ್ರಾಮೀಣ ಅಭಿವೃದ್ಧಿ ಹೇಗೆ ನಡೆಯಬೇಕು ಮತ್ತು ಅದಕ್ಕಾಗಿ ಪಂಚಾಯತ್‌ರಾಜ್ ಬಗ್ಗೆ ನಾವು ಯಾವ ರಾಜಕೀಯ ಮತ್ತು ಸಮಾಜಶಾಸ್ತ್ರೀಯ ಗ್ರಹಿಕೆಗಳನ್ನು ಇರಿಸಿಕೊಳ್ಳಬೇಕು ಎಂಬ ಸೈದ್ಧಾಂತಿಕ ಚೌಕಟ್ಟಿನಲ್ಲಿಯೇ ನಾವು ಎಡವಿದ್ದೇವೆ. ನಮ್ಮ ಸಂವಿಧಾನ ಯಾವುದನ್ನು ಖಾತರಿಪಡಿಸುತ್ತದೆ, ರಾಜೀವ್ ಗಾಂಧಿ ಅದನ್ನು ಹೇಗೆ ವ್ಯಾಖ್ಯಾನಿಸಿದರು ಮತ್ತು  ಪಂಚಾಯತ್‌ರಾಜ್ ವ್ಯವಸ್ಥೆ ಈಗ ಕೇಂದ್ರೀಕೃತವಾಗಿ ಹೇಗೆ ರೂಪುಗೊಂಡಿದೆ ಎಂಬುದರ ನಡುವೆ ಸೈದ್ಧಾಂತಿಕ ಅಂತರವಿದೆ.

ನಾವು ಆಗಾಗ್ಗೆ ಇಂತಹುದೊಂದು ಪ್ರತಿಕ್ರಿಯೆಯನ್ನು ಕೇಳುತ್ತಿರುತ್ತೇವೆ: ‘ಎರಡು ದಶಕಗಳ ಅವಧಿ ಮತ್ತು ಕೋಟ್ಯಂತರ ರೂಪಾಯಿ ವೆಚ್ಚದ ನಂತರವೂ ಉತ್ತರ ಕರ್ನಾಟಕದ ಹೆಚ್ಚಿನ ಗ್ರಾಮಗಳಲ್ಲಿ ಈಗಲೂ ಶೌಚಾಲಯ ಇಲ್ಲ!’ ನಿಜವಾದ ಪ್ರಶ್ನೆ ಇರುವುದು ‘ಯಾಕೆ’. ಇದಕ್ಕೆ ಜನರು, ವಿಶೇಷವಾಗಿ ಮಹಿಳೆಯರು ಇದಕ್ಕೂ ಮುಖ್ಯವಾದ ಮತ್ತು ಹೆಚ್ಚು ತುರ್ತಾದ ಆದ್ಯತೆಗಳನ್ನು ಹೊಂದಿರುವುದು ಕಾರಣ. ಮನೆ ಕಟ್ಟಲು ನೆಲ, ಮನೆ, ನೀರು ಮತ್ತು ಉರುವಲು ಅವರಿಗೆ ಹೆಚ್ಚು ತುರ್ತಿನದ್ದಾಗಿದೆ. ಇವುಗಳು ಇಲ್ಲದೆ ಶೌಚಾಲಯ ಮಾತ್ರ ಇದ್ದರೆ ಅದು ಅರ್ಥಹೀನ!

ತಮ್ಮ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವುದು ಮನುಷ್ಯನ ಸಹಜ ಪ್ರವೃತ್ತಿಯಾಗಿದೆ. ಜನರ ಸಹಜ ಪ್ರವೃತ್ತಿಯನ್ನು ರಾಜಕಾರಣಿಗಳು ನಂಬಬೇಕು ಮತ್ತು ಆಯ್ಕೆಗಳನ್ನು ಅವರಿಗೇ ಬಿಡಬೇಕು. ಆದರೆ ಸ್ವಾತಂತ್ರ್ಯಾನಂತರ ಈತನಕ ಅದು ಆಗಿಲ್ಲ.  ಗ್ರಾಮ ಸಭೆಗಳ ಮೂಲಕ ತಮ್ಮ ವರ್ತಮಾನ ಮತ್ತು ಭವಿಷ್ಯವನ್ನು  ಯೋಜಿಸುವ ಮತ್ತು ನಿರ್ಧರಿಸುವ ಹಕ್ಕು ಜನರಿಗೆ ಇದೆ.

ಪಂಚಾಯ್ತಿಗಳು ಅದರಲ್ಲೂ ವಿಶೇಷವಾಗಿ ಗ್ರಾಮ ಪಂಚಾಯ್ತಿಗಳು ಜನರ ಕಾಳಜಿಗಳನ್ನು ಪ್ರತಿನಿಧಿಸುವುದಕ್ಕಾಗಿಯೇ ಆಯ್ಕೆಯಾದ ಸಮಿತಿಗಳಾಗಿವೆ. ಗ್ರಾಮಗಳ ಅಭ್ಯುದಯಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಲು ಇರುವ ಸಾಂವಿಧಾನಿಕ ಅಧಿಕಾರಗಳನ್ನು ಚಲಾಯಿಸಲು ಪಂಚಾಯ್ತಿಗೆ ಅವಕಾಶ ಕೊಡಬೇಕು.

ಇದಕ್ಕಾಗಿ ಸರ್ಕಾರವು ತನ್ನ ವಶದಲ್ಲಿ ಇರಿಸಿಕೊಂಡಿರುವ ಅಧಿಕಾರವನ್ನು ಬಿಟ್ಟುಕೊಡಬೇಕು. ರಾಜ್ಯ ಸರ್ಕಾರವು ವಿನ್ಯಾಸಗೊಳಿಸಿರುವ ಗ್ರಾಮೀಣಾಭಿವೃದ್ಧಿಯ ಹೊಸ ನೀಲನಕ್ಷೆಯು ಎಷ್ಟೇ ಉತ್ತಮ ಉದ್ದೇಶವನ್ನು ಹೊಂದಿದ್ದರೂ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಇಲ್ಲ.

ಹಣಕಾಸಿನ ನಿಯಂತ್ರಣವನ್ನು ತನ್ನಲ್ಲಿಯೇ ಉಳಿಸಿಕೊಳ್ಳುವ ರಾಜ್ಯ ಸರ್ಕಾರ, ಪಂಚಾಯತ್‌ರಾಜ್‌ ಆಡಳಿತ ವ್ಯವಸ್ಥೆಯನ್ನು ಬಳಸಿಕೊಂಡು ಜನರಿಗೆ ಏನು ಬೇಕು ಎಂದು ತಾನು ಬಯಸುತ್ತದೆಯೋ ಅದನ್ನು ನೀಡುವುದು ರಾಜೀವ್‌ ಗಾಂಧಿ ಅವರ ಕನಸಿನ ವಿಕೇಂದ್ರೀಕರಣ ಅಥವಾ ಅಧಿಕಾರ ಹಂಚಿಕೆಯಲ್ಲ. ಗ್ರಾಮಸ್ವರಾಜ್ಯವಂತೂ ಅಲ್ಲವೇ ಅಲ್ಲ.

ಪ್ರತಿಯೊಂದು ಪಂಚಾಯ್ತಿ ಕೂಡ ರಾಜ್ಯ ಸರ್ಕಾರ ಹೊಂದಿರುವಂತಹ ಸ್ವಾಯತ್ತೆಯನ್ನು ಪಡೆದರೆ ಮತ್ತು ಆ ಹಂತಕ್ಕೆ ಸಮಂಜಸವಾದ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ನಿರ್ವಹಿಸಿದರೆ ಮಾತ್ರ ನಿಜವಾದ ಗ್ರಾಮ ಸ್ವರಾಜ್ಯ ಸಾಕಾರವಾಗುತ್ತದೆ. ಜನಕಲ್ಯಾಣದ ಆಶಯವನ್ನು ಹೊಂದಿದ್ದರೂ ಊಳಿಗಮಾನ್ಯ ಧೋರಣೆಯ ವ್ಯವಸ್ಥೆ ಸ್ವರಾಜ್ಯದ ಸ್ಫೂರ್ತಿಯನ್ನು ಹೊಂದಿರುವುದಿಲ್ಲ. ಹಾಗೆಯೇ ಇದು ಬಲಪಂಥೀಯ ಮೂಲಭೂತವಾದಿಗಳ ಕೈಯಲ್ಲಿ ಘಾತಕ ಆಯುಧವೂ ಆಗಬಹುದು.

ರಾಜ್ಯ ಸರ್ಕಾರದಲ್ಲಿ ಇರುವವರು ಜನಕಲ್ಯಾಣದ ಉದ್ದೇಶ ಹೊಂದಿರುವ ಜನತಂತ್ರವಾದಿಗಳಾಗಿದ್ದರೆ ಜನರಿಗೆ ಪ್ರಯೋಜನವಾಗುವ ‘ಉತ್ತಮ’ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಯೋಜಿಸಿ, ಅನುಷ್ಠಾನಗೊಳಿಸಬಹುದು. ಆದರೆ ರಾಜ್ಯ ಸರ್ಕಾರವು ಕೇಂದ್ರೀಕೃತ ಮತ್ತು ಬಲಪಂಥೀಯ ಸಿದ್ಧಾಂತಗಳನ್ನು ಹೇರುವ ಇಚ್ಛೆ ಹೊಂದಿದ್ದರೆ ಅವರು ಬಡವರ ಪರವಾಗಿರುವ ಯೋಜನೆಗಳನ್ನು ಅತ್ಯಂತ ಸುಲಭವಾಗಿ ಉದ್ಯಮಪರವಾಗಿ ಮಾರ್ಪಡಿಸಬಹುದು.

ಆದರೆ, ಜನರು ಮತ್ತು ಅವರ ಚುನಾಯಿತ ಸರ್ಕಾರಗಳಿಗೆ ರಕ್ಷಣೆ ಕೊಡುವ ಬಲವಾದ ಕಾನೂನುಗಳು ಜಾರಿಯಲ್ಲಿದ್ದರೆ, ನಿರಂಕುಶ ಅಧಿಪತ್ಯದ ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಹಿಮ್ಮೆಟ್ಟಿಸುವ ಗಟ್ಟಿಯಾದ ನೆಲೆಗಟ್ಟಾಗಿ ಅದನ್ನು ಬಳಸಿಕೊಳ್ಳಬಹುದು. ಅತ್ಯಂತ ಮುಖ್ಯವಾಗಿ ಜನರು ತಮಗೆ ಬೇಕಾದ ನಿರ್ಧಾರಗಳನ್ನು ತಾವೇ ಕೈಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಮತ್ತು ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವ ರೀತಿಯ ಆಯ್ಕೆಗಳನ್ನು ಮಾಡಿಕೊಳ್ಳುತ್ತಾರೆ. ಇಂತಹ ಮಣ್ಣಿನಲ್ಲಿ ನಿರಂಕುಶಾಧಿಪತ್ಯದ ಬೇರುಗಳು ಬೆಳೆಯುವುದಕ್ಕೆ ಸಾಧ್ಯವಾಗುವುದಿಲ್ಲ.

ನಮ್ಮ ಪ್ರಜಾತಂತ್ರ ವ್ಯವಸ್ಥೆಯ ಕಟ್ಟ ಕಡೆಯ ಸಂಕೇತ ಪಂಚಾಯತ್‌ರಾಜ್‌. ಈಗ ನಮ್ಮ ದೇಶದ ಮುಂದಿರುವ ಪರಿಸ್ಥಿತಿಯಲ್ಲಿ ಗ್ರಾಮ ರಾಜ್ಯಕ್ಕೆ ಬಲವಾದ ಅಡಿಪಾಯ ಹಾಕುವ ಮೂಲಕ ಗ್ರಾಮ ಸ್ವರಾಜ್ಯದ ನೆಲೆಗಟ್ಟು ರೂಪಿಸುವುದು ಮಾತ್ರ ನಮ್ಮ ಜನತಂತ್ರ ಗಣರಾಜ್ಯವನ್ನು ರಕ್ಷಿಸುವ ಏಕೈಕ ದಾರಿ.

ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ರಾಜೀವ್‌ ಗಾಂಧಿ ಈ ಕೆಲಸ ಮಾಡಿದರು. ಶಾಸಕ ರಮೇಶ್‌ ಕುಮಾರ್‌ ಸಮಿತಿಯ ‘ಗ್ರಾಮ ಸ್ವರಾಜ್ಯ’ ವರದಿಗೆ ಇಂತಹ ತಿದ್ದುಪಡಿಗಳಿಗೆ ಆಗ್ರಹ ಮುಂದಿಡುವ ಹೊಸ ಸಮಿತಿಗಳನ್ನೇ ಮತದಾರರಾಗಿ ನಾವು ಆಯ್ಕೆ ಮಾಡುವ ಅಗತ್ಯ ಇದೆ.

ಈ ಚುನಾವಣೆಯಲ್ಲಿ ನಾವು ನಮ್ಮ ಸ್ಥಳೀಯ ಸರ್ಕಾರ ಹೇಗಿರಬೇಕು ಎಂಬುದನ್ನು ರೂಪಿಸುವ ಸ್ಥಿತಿಯಲ್ಲಿದ್ದೇವೆ. ಈ ಮೂಲಕ ನಾವು ನಮ್ಮ ದೇಶದ ಇತಿಹಾಸದ ದಿಕ್ಕನ್ನು ಬದಲಿಸಬಹುದು.  ನಮಗೆ ‘ರಾಮರಾಜ್ಯ ಬೇಕೆ’ ಅಥವಾ ‘ಗ್ರಾಜ ಸ್ವರಾಜ್ಯ’ ಬೇಕೆ ಎಂಬುದನ್ನು ನಾವೇ ನಿರ್ಧರಿಸಬೇಕು.

ಲೇಖಕಿ ಗ್ರಾಮ ಪಂಚಾಯ್ತಿ ಹಕ್ಕೊತ್ತಾಯ ಆಂದೋಲನದ ಸಂಚಾಲಕಿ. ರಮೇಶ್‌ ಕುಮಾರ್‌ ಸಮಿತಿ ಸದಸ್ಯೆ
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT