ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲಿಸುತ್ತಿದ್ದ ರೈಲಿನಲ್ಲಿಯೇ ಹೆತ್ತ ಬೆಂಗಳೂರು ಮಹಿಳೆ

Last Updated 22 ಮೇ 2015, 20:07 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯರಿಗೆ ಯಾವಾಗ ಬೇಕಾದರೂ ಕರ್ತವ್ಯದ ಕರೆ ಬರಬಹುದು. ಸಾಮಾಜಿಕ ಕಾರ್ಯಕರ್ತೆ ಡಾ. ವಿದ್ಯಾ ದೇಶ್‌ಮುಖ್‌್ ಅವರ ವಿಷಯದಲ್ಲಿ ಈ ಮಾತು ಅಕ್ಷರಶಃ ನಿಜವಾಯಿತು.

ಛತ್ತೀಸಗಡದ ಜಗದಾಳ್‌ಪುರದಿಂದ ವಾರಾಣಸಿಗೆ ಹೋಗಬೇಕಿದ್ದ ವಿದ್ಯಾ ಅವರು ಗುರುವಾರ ನಾಗಪುರದಲ್ಲಿ  ಸಂಘಮಿತ್ರ ಎಕ್ಸ್‌ಪ್ರೆಸ್‌ (ಬೆಂಗಳೂರು–ಪಟ್ನಾ)ಹತ್ತಿದರು.

ತುಂಬು ಗರ್ಭಿಣಿ ಸಭಾ ಪರ್ವಿನ್‌ (25) ಎಂಬುವರು ಇದೇ ರೈಲಿನ ಸ್ಲೀಪರ್‌ ಕೋಚ್‌ನಲ್ಲಿ ಇದ್ದರು. ಇವರು ಬೆಂಗಳೂರಿನಿಂದ ಪಟ್ನಾಗೆ ಪ್ರಯಾಣಿಸುತ್ತಿದ್ದರು.  ರೈಲು ಗುರುವಾರ ಸಂಜೆ ಸುಮಾರು 4 ಗಂಟೆಗೆ ಮಧ್ಯಪ್ರದೇಶದ ಇಟಾರ್ಸಿ ನಿಲ್ದಾಣವನ್ನು ಹಾದುಹೋಗುತ್ತಿದ್ದಾಗ ಪರ್ವಿನ್‌್ ಅವರಿಗೆ ಹೆರಿಗೆ ನೋವು ಶುರುವಾಯಿತು.

ಮುಂದಿನ ನಿಲ್ದಾಣ ಪಿಪರಿಯಾ ತಲುಪಲು ಒಂದು ತಾಸು ಬೇಕಾಗಿತ್ತು.  ಆದರೆ ಸಮಯ ಮೀರಿ ಹೋಗಿತ್ತು. ಸಹ ಪ್ರಯಾಣಿಕರು ಟಿಟಿಇ ಗಣೇಶ್‌ ಸ್ವರೂಪ್‌ ಅವರಿಗೆ ವಿಷಯ ತಿಳಿಸಿದರು.  ತಡಮಾಡದೇ ಅವರು  ಪ್ರಯಾಣಿಕರ ಪಟ್ಟಿಯನ್ನು ನೋಡಿ ಎಸಿ ಕೋಚ್‌ನಲ್ಲಿ ಡಾ. ವಿದ್ಯಾ ದೇಶ್‌ಮುಖ್‌ ಇರುವುದನ್ನು ಪತ್ತೆ ಮಾಡಿದರು. ಕೂಡಲೇ ವಿದ್ಯಾ ಸ್ಥಳಕ್ಕೆ ಬಂದರು. ಕೋಚ್‌ನಲ್ಲಿದ್ದ ಇತರ ಪ್ರಯಾಣಿಕರನ್ನು ತೆರವುಗೊಳಿಸಲಾಯಿತು. ಒಂದಿಬ್ಬರು ಮಹಿಳೆಯರು ವಿದ್ಯಾ ಸಹಾಯಕ್ಕೆ ನಿಂತರು. ಸಂಜೆ 4.45ರ ಹೊತ್ತಿಗೆ ಪರ್ವಿನ್‌ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಇದಾದ ಕೆಲವೇ ಕ್ಷಣಗಳಲ್ಲಿ ವಿದ್ಯಾ ಅವರಿಗೆ, ‘ಎಸ್‌–9 ಕೋಚ್‌ನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ’ ಎಂದು ಇನ್ನೊಂದು ಕರೆ ಬಂತು. ಕೂಡಲೇ ಅವರು ಅಲ್ಲಿಗೆ  ಧಾವಿಸಿದರು. ಆದರೆ ಅದು ಹೆರಿಗೆ ನೋವಲ್ಲ ಎನ್ನುವುದು ಖಾತ್ರಿಯಾಯಿತು. ಮಹಿಳೆಗೆ ಕೆಲವು ಔಷಧಗಳನ್ನು ನೀಡಿದ ವಿದ್ಯಾ, ಅಲಹಾಬಾದ್‌ ನಿಲ್ದಾಣದಲ್ಲಿ ಇಳಿದು ಕೂಡಲೇ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದರು.

ವಾರಾಣಸಿಯಲ್ಲಿರುವ ‘ಅವಧೂತ ಭಗವಾನ್‌ ಕುಷ್ಠ ಸೇವಾ ಆಶ್ರಮ’ದಲ್ಲಿ ಕೆಲಸ ಮಾಡುವ ವಿದ್ಯಾ ಅವರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಾರೆ.

ಈ ಆಶ್ರಮವು ವಿಶ್ವದಾದ್ಯಂತ ಲೆಕ್ಕವಿಲ್ಲದಷ್ಟು ಕುಷ್ಠರೋಗಿಗಳಿಗೆ ಚಿಕಿತ್ಸೆ ನೀಡಿ ಗಿನ್ನಿಸ್‌್ ದಾಖಲೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT