ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದಾ ನೀಡದ ವಿದ್ಯಾರ್ಥಿಗೆ ಥಳಿತ

Last Updated 2 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗಣೇಶ ಉತ್ಸವಕ್ಕೆ ಕೇಳಿ­ದಷ್ಟು ಚಂದಾ ಹಣ ನೀಡದ ಕಾರಣಕ್ಕೆ ಹಿರಿಯ ವಿದ್ಯಾರ್ಥಿಗಳು ಸ್ಥಳೀಯ ಯುವ­ಕರ ಜತೆ ಸೇರಿ ಪ್ರಥಮ ಪಿಯುಸಿ ವಿದ್ಯಾ­ರ್ಥಿಗೆ ಮನಬಂದಂತೆ ಥಳಿಸಿ­ರುವ ಘಟನೆ ವರ್ತೂರಿನಲ್ಲಿ ಮಂಗಳವಾರ ನಡೆದಿದೆ.

ವೈಟ್‌ಫೀಲ್ಡ್‌ ಸಮೀಪದ ವಿಜಯ­ನಗರ ನಿವಾಸಿ ತ್ಯಾಗರಾಜ್ ಬಾಬು ಎಂಬುವರ ಮಗ ಕಾರ್ತಿಕ್‌ ಹಲ್ಲೆಗೊಳ­ಗಾದ­ವನು. ಆತನ ಕಣ್ಣು, ಕೈ–ಕಾಲು­ಗಳು ಹಾಗೂ ಹೊಟ್ಟೆ ಭಾಗಕ್ಕೆ ಪೆಟ್ಟು ಬಿದ್ದಿದ್ದು, ಸದ್ಯ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

‘ವರ್ತೂರು ಮುಖ್ಯರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡು­ತ್ತಿ­ರುವ ಕಾರ್ತಿಕ್, ಬೆಳಿಗ್ಗೆ ಎಂದಿನಂತೆ ಕಾಲೇ­ಜಿಗೆ ಹೋಗಿದ್ದ. ಈ ವೇಳೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಯುವಕರು ಆತನ ಬಳಿ ಗಣೇಶ ಮೂರ್ತಿ ವಿಸರ್ಜನೆಗೆ ಹಣ ನೀಡುವಂತೆ ಕೇಳಿದ್ದಾರೆ. ಆಗ ಕಾರ್ತಿಕ್‌, ತನ್ನ ಬಳಿ ಇದ್ದ ₨ 100ನ್ನು ಅವರಿಗೆ ಕೊಟ್ಟಿದ್ದಾನೆ. ಆದರೆ, ₨ 500 ಕೊಡು­ವಂತೆ ಒತ್ತಾಯಿಸಿ ಜಗಳ ಆರಂಭಿಸಿದ ಯುವ­ಕರ ಗುಂಪು, ನಿರ್ಜನ ಪ್ರದೇಶಕ್ಕೆ ಎಳೆ­­ದೊಯ್ದು ಹಲ್ಲೆ ನಡೆಸಿದ್ದಾರೆ’ ಎಂದು ಕಾರ್ತಿಕ್ ಚಿಕ್ಕಪ್ಪ ಆರೋಗ್ಯ­ನಾದನ್ ಹೇಳಿದರು.

‘ಸುಮಾರು 15 ಮಂದಿಯ ಗುಂಪು ಕಾರ್ತಿಕ್‌ನ ಬಟ್ಟೆ ಬಿಚ್ಚಿ, ಕಾಲಿನಿಂದ ಒದ್ದಿದ್ದಾರೆ. ಆ ಗುಂಪಿನಲ್ಲಿದ್ದ ಹಿರಿಯ ವಿದ್ಯಾರ್ಥಿಗಳ ಹೆಸರುಗಳನ್ನು  ಆಡಳಿತ ಮಂಡಳಿಯ ಗಮನಕ್ಕೆ ತರಲಾಗಿದೆ. ತಪ್ಪಿ­ತಸ್ಥರ ವಿರುದ್ಧ ಕ್ರಮ ಕೈಗೊಳ್ಳ­ಬೇಕಾದ ಆಡಳಿತ ಮಂಡಳಿ, ಅವರನ್ನು ರಕ್ಷಿ­ಸಲು ಮುಂದಾಗಿದೆ’ ಎಂದು ಆರೋಪಿಸಿದರು.

‘ಕಾರ್ತಿಕ್‌ಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಶಿಕ್ಷಕರು, ನಂತರ ಪೋಷಕರಿಗೆ ವಿಷಯ ತಿಳಿಸದಂತೆ ಎಚ್ಚರಿಕೆ ನೀಡಿದ್ದರು. ಸಂಜೆ 6 ಗಂಟೆಗೆ ತಂದೆ ಮನೆಗೆ ಬರುತ್ತಿ­ದ್ದಂ­ತೆಯೇ ಕಾರ್ತಿಕ್‌, ನಡೆದ ಘಟನೆ­ಯನ್ನು ವಿವರಿಸಿ­ದ್ದಾನೆ. ಕೂಡಲೇ ಅವರು ಮಗನನ್ನು ಆಸ್ಪ­ತ್ರೆಗೆ ದಾಖಲಿಸಿ­ದ್ದಾರೆ’ ಎಂದು ಅವರು ಹೇಳಿದರು.

ಘಟನೆ ಬಗ್ಗೆ ‘ಪ್ರಜಾವಾಣಿ’ ಜತೆ ಮಾತ­­ನಾಡಿದ ತ್ಯಾಗರಾಜ್ ಬಾಬು, ‘ಮಗನ ವಿರುದ್ಧ ಹಲ್ಲೆ ನಡೆಸಿದವರ ವಿರುದ್ಧ ಹಾಗೂ ವಿಷಯ ಬಹಿರಂಗ­ಪಡಿ­ಸ­­ದಂತೆ ಮಗನಿಗೆ ಬೆದರಿಸಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವರ್ತೂರು ಠಾಣೆಗೆ ದೂರು ದಾಖಲಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT