ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರಿಗೆ ಸೌಲಭ್ಯ; ಡೆವಲಪರ್‌ಗಳಿಗೂ ಲಾಭ

‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆ
Last Updated 6 ಸೆಪ್ಟೆಂಬರ್ 2015, 20:18 IST
ಅಕ್ಷರ ಗಾತ್ರ

ಬೆಂಗಳೂರು:  ‘ನಮ್ಮ ಮೆಟ್ರೊ’ ಎರಡನೇ ಹಂತದ ಯೋಜನೆಯಲ್ಲಿ ನಿರ್ಮಾಣಗೊಳ್ಳಲಿರುವ ಮಾರ್ಗಗಳ ನಿಲ್ದಾಣಗಳಿಗೆ ನೇರ ಸಂಪರ್ಕ ಪಡೆಯುವ ಮೂಲಕ ಡೆವಲಪರ್‌ಗಳು ಹಾಗೂ ಭೂ ಮಾಲೀಕರು ತಮ್ಮ ಆಸ್ತಿಯ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

ಅಪಾರ್ಟ್‌ಮೆಂಟ್‌, ಶಾಪಿಂಗ್‌  ಮಾಲ್‌ಗಳು ಮೊದಲಾದ ಕಟ್ಟಡ ಸಂಕೀರ್ಣಗಳು ಹಾಗೂ ಮೆಟ್ರೊ ನಿಲ್ದಾಣಗಳಿಗೆ  ನೇರ ಸಂಪರ್ಕ ಕಲ್ಪಿಸುವ ಮೂಲಕ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಮಾಡಿಕೊಡುವುದು ಮತ್ತು ಅದರ ಜತೆ ಜತೆಗೆ ತಮ್ಮ  ವ್ಯವಹಾರವನ್ನು ಅಭಿವೃದ್ಧಿಪಡಿಸಿಕೊಳ್ಳಲು ರಿಯಲ್‌ ಎಸ್ಟೇಟ್‌ ಕಂಪೆನಿಗಳು ಚಿತ್ತ ಹರಿಸಿವೆ.

‘ನಿಶ್ಚಿತವಾಗಿಯೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ)  ಯೋಜನೆ ಕೈಗೆತ್ತಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಒಂದು ವೇಳೆ ವಾಣಿಜ್ಯ ಹಿತಾಸಕ್ತಿ ಮಧ್ಯಪ್ರವೇಶಿಸಿದರೆ ಆಗ ಯೋಜನೆ ನಿಗದಿತ ಅವಧಿಗೆ ಪೂರ್ಣಗೊಳಿಸಬೇಕೆಂಬ ಅಂಶಕ್ಕೆ ಹೆಚ್ಚಿನ ಮಹತ್ವ ಬರುತ್ತದೆ. ಆದರೆ ಸದ್ಯ ಬೆಂಗಳೂರು ಮೆಟ್ರೊ ರೈಲು ನಿಗಮದೊಂದಿಗೆ (ಬಿಎಂಆರ್‌ಸಿಎಲ್‌) ಕಂಪೆನಿಗಳು ಜತೆಗೂಡಿ ಕೆಲಸ ಮಾಡಲು ಯಾವುದೇ ಮಾದರಿ ಇಲ್ಲ’ ಎಂದು  ಕಟ್ಟಡ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ ಹರಿ ಅವರ ಅಭಿಪ್ರಾಯ. ಈ ಮಾತಿಗೆ ಚಾರ್ಟರ್ಡ್‌ ಹೌಸಿಂಗ್‌ ಸಿಇಒ ಬಿಮಲ್‌ ಹೆಗಡೆ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

‘ಖಾಸಗಿ ಕಂಪೆನಿಗಳು ಮತ್ತು ಡೆವಲಪರ್‌ಗಳಿಗೆ ಸೂಕ್ತ ಪ್ರೋತ್ಸಾಹ ನೀಡಿದರೆ ಮೆಟ್ರೊ ನಿಲ್ದಾಣಗಳ ಸಮೀಪ ಖಂಡಿತವಾಗಿಯೂ ಪಾರ್ಕಿಂಗ್‌, ಚಿಲ್ಲರೆ ಮಳಿಗೆಗಳು ಮತ್ತು ವಾಣಿಜ್ಯ ಸಂಕೀರ್ಣ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬಹುದು’ ಎನ್ನುತ್ತಾರೆ.

ಎರಡನೇ ಹಂತದ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಿದ್ಧತೆ ನಡೆಸಿರುವ ನಿಗಮದ ಎದುರು ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳುವುದಕ್ಕೆ ಸಂಬಂಧಿಸಿ ಹಲವು ಕಂಪೆನಿಗಳು ಈಗಾಗಲೇ ಪ್ರಸ್ತಾವ  ಸಲ್ಲಿಸಿವೆ. ಇಷ್ಟರಲ್ಲೆ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ಈ ಸಂಬಂಧ ತೀರ್ಮಾನಕ್ಕೆ ಬರುವ ಸಾಧ್ಯತೆಯೂ ಇದೆ ಎಂದು ತಿಳಿದು ಬಂದಿದೆ.

ತನಗೇ ಸೇರಿದ ಆಸ್ತಿಯಲ್ಲಿ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವುದಕ್ಕೆ ಸಂಬಂಧಿಸಿ ಕಂಪೆನಿಗಳಿಂದ ಎಷ್ಟು ಹಣ ಪಡೆಯಬೇಕು ಎನ್ನುವ ವಿಷಯಕ್ಕೆ ಸಂಬಂಧಿಸಿ ಹಿಂದಿನಿಂದಲೂ ನಿಗಮದ ಅಧಿಕಾರಿಗಳು ಗೊಂದಲದಲ್ಲೆ ಇದ್ದಾರೆ.

‘ಖಾಸಗಿ ಕಂಪೆನಿಗಳ ಪ್ರಸ್ತಾವಗಳ ಬಗ್ಗೆ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ, ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು.  ಮೆಟ್ರೊ ನಿಲ್ದಾಣಗಳಿಂದ ಸಮೀಪದ ಸ್ಥಳಗಳಿಗೆ ತೆರಳಲು ಜನರಿಗೆ ಸೌಲಭ್ಯ ಕಲ್ಪಿಸುವುದು ಸೇರಿದಂತೆ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುವುದು’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ತಿಳಿಸಿದ್ದಾರೆ. ‘ಯಾವುದೇ ಕಾರಣಕ್ಕೂ ಮಾರ್ಗ ಅಥವಾ ನಿಲ್ದಾಣಗಳ ಸ್ಥಳ ಬದಲಾವಣೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಮೊದಲ ಹಂತದಲ್ಲಿ ಒಂದು ನಿಲ್ದಾಣಕ್ಕೆ ಸಹಭಾಗಿತ್ವ
ಮೊದಲ ಹಂತದಲ್ಲಿ ಒಂದು ನಿಲ್ದಾಣಕ್ಕೆ ಸಹಭಾಗಿತ್ವ ‘ಸಾರ್ವಜನಿಕ ಖಾಸಗಿ ಸಹಭಾಗಿತ್ವ’ (ಪಿಪಿಪಿ) ಮಾದರಿಯಲ್ಲಿ ಮೊದಲ ಹಂತದಲ್ಲಿ ನಿರ್ಮಾಣಗೊಂಡ ಏಕೈಕ ನಿಲ್ದಾಣವೆಂದರೆ ಮಲ್ಲೇಶ್ವರದ ಮಂತ್ರಿ ಮಾಲ್‌ ಸಮೀಪದ ಸ್ವಸ್ತಿಕ್‌ ಮೆಟ್ರೊ ನಿಲ್ದಾಣ. ಮಂತ್ರಿ ಮಾಲ್‌ನಿಂದ ನೇರವಾಗಿ ಮೆಟ್ರೊ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗಿದೆ.

40 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಹೆಚ್ಚಿನ ಮೆಟ್ರೊ ಪ್ರಯಾಣಿಕರು
ಮಾಸಿಕ ₹40 ಸಾವಿರಕ್ಕಿಂತ ಹೆಚ್ಚು ವೇತನ ಹೊಂದಿದ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ‘ನಮ್ಮ ಮೆಟ್ರೊ’  ಸೇವೆಯ ಹೆಚ್ಚಿನ ಬಳಕೆದಾರರಾಗಿದ್ದಾರೆ.

ಎಂ.ಜಿ ರಸ್ತೆ ಮತ್ತು ಬೈಯಪ್ಪನಹಳ್ಳಿ ಮಾರ್ಗ ಮಧ್ಯೆ ಸಂಚರಿಸುವ ಮೆಟ್ರೊ ರೈಲು ಸೇವೆ ಬಳಸಿಕೊಳ್ಳುವವರ ಕುರಿತು ನಡೆಸಿದ ಅಧ್ಯಯನದಿಂದ ಈ ವಿಷಯ ಬೆಳಕಿಗೆ ಬಂದಿದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ಕೇಂದ್ರದ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.

ಯಾವ ಕುಟುಂಬದ ತಿಂಗಳ ಆದಾಯ ₹40 ಸಾವಿರಕ್ಕಿಂತ ಹೆಚ್ಚಿದೆಯೊ  ಅಂತಹವರು ಮೆಟ್ರೊ ಸೇವೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗಿಂತ ಮಧ್ಯಮ ಹಾಗೂ ಮೇಲ್ವರ್ಗದವರಿಗೆ ಇದು ನೆಚ್ಚಿನ ಸಾರಿಗೆ ಎನಿಸಿದೆ ಎಂದು ಅಧ್ಯಯನ ತಿಳಿಸಿದೆ.

ಮೆಟ್ರೊ ಹಾದು ಹೋಗುವ ನಾಲ್ಕು ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ 260 ಮನೆಗಳಿಗೆ ಸಂಶೋಧಕ ಕೇಯಾ ಚಕ್ರವರ್ತಿ ಅವರು ಭೇಟಿ ನೀಡಿ ಈ ವರದಿ ಸಿದ್ಧಪಡಿಸಿದ್ದಾರೆ.

ಆಸಕ್ತಿಕರ ವಿಷಯ ಏನೆಂದರೆ, ಮೆಟ್ರೊದಲ್ಲಿ ಸಂಚರಿಸುವ ಒಟ್ಟು ಜನರ ಪೈಕಿ ಶೇ 86ರಷ್ಟು ಮಂದಿ 40 ವರ್ಷ ವಯಸ್ಸಿಗಿಂತ ಕಿರಿಯರು. ಅದರಲ್ಲೂ ಶಾಲೆ ಮತ್ತು ಕಾಲೇಜುಗಳಿಗೆ ಹೋಗುವವರು ಹೆಚ್ಚಿನವರಾಗಿದ್ದಾರೆ. ಎರಡನೇ ಸ್ಥಾನ ಕೆಲಸಕ್ಕೆ ತೆರಳುವವರು ಸೇರಿದ್ದಾರೆ.

ಮೆಟ್ರೊ ಹಾದು ಹೋಗಿರುವ ಮಾರ್ಗದಲ್ಲಿರುವ ನಿವಾಸಿಗಳ ಪೈಕಿ ಶೇ 60ರಷ್ಟು ಜನರು ಕನಿಷ್ಠ ಒಂದು ಸಲವಾದರೂ ರೈಲಿನಲ್ಲಿ ಸಂಚಾರ ಮಾಡಿದ್ದಾರೆ. ಸರ್ವಜ್ಞ ನಗರ ವಾರ್ಡ್‌ ನಿವಾಸಿಗಳ ಪ್ರಮಾಣ ಶೇ 85ರಷ್ಟಿದೆ. ಶೇ 20ರಷ್ಟು ಕುಟುಂಬಗಳ ಒಬ್ಬ ಸದಸ್ಯರಾದರೂ  ನಿತ್ಯ ಮೆಟ್ರೊದಲ್ಲಿ ಸಂಚರಿಸುತ್ತಾರೆ.

‘ಮೆಟ್ರೊ ಸೇವೆಯನ್ನು ಇನ್ನಷ್ಟು ಸುಧಾರಿಸಲು ಏನು ಮಾಡುವ ಅಗತ್ಯವಿದೆ’ ಎಂಬ ಪ್ರಶ್ನೆಗೆ ಬಹುತೇಕ ನಾಗರಿಕರು, ಪಾರ್ಕಿಂಗ್‌ ಮತ್ತು ಮೆಟ್ರೊ ನಿಲ್ದಾಣಗಳಿಗೆ ಹೆಚ್ಚು ಬಿಎಂಟಿಸಿ ಬಸ್‌ಗಳನ್ನು ಓಡಿಸಲು ಸಲಹೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT