ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘರ್ಷಣೆ – ದ್ವಂದ್ವಗಳ ಕಥನಪ್ರಪಂಚ

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪರಮೂ ಪ್ರಪಂಚ
ಲೇ: ಇಂದ್ರಕುಮಾರ್ ಎಚ್.ಬಿ.
ಬೆಲೆ: ರೂ. 90
ಪ್ರ: ಇಂಪನ ಪುಸ್ತಕ ಪ್ರಕಾಶನ, 164, ಡಿಸಿಎಂ ಟೌನ್‌ಷಿಪ್‌, ಸಿ–ಬ್ಲಾಕ್‌, ದಾವಣಗೆರೆ– 577 003.

ಈಗಾಗಲೇ ಸ್ಥಾಪಿತರಾಗಿ ಹೋಗಿರುವ ಲೇಖಕರಿಗಿಂತ ಹೊಸ ತಲೆಮಾರಿನವರ ಬರವಣಿಗೆಯ ಬಗ್ಗೆ ನಮ್ಮ ಕುತೂಹಲ ನಿರೀಕ್ಷೆಗಳು ಯಾಕೆ ಹೆಚ್ಚು? ಅದು ಸಾಹಿತ್ಯದ ಸಾತತ್ಯವನ್ನು ಕುರಿತ ನಿರೀಕ್ಷೆಯೋ? ಹೊಸ ಪಲ್ಲಟ ಮತ್ತು ಪ್ರಯೋಗಗಳ ಸಾಧ್ಯತೆ, ಹುಡುಕಾಟ ಹಾಗೂ ಸಫಲತೆಯನ್ನು ಕುರಿತ ಉತ್ಕಟ ಅಪೇಕ್ಷೆಯೋ? ಇವುಗಳನ್ನು ಬೇರ್ಪಡಿಸಿ ನೋಡುವುದು ಕಷ್ಟವೆಂದೇ ತೋರುತ್ತದೆ.

ಅದರ ಅಗತ್ಯವೂ ಇಲ್ಲವೇನೋ. ಆದರೆ ಒಂದು ಸಂಗತಿ ಮಾತ್ರ ಸ್ಪಷ್ಟ. ಸಾಹಿತ್ಯದಲ್ಲಿ ಹೊಸದಾರಿಯ ಸೃಷ್ಟಿ ಎನ್ನುವುದು ಬರಹಗಾರರಿಗೆಷ್ಟೋ ಓದುಗರಿಗೂ ಅಷ್ಟೇ ಅನಿವಾರ್ಯ ನಿರಂತರ ಶೋಧ. ಇಂಥ ಶೋಧವು ಕೇವಲ ಕಾವ್ಯಶಿಲ್ಪದ್ದಲ್ಲ ಎನ್ನುವುದನ್ನು ಪ್ರತ್ಯೇಕವಾಗಿ ವಿವರಿಸಬೇಕಾದ್ದಿಲ್ಲ. ಹೊಸ ಶಿಲ್ಪದ ಹುಡುಕಾಟವು ಅನಿವಾರ್ಯವಾಗಿ ಹೊಸ ಲೋಕದೃಷ್ಟಿಯ ಪ್ರತಿಪಾದನೆಯೂ ಆಗಿರುತ್ತದೆ. ಈ ಬದಲಾಗುತ್ತಿರುವ ಲೋಕದೃಷ್ಟಿಯನ್ನು ಅದರೆಲ್ಲ ಖಾಚಿತ್ಯದಲ್ಲಿ ಮಂಡಿಸುವುದೆಷ್ಟು ಮುಖ್ಯವೋ ಅದರ ಪ್ರಕ್ರಿಯೆಯ ವಿವರಗಳನ್ನು ಅಮೂರ್ತ ಸೂಕ್ಷ್ಮಗಳಲ್ಲಿ ಹಿಡಿಯುವುದೂ ಅಷ್ಟೇ ಮುಖ್ಯ.

ಇಂದ್ರಕುಮಾರ್ ಎಚ್.ಬಿ. ಅವರ ‘ಪರಮೂ ಪ್ರಪಂಚ’ ತನ್ನ ಈ ಬಗೆಯ ಹುಡುಕಾಟದ ತೀವ್ರತೆ ಮತ್ತು ಪ್ರಾಮಾಣಿಕತೆಗಾಗಿ ನಮ್ಮ ಗಮನ ಸೆಳೆಯುತ್ತದೆ. ಈ ತಲೆಮಾರಿನ ಲೇಖಕರು ಹೊಸ ನುಡಿಗಟ್ಟಿಗಾಗಿ ನಡೆಸುತ್ತಿರುವ ಪ್ರಯತ್ನಗಳ ಪ್ರಾತಿನಿಧಿಕ ಕೃತಿಯಾಗಿಯೂ ಇದು ಮುಖ್ಯ. ಜಯಂತ ಕಾಯ್ಕಿಣಿಯವರ ಕಥಾಪ್ರಪಂಚ ತಮ್ಮನ್ನು ಗಾಢವಾಗಿ ಪ್ರಭಾವಿಸಿರುವುದನ್ನು ಲೇಖಕರು ತಮ್ಮ ಅರಿಕೆಯಲ್ಲಿ ಹೇಳಿಕೊಂಡಿದ್ದಾರೆ. ಜೀವಪ್ರೀತಿಯಲ್ಲಿ ತೋಯ್ದು ಬರುವ ವಿವರಗಳಲ್ಲಿ ಜಯಂತರು ತಮ್ಮ ಕಥೆಗಳನ್ನು ಕಟ್ಟುತ್ತಾರೆ.

ದೈನಿಕದ ಸಹಜ ಲೋಕವನ್ನು ಜೀವಜಾಲದ ಸಮೃದ್ಧತೆಯ ಕೋಶವಾಗಿ ಕಟ್ಟುತ್ತಾ ಹೋಗುತ್ತಾರೆ. ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ ಎನ್ನುವಂತೆ ಭಾಸವಾಗುವ, ಆಳವಾಗಿ ನೋಡಿದರೆ ಅಸಂಗತವಾಗಿ ತೋರುವ ಬದುಕನ್ನು   ಗಾಂಭೀರ್ಯಕ್ಕಿಂತ ಲವಲವಿಕೆಯಿಂದ ಮುಖಾಮುಖಿಯಾಗುವುದರಲ್ಲಿ ಹೆಚ್ಚು ಆಸಕ್ತಿಯಿದೆ. ಹಾಗೆಂದು ಬದುಕನ್ನು ಲಘುವಾಗಿ, ಉಡಾಫೆಯಿಂದ ನೋಡುವ ದೃಷ್ಟಿಕೋನವಲ್ಲ ಇದು. ಬದುಕನ್ನು ಯುದ್ಧವೆಂದು ನೋಡದೆ, ಪರೀಕ್ಷೆಯೆಂದು ಎದುರಿಸುವ ಮುಖಾಮುಖಿಯ ದೃಷ್ಟಿಕೋನವಿಲ್ಲದೆ ಬದುಕಿನ ವಿಸ್ತಾರಕ್ಕೆ, ಅನಿರೀಕ್ಷಿತತೆಗೆ, ಸಹಜ ಸುಖ ಸಂತೋಷಕ್ಕೆ, ದುಃಖದುಮ್ಮಾನಗಳಿಗೆ ಒಡ್ಡಿಕೊಳ್ಳುವ ದೃಷ್ಟಿಕೋನ ಇದು. ಘರ್ಷಣೆ, ವಿಸರ್ಜನೆಗಿಂತ ಆಹ್ವಾನದಲ್ಲಿ ಹೆಚ್ಹು ಆಸಕ್ತವಾದ ಲೋಕದೃಷ್ಟಿ ಇದು.

ಈ ಮಾದರಿಯನ್ನು ಪ್ರಸ್ತಾಪಿಸಿದ್ದು ಯಾಕೆಂದರೆ ಜಯಂತರ ಮಾದರಿಯಿಂದ ಪ್ರಭಾವಿತರಾಗಿದ್ದೇನೆ ಎಂದು ಘೋಷಿಸುವ ಇಂದ್ರಕುಮಾರ್ ನಿಜದಲ್ಲಿ ಆ ಮಾದರಿಗಿಂತ ಭಿನ್ನವಾಗಿದ್ದಾರೆ ಮತ್ತು ಆ ಮಾದರಿಗಿಂತ ಬೇರೆಯಾಗುವುದರಲ್ಲಿ ಇವರಿಗೆ ಆಸಕ್ತಿಯೂ ಇದೆ ಎನ್ನುವುದನ್ನು ಹೇಳುವುದಕ್ಕಾಗಿ. ಇವರ ಕಥೆಗಳ ಮೂಲಕೇಂದ್ರಗಳಲ್ಲಿ ಪ್ರಧಾನವಾದುದು ಘರ್ಷಣೆ ಮತ್ತು ದ್ವಂದ್ವ. ಯಾವ ಆರಂಭದ ಬರಹಗಾರರಲ್ಲಿಯೂ ಇದು ಸಹಜ ನಿಜ. ಆದರೆ ಇಂದ್ರಕುಮಾರ್ ಅವರ ಕಥೆಗಳು ಆಸಕ್ತಿ ಹುಟ್ಟಿಸುವುದು ಮೊದಲ ಘಟ್ಟದ ಉದ್ವಿಗ್ನತೆಯನ್ನು ಇವರು ಮೀರಿಕೊಂಡಿರುವ ಕಾರಣಕ್ಕಾಗಿ. ಆದ್ದರಿಂದಲೇ ಇವರ ಕಥೆಗಳಲ್ಲಿ ಕಾಣಿಸುವ ಘರ್ಷಣೆ ಮತ್ತು ದ್ವಂದ್ವದ ವಿನ್ಯಾಸವು ಹೆಚ್ಚು ಆಳವಾಗುತ್ತಾ ಹೋಗುತ್ತದೆ.

ನೋಡ ನೋಡುತ್ತಲೇ ಬದುಕಿನಲ್ಲಿ ಎದುರಾಗುವ ದ್ವಂದ್ವಗಳು ಘರ್ಷಣೆಗಳಾಗಿ, ಅವುಗಳ ಎದುರಿಗೆ ಮನುಷ್ಯ ತಬ್ಬಿಬ್ಬಾಗುವ, ತತ್ತರಿಸಿ ಹೋಗುವ ಹಲವು ಸನ್ನಿವೇಶಗಳು ಇವರ ಕಥೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಇವುಗಳ ಮೂಲ ಯಾವುದು ಎನ್ನುವ ಕಾರ್ಯ ಕಾರಣ ಸಂಬಂಧವನ್ನು ಹುಡುಕುವ ಮಾದರಿಯೊಂದು ಇವರಲ್ಲಿ ನಿಧಾನವಾಗಿ ರೂಪುಗೊಳ್ಳುತ್ತಿದೆ. ಈ ಸಂಕಲನದ ಶೀರ್ಷಿಕಾ ಕಥೆ ‘ಪರಮೂ ಪ್ರಪಂಚ’ವನ್ನೇ ಇದಕ್ಕೆ ಉದಾಹರಣೆಯಾಗಿ ನೋಡಬಹುದು.

ಪರಮು ಮತ್ತು ಮೃಣಾಲನ ನಡುವಿನ ಸಂಬಂಧವನ್ನು ಕಥೆ ಎಲ್ಲ ಸಖ್ಯದ ಸಾಮಾನ್ಯ ರೂಢಿಗತ ವ್ಯಾಖ್ಯಾನಗಳು ಮತ್ತು ಅನುಭವಗಳಾಚೆಗಿನ ಆಯಾಮವೊಂದರಲ್ಲಿ ಇಡಲು ಮತ್ತು ಗ್ರಹಿಸಲು ಪ್ರಯತ್ನಿಸುತ್ತದೆ. ಆರಂಭದಿಂದಲೂ ಪರಸ್ಪರರಿಗೆ ಒಳಗೇ ಸ್ಪಷ್ಟವಾಗಿದ್ದೂ ಅಸ್ಪಷ್ಟವಾಗಿರುವಂತೆ ಕಾಣಿಸುವ ಸಂಗತಿಗಳು ಯಾಕೆ ಘರ್ಷಣೆಗೆ ಎಡೆ ಮಾಡಿಕೊಡುತ್ತವೆ ಎನ್ನುವ ಪ್ರಶ್ನೆಯನ್ನು ಕಥೆ ನೇಪಥ್ಯದಲ್ಲಿ ಉದ್ದಕ್ಕೂ ಕೇಳುತ್ತಲೇ ಹೋಗುತ್ತದೆ.

ಪರಸ್ಪರರಿಗೆ ನಾವು ಬೇಕೋ ಬೇಡವೋ ಎನ್ನುವ ದ್ವಂದ್ವವನ್ನು ಮೀರಿಕೊಳ್ಳುವ ಹೊತ್ತಿಗೆ ನಿರ್ಣಾಯಕ ಘಳಿಗೆಯೊಂದು ಇದಕ್ಕೆ ಮುಕ್ತಾಯವನ್ನು ಹಾಡುತ್ತದೆ. ಹಾಗೆ ನೋಡಿದರೆ ಈ ಕಥೆಯ ಕೊಂಚ ದುರ್ಬಲ ಎನ್ನಬಹುದಾದ ಭಾಗ ಅದರ ಕೊನೆಯೇ. ದ್ವಂದ್ವ–ಘರ್ಷಣೆ ಎಲ್ಲದಕ್ಕೂ ನಾಟಕೀಯವಾದ ಅಂತ್ಯದ ಹಾಗೆ ಕಾಣಿಸುವ ಈ ಭಾಗ ಅವುಗಳ ನೆಲೆಯನ್ನೇ ಪ್ರಶ್ನಿಸುವಂತೆಯೂ ಕಾಣಿಸುತ್ತದೆ. ಪರಮೂ ಕ್ಯಾನ್ಸರ್‌ನಿಂದ  ಬಳಲುತ್ತಿರಬಹುದಾದ ಸತ್ಯ ಮೃಣಾಲ ಮತ್ತು ಪರಮೂ ನಡುವಿನ ಸಂಬಂಧದ ಸಮೀಕರಣವನ್ನು ಮಾತ್ರವಲ್ಲ ಸ್ವರೂಪವನ್ನೂ ಬದಲಾಯಿಸಿಬಿಡುತ್ತದೆ.

‘ಹೊರೆ’ ಕಥೆ ಈ ಸಂಕಲನದ ಯಶಸ್ವಿ ಕಥೆಗಳಲ್ಲೊಂದು. ಸರಳ ತೀರ್ಮಾನದ ಆಚೆಗೆ ಬದುಕು ಮತ್ತು ಸಂಗತಿಗಳನ್ನು ನೋಡಲು ಇದು ಪ್ರಯತ್ನಿಸುತ್ತದೆ. ಯಾವ ತೀರ್ಮಾನವಾದರೂ ಖಚಿತ ಎನ್ನುವ ಹಾಗೆ, ಅಂತಿಮ – ಇನ್ನು ಮುಂದೆ ಶಬ್ದವಿಲ್ಲ ಎನ್ನುವ ಹಾಗೆ ಇರಲು ಸಾಧ್ಯವೆ ಎನ್ನುವ ಸಂಕೀರ್ಣ ಪ್ರಶ್ನೆಯೊಂದನ್ನು ಈ ಕಥೆ ಎದುರಿಸುತ್ತದೆ.

ಅಂತಃಕರಣ, ಕರುಣೆ, ಅನಿವಾರ್ಯತೆ, ಸ್ವಾರ್ಥ, ಅಸಹಾಯಕತೆ ಎಲ್ಲವೂ ಬೆರೆತು ಸೃಷ್ಟಿಯಾಗುವ ಸಂದಿಗ್ಧತೆಯು ಮನುಷ್ಯರನ್ನು ಆವರಿಸಿಕೊಂಡು ಬಿಡುವ ವಿಲಕ್ಷಣ ಸನ್ನಿವೇಶವು ಒಂದಿಡೀ ಕುಟುಂಬವನ್ನು ಆವರಿಸಿಬಿಡುವ ಪರಿಯನ್ನು ಈ ಕಥೆ ತುಂಬ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಅಪರಿಚಿತ ಮುದುಕನೊಬ್ಬ ಅಪರಿಹಾರ್ಯ ಸಂದರ್ಭದಲ್ಲಿ ಕುಟುಂಬವೊಂದರ ಆಶ್ರಯಕ್ಕೆ ಬಂದು ಆ ಕುಟುಂಬದ ಭಾಗವಾಗುವ, ಅದರಿಂದ ಪಾರಾಗಬೇಕೋ ಅದನ್ನು ಒಪ್ಪಿಕೊಳ್ಳಬೇಕೋ ಎನ್ನುವ ಸಂದಿಗ್ಧತೆಯನ್ನು ಸರಿ–ತಪ್ಪು, ಮಾನವೀಯ–ಅಮಾನವೀಯ ಪಾತಳಿಗಳಾಚೆಗೆ ಎದುರಿಸುವ ಇಡೀ ಸಂಸಾರದ ತಲ್ಲಣಗಳನ್ನು ಶಬ್ದಚಿತ್ರವೊಂದರ ಸಾರ್ಥಕತೆಯಲ್ಲಿ ಕಥೆ ನಮ್ಮೆದುರು ಇಡುತ್ತದೆ.

‘ಗಿಫ್ಟ್’, ‘ಅಣ್ಣನ ನೆನಪಲ್ಲಿ’ ಸಂಕಲನದ ಇತರ ಉತ್ತಮ ಕಥೆಗಳು. ಬದುಕನ್ನು ಬಗೆಯ ಬೇಕೆನ್ನುವ ಉತ್ಸಾಹ, ತಾನು ಬದುಕುತ್ತಿರುವ, ಬರೆಯುತ್ತಿರುವ ಪರಿಸರ ಮತ್ತು ಪರಂಪರೆಯ ಬಗೆಗಿರುವ ಆಸ್ಥೆ ಇಂದ್ರಕುಮಾರ್ ಅವರಿಗಿರುವುದನ್ನು ಗಮನಿಸಿದರೆ ಕನ್ನಡಕ್ಕೆ ಭರವಸೆಯ ಕಥೆಗಾರರೊಬ್ಬರು ಸಿಕ್ಕಿದ್ದಾರೆ ಎನಿಸುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT