ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಅಡಿಕೆ ದರ ಕುಸಿತ ಖಂಡಿಸಿ ಪ್ರತಿಭಟನೆ

Last Updated 28 ಜೂನ್ 2016, 11:11 IST
ಅಕ್ಷರ ಗಾತ್ರ

ಚನ್ನಗಿರಿ:  ರಾಜ್ಯದಲ್ಲಿ ಅಡಿಕೆ ಧಾರಣೆ ದಿನೇ ದಿನೇ ಕುಸಿಯುತ್ತಿರುವುದನ್ನು ಖಂಡಿಸಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ಪಟ್ಟಣದ ತಾಲ್ಲೂಕು ಕಚೇರಿಯ ಪ್ರತಿಭಟನೆ ನಡೆಸಲಾಯಿತು.

‘ಈ ತಾಲ್ಲೂಕಿನಲ್ಲಿ ಪ್ರಮುಖ ಬೆಳೆಯಾಗಿ ಸುಮಾರು 50 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಸತತವಾಗಿ ಧಾರಣೆ ಕುಸಿತ ಕಂಡಿದೆ. ಕಳೆದ ವರ್ಷ ₹ 50ರಿಂದ ₹ 60 ಸಾವಿರ ಇದ್ದ ಅಡಿಕೆ ದರ ಇಂದು ಕೇವಲ ₹ 22 ಸಾವಿರಕ್ಕೆ ಮಾರಾಟವಾಗುತ್ತಿದೆ. 1 ಕ್ವಿಂಟಲ್ ಅಡಿಕೆ ಬೆಳೆಯಲು ಸುಮಾರು ₹ 12 ಸಾವಿರದಿಂದ ₹15 ಸಾವಿರ ಖರ್ಚು ಬೆಳೆಗಾರರಿಗೆ ಬರುತ್ತದೆ. ಇದರಿಂದ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ’ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

‘ರೈತರ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಧಾವಿಸಬೇಕು. ವಿದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಆಮದು ಮಾಡಿಕೊಂಡು ಅಡಿಕೆ ಬೆಳೆಗಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಆದ್ದರಿಂದ ತಕ್ಷಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ರಾಜ್ಯದ ಅಡಿಕೆ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು. ಇಲ್ಲದಿದ್ದರೆ ಅಡಿಕೆ ಬೆಳೆಗಾರರು ಸಾಲದ ಕೂಪಕ್ಕೆ ಬಿದ್ದು ಇನ್ನಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬರುವ ಸಂಭವ ಇದೆ’ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಜಿ.ಎಂ. ಕುಮಾರಸ್ವಾಮಿ ತಿಳಿಸಿದರು.

ಪಟ್ಟಣದ ಎಪಿಎಂಸಿ ಆವರಣದಿಂದ ಹೊರಟ ಪ್ರತಿಭಟನಾ ಮೆರವಣಿಗೆ  ತಹಶೀಲ್ದಾರ್ ತಲುಪಿತು. ತಹಶೀಲ್ದಾರ್ ಎಸ್. ಪದ್ಮಾಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.  ಜಿ.ಎಸ್. ಚಂದ್ರಪ್ಪ, ಎನ್.ಆರ್ ಪ್ರಹ್ಲಾದ್, ಡಿ.ಬಿ. ವೀರಭದ್ರಪ್ಪ, ಸಿ. ಚಂದ್ರಪ್ಪ, ಟಿ.ಇ. ಸಿದ್ದಪ್ಪ, ಜಿ.ಎಸ್. ಬಸವರಾಜ್, ಶಶಿಧರ್, ಬಿ.ಎಂ. ರವಿ, ಕೆ.ಎಸ್. ಚಂದ್ರಪ್ಪ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT