ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಿಷ್ಮಾ ಪುಷ್ಪ ಕೃಷಿಯಲ್ಲಿ ಯಶ ಕಂಡ ರೈತ

Last Updated 8 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಭತ್ತ, ಕಬ್ಬು, ಬಾಳೆ ಬೆಳೆದ ರೈತರು ಕೈ ಸುಟ್ಟುಕೊಳ್ಳುತ್ತಿರುವ ದಿನಗಳಲ್ಲಿ ರೈತನೊಬ್ಬ ಚರಿಷ್ಮಾ ಪುಷ್ಪ ಕೃಷಿ ಮೂಲಕ ಲಾಭದ ಮಾರ್ಗ ಕಂಡುಕೊಂಡಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕು ಸಬ್ಬನಕುಪ್ಪೆ ಗ್ರಾಮದ ರೈತ ಯೋಗೇಶ್‌ ತಮ್ಮ ಎರಡು ಎಕರೆ ಪ್ರದೇಶದಲ್ಲಿ ಚರಿಷ್ಮಾ ಪುಷ್ಪ ಕೃಷಿ ಮಾಡುತ್ತಿದ್ದಾರೆ. 6 ತಿಂಗಳ ಹಿಂದೆ ನಾಟಿ ಮಾಡಿರುವ ಗಿಡಗಳು ಈಗ ಹೂ ಕೊಡುತ್ತಿದ್ದು ತಿಂಗಳಿಗೆ ₹20 ಸಾವಿರ ಆದಾಯ ಪಡೆಯುತ್ತಿದ್ದಾರೆ. ಯೋಗೇಶ್‌ ಒಟ್ಟು 4 ಬಗೆಯ ಚರಿಷ್ಮಾ ಹೂ ಬೆಳೆದಿದ್ದಾರೆ. ಕಾಮನ್‌ ಚರಿಷ್ಮಾ, ಮೆರಾಬುಲ್‌ ರೆಡ್‌ ಹಾಗೂ ಸ್ಪ್ರೇ ಆರೆಂಜ್‌ ತಳಿಯ ತಲಾ ಒಂದು ಸಾವಿರ ಹೂ ಗಿಡಗಳನ್ನು ಬೆಳೆಸಿದ್ದಾರೆ.

ಮ್ಯಾಂಗೋ ಯಲ್ಲೋ ವೆರೈಟಿಯ ಎರಡು ಸಾವಿರ ಚರಿಷ್ಮಾ ಹೂ ಗಿಡಗಳು ಇವರ ತೋಟದಲ್ಲಿವೆ. ದಿನ ಬಿಟ್ಟು ದಿನ ಹೂ ಕೀಳುತ್ತಿದ್ದಾರೆ. ಪ್ರತಿ ಕೊಯ್ಲಿಗೆ ಸದ್ಯ 100 ಕೆ.ಜಿ ಹೂ ಸಿಗುತ್ತಿದೆ. ಇನ್ನು ಮೂರು ತಿಂಗಳು ಕಳೆದರೆ ದುಪ್ಪಟ್ಟು ಹೂ ಸಿಗುತ್ತವೆ; ಆದಾಯವೂ ದ್ವಿಗುಣಗೊಳ್ಳುತ್ತದೆ ಎಂದು ಯೋಗೇಶ್‌ ಹೇಳುತ್ತಾರೆ.

ಮಾರುಕಟ್ಟೆ: ಚರಿಷ್ಮಾ ಹೂಗಳಿಗೆ ಸದಾ ಕಾಲವೂ ಬೇಡಿಕೆ ಉಂಟು. ಕೊಯ್ಲು ಮಾಡಿದ ಹೂವನ್ನು ಯೋಗೇಶ್‌ ಮೈಸೂರು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರತಿ ಕೆ.ಜಿ ಹೂಗೆ ಕನಿಷ್ಠ 100 ಬೆಲೆ ಸಿಗುತ್ತಿದೆ. ಆಯುಧ ಪೂಜೆ, ದೀಪಾವಳಿ, ವರಮಹಾಲಕ್ಷ್ಮೀ ಹಬ್ಬ ಇತರ ವಿಶೇಷ ದಿನಗಳಲ್ಲಿ ಈ ಹೂವಿನ ಬೆಲೆ ಪ್ರತಿ ಕೆ.ಜಿಗೆ ₹300ರಿಂದ ₹400ರವರೆಗೂ ಏರುತ್ತದೆ. ಬಂಪರ್‌ ಬೆಳೆ ಬಂದರೆ ಬೆಳೆದವರು ಕೈ ತುಂಬಾ ಕಾಸು ಎಣಿಸಿಕೊಳ್ಳಬಹುದು.

ಕೃಷಿ ವಿಧಾನ: ಚರಿಷ್ಮಾ ಹೂ ಗಿಡಗಳ ನಾಟಿಗೂ ಮುನ್ನ ಭೂಮಿಯನ್ನು ಉಳುಮೆ ಮಾಡಿ ಕೊಟ್ಟಿಗೆ ಗೊಬ್ಬರ ಸೇರಿಸಿ ಹದ ಮಾಡಿಕೊಳ್ಳಬೇಕು. ಮೂರೂವರೆ ಅಡಿ ಅಂತರದ ಸಾಲುಗಳಲ್ಲಿ ಟ್ರೆಂಚ್‌ ತೆಗೆದು ಆ ಟ್ರೆಂಚ್‌ನಲ್ಲಿ ಎರಡು ಅಡಿಗೆ ಒಂದರಂತೆ ಪೈರು ನಾಟಿ ಮಾಡಬೇಕು. ನಾಟಿ ಮಾಡಿದ ದಿನದಿಂದಲೇ ಹೂ ಬಿಡುವುದು ಚರಿಷ್ಮಾ ವಿಶೇಷ. ಆದರೆ ಹಾಗೆ ಆರಂಭದಲ್ಲಿ ಹೂ ಕೊಯ್ಲು ಮಾಡಿದರೆ ಗಿಡಕ್ಕೆ ನಂಜು ಉಂಟಾಗುತ್ತದೆ. ಹಾಗಾಗಿ ಮೂರು ತಿಂಗಳ ನಂತರ ಹೂ ಕೀಳಬೇಕು. ಪ್ರತಿ 10 ದಿನಗಳಿಗೆ ಒಮ್ಮೆ ಕೀಟನಾಶಕ ಸಿಂಪಡಿಸಬೇಕು. 20 ದಿನಗಳಿಗೆ ಒಮ್ಮೆ ಮಿತ ಪ್ರಮಾಣದಲ್ಲಿ ರಸಗೊಬ್ಬರ ಕೊಡಬೇಕು.

ನಿಯಮಿತವಾಗಿ ನೀರು ಉಣಿಸಬೇಕು. ಗಿಡಗಳ ಬಳಿ ಹೆಚ್ಚು ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ನೀರು ಹಾಯಿಸುವ ಬದಲು ಹನಿ ನೀರಾವರಿ ಅಳವಡಿಸಿಕೊಂಡರೆ ಕಳೆ, ಕೀಟ, ರೋಗ ಬಾಧೆ ಕಡಿಮೆ. ಗುಲಾಬಿ ಹೂ ಗಿಡಗಳನ್ನೇ ಹೋಲುವ ಚರಿಷ್ಮಾ ಗಿಡಗಳಲ್ಲಿ ಮುಳ್ಳು ಅತಿ ವಿರಳ. ಹಾಗಾಗಿ ಹೂ ಕೊಯ್ಲು ಮಾಡುವುದು ಸುಲಭ. ಅಂದ ಹಾಗೆ ಆರೋಗ್ಯವಂತ ಚರಿಷ್ಮಾ ಹೂ ಗಿಡ 7ರಿಂದ 8 ವರ್ಷ ಬಾಳಿಕೆ ಬರುತ್ತದೆ. ಅದು ಬದುಕಿರುವಷ್ಟು ದಿನವೂ ಹೂ ಕೊಡುತ್ತಲೇ ಇರುತ್ತದೆ.

‘ಭತ್ತ, ಕಬ್ಬು ಬೆಳೆಯುತ್ತಿದ್ದ ನನಗೆ ನನ್ನ ಬಂಧುವೊಬ್ಬರು ಚರಿಷ್ಮಾ ಪುಷ್ಪ ಕೃಷಿ ಮಾಡುವಂತೆ ಸಲಹೆ ನೀಡಿದರು. ಅವರ ಜತೆ ಬೆಂಗಳೂರು ಸಮೀಪದ ಸರ್ಜಾಪುರದ ಫಾರಂಗೆ ತೆರಳಿ ಬೆಳೆಯುವ ವಿಧಾನ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿ ಪಡೆದುಕೊಂಡೆ. ಅದೇ ಫಾರಂನಿಂದ ವಿವಿಧ ಬಗೆಯ 5 ಸಾವಿರ ಚರಿಷ್ಮಾ ಸಸಿಗಳನ್ನು ತಂದು ನಾಟಿ ಮಾಡಿದ್ದೇನೆ. ಸದ್ಯ ಎಲ್ಲ ಗಿಡಗಳೂ ಹೂ ಕೊಡುತ್ತಿದೆ. ಖರ್ಚು ಕಳೆದು ವರ್ಷಕ್ಕೆ ₹ 3 ಲಕ್ಷ ಆದಾಯ ನಿರೀಕ್ಷೆ ಮಾಡಿದ್ದೇನೆ’ ಎಂದು ಯೋಗೇಶ್‌ ಹೇಳುತ್ತಾರೆ. ಸಂಪರ್ಕಕ್ಕೆ:8867066244.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT