ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಗಿರಿ ಉದ್ಯಾನ ಉದ್ಘಾಟನೆ ರದ್ದು

ಶಾಸಕ, ಪಾಲಿಕೆ ಸದಸ್ಯರ ನಡುವಿನ ರಾಜಕೀಯ ಮೇಲಾಟ
Last Updated 31 ಆಗಸ್ಟ್ 2014, 20:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ನಾಗರಬಾವಿ ವಾರ್ಡ್‌ 128ರ ವ್ಯಾಪ್ತಿಯಲ್ಲಿ ನೂತ­ನ­ವಾಗಿ ನಿರ್ಮಿಸಿರುವ ಚಂದ್ರಗಿರಿ ಉದ್ಯಾನ ಮತ್ತು ಬಿಬಿಎಂಪಿ ವಾರ್ಡ್‌ ಕಚೇರಿ ಕಟ್ಟಡ ಉದ್ಘಾಟನಾ ಸಮಾ­ರಂಭವು  ಪಾಲಿಕೆಯ ಬಿಜೆಪಿ ಸದಸ್ಯ ಮತ್ತು ಆಡಳಿತಾರೂಢ ಕಾಂಗ್ರೆಸ್‌ ಶಾಸಕರ ರಾಜಕೀಯ ಮೇಲಾಟದಲ್ಲಿ ಭಾನುವಾರ ಮತ್ತೊಮ್ಮೆ ರದ್ದಾಯಿತು.

ಈ ಹಿಂದೆಯೂ ಎರಡು ಬಾರಿ ನಿಗದಿ­ಯಾಗಿದ್ದ ಉದ್ಘಾಟನಾ ಸಮಾರಂಭವು ಅಂತಿಮ ಕ್ಷಣದಲ್ಲಿ  ರದ್ದಾಗಿತ್ತು. ಶಿಷ್ಟಾಚಾರ ಪಾಲಿಸದೆ ಪಕ್ಷವೊಂದರ ಖಾಸಗಿ ಕಾರ್ಯಕ್ರಮ ಎನ್ನುವ ರೀತಿ ಸಮಾರಂಭ ಆಯೋಜಿಸಲಾಗಿದೆ ಎಂಬ ಆರೋಪಗಳು ಕೇಳಿಬಂದ ಕಾರಣ ಈ ಬಾರಿಯೂ ಉದ್ಘಾಟನೆ ನಡೆಯಲಿಲ್ಲ.

ಉದ್ಯಾನಕ್ಕೆ ಭೇಟಿ ನೀಡಿ ಸುದ್ದಿಗಾರ­ರೊಂದಿಗೆ ಮಾತನಾಡಿದ ಮೇಯರ್ ಬಿ.ಎಸ್‌.ಸತ್ಯನಾರಾಯಣ, ‘ಮೂರು ಬಾರಿ ಸಮಾರಂಭ ಆಯೋಜಿಸಿ­ದಾಗಲೂ ಶಿಷ್ಟಾಚಾರ ಉಲ್ಲಂಘಿಸಿಲ್ಲ. ಈ ಬಾರಿ ಕಾರ್ಯಕ್ರಮ ನಿಗದಿ ಮಾಡುವ ಮುನ್ನ ಹಲವು ಬಾರಿ ಶಾಸಕ ಪ್ರಿಯಕೃಷ್ಣ ಅವರಿಗೆ ಕರೆ ಮಾಡಿದಾಗ, ಅವರ ಆಪ್ತಸಹಾಯಕ ಕರೆ ಸ್ವೀಕರಿಸಿ ವಾಪಸ್‌ ಕರೆ ಮಾಡಿಸು­ತ್ತೇನೆಂದು ಹೇಳಿದ್ದರು. ಆದರೆ ಕರೆ ಮಾಡಿಸಲಿಲ್ಲ’ ಎಂದು ಹೇಳಿದರು. ‘ಪದೇ ಪದೇ ಕಾರ್ಯಕ್ರಮ ಆಯೋ­ಜಿಸಿ, ಜನರ ತೆರಿಗೆ ಹಣ ಪೋಲು ಮಾಡಲು ಇಷ್ಟವಿಲ್ಲ. ಆದ್ದರಿಂದ ಉದ್ಯಾ­ನ­­­ವನ್ನು ಉದ್ಘಾಟನೆ ಮಾಡದೆ ಹಾಗೆಯೇ ಸಾರ್ವ­ಜನಿಕ ಬಳಕೆಗೆ ಮುಕ್ತ­ಗೊಳಿಸಿದ್ದೇವೆ’ ಎಂದು   ಘೋಷಿಸಿದರು.

ಉದ್ಯಾನದ ಸುತ್ತ ನಿಷೇಧಾಜ್ಞೆ: ಸಮಾರಂಭದ ಸಡಗರ ಕಾಣಬೇಕಿದ್ದ ಉದ್ಯಾನದ ಸುತ್ತ ಭಾನುವಾರ ಬೆಳಿಗ್ಗೆ­ಯಿಂದ ರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಿ, ಪೊಲೀಸರ ಪಹರೆ ಹಾಕಿದ್ದ­ರಿಂದ ಬದಲು ಉದ್ವಿಗ್ನತೆ ಕಂಡುಬಂತು. ‘ಇದು ಸರ್ಕಾರದ ಅಧಿಕೃತ  ಕಾರ್ಯ­ಕ್ರಮವಲ್ಲ. ಇದನ್ನು ನಡೆಸಲು ಬಿಡು­ವುದಿಲ್ಲ ಎಂದು ಸ್ಥಳೀಯ ಶಾಸಕ  ಪ್ರಿಯ­ಕೃಷ್ಣ ಅವರು ಸವಾಲು ಹಾಕಿದ್ದಾರೆ ಎನ್ನ-­ಲಾಗಿದೆ. ಆದ್ದರಿಂದ ರಾಜಕೀಯ ಕಾರ್ಯ­ಕರ್ತರ ನಡುವೆ ಘರ್ಷಣೆ­ಯಾಗುವ ಸಾಧ್ಯತೆ ಇರುವ ಕಾರಣ ಉದ್ಯಾ­­ನದ ಸುತ್ತಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿ­ಗೊಳಿಸಲಾಗಿದೆ. ಬಂದೋ­ಬಸ್ತ್‌ಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸ­ಲಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ತಿಳಿಸಿದರು.

‘ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ (ಪಶ್ಚಿಮ) ಜಂಟಿ ಪೊಲೀಸ್ ಕಮಿಷನರ್ ಎಸ್‌.ರವಿ, ನಾಲ್ಕು ಡಿಸಿಪಿಗಳು ಮತ್ತು  ಕೇಂದ್ರಿಯ ಮೀಸಲು ಪೊಲೀಸ್ ಪಡೆಯ 300 ಸಿಬ್ಬಂದಿ­ಯನ್ನು ಭದ್ರತೆಗೆ ನಿಯೋಜಿ­ಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪಾಲಿಕೆ ಸದಸ್ಯ ಕೆ.ಉಮೇಶ್‌ ಶೆಟ್ಟಿ ಅವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದೇವೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾ­ಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್‌­ಕುಮಾರ್ ಹೇಳಿದರು.

ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರೂ ಆದ ಉಮೇಶ್‌ ಶೆಟ್ಟಿ  ಸುದ್ದಿ­ಗಾರರೊಂದಿಗೆ ಮಾತನಾಡಿ, ‘ಸ್ಥಳೀಯ ಕಾಂಗ್ರೆಸ್‌ ಶಾಸಕ ಪ್ರಿಯಕೃಷ್ಣ ಅವರು ಸರ್ಕಾರಿ ಆಡಳಿತ ಮತ್ತು ಅಧಿಕಾರ ದುರುಪಯೋಗಪಡಿ­ಸಿಕೊಂಡು ಪಾಲಿ­ಕೆಯ ಕಾರ್ಯಕ್ರಮವನ್ನು ರದ್ದು­ಗೊಳಿಸಿದ್ದಾರೆ’ ಎಂದು ಆರೋಪಿಸಿದರು.

‘ಇದು ಪಾಲಿಕೆಯ ಅಧಿಕೃತ ಕಾರ್ಯ­ಕ್ರಮವಲ್ಲ ಎನ್ನುವಂತೆ ಬಿಂಬಿಸಲಾ­ಗುತ್ತಿದೆ. ಇದು ಸುಳ್ಳು. ಈ ಹಿಂದೆ ಎರಡು ಬಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿರುವುದರಿಂದ ಮೂರನೇ ಬಾರಿ ಮುದ್ರಿಸಲು ಲೆಕ್ಕಪರಿಶೋಧನೆ ವೇಳೆ ಆಕ್ಷೇಪಣೆ ಬರುತ್ತದೆ ಎಂಬ ಕಾರಣಕ್ಕೆ ಮೇಯರ್‌ ಅವರಿಂದ ಅಧಿಕೃತ ಪತ್ರ ಪಡೆಯ­ಲಾಗಿದೆ’ ಎಂದು ಹೇಳಿದರು.

‘ಶಾಸಕ ಪ್ರಿಯಕೃಷ್ಣ ಅವರು ವಾರ್ಡ್‌ಗೆ ಒಂದು ರೂಪಾಯಿ ಅನುದಾನವನ್ನೂ ಬಿಡುಗಡೆ ಮಾಡಿಲ್ಲ. ಈ ಹಿಂದೆ ಆ.16ರಂದು ಉದ್ಘಾಟನೆ ನಿಗದಿಪಡಿಸಿದ್ದಾಗ ಆ ದಿನ ನಗರದಲ್ಲಿ ಇರುವುದಿಲ್ಲ ಎಂದೂ, ಆ.24ರಂದು ನಿಗದಿ ಮಾಡಿದಾಗ ದೆಹಲಿಗೆ ಹೋಗುತ್ತಿದ್ದೇನೆ ಎಂದೂ ನೆಪ ಹೇಳಿ ಶಾಸಕರು ಕಾರ್ಯಕ್ರಮವನ್ನು ರದ್ದು­ಡಿಸಿದ್ದರು. ಕಾರ್ಯಕ್ರಮಕ್ಕೆ ಬರುವು­ದಾಗಿ ಒಪ್ಪಿಕೊಂಡು ಇದೀಗ ನಿಷೇಧಾಜ್ಞೆ ಹೇರಿಸುವ ಮೂಲಕ ಸಾರ್ವಜನಿಕರಿಗೆ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಲಿ’ ಎಂದರು.

‘ಪಾಲಿಕೆ ಮತ್ತು ಸರ್ಕಾರದ ಹಣ­ದಿಂದ ನಿರ್ಮಿಸಿರುವ ನೂತನ ಉದ್ಯಾನ ಮತ್ತು ವಾರ್ಡ್‌ ಕಚೇರಿ ಉದ್ಘಾಟನೆ ಸಮಾರಂಭವನ್ನು ಉಮೇಶ್‌ ಶೆಟ್ಟಿ ಅವರು ಒಂದು ಪಕ್ಷದ ಖಾಸಗಿ ಕಾರ್ಯಕ್ರಮದಂತೆ ಆಯೋಜಿಸಿದ್ದಾರೆ. ಈ ಕಾರ್ಯಕ್ರಮ ನಿಗದಿಪಡಿಸುವ ಮುನ್ನ ನನ್ನ ಗಮನಕ್ಕೆ ತಂದಿಲ್ಲ. ಶುಕ್ರವಾರ ರಾತ್ರಿ ಮೇಯರ್‌ ನನಗೆ ಕರೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅದು ನನ್ನ ಗಮನಕ್ಕೆ ಬಂದಿಲ್ಲ. ಇದು ಪಾಲಿಕೆಯ ಅಧಿಕೃತ ಕಾರ್ಯಕ್ರಮವೇ ಅಲ್ಲ. ಅಷ್ಟಕ್ಕೂ ನಾನು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿಲ್ಲ’ ಎಂದು ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಹೇಳಿದರು.

‘ಪಾಲಿಕೆಯ ಯಾವುದೇ  ಸದಸ್ಯರಿಗೆ ತಾರತಮ್ಯ ಮಾಡಿಲ್ಲ. ಕ್ಷೇತ್ರದ ಎಂಟು ವಾರ್ಡ್‌ಗಳಲ್ಲಿ ಈವರೆಗೆ ಯಾವುದೇ ಸಮಸ್ಯೆಗಳು ಉದ್ಭವಿಸಿಲ್ಲ. ಈ ವಾರ್ಡ್‌ನಲ್ಲಿ ಮಾತ್ರ ಮೇಲಿಂದ ಮೇಲೆ ಇಂತಹ ಆಪಾದನೆಗಳು ಕೇಳಿಬರುತ್ತಿವೆ’ ಎಂದು ಆರೋಪಿಸಿದರು.

ಸೋಮಣ್ಣ, ಕೃಷ್ಣಪ್ಪ ಮೇಲಾಟ

ವಿಧಾನಪರಿಷತ್ ಸದಸ್ಯ ವಿ.ಸೋಮಣ್ಣ ಮತ್ತು ವಿಜಯ­ನಗರ ಶಾಸಕ ಎಂ.ಕೃಷ್ಣಪ್ಪ ಅವರ ರಾಜಕೀಯ ಗುದ್ದಾಟ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದೆ. ಬಿಜೆಪಿಗೆ ಸೇರಿದ ಪಾಲಿಕೆ ಸದಸ್ಯ ಮತ್ತು ಕಾಂಗ್ರೆಸ್‌ನ ಶಾಸಕರು ಇರುವು­ದ­ರಿಂದ ಈ ಭಾಗದ ಪ್ರತಿ ಸಮಾರಂಭದಲ್ಲೂ ಇದೇ ರೀತಿ ಸಮಸ್ಯೆಗಳು ಉದ್ಭವಿಸುತ್ತಿವೆ.
–ವೆಂಕಟಪ್ಪ, ಸ್ಥಳೀಯರು

ಆಹ್ವಾನಪತ್ರಿಕೆ ಮುದ್ರಿಸಿಲ್ಲ
ನಾನು ರಜೆಯಲ್ಲಿರುವುದ ರಿಂದ ಕಾರ್ಯಕ್ರಮದ ಬಗ್ಗೆ ಮಾಹಿತಿ ಇಲ್ಲ. ಪಾಲಿಕೆಯಿಂದ ಆಹ್ವಾನ ಪತ್ರಿಕೆ ಮುದ್ರಿಸಿಲ್ಲ
–ಲಕ್ಷ್ಮೀನಾರಾಯಣ, ಬಿಬಿಎಂಪಿ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT