ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೆ ಚುರುಗುಟ್ಟುವ ಚಟ್ನಿ

ನಮ್ಮೂರ ಊಟ
Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪ್ರಕೃತಿಯ ಸಿರಿ ನೋಡಲು ಮಲೆನಾಡಿಗೆ ಹೋಗಬೇಕು. ಮಲೆನಾಡ ನೋಟದ ಜೊತೆಗೆ ಬಾಯಿಗೆ ರುಚಿಯಾದ ಊಟವು ಇಲ್ಲಿ ಪ್ರಸಿದ್ಧ. ಅಕ್ಕಿ ರೊಟ್ಟಿ, ಕಾಯಿಚಟ್ನಿ, ಬದನೆಕಾಯಿ ಬಜ್ಜಿ, ಹುರಳಿಕಾಳು ಬಜ್ಜಿ ಬಾಯಿಯಲ್ಲಿ ನೀರೂರಿಸುತ್ತವೆ. ಭತ್ತ ಇಲ್ಲಿನ ಪ್ರಮುಖ ಬೆಳೆಯಾಗಿರುವುದರಿಂದ ಅಕ್ಕಿಯಿಂದ ಮಾಡುವ ತಿನಿಸು ಹೆಚ್ಚು.

ಋತುಮಾನಕ್ಕೆ ಅನುಗುಣವಾಗಿ ಸಿಗುವ ತರಕಾರಿ, ಸೊಪ್ಪನ್ನು ಉಪಯೋಗಿಸಿ ವಿವಿಧ ರೀತಿಯ ಖಾದ್ಯಗಳನ್ನು ಮಾಡುತ್ತಾರೆ. ಮಲೆನಾಡಲ್ಲಿ ಸಿಗುವ ಕಣಲೆ, ಕೇಸುವಿನ ಎಲೆ, ಸೀಗೆಸೊಪ್ಪು, ತಾವರೆಗೆಡ್ಡೆ ಇನ್ನು ಹಲವಾರು ತರಕಾರಿಗಳನ್ನು ಇಲ್ಲಿ ನೋಡಲು ಸಾಧ್ಯ.  ಅನ್ನದ ಅಕ್ಕಿ ರೊಟ್ಟಿ, ಅನ್ನ ಮತ್ತು ಗೋಧಿ ಹಿಟ್ಟು ಹಾಕಿ ಗೋಧಿ ಕಡುಬು, ಹೀಗೆ ಮಾಡುವುದರಲ್ಲಿ ಅಕ್ಕಿ ರೊಟ್ಟಿ, ಬದನೆಕಾಯಿ ಬಜ್ಜಿ, ರುಚಿಯೇ ವಿಭಿನ್ನ. ಇದನ್ನು ಮಾಡುವ ವಿಧಾನ ಇಲ್ಲಿ  ತಿಳಿಸಲಾಗಿದೆ.

ಹುರಳಿಕಾಳು ಬಜ್ಜಿ
ಸಾಮಗ್ರಿ:
ಒಂದು ಗ್ಲಾಸ್‌ ಹುರುಳಿಕಾಳು, ಅರ್ಧ ಗ್ಲಾಸ್‌ ಹೆಸರುಕಾಳು, ಕಾಲು ಗ್ಲಾಸ್‌ ಕಡ್ಲೆಕಾಳು,1 ಟೀ ಚಮಚ ಉದ್ದಿನಬೇಳೆ, 1 ಟೀ ಚಮಚ ಧನಿಯಾ, 1 ಟೀ ಚಮಚ ಜೀರಿಗೆ, ಅರ್ಧ ಚಮಚ ಅಕ್ಕಿ, ಸ್ವಲ್ಪ ಉಪ್ಪು.
ಮೇಲೆ ಇರುವ ಕಾಳುಗಳನ್ನು ಬೇರೆ – ಬೇರೆಯಾಗಿ ಹುರಿದುಕೊಳ್ಳಿರಿ, ನಂತರ ಸ್ವಲ್ಪ ಉಪ್ಪು ಸೇರಿಸಿ ಪುಡಿ ಮಾಡಿಕೊಳ್ಳಿ. ಈ ಪುಡಿಯು ತುಂಬಾ ಪುಡಿಯಾಗದೆ. ತುಂಬಾ ರವೆಯಾಗಿರದೆ ತರಿ – ತರಿಯಾಗಿ ಇರಬೇಕು. ಈ ಪುಡಿಯನ್ನು  2–3 ತಿಂಗಳು ಶೇಖರಿಸಿಡಬಹುದು. ತರಕಾರಿ ಇಲ್ಲದಾಗ ಇದನ್ನು ಪಲ್ಯ ತರಹ ಮಾಡಿಕೊಳ್ಳಬಹುದು.


ವಿಧಾನ: ಮೊದಲು ಹಸಿಮೆಣಸಿನಕಾಯಿ, ಬೆಳ್ಳುಳ್ಳಿ, ಕಾಯಿತುರಿ ಹಾಕಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಸಣ್ಣಗೆ ಈರುಳ್ಳಿ ಹೆಚ್ಚಿಕೊಂಡು ಒಗ್ಗರಣೆ ಮಾಡಿ, ಈರುಳ್ಳಿ ಬಾಡಿಸಿಕೊಂಡು, ಮಿಕ್ಸಿಯಲ್ಲಿ ರುಬ್ಬಿದ ಪೇಸ್ಟ್ ಹಾಕಿ ಚೆನ್ನಾಗಿ ಫ್ರೈ ಮಾಡಿ. ನಂತರ ಬಜ್ಜಿ ಹಿಟ್ಟನ್ನು ನೀರಿನಲ್ಲಿ ತೆಳ್ಳಗೆ, ಗಂಟಿಲ್ಲದೆ ಕಲಸಿ ಒಗ್ಗರಣೆಯಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಅದಕ್ಕೆ ಹುಣಸೆ ರಸ ಮತ್ತು ಸ್ವಲ್ಪ ಉಪ್ಪು ಹಾಕಿರಿ. ಅದಕ್ಕೆ ಬೇಕಾಗುವಷ್ಟು ನೀರು ಹಾಕಿ ಚೆನ್ನಾಗಿ ಕುದಿಸಿ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರ ಹುರಳಿಕಾಳು ಬಜ್ಜಿ ರೆಡಿ.

ಮೆಂತ್ಯ ಸೊಪ್ಪಿನ ರೊಟ್ಟಿ
ಸಾಮಗ್ರಿ:
ಅಕ್ಕಿಹಿಟ್ಟು 1 ಬಟ್ಟಲು, ಜೋಳದ ಹಿಟ್ಟು 1 ಬಟ್ಟಲು, ಹುರಿಗಡಲೆ ಪುಡಿ ಸ್ವಲ್ಪ, ಕಾಯಿತುರಿ, ಹಸಿಮೆಣಸಿನಕಾಯಿ, ಜೀರಿಗೆ, ಉಪ್ಪು, ಮೆಂತ್ಯಸೊಪ್ಪು (ಸಣ್ಣಗೆ ಹೆಚ್ಚಿದ್ದು), ಈರುಳ್ಳಿ (ಸಣ್ಣಗೆ ಹೆಚ್ಚಿದ್ದು), ಕರಿಬೇವು, ಕಡ್ಲೆಬೇಳೆ, ಉದ್ದಿನಬೇಳೆ, ಹುರಿದ ಶೇಂಗಾಬೀಜ, ಬೆಳ್ಳುಳ್ಳಿ, ಶುಂಠಿ.

ವಿಧಾನ: ಮೊದಲು ಹಸಿಮೆಣಸಿನಕಾಯಿ, ಕಾಯಿತುರಿ, ಬೆಳ್ಳುಳ್ಳಿ, ಶುಂಠಿ, ಜೀರಿಗೆ ಹಾಕಿ ಮಿಕ್ಸಿ ಯಲ್ಲಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಅಕ್ಕಿಹಿಟ್ಟು, ಜೋಳದ ಹಿಟ್ಟು ಹುರಿಗಡಲೆ ಪುಡಿ, ಮೆಂತ್ಯೆಸೊಪ್ಪು, ಈರುಳ್ಳಿ, ಕರಿಬೇವು, ಕಡ್ಲೆಬೇಳೆ, ಉದ್ದಿನಬೇಳೆ, ಹುರಿದ ಶೇಂಗಾಬೀಜ, ಉಪ್ಪು ಹಾಕಿ ಬಿಸಿನೀರಿನಿಂದ ಕಲಸಿಕೊಳ್ಳಿ. ನಂತರ ಪ್ಲಾಸ್ಟಿಕ್‌ ಕವರ್‌ ಅಥವಾ ಬಾಳೆ ಎಲೆಯ ಮೇಲೆ ಎಣ್ಣೆ ಹಾಕಿ ತೆಳ್ಳಗೆ ತಟ್ಟಿಕೊಂಡು ಹೆಂಚಿನ ಮೇಲೆ ಎರಡು ಕಡೆ ಎಣ್ಣೆ ಹಾಕಿ ಬೇಯಿಸಿದರೆ ಬಿಸಿ–ಬಿಸಿ ಮೆಂತ್ಯೆ ಸೊಪ್ಪಿನ ರೊಟ್ಟಿ ರೆಡಿ.

ಹಸಿಮೆಣಸಿನಕಾಯಿ ಕೈಚಟ್ನಿ
ಸಾಮಗ್ರಿ:
ಬ್ಯಾಡಗಿ ಹಸಿಮೆಣಸಿನಕಾಯಿ 1 ಹಿಡಿ, ಬೆಳ್ಳುಳ್ಳಿ, ಉಪ್ಪು, ಬೆಲ್ಲ ಹುಣಸೆಹಣ್ಣು, ಕರಿಬೇವು, ಕೊತ್ತಂಬರಿಸೊಪ್ಪು.

ವಿಧಾನ: ಮೊದಲು ಹಸಿಮೆಣಸಿನಕಾಯಿಯನ್ನು ಎಣ್ಣೆ ಹಾಕಿ ಹುರಿಯಿರಿ. ಹುರಿದ ನಂತರ ಬೆಳ್ಳುಳ್ಳಿ, ಉಪ್ಪು, ಬೆಲ್ಲ, ಹುಣಸೆಹಣ್ಣು, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ ಅಥವಾ ಅರೆಯುವ ಕಲ್ಲಿನಲ್ಲಿ ಅರೆದರೆ ಚಟ್ನಿ ರೆಡಿ.

ಬೆಳ್ಳುಳ್ಳಿ ಚಟ್ನಿ
ಸಾಮಗ್ರಿ:
ಬ್ಯಾಡಗಿ ಒಣಮೆಣಸಿನಕಾಯಿ, ಹುಣಸೆಹಣ್ಣು, ಬೆಲ್ಲ, ಉಪ್ಪು, ಈರುಳ್ಳಿ, ಬೆಳ್ಳುಳ್ಳಿ, ಕರಿಬೇವು, ಜೀರಿಗೆ 1 ಟೀ ಚಮಚ, ಎಣ್ಣೆ 2–3 ಚಮಚ.

ವಿಧಾನ:ಮೊದಲು ಒಣ ಮೆಣಸಿನಕಾಯಿಯನ್ನು ಎಣ್ಣೆ ಹಾಕಿ ಗರಿ–ಗರಿಯಾಗುವವರೆಗೂ ಹುರಿಯಿರಿ. ನಂತರ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಅದು ತರಿ ತರಿಯಾಗಿರಲಿ. ನಂತರ ಅದನ್ನು ಒಂದು ಬಟ್ಟಲಿಗೆ ತೆಗೆದು ಮಿಕ್ಸಿ ಜಾರ್‌ಗೆ ಬೆಳ್ಳುಳ್ಳಿ, ಹೆಚ್ಚಿದ ಈರುಳ್ಳಿ, ಉಪ್ಪು, ಕರಿಬೇವು, ಹುಣಸೆಹಣ್ಣು, ಜೀರಿಗೆ ಹಾಕಿ ರುಬ್ಬಿಕೊಳ್ಳಿ. ಅದು ನುಣ್ಣಗೆ ಪುಡಿ ಆದ ಮೇಲೆ ಮೊದಲೇ ಪುಡಿಮಾಡಿದ ಮೆಣಸಿನಕಾಯಿ ಪುಡಿ ಹಾಕಿ ಮತ್ತೆ ಮಿಕ್ಸಿಯಲ್ಲಿ ರುಬ್ಬಿಕೊಂಡರೆ ಬೆಳ್ಳುಳ್ಳಿ ಚಟ್ನಿ ರೆಡಿ.

ಬೇಯಿಸಿದ ಬದನೆಕಾಯಿ ಬಜ್ಜಿ
ಸಾಮಗ್ರಿ:
3–4 ಬದನೆಕಾಯಿ, 3–4 ಹಸಿಮೆಣಸಿನಕಾಯಿ, ಅರ್ಧ ಬಟ್ಟಲು ಕಾಯಿತುರಿ, 1 ಟೀ ಚಮಚ ಉಚ್ಚೆಳ್ಳುಪುಡಿ, ಹುಣಸೆಹಣ್ಣು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ, ಕರಿಬೇವು, ಕಡ್ಲೆಬೇಳೆ, ಉದ್ದಿನಬೇಳೆ, ಸಣ್ಣಗೆ ಹೆಚ್ಚಿದ ಈರುಳ್ಳಿ.

ವಿಧಾನ: ಮೊದಲು ಬದನೆಕಾಯಿಯನ್ನು ದಪ್ಪಗೆ ಹೆಚ್ಚಿ ಮೆಣಸಿನಕಾಯಿ ಜೊತೆ ಬೇಯಿಸಿಕೊಳ್ಳಿ. ನಂತರ ಕಾಯಿತುರಿ, ಉಪ್ಪು, ಬೆಳ್ಳುಳ್ಳಿ, ಬೇಯಿಸಿದ  ಹಸಿಮೆಣಸಿನಕಾಯಿ ಹಾಕಿ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ. ನಂತರ ಅದಕ್ಕೆ ಬೇಯಿಸಿದ ಬದನೆಕಾಯಿ ಸೇರಿಸಿ ಒಂದು ಸುತ್ತು ಮಿಕ್ಸರ್‌ನಲ್ಲಿ ಹುಚ್ಚೆಳ್ಳುಪುಡಿ ಹಾಕಿ  ಮಿಶ್ರಣ ಮಾಡಿ. ನಂತರ ಸಾಸಿವೆ, ಕಡ್ಲೇಬೇಳೆ ಒಗ್ಗರಣೆ ಕೊಟ್ಟು ಬದನೆಕಾಯಿ ಬಜ್ಜಿಗೆ ಹಾಕಿದರೆ ರುಚಿಕರ ಬದನೆಕಾಯಿ ಬಜ್ಜಿ ರೆಡಿ.

ಮಾವಿನಕಾಯಿ ಚಟ್ನಿ
ಸಾಮಗ್ರಿಗಳು:
ಮಾವಿನಕಾಯಿ ತುರಿ 1 ಬಟ್ಟಲು, ಹೆಸರುಕಾಳು ಕಾಲು ಬಟ್ಟಲು, ಅಚ್ಚಖಾರದ ಪುಡಿ 1 ಟೀ ಚಮಚ, ಎಣ್ಣೆ, ಉಪ್ಪು, ಬೆಲ್ಲ, ಕರಿಬೇವು, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ.

ವಿಧಾನ: ಮೊದಲು ಮಾವಿನಕಾಯಿ ತುರಿಯನ್ನು ಸ್ವಲ್ಪ ಎಣ್ಣೆ ಹಾಕಿಕೊಂಡು ಬಾಡಿಸಿಕೊಳ್ಳಿ ನಂತರ ಹೆಸರಕಾಳನ್ನು ಹುರಿದು ಪುಡಿ ಮಾಡಿಕೊಳ್ಳಿ. ನಂತರ ಬಾಡಿಸಿಕೊಂಡ ಮಾವಿನಕಾಯಿ ತುರಿ, ಬೆಲ್ಲ, ತುಪ್ಪ, ಕರಿಬೇವು, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ ಹಾಕಿ ಮಿಕ್ಸಿಯಲ್ಲಿ ರುಬ್ಬಿ ನಂತರ ಹೆಸರುಕಾಳಿನ ಪುಡಿ ಹಾಕಿ ರುಬ್ಬಿಕೊಳ್ಳಿ, ನೀರು ಬೇಕೇನಿಸಿದರೆ ನೀರು ಹಾಕಿ ರುಬ್ಬಿಕೊಂಡರೆ ರೊಟ್ಟಿ, ಚಪಾತಿ ಜೊತೆಗೆ ತಿನ್ನಲು ರುಚಿಯಾದ ಮಾವಿನಕಾಯಿ ಚಟ್ನಿ ಸಿದ್ಧ.

ಸುಟ್ಟ ಬದನೆಕಾಯಿ ಬಜ್ಜಿ
ಸಾಮಗ್ರಿ:
3–4 ಬದನೆಕಾಯಿ, 5–6 ಹಸಿಮೆಣಸಿನಕಾಯಿ, 10 ಎಸಳು ಬೆಳ್ಳುಳ್ಳಿ, ಉಪ್ಪು ರುಚಿಗೆ ತಕ್ಕಷ್ಟು, ಹುಣಿಸೆಹಣ್ಣು ಸ್ವಲ್ಪ, ಈರುಳ್ಳಿ – ಸಣ್ಣಗೆ ಹೆಚ್ಚಿದ್ದು (1 ಬಟ್ಟಲು), ಕರಿಬೇವು, ಕೊತ್ತಂಬರಿ ಸೊಪ್ಪು.

ವಿಧಾನ: ಮೊದಲು ಬದನೆಕಾಯಿಗೆ ಸ್ವಲ್ಪ ಎಣ್ಣೆ ಸವರಿ ಹೆಂಚಿನ ಮೇಲೆ ಇಟ್ಟು ಸುಟ್ಟುಕೊಳ್ಳಿರಿ. (ಕಟ್ಟಿಗೆ ಒಲೆಯಿದ್ದರೆ ಕೆಂಡದಲ್ಲಿ ಸುಡಬಹುದು) ನಂತರ ಬದನೆಕಾಯಿ ಸಿಪ್ಪೆ ತೆಗೆದು, ಹಸಿಮೆಣಸಿನ ಕಾಯಿಯನ್ನು ಹುರಿಯಿರಿ. ನಂತರ ಅದಕ್ಕೆ ಬೆಳ್ಳುಳ್ಳಿ, ಉಪ್ಪು, ಹುಣಸೆಹಣ್ಣು, ಕರಿಬೇವು ಹಾಕಿ ಮಿಶ್ರಣಮಾಡಿ. ಅದಕ್ಕೆ ಸಿಪ್ಪೆ ತೆಗೆದ ಬದನೆಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿಕರ ಬದನೆಕಾಯಿ ಬಜ್ಜಿ ತಯಾರಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT