ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲಕ್ಕೆ ತಯಾರಾಗಿ!

Last Updated 16 ಅಕ್ಟೋಬರ್ 2015, 19:34 IST
ಅಕ್ಷರ ಗಾತ್ರ

ಚುಮುಚುಮು ಚಳಿ ಪ್ರಾರಂಭವಾಗಿದೆ. ಮಳೆ, ಬೇಸಿಗೆ ಎಲ್ಲಕ್ಕಿಂತ ಹೆಚ್ಚು ಮುದ ನೀಡುವ ಕಾಲ ಇದಾದರೂ, ಈ ಸಮಯದಲ್ಲಿ ಹವೆಯಲ್ಲಿನ ಬದಲಾವಣೆಯಿಂದ ಅನೇಕ ದೈಹಿಕ ತೊಂದರೆಗಳು ಬಾಧಿಸಬಹುದು. ಇನ್ನೂ 3-4 ತಿಂಗಳಿರುವ ಈ ಕಾಲದಲ್ಲಿ ಹೆಚ್ಚಾಗಿ ಕಾಣುವ ತೊಂದರೆಗಳು ಮತ್ತು ಅವುಗಳಿಂದ ದೇಹವನ್ನು ಕಾಪಾಡಿಕೊಳ್ಳುವ ಬಗೆ ತಿಳಿಯೋಣ.

ಚಳಿಗಾಲದ ಹವೆಯಲ್ಲಾಗುವ ಸಾಮಾನ್ಯ ಬದಲಾವಣೆ ಎಂದರೆ, ರಭಸವಾದ ತಣ್ಣನೆಯ ಗಾಳಿಯ ಜೊತೆ, ಗಾಳಿಯಲ್ಲಿ ತೇವಾಂಶ ಕಮ್ಮಿಯಿದ್ದು ಒಣ ಹವೆಯಿರುತ್ತದೆ. ಕೂದಲು, ಚರ್ಮದ ಮೇಲೆ ಇದರ ದುಷ್ಪರಿಣಾಮ ಕಾಣಬಹುದು. ಅಲ್ಲದೇ ತಣ್ಣನೆಯ ಗಾಳಿಯಿಂದ, ಕೆಮ್ಮು, ನೆಗಡಿ, ಉಬ್ಬಸ ಮುಂತಾದ ಉಸಿರಾಟದ ತೊಂದರೆಗಳು ಹೆಚ್ಚಿರುತ್ತವೆ. ಅಲ್ಲದೇ ಹಸಿವು ಸಾಧಾರಣವಾಗಿ ಹೆಚ್ಚಿರುವ ಕಾಲವಿದು. ಅತಿಯಾಹಾರ, ಅಪಥ್ಯ ಆಹಾರಗಳಿಂದ, ಹೊಟ್ಟೆ ಉರಿ, ಉಬ್ಬರ, ಜೀರ್ಣಾಂಗದ ಸೋಂಕು ಹೆಚ್ಚಾಗಿರುತ್ತವೆ. ನೀರಿನ ಸೇವನೆ ಸಹಜವಾಗಿ ಕಮ್ಮಿಯಾಗುವುದರಿಂದ, ಹಾಗೂ ಹವೆಯ ಶುಷ್ಕದಿಂದ ಮಲಬದ್ಧತೆಯ ತೊಂದರೆಯೂ ಕಂಡುಬರುತ್ತದೆ.

ಅಕ್ಟೋಬರ್ ನವಂಬರ್ ನಲ್ಲಿ ಸಹಜವಾಗಿ ಕೂದಲುದುರುವಿಕೆ ಹೆಚ್ಚಿರುತ್ತದೆ. ಅತಿಯಾದ ಶುಷ್ಕತೆಯಿಂದ ನೆತ್ತಿಯಲ್ಲಿ ಹೊಟ್ಟು, ತುರಿಕೆ ಹೆಚ್ಚಿರುತ್ತದೆ. ಅದೇ ರೀತಿ ಚರ್ಮದಲ್ಲೂ ಒಡಕು ಹೆಚ್ಚಿರುತ್ತದೆ. ಹೀಗಾಗಿ ತುರಿಕೆ, ಕೆಂಪಾಗುವುದು, ಗಂಧೆ ಬೀಳುವುದು ಜಾಸ್ತಿ. ಚರ್ಮ ಕಾಂತಿಹೀನವಾಗಿರುತ್ತದೆ. ಪಾದದೊಡಕೂ ಈ ಸಮಯದಲ್ಲಿ ಹೆಚ್ಚು ಬಾಧಿಸುತ್ತದೆ. ಮುಂಜಾನೆ ಮತ್ತು ಮುಸ್ಸಂಜೆ ಚಳಿ ಹೆಚ್ಚಿರುವುದರಿಂದ ಜನರಲ್ಲಿ ನಡಿಗೆ ಇತ್ಯಾದಿ ವ್ಯಾಯಾಮ ಸ್ವಲ್ಪ ಮಟ್ಟಿಗೆ ಕುಂಠಿತಗೊಳ್ಳುತ್ತದೆ. ಸಹಜವಾಗಿ ವಿಸರ್ಗಕಾಲವಾದ ಚಳಿಗಾಲದಲ್ಲಿ ತೂಕ ಹೆಚ್ಚುತ್ತದೆ. ಅತಿ/ಅಪಥ್ಯ ಆಹಾರ, ಕಡಿಮೆ ವ್ಯಾಯಾಮ, ಬೊಜ್ಜು ಸೇರಲು ಮತ್ತಷ್ಟು ಸಹಕಾರಿಯಾಗುತ್ತವೆ.

ಹವೆಯ ಶುಷ್ಕ ಹಾಗೂ ಬೆವರದಿರುವುದರಿಂದ ಚರ್ಮ ಒಣಗಿ, ಒಡೆಯುವುದು, ಸುಕ್ಕಾಗುವುದು, ತುರಿಕೆ/ಗಂಧೆಗಳಾಗುವುದು ಹೆಚ್ಚು. ಮೈ ಚರ್ಮ ಹಾಗೂ ನೆತ್ತಿಯಲ್ಲೂ ಸಮಾನ ತೊಂದರೆಗಳುಂಟಾಗುತ್ತವೆ. ತಲೆಯಲ್ಲಿ ಹೊಟ್ಟು, ತುರಿಕೆ ಹೆಚ್ಚಿ ಸೋಂಕುಂಟಾಗಬಹುದು. ತಲೆಗೆ ಮತ್ತು ಮೈಗೆ ಎಣ್ಣೆ ಸ್ನಾನ ಹಾಗೂ ಹಬೆ ಸ್ನಾನ ಒಳ್ಳೆಯದು. ಚರ್ಮಕ್ಕೆ ಉಪಯೋಗಿಯಾದ ಆಯುರ್ವೇದ ತೈಲಗಳ ಬಳಕೆ ಉತ್ತಮ.

ಉದಾಹರಣೆಗೆ ಏಲಾದಿ, ಅಶ್ವಗಂಧಾದಿ, ಶತಾವರ್ಯಾದಿ ಇತ್ಯಾದಿ. ಹೊಟ್ಟು ಬಾಧಿಸುತ್ತಿದ್ದಲ್ಲಿ, ದುರ್ದುರಾದಿ, ದೂರ್ವಾದಿ, ಇತ್ಯಾದಿ ಎಣ್ಣೆಗಳು ಉಪಕಾರಿ. ಸ್ನಾನವಾದ ಮೇಲೂ ಕೈಕಾಲುಗಳಿಗೆ ಸ್ವಲ್ಪ ಎಣ್ಣೆ ಹಚ್ಚುವುದು, ಒಣಹವೆಯಲ್ಲಿ ಮಾಯಿಸ್ಚರೈಸರ್ ಗಿಂತಲೂ ಹೆಚ್ಚಿನ ರಕ್ಷಣೆ ನೀಡುತ್ತದೆ. ಮಾಯಿಸ್ಚರೈಸರ್ ಗಳನ್ನೂ ಧಾರಾಳವಾಗಿ ಬಳಸಬಹುದು.  ಒಣಗಿದ ಚರ್ಮಕ್ಕೆ ಅತಿಯಾದ ಬಿಸಿ ನೀರು ಒಳ್ಳೆಯದಲ್ಲ. ತುಸು ಬೆಚ್ಚಗಿನ ನೀರನ್ನು ಬಳಸಿ. ಸೋಪು, ಶ್ಯಾಂಪೂವಿನಲ್ಲಿ ಕ್ಷಾರೀಯ ಗುಣ ಹೆಚ್ಚಿರುವುದರಿಂದ ಚರ್ಮದ ಸಹಜ ಎಣ್ಣೆಯಂಶವನ್ನು ಹೋಗಲಾಡಿಸಿ ಮತ್ತಷ್ಟು ಒಣಗಿಸುತ್ತದೆ.

ಇವುಗಳ ಬಳಕೆ ಕಮ್ಮಿ ಮಾಡುವುದು ಉತ್ತಮ ಮತ್ತು ಪಿ.ಎಚ್ ಬ್ಯಾಲೆನ್ಸ್ ಮಾಡಿರುವ ಹಾಗೂ ಮೃದುವಾದ ಸೋಪು, ಶ್ಯಾಂಪೂಗಳನ್ನು ಬಳಸಿ. ಹಾಗೆಯೇ ದೇಹದ ಶುಷ್ಕ ಹೆಚ್ಚಿಸುವಂತಹ ಕೆಫ಼ೀನ್ ಅಥವಾ ಟ್ಯಾನಿನ್ ಉಳ್ಳ ಕಾಫಿ, ಚಹಾ ಸೇವನೆ, ಮದ್ಯಪಾನವನ್ನು ಮಿತಗೊಳಿಸಿ. ನೀರಿನ ಜೊತೆ ನೈಜ ಉಪ್ಪಿನಾಂಶ (ಎಲೆಕ್ಟ್ರೋಲೈಟ್ಸ್) ಹೆಚ್ಚಿರುವ ಪದಾರ್ಥಗಳಾದ ಸೌತೆಕಾಯಿ, ಟೊಮೆಟೊ, ಕ್ಯಾರೆಟ್ ಮುಂತಾದ ತರಕಾರಿ ರಸ, ಹಣ್ಣಿನ ರಸ, ಎಳನೀರಿನ ಬಳಕೆ ಹೇರಳವಾಗಿರಲಿ. ಹಾಲು ಕೂಡ ಚರ್ಮದ ಮೃದುತ್ವ ಕಾಪಾಡುತ್ತದೆ. ವಿಟಮಿನ್ ‘ಸಿ’ ಹೆಚ್ಚಿರುವ ನೆಲ್ಲಿಕಾಯಿ, ಕಿತ್ತಳೆ, ಲಿಂಬೆ ಹಣ್ಣು, ಪಪ್ಪಾಯಿ ಮುಂತಾದುವುಗಳು ಚರ್ಮದ ಸ್ವಾಸ್ಥ್ಯಕ್ಕೆ ಗುಣಕಾರಿ.

ವಿಟಮಿನ್ ‘ಇ’ ಹೆಚ್ಚಿರುವ ಎಳ್ಳು, ಬಾದಾಮಿ, ತುಪ್ಪ, ಪಾಲಕ್, ಅವಕಾಡೊ, ಮಾಂಸಾಹಾರಿಗಳಲ್ಲಿ ಮೀನು, ಮೊಟ್ಟೆಯ ಸೇವನೆ ಹೆಚ್ಚಿರಲಿ.  ತಲೆ ಕೂದಲಿನ ಒಣಕು ತಡೆಯಲು, ನೆತ್ತಿಗೆ ತೈಲಾಭ್ಯಂಗದ ಜೊತೆಯಲ್ಲಿ ಕೂದಲಿಗೂ ಎಣ್ಣೆಯನ್ನು ಹಚ್ಚಿ ಬುಡದಿಂದ ತುದಿಯವರೆಗೆ ಬಾಚಿಕೊಳ್ಳುತ್ತಿರುವುದು ಒಳ್ಳೆಯದು. ನೈಸರ್ಗಿಕ ಕಂಡೀಶನರ್ ಗುಣವುಳ್ಳ ದಾಸವಾಳದ ಎಲೆಯ ರಸ, ಲೋಳೆ ರಸ, ಮತ್ತಿ ಎಲೆ ರಸ ಇತ್ಯಾದಿಗಳನ್ನು ಕೂದಲಿಗೆ ಹಚ್ಚಿಕೊಂಡು ತೊಳೆಯುವುದರಿಂದ ಕೂದಲು ಆರೋಗ್ಯದಿಂದಿರುತ್ತದೆ. ಮೊಸರಿನ ಜೊತೆ ತ್ರಿಫಲಾ, ನೆಲ್ಲಿಕಾಯಿ ಅಥವಾ ಬೇವಿನೆಲೆಯನ್ನು ರುಬ್ಬಿ ತಯಾರಿಸಿದ ಲೇಪ ನೆತ್ತಿಯ ಆರೋಗ್ಯ ಕಾಪಾಡುವಲ್ಲಿ ಸಹಕಾರಿ.

ಕರಿದ ತಿಂಡಿಗಳು, ಹುಳಿ/ಖಾರ ಹೆಚ್ಚಿರುವ ಆಹಾರ, ಕಾಫಿ, ಚಹಾ, ಮದ್ಯಪಾನ ಸೇವನೆ ಚಳಿಗಾಲದಲ್ಲಿ ತುಸು ಹೆಚ್ಚಾಗಿದ್ದು ಅತ್ಯಮ್ಲ (ಯಾಸಿಡಿಟಿ), ಹೊಟ್ಟೆಯುರಿ, ಉಬ್ಬರ, ಹುಳಿತೇಗು, ಮಲಬದ್ಧತೆ ಉಂಟಾಗಬಹುದು. ಹೆಚ್ಚು ನೀರು ಕುಡಿಯುವುದು, ಮೇಲೆ ಹೇಳಿದ ಆಹಾರಗಳ ಕಡಿಮೆ ಸೇವನೆ, ಹಣ್ಣು ತರಕಾರಿಗಳ ಹೇರಳ ಸೇವನೆಯಿಂದ ಈ ತೊಂದರೆಗಳನ್ನು ತಡೆಗಟ್ಟಬಹುದು.

ಉಸಿರಾಟದ ತೊಂದರೆಗೆ ಇದು ಆಗಬರದ ಕಾಲ. ನೆಗಡಿ, ಜ್ವರ, ಕೆಮ್ಮು, ದಮ್ಮು, ಎಲ್ಲವೂ ಹೆಚ್ಚಾಗಿರುತ್ತವೆ. ಶುದ್ಧ, ಬೆಚ್ಚನೆಯ ನೀರಿನ ಸೇವನೆಯ ಜತೆ ತುಳಸಿ, ಶುಂಠಿ, ಅತಿಮಧುರ, ಕರಿಮೆಣಸಿನ ಬಳಕೆ ಒಳ್ಳೆಯದು. ಶುದ್ಧ ಆಹಾರ ಸೇವನೆ, ವ್ಯಾಯಾಮಗಳ ಅಭ್ಯಾಸ ವ್ಯಾಧಿಕ್ಷಮತ್ವ ಹೆಚ್ಚಿಸಿ ಈ ತೊಂದರೆಗಳನ್ನು ದೂರವಿಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಮೂಗಿನಿಂದ ಹಬೆ ತೆಗೆದುಕೊಳ್ಳಬೇಕು. ಉಸಿರಾಟದ ವ್ಯಾಯಾಮವಿರಲಿ. ಆದಾಗ್ಯೂ ತೊಂದರೆಯಿದ್ದಲ್ಲಿ ಅಗಸ್ತ್ಯರಸಾಯನ, ಚ್ಯವನಪ್ರಾಶ, ದಶಮೂಲಾರಿಷ್ಟ, ಪುಷ್ಕರಮೂಲಾಸವ, ವಾಸಾರಿಷ್ಟ ಇತ್ಯಾದಿ ಔಷಧಿಗಳನ್ನು ಸೂಕ್ತ ಸಲಹೆಯೊಂದಿಗೆ ಬಳಸಿ. 

ಚಳಿಗಾಲದಲ್ಲಿ ಮುಖದ ಕಾಂತಿ ಹಾಗೂ ತೇವಾಂಶ ಕಾಪಾಡಲು ಸಹಾಯವಾಗುವಂತಹ, ಮನೆಯಲ್ಲೇ ಮಾಡಿಕೊಳ್ಳಬಹುದಾದ ಲೇಪಗಳು

1. ಹಾಲಿನ ಕೆನೆ, ಬೆಣ್ಣೆ ಮತ್ತು ಕಿವುಚಿದ ಬಾಳೆಹಣ್ಣಿನ ಲೇಪವನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದು ಬಿಡಿ. ಪಪ್ಪಾಯಿ ಅಥವಾ ಅವಕಾಡೋ ಹಣ್ಣನ್ನೂ ಬಳಸಬಹುದು.

2.  ಹಾಲಿನ ಕೆನೆ/ಬೆಣ್ಣೆಗೆ ಜೇನು ತುಪ್ಪ ಮತ್ತು ಗುಲಾಬಿಯರ್ಕ (ರೋಸ್ ವಾಟರ್) ಸೇರಿಸಿ ಮಾಡಿದ ಲೇಪ

3. ರುಬ್ಬಿದ ಕ್ಯಾರೆಟ್ ಜತೆ ಜೇನು ಸೇರಿಸಿ ಮಾಡಿದ ಲೇಪವೂ ಮುಖಕ್ಕೆ ಒಳ್ಳೆಯದು

4. ಕೊತ್ತಂಬರಿ ಸೊಪ್ಪು, ಸೌತೆಕಾಯಿ ಅರೆದು ಜತೆಯಲ್ಲಿ ಗುಲಾಬಿಯರ್ಕ ಮತ್ತು ತೇಯ್ದ ಶ್ರೀಗಂಧ ಸೇರಿಸಿ ಹಚ್ಚುವುದರಿಂದ ಚರ್ಮದ ತೇವಾಂಶವನ್ನು ರಕ್ಷಿಸಿ ಮುಖವನ್ನು ಕಾಂತಿಯುತವಾಗಿಟ್ಟುಕೊಳ್ಳಬಹುದು.

5. ಮೊಟ್ಟೆ, ಜೇನುತುಪ್ಪ, ಆಲಿವ್ ಎಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಪಾತ್ರೆಯಲ್ಲಿ ಬೆರೆಸಿ ತಯಾರಿಸಿದ ಮಿಶ್ರಣ ಮುಖದ ಮೃದುತ್ವ ಕಾಪಾಡುವುದಕ್ಕೆ ಒಳ್ಳೆಯದು.

ಕಾಲು ಒಡಕಿಗೆ ಮನೆಯಲ್ಲೇ ತಯಾರಿಸಿಕೊಳ್ಳಬಹುದಾದ ಉತ್ತಮ ಲೇಪ ತೆಂಗಿನೆಣ್ಣೆ, ಜೇನು ಮೇಣವನ್ನು ಸಮಪ್ರಮಾಣದಲ್ಲಿ (ತಲಾ 50ಗ್ರಾಂ) ತೆಗೆದುಕೊಳ್ಳಿ. ಚಿಕ್ಕ ಉರಿಯಲ್ಲಿ ಎರಡನ್ನೂ ಕರಗಿಸಿ. ಇದಕ್ಕೆ ಕಾಲು ಚಮಚದಷ್ಟು ಪುಡಿ ಮಾಡಿದ ಕರ್ಪೂರ ಬೆರೆಸಿ ಕರಗಿಸಿ. ಈ ಮಿಶ್ರಣ ಆರಿದ ಮೇಲೆ ಮುಲಾಮಿನ ಹದಕ್ಕೆ ಬರುತ್ತದೆ. ಇದು ಸಾಧಾರಣ ಕಾಲಿನ ಒಡಕಿಗೆ ರಾಮಬಾಣ. ಈ ರೀತಿಯಲ್ಲಿ ದೇಹವನ್ನು ರಕ್ಷಿಸಿಕೊಂಡಲ್ಲಿ ಚಳಿಗಾಲದ ಆಹ್ಲಾದವನ್ನು ಮನದುಂಬಿ ಅನುಭವಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT