ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲನಚಿತ್ರ ಅಕಾಡೆಮಿಯಲ್ಲಿ ಗ್ರಂಥಾಲಯ

ಪ್ರಗತಿ ಅಶ್ವತ್ಥ ನಾರಾಯಣ ಅವರ ಚಿತ್ರಗಳ ಸಂಗ್ರಹ ‘ಚಿತ್ರಪಥ’
Last Updated 4 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸಿನಿಮಾ ಅಧ್ಯಯನ ವಿದ್ಯಾರ್ಥಿಗಳಿಗೆ  ಅನುಕೂಲವಾಗುವಂತೆ ಚಲನಚಿತ್ರ ಅಕಾಡೆಮಿ ವತಿಯಿಂದ ಗ್ರಂಥಾಲಯ ತೆರೆಯಲು ಉದ್ದೇಶಿಸಲಾಗಿದೆ’ ಎಂದು ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು ಹೇಳಿದರು.

ನಗರದ ಗಾಂಧಿ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಕಾಡೆಮಿ ಪ್ರಕಟಿತ ಹಿರಿಯ ಸಿನಿಮಾ ಸ್ಥಿರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರ ಚಿತ್ರಗಳ ಸಂಗ್ರಹ ‘ಚಿತ್ರಪಥ’ ಮತ್ತು ಎಚ್‌.ಎಸ್.ಮಂಜುನಾಥ್‌ ಅವರ ‘ಚಿತ್ರೋತ್ಸವಗಳು ಹಿನ್ನೆಲೆ–ಮುನ್ನೆಲೆ’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಚಿತ್ರ ನಿರ್ಮಾಣ, ನಿರ್ದೇಶನ, ಸಂಕಲನ, ಛಾಯಾಗ್ರಹಣ ಇತ್ಯಾದಿ ವಿಷಯಗಳ ಕುರಿತು ವಿಶ್ವದಾದ್ಯಂತ ಇರುವ  ಅತ್ಯುತ್ತಮ ಪುಸ್ತಕಗಳನ್ನು ಕನ್ನಡದ ಸೊಗಡಿಗೆ ಒಪ್ಪುವಂತೆ ಅನುವಾದಿಸಲು ಉದ್ದೇಶಿಸಲಾಗಿದೆ. ಆ ಕಾರ್ಯಕ್ಕೆ ನಿರ್ದೇಶಕರಾದ ಗಿರೀಶ್‌ ಕಾಸರವಳ್ಳಿ, ಬರಗೂರು ರಾಮಚಂದ್ರಪ್ಪ, ಶೇಷಾದ್ರಿ ಮುಂತಾದವರ ಸಹಾಯ ಪಡೆಯಲಾಗುತ್ತದೆ’ ಎಂದು ತಿಳಿಸಿದರು.

‘ಅಕಾಡೆಮಿ ವತಿಯಿಂದ ಜಾಲತಾಣ ನಿರ್ಮಿಸಲಾಗುತ್ತಿದೆ. 15 ದಿನಗಳಲ್ಲಿ ಜಾಲತಾಣಕ್ಕೆ ಚಾಲನೆ ದೊರೆಯಲಿದೆ. ಈ ತಾಣದಲ್ಲಿ ಕನ್ನಡ ಚಲನಚಿತ್ರಗಳು ವೀಕ್ಷಕರಿಗೆ ಲಭ್ಯವಾಗಲಿವೆ’ ಎಂದು ಅವರು ಹೇಳಿದರು.

‘ಪುಣೆ ಫಿಲಂ ಇನ್‌ಸ್ಟಿಟ್ಯೂಟ್‌ ಸಹಯೋಗದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಧಾರವಾಡ, ಕಲರ್ಬುಗಿಯಲ್ಲಿ 15 ದಿನಗಳ ಚಲನಚಿತ್ರ ರಸಗ್ರಹಣ ಕೋರ್ಸ್‌ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಅಕಾಡೆಮಿ ಆಯೋಜಿಸುವ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮ ಈವರೆಗೆ ಬೆಂಗಳೂರಿಗೆ ಸೀಮಿತವಾಗಿತ್ತು. ಇದೀಗ ಅದನ್ನು ಅತಿಥಿಗಳ ಹುಟ್ಟೂರಿನಲ್ಲಿ ಆಯೋಜಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ಬಳಸಿ ಬಿಸಾಕುವ ಕಾಲಘಟ್ಟದಲ್ಲಿ ಅಶ್ವತ್ಥ ನಾರಾಯಣ ಅವರು ಸುಮಾರು ನಾಲ್ಕು ಲಕ್ಷ ಛಾಯಾಚಿತ್ರಗಳ ನೆಗೆಟಿವ್‌ಗಳನ್ನು ಸಂರಕ್ಷಿಸಿದ್ದಾರೆ. ಈ ಕಾರ್ಯದಲ್ಲಿ ಪರಂಪರೆ, ಪ್ರಗತಿ ಮತ್ತು ಪ್ರಯೋಗಕ್ಕೆ ಸೇತುವಾದ ಅವರ ಇತಿಹಾಸ ಪ್ರಜ್ಞೆ ಕಾಣುತ್ತದೆ.

‘ಚಿತ್ರಪಥ’ ಪುಸ್ತಕ ನೆನಪಿನ ಪ್ರೇರಕ ಮತ್ತು ರೂಪಕವೂ ಹೌದು’ ಎಂದು ಬಣ್ಣಿಸಿದರು.

* ಚಿತ್ರಮಂದಿರ ದೊರೆಯದ ಉತ್ತಮ ಸಿನಿಮಾಗಳನ್ನು ಪ್ರತಿ ತಿಂಗಳು ಎರಡು ಮತ್ತು ನಾಲ್ಕನೇ ಶನಿವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರದರ್ಶಿಸುವ ಯೋಜನೆ ರೂಪಿಸಲಾಗಿದೆ.

-ಎಸ್‌.ವಿ.ರಾಜೇಂದ್ರ ಸಿಂಗ್‌ ಬಾಬು
ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT