ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತ್ಯಾಜ್ಯ ಗುತ್ತಿಗೆ ವಿವರವೂ ಆನ್‌ಲೈನ್‌ಗೆ

ಸಾರ್ವಜನಿಕರ ಸಲಹೆಗಳನ್ನು ಆಧರಿಸಿ ನಿಯಮ ರೂಪಿಸಲು ಬಿಬಿಎಂಪಿ ನಿರ್ಧಾರ
Last Updated 22 ಮೇ 2015, 20:11 IST
ಅಕ್ಷರ ಗಾತ್ರ

ಬೆಂಗಳೂರು: ಘನತ್ಯಾಜ್ಯ ವಿಲೇವಾರಿ ಗುತ್ತಿಗೆಗೆ ಸಂಬಂಧಿಸಿದ ಎಲ್ಲ ಟೆಂಡರ್‌ ದಾಖಲೆಗಳು ಆನ್‌ಲೈನ್‌ನಲ್ಲಿ ಸಿಗುವಂತೆ ವ್ಯವಸ್ಥೆ ಮಾಡಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಡಳಿತಾಧಿಕಾರಿ ಟಿ.ಎಂ. ವಿಜಯ್‌ಭಾಸ್ಕರ್‌ ನಿರ್ಧರಿಸಿದ್ದಾರೆ.

ನಗರದ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಡೆಸಿದ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಭೆಯಲ್ಲಿ ಅವರು ಈ ತೀರ್ಮಾನ ಪ್ರಕಟಿಸಿದರು.

‘ಹೊಸ ಗುತ್ತಿಗೆಗೆ ಸಂಬಂಧ ನಿಯಮದ ವಿವರವನ್ನೂ ವೆಬ್‌ಸೈಟ್‌ನಲ್ಲಿ ಹಾಕಲಾಗುವುದು. ಅದಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ಸ್ವೀಕರಿಸಿ ಅಗತ್ಯ ಮಾರ್ಪಾಡು ಮಾಡಲಾಗುವುದು’ ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಪ್ರತಿನಿಧಿಗಳು ಸ್ವಚ್ಛತಾ ಅಭಿಯಾನ ನಡೆಸುವುದಕ್ಕಿಂತ ಗುತ್ತಿಗೆದಾರರು ಒಪ್ಪಂದದ ಪ್ರಕಾರ ಕೆಲಸ ಮಾಡುವಂತೆ ನೋಡಿಕೊಳ್ಳುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

‘ಗುತ್ತಿಗೆ ಪಡೆದ ಪ್ರದೇಶಗಳಲ್ಲಿ ಸರಿಯಾಗಿ ಸ್ವಚ್ಛತಾ ಕಾರ್ಯ ನಡೆಸದಿದ್ದರೆ ದಂಡ ವಿಧಿಸಿದ ಶಾಸ್ತ್ರ ಮಾಡದೆ ಭಾರಿ ಪ್ರಮಾಣದ ದಂಡ ಹಾಕಬೇಕು. ಗುತ್ತಿಗೆದಾರರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದ್ದಾರೋ, ಎಲ್ಲವೋ ಎನ್ನುವುದನ್ನು ಪಾಲಿಕೆ ಎಂಜಿನಿಯರ್‌ಗಳು ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.

‘ತ್ಯಾಜ್ಯ ನಿರ್ವಹಣೆಗೆ ವಿಕೇಂದ್ರೀಕೃತ ವ್ಯವಸ್ಥೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಾರ್ಡ್‌ ಸಮಿತಿಗಳನ್ನು ಬಲಪಡಿಸಬೇಕಿದೆ. ‘ಶುಚಿ ಮಿತ್ರ’ರನ್ನು ಸನ್ನದ್ಧಗೊಳಿಸುವ ಮೂಲಕ ಈ ಕಾರ್ಯದಲ್ಲಿ ನಾಗರಿಕರ ನೆರವನ್ನು ಕೂಡ ಪಡೆಯಬಹುದು’ ಎಂದು ಕೆಲವು ಪ್ರತಿನಿಧಿಗಳು ಅಭಿಪ್ರಾಯಪಟ್ಟರು.

‘ಕಸವನ್ನು ಮೂಲದಲ್ಲೇ ಪ್ರತ್ಯೇಕಿಸಿ ಕೊಡದ ಮನೆ, ಅಪಾರ್ಟ್‌ಮೆಂಟ್‌ ಮತ್ತು ಬಡಾವಣೆಗಳಿಗೆ ದಂಡ ವಿಧಿಸುವ ಕಾರ್ಯವನ್ನು ತಕ್ಷಣ ಆರಂಭ ಮಾಡಲಾಗುವುದು’ ಎಂದು ವಿಜಯ್‌ಭಾಸ್ಕರ್‌ ತಿಳಿಸಿದರು. ಪೌರಕಾರ್ಮಿಕರ ಬಾಕಿ ವೇತನವನ್ನು ತಕ್ಷಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

‘ಕಸ ವಿಲೇವಾರಿಗೆ ಸಂಬಂಧಿಸಿದಂತೆ ಪ್ರತಿ ವಲಯದಲ್ಲೂ ಸಾರ್ವಜನಿಕರ ಸಭೆ ಸಂಘಟಿಸಲಾಗುವುದು’ ಎಂದು ಆಯುಕ್ತ ಜಿ. ಕುಮಾರ್‌ ನಾಯಕ್‌ ತಿಳಿಸಿದರು. ‘ತ್ಯಾಜ್ಯ ವಿಲೇವಾರಿಗೆ ಹೊಸ ಘಟಕಗಳು ಸನ್ನದ್ಧವಾಗುತ್ತಿದ್ದು ಶೀಘ್ರದಲ್ಲೇ ಕಸದ ಸಮಸ್ಯೆ ತಗ್ಗಲಿದೆ’ ಎಂದು ಹೇಳಿದರು.

ಸುಮಾರು 20 ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷ ಆಯುಕ್ತ (ಘನತ್ಯಾಜ್ಯ) ದರ್ಪಣ ಜೈನ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT