ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿತ್ರೆ ಬರೆದ ಮಹಿಳಾ ಬಿಷಪ್‌ ಲಿಬ್ಬಿ ಲೇನ್‌

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನಾಲ್ಕನೇ ಶತಮಾನದಲ್ಲಿ ಬದುಕಿದ್ದ ಸಂತ ಆಗಸ್ಟೀನ್‌ ತನ್ನ ‘ಪಾಪಿಯೊಬ್ಬನ ಪಶ್ಚಾತ್ತಾಪಗಳು’ (Confessions of a sinner)  ಕೃತಿಯ ಮೂಲಕ ಕ್ರಿಶ್ಚಿಯನ್ ನೈತಿಕತೆಗೆ ಹೊಸದೊಂದು ಆಯಾಮವನ್ನು ಪರಿಚಯಿಸಿದ್ದ. ಇಂದು ಅವನ ಪರಂಪರೆಯಲ್ಲಿ ಮೊತ್ತಮೊದಲ ಮಹಿಳಾ ಬಿಷಪ್ ಆಗಿ ರೆವರೆಂಡ್ ಲಿಬ್ಬಿ ಲೇನ್ ಚುನಾಯಿತರಾಗಿದ್ದಾರೆ.

ಪೋಪ್‌ರ ನೇರ ಅಧೀನಕ್ಕೆ ಒಳಪಡುವ ‘ಚರ್ಚ್‌ ಆಫ್ ಇಂಗ್ಲೆಂಡ್’ ಇಂಗ್ಲೆಂಡ್‌ನ ಅತ್ಯಂತ ಪ್ರಾಚೀನ ಹಾಗೂ ಪ್ರತಿಷ್ಠಿತ ಕ್ಯಾಥೊಲಿಕ್ ಸಂಪ್ರದಾಯವಾದಿ ಚರ್ಚ್‌ಗಳಲ್ಲಿ ಒಂದು.

ಈ ಚರ್ಚ್‌ 20 ವರ್ಷಗಳ ಹಿಂದೆ (ಮಾರ್ಚ್‌ 1994) ಮೊತ್ತಮೊದಲ ಬಾರಿ ಮಹಿಳೆಯರಿಗೆ ಪಾದ್ರಿಯ ಸ್ಥಾನವನ್ನು ನೀಡಲಾರಂಭಿಸಿದ ಮರು ವರ್ಷವೇ ಲಿಬ್ಬಿ ಲೇನ್ ತಮ್ಮ ಪತಿಯೊಂದಿಗೆ ದೀಕ್ಷೆ ಪಡೆದಿದ್ದರು. ಆಕ್‌್ಸಫರ್ಡ್‌ನಲ್ಲಿ ವಿದ್ಯಾಭ್ಯಾಸ ಪೂರೈಸಿದ್ದ ಲೇನ್ ಮುಂದೆ ಥಿಯಾಲಜಿ ವಿಷಯದಲ್ಲಿ ವಿಶೇಷವಾದ ಪದವಿ ಹಾಗೂ ಪಾಂಡಿತ್ಯವನ್ನು ಗಳಿಸಿದರು. ಮಹಿಳೆಯರ ಬಗೆಗಿನ ಚರ್ಚ್‌ನ ಧೋರಣೆಯಲ್ಲಿ ನಾನಾ ಬದಲಾವಣೆಗಳು ಸಂಭವಿಸುತ್ತಿದ್ದ ಸಂದರ್ಭದಲ್ಲಿ ಆಕೆ ಚರ್ಚ್‌ನ ಸಂಪರ್ಕಕ್ಕೆ ಬಂದುದು ಒಂದು ಯೋಗಾಯೋಗ.

‘ಪುರುಷರಿಗೆ ಸರಿಸಮನಾಗಿ ಮಹಿಳೆಯರಿಗೂ ದೀಕ್ಷೆ ಮತ್ತು ತರಬೇತಿಗಳನ್ನು ನೀಡಲಾರಂಭಿಸಿದ ಸ್ಥಿತ್ಯಂತರದ ಸನ್ನಿವೇಶದಲ್ಲಿ ನಾನು ದೀಕ್ಷೆ ಮತ್ತು ತರಬೇತಿಗೆ ಆಯ್ಕೆಯಾದೆ. ಬಿಷಪ್ ಸ್ಥಾನವನ್ನು ನಿರ್ವಹಿಸುವ ಸಾಮರ್ಥ್ಯ ನನಗಿದೆ. ಚರ್ಚ್‌ ಅಂತಹ ಸಾಮರ್ಥ್ಯವನ್ನು ಕಾರ್ಯಗತಗೊಳಿಸಲು ಸಂಕಲ್ಪಿಸಿರುವ ಗಳಿಗೆಯಲ್ಲಿ ನಾನು ಆಯ್ಕೆಯಾದುದು ನನ್ನ ಸುಯೋಗ’ ಎಂದು ಅವರು ಹೇಳಿಕೊಂಡಿದ್ದಾರೆ.

ಈ ಆಯ್ಕೆಯ ತೀರ್ಮಾನದ ಹಿಂದೆ, ಹೆಂಗಸರು ತನ್ನ ವಲಯದಲ್ಲಿ ಪ್ರವೇಶ ಪಡೆಯಲು ಆಸ್ಪದ ನೀಡಬಾರದು ಎಂಬ ‘ಚರ್ಚ್‌ ಆಫ್ ಇಂಗ್ಲೆಂಡ್’ನ ಕೆಲವು ಹಿತಾಸಕ್ತಿಗಳ ವಿತಂಡವಾದಕ್ಕೆ ಅಂತ್ಯ ಹೇಳುವ ಉದ್ದೇಶವೂ ಉಂಟು ಎಂದು ಪರಿಣತರು ಹೇಳುತ್ತಾರೆ. ಈ ವಿತಂಡವಾದವು ಕಳೆದ 20 ವರ್ಷಗಳ ಅವಧಿಯಲ್ಲಂತೂ ತಾರಕಕ್ಕೇರಿತ್ತು. ಅದರಲ್ಲೂ ನಿರ್ದಿಷ್ಟವಾಗಿ ಆಂಗ್ಲೊ ಕ್ಯಾಥೊಲಿಕ್ ಹಾಗೂ ಇವಾಂಜೆಲಿಕಲ್ ಪಂಥಗಳ ಕೆಲವು ಸಂಪ್ರದಾಯಸ್ಥರು ಈ ಬಗೆಯ ಮಹಿಳಾ ಪರ ನಿರ್ಣಯಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದರು.

ಐರ್ಲೆಂಡ್‌, ಅಮೆರಿಕ, ನ್ಯೂಜಿಲೆಂಡ್‌, ಕೆನಡಾ ಮೊದಲಾದ ಕಡೆಗಳಲ್ಲಿ ಚರ್ಚ್‌ಗಳು ಬಹು ಹಿಂದೆಯೇ ಮಹಿಳೆಯರನ್ನು ಬಿಷಪ್ ಸ್ಥಾನಕ್ಕೆ ನೇಮಕ ಮಾಡಿದ್ದವಾದರೂ, ಕ್ರೈಸ್ತ ಧರ್ಮದಲ್ಲಿ ಅತ್ಯಂತ ಪ್ರತಿಷ್ಠಿತ ಎಂದು ಹೆಸರು ಪಡೆದ ‘ಚರ್ಚ್‌ ಆಫ್ ಇಂಗ್ಲೆಂಡ್’ ಇಂತಹ ನಿರ್ಣಯ ತೆಗೆದುಕೊಂಡಿರುವುದು ಚಾರಿತ್ರಿಕ ಮಹತ್ವದ ಒಂದು ಕ್ರಾಂತಿಕಾರಕ ನಿಲುವಾಗಿದೆ. ಅದು ಈ ಹಿಂದೆ 2012ರ ನವೆಂಬರ್‌ನಲ್ಲೂ ಇಂಥದ್ದೊಂದು ನಿರ್ಣಯ ತೆಗೆದುಕೊಳ್ಳಲು ಪ್ರಯತ್ನಿಸಿತ್ತು. ಆದರೆ  ನಾನಾ ಕಾರಣಗಳಿಂದ ಅದು ಫಲಪ್ರದವಾಗಿರಲಿಲ್ಲ. 

ಹಾಗೆ ನೋಡಿದರೆ ಚರ್ಚ್‌ನ ವಲಯದಲ್ಲಿ ಮಹಿಳೆಯರಿಗೂ ಸ್ಥಾನಮಾನ ಸಿಗಬೇಕೆಂಬ ಚಳವಳಿಗೆ ಲೇನ್ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಸ್ವತಃ ಆ ಚಳವಳಿಯ ಮುಂದಾಳತ್ವವನ್ನೇನೂ ಅವರು ವಹಿಸಿಕೊಂಡಿರಲಿಲ್ಲ. ‘ಮುಂದೊಂದು ದಿನ ಇಂತಹುದೊಂದು ಒಳ್ಳೆಯ ಗಳಿಗೆ ಕೂಡಿಬರಲಿದೆ ಎಂಬ ವಿಶ್ವಾಸ ನನಗಿತ್ತಾದರೂ ಈ ಅವಕಾಶ ನನಗೇ ಒದಗಿಬರಲಿದೆ ಎಂಬ ಕಲ್ಪನೆಯೂ ನನಗಿರಲಿಲ್ಲ’ ಎಂದು ಲೇನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಈ ಆಯ್ಕೆ ಪ್ರಕ್ರಿಯೆಯು ಕಠಿಣ ಹಾಗೂ ಸೂಕ್ಷ್ಮವಾದ ಹಲವು ಮಾನದಂಡಗಳನ್ನು ಒಳಗೊಂಡಿರುತ್ತದೆ ಎಂಬುದನ್ನು ಬಲ್ಲ ಅವರು ‘ಅಧಿಕಾರದ ವಿಷಯದಲ್ಲಿ ನಾನೇನು ಎಂಬುದರ ಅರಿವು ನನಗಿದೆ. ಈ ಸ್ಥಾನ ನನ್ನಿಂದ ಅಪೇಕ್ಷಿಸುವ ಬೇಡಿಕೆಗಳಿಗೆ ನನ್ನ ಸೀಮಿತ ಕೌಶಲ, ಅನುಭವ, ಪ್ರತಿಭೆಯನ್ನು ಪ್ರಾಮಾಣಿಕವಾಗಿ ನಿರ್ವಂಚನೆಯಿಂದ ವಿನಿಯೋಗಿಸುತ್ತೇನೆ’ ಎಂದು ತಮಗೆ ಸಂದ ಸ್ಥಾನಮಾನ ಹಾಗೂ ಮುಂದಿರುವ ಜವಾಬ್ದಾರಿಗಳ ಬಗ್ಗೆ ಅವರು ವಿನಮ್ರವಾಗಿ ಹೇಳಿಕೊಂಡಿದ್ದಾರೆ.

ಕ್ಯಾಂಟರ್‌ಬರಿಯ ಆರ್ಚ್‌ ಬಿಷಪ್ ಜಸ್ಟಿನ್ ವೆಲ್ಬಿ ಹಾಗೂ ಇನ್ನಿತರ ಪಾದ್ರಿಗಳ ಮಹಿಳಾ ಪರವಾದ ಕಳಕಳಿಯನ್ನು ಪ್ರಶಂಸಿಸುತ್ತಾ ‘ನಾನು ಮೊದಲಿಗಳಿರಬಹುದು. ಆದರೆ ಮುಂಬರುವ ದಿನಗಳಲ್ಲಿ ನನ್ನಂತಹ ಇನ್ನೂ ಹೆಚ್ಚು ಹೆಚ್ಚು ಮಹಿಳೆಯರು ಈ ತರಹದ ಸ್ಥಾನಗಳಿಗೆ ಆಯ್ಕೆಯಾಗಲಿದ್ದಾರೆ’ ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ.

ಧಾರ್ಮಿಕ ಚಳವಳಿಗಳು ಜಗತ್ತಿನ ಇನ್ನಾವ ಚಳವಳಿಗಿಂತಲೂ ಮಿಗಿಲಾಗಿ ಹಾಗೂ ಯಶಸ್ವಿಯಾಗಿ ಬಡವರ ದನಿಯಾಗಬಲ್ಲವು. ಆ ದನಿ ಪ್ರಭುತ್ವವನ್ನು ತಲುಪುವಂತೆ ಮಾಡಬಲ್ಲವು. ಲೇನ್‌ ಅವರ ಹಿರಿಯ ಸಮಕಾಲೀನರಾದ ಆರ್ಚ್‌ ಬಿಷಪ್ ಜಸ್ಟಿನ್ ವೆಲ್ಬಿ ವಿಶೇಷವಾದ ಸಾಮಾಜಿಕ ಕಳಕಳಿಯನ್ನು ಹೊಂದಿದ್ದ ಪಾದ್ರಿಯಾಗಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಇಂಗಿತವನ್ನು ಇದೀಗ ಲೇನ್ ವ್ಯಕ್ತಪಡಿಸಿದ್ದಾರೆ.

‘ಚರ್ಚ್‌ ಆಫ್ ಇಂಗ್ಲೆಂಡ್’ನಲ್ಲಿ ಇಂತಹುದೊಂದು ಕ್ರಾಂತಿಕಾರಕ ಬೆಳವಣಿಗೆಯಾಗಿರುವುದು ನಿಜವಾದರೂ ರಾಜಕೀಯ ಅಧಿಕಾರದ ಮಟ್ಟಿಗೆ ಅಲ್ಲಿ ಇನ್ನೂ ಕೆಲವು ತೊಡಕುಗಳು ಬಗೆಹರಿಯಬೇಕಿದೆ. ಆರ್ಚ್‌ ಬಿಷಪ್‌ಗಿಂತ ಕೆಳಹಂತದ ಬಿಷಪ್‌ಗಳು ಇಂಗ್ಲೆಂಡ್‌ನ ಮೇಲ್ಮನೆಯಲ್ಲಿ ಕುಳಿತುಕೊಳ್ಳುವಂತಿಲ್ಲ. ಇಂತಹ ಕಾನೂನಿನಲ್ಲಿ ಹಲವು ತಿದ್ದುಪಡಿಗಳನ್ನು ತರುವ ಪ್ರಯತ್ನಗಳು ಈಗಾಗಲೇ ನಡೆದಿದೆ. ಇದಕ್ಕೆ ಪೂರಕವಾಗಿ, ಹಿರಿಯ ಮಹಿಳಾ ಬಿಷಪ್‌ಗಳಿಗೂ ಮೇಲ್ಮನೆಯಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತಾವು ಸರ್ವಪ್ರಯತ್ನ ಮಾಡುವುದಾಗಿ ಲೇನ್‌ ಆಶ್ವಾಸನೆ ನೀಡಿದ್ದಾರೆ.

ತಮಗೆ ಮೇಲ್ಮನೆಯಲ್ಲಿ ಅವಕಾಶ ಇಲ್ಲದಿದ್ದರೂ ಮೊತ್ತ ಮೊದಲ ಮಹಿಳಾ ಬಿಷಪ್ ಎಂಬ ಹೆಗ್ಗಳಿಕೆಯಿಂದಾಗಿ ಈಗಾಗಲೇ ಲೇನ್‌ ಇಂಗ್ಲೆಂಡ್ ರಾಜಕಾರಣದ ಒಬ್ಬ ಪ್ರಭಾವಿ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಆಕೆ ನೀಡಿರುವ ಭರವಸೆ ಕೈಗೂಡುವ ದಿನ ದೂರವಿಲ್ಲ ಎಂದು ದೇಶದ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ. ಮುಂದಿನ ವರ್ಷ, ಅಂದರೆ 2015ರ ಜನವರಿ 26ರಂದು ಲೇನ್‌ ಅವರ ಅಧಿಕಾರ ಸ್ವೀಕಾರ ಸಮಾರಂಭ ನಡೆಯಲಿದ್ದು, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್‌ ಶುಭ ಕೋರಿದ್ದಾರೆ. ಚರ್ಚ್‌ನ ಉನ್ನತ ಪದವಿಗಳಲ್ಲಿ ಸಮಾನತೆ ತರುವ ನಿಟ್ಟಿನಲ್ಲಿ ಇದೊಂದು ಮಹತ್ವದ ಚಾರಿತ್ರಿಕ ಬೆಳವಣಿಗೆ ಎಂದು ಅವರು ಬಣ್ಣಿಸಿದ್ದಾರೆ.

ಅದೇನೇ ಇರಲಿ, ಲೇನ್‌ ಅವರ ಆಯ್ಕೆ ಕ್ರಿಶ್ಚಿಯನ್ ಸಮುದಾಯಕ್ಕೆ ಈ ವರ್ಷದ ಕ್ರಿಸ್ಮಸ್ ಹಬ್ಬದ ಕೊಡುಗೆಯಾಗಿದೆ ಮತ್ತು ಮಹಿಳಾ ಹಕ್ಕುಗಳನ್ನು ತುಳಿಯುತ್ತಿರುವ ಎಲ್ಲ ಜಾಗತಿಕ ಧರ್ಮಗಳಿಗೂ ಒಂದು ಮೇಲ್ಪಂಕ್ತಿಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT