ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಡರಿಕಿ: ಮೂಲ ಸಮಸ್ಯೆಗಳ ಆಗರ

Last Updated 25 ಮೇ 2016, 11:40 IST
ಅಕ್ಷರ ಗಾತ್ರ

ಗುರುಮಠಕಲ್: ಇಲ್ಲಿಗೆ ಸಮೀಪದ ಚಂಡರಿಕಿ ಗ್ರಾಮದಲ್ಲಿ ಕಿಡಿಗೇಡಿಗಳಿಂದಾಗಿ ಸಮಸ್ಯೆಗಳು ಉಲ್ಬಣಿಸಿದ್ದು, ಚಂಡರಕಿ ಗ್ರಾಮವೆಂದರೆ ಸಮಸ್ಯೆಗಳ ಆಗರ ಎನ್ನುವಂತಾಗಿದೆ.
ಸುಮಾರು 4,500 ಜನಸಂಖ್ಯೆ, ಒಂಬತ್ತು ಸದಸ್ಯ ಬಲ ಹೊಂದಿರುವ ಹಾಗೂ ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಈ ಗ್ರಾಮವು ಹತ್ತು ಹಲವು ಸಮಸ್ಯೆಗಳ ಕೇಂದ್ರವಾಗಿದೆ.

ಚರಂಡಿಗಳ ಪಕ್ಕದಲ್ಲಿರುವ ನೀರು ಸರಬರಾಜು ಪೈಪ್‌ನಿಂದ ಸೋರಿಕೆ ಆಗುತ್ತಿರುವ ನೀರನ್ನು ತುಂಬಿಕೊಳ್ಳಲು ಜನರು ಸರತಿಯಲ್ಲಿ ನಿಂತಿರುವುದು ಸಮಸ್ಯೆಯ ತೀವ್ರತೆಗೆ ಹಿಡಿದ ಕನ್ನಡಿಯಾಗಿದೆ. ಪಂಚಾಯತಿಯು ಈಗಾಗಲೇ 8 ಕೊಳವೆ ಬಾವಿ ಕೊರೆಸಿದ್ದು, ಅವುಗಳಲ್ಲಿ 5 ಮಾತ್ರ ಕಾರ್ಯನಿರ್ವಹಿಸುತ್ತವೆ. ಖಾಸಗಿ ಕೊಳವೆ ಬಾವಿಗಳ ಮಾಲೀಕರೊಡನೆ ಮಾತನಾಡಿ, 3 ಕೊಳವೆಬಾವಿಗಳಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಇಷ್ಟಾದರೂ ನೀರಿನ ಸಮಸ್ಯೆ ಬಗೆಹರಿದಿಲ್ಲ.

ಕೆಲವು ಕಿಡಿಗೇಡಿಗಳು ರಾತೋ ರಾತ್ರಿ ನೀರು ಸರಬರಾಜು ಮಾಡುವ ಕೊಳವೆಗಳನ್ನು ಒಡೆಯುತ್ತಿದ್ದು, ಸಮಸ್ಯೆ ಉಲ್ಬಣಗೊಳ್ಳಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಪಂಚಾಯತಿಯು ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಹೇಳಿದರೂ, ಈ ಕೃತ್ಯಗಳು ಮುಂದುವರೆದಿವೆ.

ಗ್ರಾಮ ಪ್ರವೇಶಿಸುತ್ತಿದ್ದಂತೆಯೇ ರಸ್ತೆಯ ಮೇಲೆ ಹರಿಯುವ ಚರಂಡಿ ನೀರು ಸ್ವಾಗತಿಸುತ್ತದೆ. ಗ್ರಾಮ ಪಂಚಾಯತಿಯಲ್ಲಿ ಕಾರ್ಮಿಕರ ಕೊರತೆಯಿಂದ ಗ್ರಾಮದ ಬಹುತೇಕ ಎಲ್ಲಾ ಚರಂಡಿಗಳಲ್ಲಿ ಕಸ, ಮಣ್ಣು ತುಂಬಿದೆ. ಶೀಘ್ರವೇ ಸಭೆ ಕರೆದು, ಗ್ರಾಮದ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಶಿಕ್ಷಿತ ಗ್ರಾಮ: ಯಾದಗಿರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸುಶಿಕ್ಷಿತರನ್ನು ಒಳಗೊಂಡ ಗ್ರಾಮ ಹಾಗೂ ಅತಿ ಹೆಚ್ಚಿನ ಸಂಖ್ಯೆಯ ಸರ್ಕಾರಿ ನೌಕರರನ್ನು ಹೊಂದಿದ ಗ್ರಾಮವೆಂಬ ಹೆಗ್ಗಳಿಕೆ ಈ ಗ್ರಾಮದ್ದಾಗಿದೆ.

ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ‘ಸಮಸ್ಯೆಗಳು ಉಲ್ಬಣಿಸಲು ಕೆಲ ಕಿಡಿಗೇಡಿಗಳು ಕಾರಣರಾಗಿದ್ದಾರೆ. ನೀರಿನ ಸಮಸ್ಯೆ ಬಗೆಹರಿಸಲೆಂದೇ ಸುಮಾರು 500 ಅಡಿ ಆಳದ ಕೊಳವೆ ಬಾವಿ ಕೊರೆಸಲಾಗಿದೆ. ಆದರೆ, ಕೆಲವರು ರಸ್ತೆ ಅಗೆದು ನೀರು ಸರಬರಾಜು ಪೈಪ್‌ಗಳನ್ನು ಒಡೆಯುತ್ತಿದ್ದು, ನೀರು ವ್ಯರ್ಥವಾಗಿ ಹರಿಯುತ್ತಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಹೇಳುತ್ತಾರೆ.

ಶಾಶ್ವತ ಪರಿಹಾರ: ‘ಬಹು ಕೋಟಿ ವೆಚ್ಚದ ಭೀಮಾ ಯೋಜನೆಯ ನೀರನ್ನು ಗ್ರಾಮಕ್ಕೆ ಒದಗಿಸುವುದಾಗಿ ಹೇಳಿದ್ದರು. ಆದರೆ, ಇಲ್ಲಿಯವರೆಗೂ ಆ ನಿಟ್ಟಿನಲ್ಲಿ ಕ್ರಮಕೈಗೊಳ್ಳದೇ ಇರುವುದು ಗ್ರಾಮಸ್ಥರಲ್ಲಿ ಅಸಮಧಾನ ಉಂಟುಮಾಡಿದೆ. ಶೀಘ್ರವೇ ಭೀಮಾ ಯೋಜನೆಯ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸುತ್ತಾರೆ.

ವಿದ್ಯುತ್ ಕಡಿತ: ‘ಮತಕ್ಷೇತ್ರದ ಬಹುತೇಕ ಎಲ್ಲ ಗ್ರಾಮಗಳಲ್ಲೂ ವಿದ್ಯುತ್ ಕಡಿತದ ಸಮಸ್ಯೆ ಇದೆ. ಅಕಾಲಿಕ ಹಾಗೂ ಅನಿರ್ದಿಷ್ಟಾವಧಿ ಕಡಿತದಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಆದ್ದರಿಂದ, ಈ ಬಗ್ಗೆ ಕ್ರಮಕೈಗೊಳ್ಳಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT