ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಹಿತಕ್ಕೆ ಸಂಸ್ಥೆಗಳ ಮೇಲೆ ನಿರ್ಬಂಧ

ಚಿತ್ರದುರ್ಗ: ‘ಟ್ರಾಯ್‌’ನ ಪ್ರಾದೇಶಿಕ ಮುಖ್ಯಸ್ಥ ಡಾ.ಸಿಬಿಚೆನ್ ಕೆ.ಮ್ಯಾಥ್ಯೂ ಹೇಳಿಕೆ
Last Updated 4 ಸೆಪ್ಟೆಂಬರ್ 2015, 10:11 IST
ಅಕ್ಷರ ಗಾತ್ರ

ಚಿತ್ರದುರ್ಗ: ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಗ್ರಾಹಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಈಗಾಗಲೇ ಗ್ರಾಹಕರಿಗೆ ಸೇವೆ ನೀಡುತ್ತಿರುವ ಸಂಸ್ಥೆಗಳ ಮೇಲೆ ಕೆಲವು ನಿರ್ಬಂಧ ಗಳನ್ನು ವಿಧಿಸಲಾಗಿದೆ ಎಂದು ಟ್ರಾಯ್‌ನ ಪ್ರಾದೇಶಿಕ ಮುಖ್ಯಸ್ಥ ಡಾ.ಸಿಬಿಚೆನ್ ಕೆ.ಮ್ಯಾಥ್ಯೂ ತಿಳಿಸಿದರು.

ನಗರದ ಎಸ್‌ಜೆಎಂ ಸಭಾಂಗಣದಲ್ಲಿ ಗುರುವಾರ ಬೆಂಗಳೂರಿನ ದೂರ ಸಂಪರ್ಕ ನಿಯಂತ್ರಣಾ ಪ್ರಾಧಿಕಾರದ ಪ್ರಾದೇಶಿಕ ಕಚೇರಿಯಿಂದ ಹಮ್ಮಿ ಕೊಂಡಿದ್ದ ಗ್ರಾಹಕರ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ದೂರು ಕೇಂದ್ರದಲ್ಲಿ ಗ್ರಾಹಕರು ದೂರು ನೋಂದಾಯಿಸಬಹುದು. ದೂರು ನಿವಾರಣೆ ಕುರಿತು ಒಂದು ವೇಳೆ ಗ್ರಾಹಕರಿಗೆ ಅತೃಪ್ತಿಯಿದ್ದಲ್ಲಿ, ದೂರಿನ ನಿವಾರಣೆಗೆ ಮೇಲ್ಮನವಿ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಬಹುದು. ಮೇಲ್ಮನವಿ ಪ್ರಾಧಿಕಾರದ ಸಂಪರ್ಕ ವಿವರಗಳು ಸ್ಟಾರ್ಟ್ ಅಪ್ ಕಿಟ್, ಸೇವಾದಾರರ ವೆಬ್‌ಸೈಟ್ ಹಾಗೂ ಅವರ ಮಾರಾಟ ಮಳಿಗೆಗಳಿಗೆ ಲಭ್ಯವಿರುತ್ತದೆ. ಗ್ರಾಹಕರು www.tccms.gov.in ವೆಬ್‌ಸೈಟ್‌ನಲ್ಲಿ ಗ್ರಾಹಕರ ಸಂಖ್ಯೆ, ಸಾಮಾನ್ಯ ಮಾಹಿತಿ ಸಂಖ್ಯೆ, ದೂರು ಕೇಂದ್ರದ ಸಂಖ್ಯೆ ಮತ್ತು ಮೇಲ್ಮನವಿ ಪ್ರಾಧಿಕಾರದ ವಿವರ ಪಡೆಯಬಹುದು ಎಂದು ಅವರು ಹೇಳಿದರು.

ಅನಪೇಕ್ಷಿತ ವಾಣಿಜ್ಯಾತ್ಮಕ ಸಂದೇಶ ಗಳ ಮೇಲೆ ನಿಷೇಧ ಹೇರಲಾಗಿದ್ದು, ವಾಣಿಜ್ಯಾತ್ಮಕ ಸಂದೇಶಗಳು, ಟೆಲಿ ಮಾರ್ಕೆಂಟಿಗ್ ಕರೆಗಳನ್ನು ತಡೆ ಹಿಡಿಯಲು ಗ್ರಾಹಕರು ತಮ್ಮ ಆದ್ಯತೆ ನೋಂದಾಯಿಸಲು ಟೋಲ್ ಫ್ರೀ ಸಂಖ್ಯೆಯಾದ 1909ಗೆ ಕರೆ ಅಥವಾ ಎಸ್‌ಎಂಎಸ್ ಕಳುಹಿಸಬಹುದು.

ನೋಂದಣಿ ಆದ ಮೇಲೂ ಸಂದೇಶ ಬಂದಲ್ಲಿ, ಮೂರು ದಿನಗಳೊಳಗಾಗಿ 1909ಗೆ ಕರೆ ಅಥವಾ ಎಸ್‌ಎಂಎಸ್ ಮಾಡುವ ಮೂಲಕ ಸೇವಾದಾರ ದೂರನ್ನು ಸಲ್ಲಿಸಬಹುದು. ಗ್ರಾಹಕರು ಮೌಲ್ಯವರ್ಧಿತ ಸೇವೆ ಪಡೆಯಲು ಗ್ರಾಹಕರಿಂದ ಎರಡನೇ ದೃಢೀಕರಣದ ನಂತರವೇ ಸೇವೆ ಪೂರೈಸಬೇಕು. ಶುಲ್ಕರಹಿತ ಸಂಖ್ಯೆ 155223ಗೆ ಕರೆ ಅಥವಾ ಎಸ್‌ಎಂಎಸ್ ಮಾಡುವ ಮೂಲಕ ಸೇವೆ ಕಡಿತಗೊಳಿಸಬಹುದು ಎಂದು ತಿಳಿಸಿದರು.

ಕೇಬಲ್ ಡಿಜಿಟಲೀಕರಣ:  ದೇಶದ ನಾಲ್ಕು ಮೆಟ್ರೊ ಹಾಗೂ 38 ಮಹಾನಗರ ಗಳಲ್ಲಿ ಕೇಬಲ್ ಡಿಜಿಟಲೀಕರಣ ಆಗಿದ್ದು, ಡಿ.2015ರ ಒಳಗೆ ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲ ಪ್ರದೇಶಗಳಲ್ಲಿ ಕೇಬಲ್ ಚಂದಾದಾರರು ಡಿಜಿಟಲ್ ಸೆಟ್‌ಟಾಪ್ ಬಾಕ್ಸ್  ಖರೀದಿಸುವುದು ಕಡ್ಡಾಯವಾಗಿದೆ. ಅದರಿಂದ ಉತ್ತಮ ಗುಣಮಟ್ಟದ ಶಬ್ದ ಮತ್ತು ಚಿತ್ರ ವೀಕ್ಷಿಸಬಹುದಾಗಿದೆ. ಹೈ ಡೆಫಿನಿಷನ್ ಟಿ.ವಿ, ವಿಡಿಯೊ ಆನ್ ಡಿಮ್ಯಾಂಡ್, ಬ್ರಾಡ್ ಬ್ಯಾಂಡ್ ಸೇವೆ, ಬಿಲ್ಲಿಂಗ್‌ನಲ್ಲಿ ಪಾರದರ್ಶಕತೆ ಮತ್ತು ಉತ್ತಮ ದೂರು ನಿರ್ವಹಣಾ ವ್ಯವಸ್ಥೆ ಸೇರಿದಂತೆ ಅನೇಕ ಲಾಭ ಪಡೆಯ ಬಹುದು ಎಂದು ಹೇಳಿದರು.

ಹಿರಿಯ ಸಂಶೋಧನಾ ಅಧಿಕಾರಿ ಎಚ್.ಸಿ.ಲತಾ ಮಾತನಾಡಿ, ರಾಜ್ಯದಲ್ಲಿ ಎಂಟು ದೂರಸಂಪರ್ಕ ಹಾಗೂ ಎಂಟು ಮಲ್ಟಿ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅಂದಾಜು 51 ಮಿಲಿಯನ್ ಮೊಬೈಲ್ ಹಾಗೂ 2.27 ಲಕ್ಷ ಸ್ಥಿರ ದೂರವಾಣಿ ಸೇರಿದಂತೆ ರಾಜ್ಯದಲ್ಲಿ 60 ಮಿಲಿಯನ್‌ನಷ್ಟು ಗ್ರಾಹಕರು ಇದ್ದಾರೆ. ಈ ಸಂಸ್ಥೆಗಳು ಗ್ರಾಹಕರಿಗೆ ವಿವಿಧ ಆಮಿಷಗಳನ್ನೊಡ್ಡಿ ಸೇವೆ ನೀಡುವುದಾಗಿ ಭರವಸೆ ನೀಡುತ್ತಿವೆ. ಆದರೆ, ಗುಣಮಟ್ಟದ ಸೇವೆ ನೀಡದ ಕಾರಣ ಟ್ರಾಯ್ ಈ ಸಂಸ್ಥೆಗಳಿಗೆ ಕೆಲವು ನಿರ್ಬಂಧ ವಿಧಿಸಿದೆ ಎಂದು ತಿಳಿಸಿದರು.

ದೂರಸಂಪರ್ಕ ಸಂಸ್ಥೆಗಳಿಂದ ಗ್ರಾಹಕರು ವಂಚನೆಗೆ ಒಳಗಾದಲ್ಲಿ ಮೇಲ್ಮನವಿ ಪ್ರಾಧಿಕಾರಕ್ಕೆ ದೂರು ನೀಡಬಹುದು. ಆದರೆ, ಶೇ 85ರಷ್ಟು ಗ್ರಾಹಕರಿಗೆ ಮೇಲ್ಮನವಿ ಪ್ರಾಧಿಕಾರ ಇರುವುದೇ ಗೊತ್ತಿಲ್ಲ. ಸಮೀಕ್ಷೆ ಪ್ರಕಾರ ಗ್ರಾಹಕರಿಗೆ ಈ ಸಂಸ್ಥೆಗಳ ಕಾಲ್ ಸೆಂಟರ್‌ಗಳಿಂದಲೂ ಸರಿಯಾದ ಸೇವೆ ಸಿಗುತ್ತಿಲ್ಲ. ಆದ್ದರಿಂದ ಟ್ರಾಯ್‌ನಿಂದ ಕೆಲವೊಂದು ನಿಯಮಗಳನ್ನು ರೂಪಿಸಲಾಗಿದೆ. ಗ್ರಾಹಕರ ಸಮಸ್ಯೆಗಳಿಗೆ ಅವರು ಕರೆ ಮಾಡಿದ 60 ಸೆಕೆಂಡ್‌ಗಳಲ್ಲಿ ಗ್ರಾಹಕರ ಕರೆಗಳಿಗೆ ಲಭ್ಯವಿದ್ದು, ಅವರ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಹೇಳಿದರು.

ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ಜಂಟಿ ಸಲಹೆಗಾರ ಕರ್ನಲ್ ಮನೀಷ್ ರಾಘವ ಸೇರಿದಂತೆ ಸ್ಥಳೀಯ ದೂರಸಂಪರ್ಕ ಇಲಾಖೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ, ಗ್ರಾಹಕರು, ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಗ್ರಾಹಕ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT