ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತೆ ಕುಗ್ಗಿಸಬೇಡಿ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು ವಿಶ್ವವಿದ್ಯಾಲಯದ  ಪದವಿ ವಿದ್ಯಾರ್ಥಿಗಳಿಂದ ಹಣ ಪಡೆದು ಪರೀಕ್ಷೆಗಳಲ್ಲಿ ಉತ್ತೀರ್ಣ ಮಾಡಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿ­ಸಿದ್ದಾರೆ. ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದಲ್ಲಿರುವ ದಿನಗೂಲಿ ನೌಕರರು, ಮಧ್ಯವರ್ತಿಗಳನ್ನು ಬಂಧಿಸಿದ್ದಾರೆ. ಸಿಂಡಿಕೇಟ್‌ ಮಾಜಿ ಸದಸ್ಯ­-ರೊಬ್ಬರು, ಉಪನ್ಯಾಸಕರು ಈ ಪ್ರಕರಣದಲ್ಲಿ ಶಾಮೀಲಾಗಿರುವುದು ತನಿಖೆ­ಯಿಂದ ಪತ್ತೆಯಾಗಿದೆ. ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸ­ಲಾಗುತ್ತಿದೆ. ಸುಮಾರು ಮೂರು ವರ್ಷಗಳಿಂದ ಈ ದಂಧೆ ನಡೆಯುತ್ತಿದೆ.

ಬಿ.ಎ, ಬಿ.ಕಾಂ, ಬಿ.ಎಸ್ಸಿ ವಿದ್ಯಾರ್ಥಿಗಳಿಂದ ಪ್ರತಿ ವಿಷಯಕ್ಕೆ ₨ 30 ಸಾವಿ­ರ­ದಿಂದ ₨ 50 ಸಾವಿರದವರೆಗೆ ಹಣ ಪಡೆಯ­ಲಾಗುತ್ತಿತ್ತು ಎಂದರೆ ಹಣದ ಬಗ್ಗೆ ಅಧ್ಯಾಪ­ಕ­ರಲ್ಲಿರುವ ಹಪಹಪಿತನ ಎಷ್ಟು ಎನ್ನುವುದು ಗೊತ್ತಾ­ಗುತ್ತದೆ. ಇದು ಅತ್ಯಂತ ಹೇಯ ಮತ್ತು ನಾಚಿಕೆಗೇಡಿನ ವಿಷಯ. ಉನ್ನತ ಶಿಕ್ಷಣದ ಬಗ್ಗೆ ಗೌರವ ಇಟ್ಟುಕೊಂಡಿರುವ ಎಲ್ಲರೂ ತಲೆ ತಗ್ಗಿಸಬೇಕಾದ ವಿಚಾರ. ಉನ್ನತ ಶಿಕ್ಷಣದ ಬಗ್ಗೆ ಇರುವ ನಂಬಿಕೆಯನ್ನೇ ಹಾಳು ಮಾಡುವ ಪ್ರಯತ್ನ ಇದು. ಹಣ ಪಡೆದ ಮಧ್ಯವರ್ತಿಗಳು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಪಡೆದು ಅದನ್ನು ಮೌಲ್ಯಮಾಪಕರಿಗೆ ನೀಡಿ ಅವರಿಂದ ಹೆಚ್ಚು ಅಂಕ ಕೊಡಿಸುತ್ತಿದ್ದರು. ಮೌಲ್ಯಮಾಪಕರಿಗೂ ಹಣದಲ್ಲಿ ಪಾಲು ಸಿಗುತ್ತಿತ್ತು.

ಮೌಲ್ಯಮಾಪನದ ನಂತರವೂ ಅಂಕಗಳನ್ನು ತಿದ್ದಲಾಗುತ್ತಿತ್ತು ಎಂದರೆ ಹಣಕ್ಕಾಗಿ ಕೆಲವು ಅಧ್ಯಾಪಕರು ಎಂತಹ ಕೆಲಸ ಮಾಡುವುದಕ್ಕೂ ಹೇಸುವುದಿಲ್ಲ ಎನ್ನುವುದಕ್ಕೆ ನಿದರ್ಶನ. ಇವೆಲ್ಲಾ ಯಾವುದೇ ವಿಶ್ವವಿದ್ಯಾಲಯಕ್ಕೆ ಘನತೆ ತರುವ ವಿಚಾರ ಅಲ್ಲ.

ಮೌಲ್ಯಮಾಪನ ಅಕ್ರಮದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಬೇಕು. ತಪ್ಪು ಮಾಡಿದವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ‘ಜ್ಞಾನ ಭಾರತಿ’ಯ ಹೆಸರಿಗೆ ಹಚ್ಚಿದ ಮಸಿ ಶಾಶ್ವತವಾಗಿ ಉಳಿದುಬಿಡುತ್ತದೆ.

ಒಂದು ಕಾಲದಲ್ಲಿ ಕೆಲವು ಸಂಸ್ಥೆಗಳು ಉದ್ಯೋಗಾವ­ಕಾಶಕ್ಕೆ ಜಾಹೀರಾತು ನೀಡುವಾಗ ಬೆಂಗಳೂರು ವಿಶ್ವವಿದ್ಯಾಲಯದ ಪದವೀ­ಧರರು ಅರ್ಜಿ ಹಾಕಬೇಕಾಗಿಲ್ಲ ಎಂದು ಷರತ್ತು ವಿಧಿಸುತ್ತಿದ್ದವು. ಮೌಲ್ಯ­ಮಾ­ಪನದ ಅಕ್ರಮವನ್ನು ತಡೆಯದಿದ್ದರೆ ಮತ್ತೆ ಅಂತಹ ಪರಿಸ್ಥಿತಿ ಬರುವುದರಲ್ಲಿ ಅನುಮಾನವಿಲ್ಲ. ಒಂದು ವಿಶ್ವವಿದ್ಯಾಲಯಕ್ಕೆ ಇದಕ್ಕಿಂತ ಹೀನಾಯ ಸ್ಥಿತಿ ಮತ್ತೊಂದು ಇಲ್ಲ.

ಮೌಲ್ಯಮಾಪನ ಅಕ್ರಮ ಕೇವಲ ಬೆಂಗಳೂರು ವಿಶ್ವ­ವಿದ್ಯಾ­ಲಯದಲ್ಲಿ ಮಾತ್ರ ನಡೆಯುತ್ತಿದೆ ಎಂದಲ್ಲ. ಬೆಂಗಳೂರು ವಿಶ್ವ­ವಿದ್ಯಾಲಯದ ಪ್ರಕರಣ ಈಗ ಬಹಿರಂಗವಾಗಿದೆ ಅಷ್ಟೆ. ಈ ವಿಶ್ವವಿದ್ಯಾಲಯ ಜ್ಞಾನದ ಕಾರಣಕ್ಕಾಗಿ ಸುದ್ದಿಯಾಗುವುದಕ್ಕಿಂತ ಹಗರಣದ ಕಾರಣ­ಕ್ಕಾಗಿಯೇ ಸುದ್ದಿಯಾಗಿರುವುದು ಹೆಚ್ಚು. ರಾಜ್ಯದ ಇತರ ವಿಶ್ವ­ವಿದ್ಯಾಲಯಗಳಲ್ಲಿಯೂ ಇಂತಹ ಹಗರಣಗಳು ನಡೆಯುತ್ತಲೇ ಇರುತ್ತವೆ.

ಜ್ಞಾನ ಮತ್ತು ಸಂಶೋಧನೆಯ ಕೇಂದ್ರಗಳಾಗಬೇಕಾದ ವಿಶ್ವವಿ­ದ್ಯಾಲ­ಯಗಳಲ್ಲಿ ಇಂತಹ ಪ್ರಕರಣಗಳು ನಡೆದರೆ ಮುಂದಿನ ಜನಾಂಗದ ಬಗ್ಗೆ ನಂಬಿಕೆಯನ್ನೇ ಕಳೆದುಕೊಳ್ಳಬೇಕಾಗುತ್ತದೆ. ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರು ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಅಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ವಿಶ್ವವಿದ್ಯಾಲಯಗಳ ಘನತೆ ಮತ್ತು ಗೌರವವನ್ನು ಹೆಚ್ಚಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಉನ್ನತ ಶಿಕ್ಷಣದ ಮೇಲೆ ಜನರ ನಂಬಿಕೆ ಉಳಿಸಲು ಇಂತಹ ಕ್ರಮ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT