ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದಲ್ಲಿ ನವಜಾತ ಶಿಶುವಿನ ಕಾಳಜಿ

Last Updated 20 ನವೆಂಬರ್ 2015, 19:48 IST
ಅಕ್ಷರ ಗಾತ್ರ

ನಿಮ್ಮ ಮನೆಯಲ್ಲಿ ನವಜಾತ ಶಿಶು ಇದೆಯಾ? ಚಳಿಗಾಲ ಸಮೀಪಿಸುತ್ತಿದೆ. ಈ ಕಾಲದಲ್ಲಿ ನಿಮ್ಮ ಮಗುವಿನ ಆರೋಗ್ಯ ಮತ್ತು ಮಗು ಚಟುವಟಿಕೆಯಿಂದಿರುವಂತೆ ಹೆಚ್ಚಿನ ಕಾಳಜಿ ವಹಿಸುತ್ತಿರುವಿರಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ, ಚಳಿಗಾಲದಲ್ಲಿ ಸೂರ್ಯನ ಕಿರಣದ ತೀಕ್ಷಣೆ ಕಡಿಮೆಯಿರುವ ಕಾರಣ ವೈರಸ್ ಮತ್ತು ಬ್ಯಾಕ್ಟೀರಿಯಾದ ಸೋಂಕು ಹೆಚ್ಚಾಗುತ್ತದೆ. ಹೆಚ್ಚಿನ ಶಿಶುಗಳು ಈ ಚಳಿಗಾಲದಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತವೆ. ಗರ್ಭಿಣಿಯರು, ತಾಯಂದಿರು ಅಥವಾ ಶಿಶುಗಳ ಕಾಳಜಿಯನ್ನು ಚಳಿಗಾಲದ ಸಮಯದಲ್ಲಿ ಹೇಗೆ ವಹಿಸಿಕೊಳ್ಳಬೇಕೆಂಬುದನ್ನು ತಿಳಿದುಕೊಳ್ಳಬೇಕು.

ಒಂದು ನವಜಾತ ಶಿಶುವಿನಲ್ಲಿ ಹುಟ್ಟಿನಿಂದಲೇ ಮತ್ತು ಜೀವನದ ಆರಂಭಿಕ ಕೆಲವು ದಿನಗಳಲ್ಲಿ ಶರೀರಶಾಸ್ತ್ರದ ಕ್ಷಿಪ್ರ ಬದಲಾವಣೆ ಅನುಭವಿಸುತ್ತದೆ. ಈ ಅವಧಿಯಲ್ಲಿ  ಆರೋಗ್ಯಪೂರ್ಣ ಅಡಿಪಾಯ ನೀಡಬೇಕು. ಇದಲ್ಲದೆ, ಚಳಿಗಾಲದಲ್ಲಿ ಶಿಶುಗಳನ್ನು ಆರೋಗ್ಯಪೂರ್ಣವಾಗಿರಿಸಲು ಹೆಚ್ಚುವರಿ ಕಾಳಜಿ ನೀಡಬೇಕು. ಹವಾಮಾನದಲ್ಲಿ ಏರುಪೇರು ನಿಮ್ಮ ಶಿಶುವಿಗೆ ಅಹಿತಕರವೆನಿಸಬಹುದು.  ಸಾಮಾನ್ಯವಾಗಿ ಚಳಿಗಾಲದಲ್ಲಿ ಬರುವಂತಹ ಜ್ವರ, ಕೆಮ್ಮು, ಕಿವಿ ನೋವು, ನ್ಯುಮೋನಿಯಾ, ಬ್ರಾಂಕಿಯೋಲೈಟಿಸ್, ಮೆನಿಂಜೈಟಿಸ್ ಇತ್ಯಾದಿಗಳನ್ನು ಮುಂಚಿತವಾಗಿಯೇ ತಡೆಗಟ್ಟಬಹುದು. ಅದಕ್ಕೆ ಈ ಮುಂದೆ ನೀಡಿರುವ ಸಲಹೆಗಳನ್ನು ಅನುಸರಿಸಿದರೆ ಸಾಕು.

ಲಸಿಕೆ ಹಾಕಿಸುವುದು: ವಿವಿಧ ಲಸಿಕೆಗಳನ್ನು ಸರಿಯಾದ ಸಮಯಕ್ಕೆ ಹಾಕಿಸುವುದರಿಂದ ವೈರಸ್ ಮತ್ತು ಬ್ಯಾಕ್ಟೀರಿಯಾದಿಂದ ಬರುವ ಕಾಯಿಲೆಗಳನ್ನು ತಡೆಯಬಹುದು. ಕೆಲವು ಐಚ್ಛಿಕವಾಗಿರುವಾಗ ಇನ್ನು ಕೆಲವೊಂದು ಲಸಿಕೆಗಳು ಕಡ್ಡಾಯವಾಗಿರುತ್ತವೆ. ಭಾರತ ಸರ್ಕಾರ ಮತ್ತು ಪೀಡಿಯಾಟ್ರಿಕ್ಸ್ ಇಂಡಿಯನ್ ಅಕಾಡೆಮಿ ಶಿಫಾರಸು ಮಾಡಿದಂತೆ ಕಡ್ಡಾಯವಾಗಿ ಕೊಡಿಸಬೇಕಾದ ಲಸಿಕೆಗಳೆಂದರೆ ಕ್ಷಯರೋಗಕ್ಕೆ BCG, ಟೆಟಾನಸ್‌ಗೆ DTap, ಎಚ್ಐಬಿ ಲಸಿಕೆ- ಹಿಮೋಫಿಲಸ್ ಇನ್ಫ್ಲುಯೆಂಜಾ ಟೈಪ್ ಬಿ, ಪೋಲಿಯೊಗೆ OPV ಮತ್ತು ದಡಾರಕ್ಕಾಗಿ MMR, ಹೆಪಟೈಟಿಸ್ A ಮತ್ತು B ಲಸಿಕೆ. ಈ ರೋಗನಿರೋಧಕ ಲಸಿಕೆಗಳನ್ನು ನೀಡುವುದರಿಂದ ಅಲ್ಪಪ್ರಮಾಣದಲ್ಲಿ ಜ್ವರ, ಚುಚ್ಚುಮದ್ದು ನೀಡಿದ ಜಾಗದಲ್ಲಿ ಊತ, ಹೆಚ್ಚು ಕಾಲವಲ್ಲದ ಅತಿಸಾರದಂತಹ ಅಡ್ಡ ಪರಿಣಾಮಗಳು ಉಂಟಾಗಬಹುದು.

ಸ್ತನ್ಯಪಾನ: ಹೆಚ್ಚಿನ ಶಿಶುತಜ್ಞರು ಮಕ್ಕಳಿಗೆ ಸ್ತನ್ಯಪಾನವನ್ನು ನೀಡುವಂತೆ ಪ್ರೋತ್ಸಾಹಿಸುತ್ತಾರೆ. ಇದರಿಂದಾಗಿ ತಾಯಿ ಮತ್ತು ಮಗು ಇಬ್ಬರಿಗೂ ಪ್ರಯೋಜನಕಾರಿಯಾಗಿದೆ. ಆರೋಗ್ಯ ಮಂಡಲಿಯು ನವಜಾತ ಶಿಶುಗಳಿಗೆ ಕಡೇಪಕ್ಷ ಮೊದಲ ಆರು ತಿಂಗಳವರೆಗೆ ಶಿಶುಗಳಿಗೆ ಎದೆಹಾಲು ನೀಡಬೇಕೆಂದು ದೃಢವಾಗಿ ಶಿಫಾರಸು ಮಾಡಿದೆ. ಎದೆಹಾಲಿನಲ್ಲಿ ಋತುಕಾಲಿಕ ಕಾಯಿಲೆ ಗಳಾದಂತಹ ನೆಗಡಿ, ಕಿವಿ ನೋವು, ಜಠರ ಸಮಸ್ಯೆ ಮತ್ತು ಆಸ್ತಮಾ ಮತ್ತು ಎಕ್ಸಿಮಾದಿಂದ ಶಿಶುಗಳನ್ನು ರಕ್ಷಿಸುವಂತಹ ರೋಗನಿರೋಧಕ ಶಕ್ತಿ ಮತ್ತು ಸುಲಭವಾಗಿ ಜೀರ್ಣಸಿಕೊಳ್ಳು ವಂತಹ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಎದೆಹಾಲುಣಿಸುವುದರಿಂದ ಶಿಶುಗಳ ದೇಹದ ತಾಪಮಾನದಲ್ಲಿನ ಏರುಪೇರಿಗೆ ಸಹಾಯಮಾಡುತ್ತದೆ. ಶಿಶುಗಳಲ್ಲಿ ಚಳಿಗಾಲದಲ್ಲಿನ ಅನಾರೋಗ್ಯದ ಕಾರಣದಿಂದಾಗಿ ದೇಹದಲ್ಲಿ ಜಲಾಂಶವು ನಷ್ಟವಾಗುವುದನ್ನು ತಡೆಯಲು ಹಾಲುಣಿಸುವ ಮೂಲಕ ತಪ್ಪಿಸಬಹುದಾಗಿರುತ್ತದೆ.

ಮಸಾಜ್: ಎಣ್ಣೆ ಮಸಾಜ್ ಮಾಡುವುದರಿಂದ ಪ್ರತಿಯೊಂದು ನೋವನ್ನು ನಿವಾರಿಸುತ್ತದೆ, ಶಿಶುಗಳಿಗೆ ಮಸಾಜ್ ಮಾಡುವುದರಿಂದ ಹೆಚ್ಚು ಆರಾಮದಾಯಕವಾಗಿರುತ್ತವೆ. ನಿಮ್ಮ ಮಗುವಿಗೆ ಮಸಾಜ್ ಮಾಡುವುದರಿಂದ ಅವುಗಳ ರಕ್ತ ಸಂಚಲನದಲ್ಲಿ ಸುಧಾರಣೆ ಕಂಡುಬರುತ್ತದೆ ಹಾಗೂ ಅದರ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಸಾಸಿವೆ ಎಣ್ಣೆ, ಬಾದಾಮಿ ಅಥವಾ ಆಲಿವ್ ಎಣ್ಣೆ ಅಂತಹ ಸಸ್ಯ ಮೂಲದ ತೈಲ ಶಿಶುವಿನ ದೇಹ ಬೆಚ್ಚಗಿರಿಸಲು ಬಳಸಬಹುದು. ಬೆಳ್ಳುಳ್ಳಿ ಲವಂಗ ಮೆಂತ್ಯ ಮತ್ತು ಜೊತೆಗೆ ಸಾಸಿವೆ ಎಣ್ಣೆಯ ಮಸಾಜ್ ಬಿಸಿ ಮಾಡಬಹುದು. ಬೆಳ್ಳುಳ್ಳಿಯು ಪ್ರತಿರಕ್ಷಣಾ ಶಕ್ತಿಯನ್ನು ಹೊಂದಿದ್ದು ವೈರಾಣು ಮತ್ತು ಜೀವವಿರೋಧಿ ಗುಣವನ್ನು ಹೊಂದಿದೆ. ಈ ರೀತಿಯ ಹಲವಾರು ತೈಲದ ಮಸಾಜ್‌ನಿಂದಾಗಿ ನಿಮ್ಮ ಮಗುವಿನ ಚರ್ಮ ರೋಗಗಳಲ್ಲಿ ಅಭಿವೃದ್ಧಿ ಕಂಡುಬಂದಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಸ್ನಾನ: ಚಳಿಗಾಲದ ಸಮಯದಲ್ಲಿ ದೇಹದ ಅಥವಾ ಸ್ಪಂಜ್ ಸ್ನಾನ ಸಾಕು. ನಿಮ್ಮ ಮಗುವಿಗೆ ಸ್ನಾನ ಮಾಡಿಸುವಾಗ ಸ್ನಾನದ ಗೃಹದಲ್ಲಿ ಬೆಚ್ಚಗಿನ ವಾತಾವರಣವನ್ನುಂಟು ಮಾಡಲು ಬೆಚ್ಚಗಿನ ನೀರು ಅಥವಾ ಬಿಸಿ ನೀರು ಹರಿಯುವಂತೆ ಮಾಡಬಹುದು. ಸ್ನಾನದ ಗೃಹದಲ್ಲಿ ಹಠಾತ್ತಾಗಿ ನುಗ್ಗುವ ತಂಡಿ ಗಾಳಿಯನ್ನು ತಡೆಯಲು ಕಿಟಕಿಗಳನ್ನು ಮುಚ್ಚಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಮಗುವನ್ನು ಹೆಚ್ಚು ಕಾಲ ಬಾತ್ ಟಬ್‌ನಲ್ಲಿ ಕೂಡಿಸಬೇಡಿ ಹಾಗೂ ಸ್ನಾನ ಮುಗಿದ ತಕ್ಷಣವೇ ಮಗುವಿನ ದೇಹವನ್ನು ಶುಷ್ಕವಾದ ಬಟ್ಟೆಯಿಂದ ಒರೆಸಿ. ಈ ರೀತಿಯ ಬೆಚ್ಚಗಿನ ನೀರಿನ ಸ್ನಾನದಿಂದಾಗಿ ನಿಮ್ಮ ಮಗುವಿಗೆ ಯಾವುದೇ ಸೋಂಕು ತಗುಲದೆ ಆರೋಗ್ಯ ಮತ್ತು ಶುಚಿಯಾಗಿರುತ್ತದೆ.

ಬಟ್ಟೆ: ಹಲವಾರು ಬಟ್ಟೆ ವಿನ್ಯಾಸಕಾರರು ಚಳಿಗಾಲಕ್ಕಾಗಿ ಮಕ್ಕಳಿಗೆ ವಿಶೇಷ ಉಡುಪುಗಳನ್ನು ತಯಾರಿಸಿರುತ್ತಾರೆ, ಆದರೆ ಖರೀದಿಸುವಾಗ ಅದರ ಗುಣಮಟ್ಟವನ್ನು ಪರಿಶೀಲಿಸಿ ಖರೀದಿಸಬೇಕು. ಬೆಚ್ಚಗಿನ ಬಟ್ಟೆಗಳಾದ ಉಣ್ಣೆ, ನೇಯ್ದ ಉಣ್ಣೆಬಟ್ಟೆಯು ಚಳಿಗಾಲದಲ್ಲಿ ನಿಮ್ಮ ಮಗುವನ್ನು ಬೆಚ್ಚಗಿರಿಸುತ್ತದೆ. ಚಳಿಗಾಲದಲ್ಲಿ ನಿಮ್ಮ ಮಗುವಿನ ಕೈಗಳು ಮತ್ತು ಕಾಲು ಬೆಚ್ಚಗಿರುವಂತೆ ನಿಗಾವಹಿಸಿ. ಮಗುವಿಗೆ ಆರಾಮವಾಗಿರುವಂತೆ ಅದರ ತಲೆ, ಕೈಗಳು ಮತ್ತು ಪಾದಗಳನ್ನು ಉಣ್ಣೆಯ ಟೋಪಿ, ಕೈಗವಸು ಮತ್ತು ಸಾಕ್ಸ್‌ಗಳನ್ನು ಹಾಕಲಾಗಿದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಹೈಪೋಥರ್ಮಿಯ ಚಿಕಿತ್ಸೆ: ಹೆಚ್ಚು ಚಳಿಯ ವಾತಾವರಣದಿಂದ ಹೈಪೋರ್ಥಮಿಯಾ ಬರುತ್ತದೆ, ಶಿಶುವಿನ ದೇಹದ ಭಾಗಗಳಿಗೆ ರಕ್ತ ಕಳುಹಿಸುವ ರಕ್ತನಾಳಗಳು ಸಂಕೋಚನಗೊಳ್ಳುತ್ತದೆ. ಇದರಿಂದಾಗಿ ರಕ್ತದ ಪೂರೈಕೆಯಲ್ಲಿ ಏರುಪೇರಾಗುತ್ತದೆ. ಹಾಗಾಗೀ ನೀವು ಮಗುವಿಗೆ ಸೂಕ್ತವಾಗಿ ಹಾಲುಣಿಸುವಿಕೆ, ಬಟ್ಟೆ ಮತ್ತು ಹೊರಗಡೆಯಿರುವಾಗ ಬೆಚ್ಚಗಿರಿಸುವ ಮೂಲಕ ಹೈಪೋರ್ಥಮಿಯಾದಿಂದ ತಡೆಗಟ್ಟಬಹುದು. ಹೈಪೊರ್ಥಮಿಯಾದ ಲಕ್ಷಣಗಳನ್ನು ಮುಂಚೆಯೇ ಗುರುತಿಸಬಹುದಾಗಿದೆ ಹಾಗೂ ಅಗತ್ಯವಿರುವ ಮುನ್ನೆಚ್ಚರಿಗೆಳನ್ನು ತೆಗೆದುಕೊಳ್ಳಬಹುದಾಗಿದೆ. 

ತಜ್ಞರನ್ನು ಸಂಪರ್ಕಿಸಿ: ಹೆಚ್ಚಿನ ಪೋಷಕರು ತಜ್ಞರ ಸಲಹೆ ಹಾಗೂ ಸಮಾಲೋಚನೆಗೆ ಗೊಂದಲಕ್ಕೀಡಾಗಬಹುದು. ಮೊದಲ ಹಂತದಲ್ಲಿಯೇ ಸೂಕ್ತ ಸಮಯದಲ್ಲಿನ ಚಿಕಿತ್ಸೆಯಿಂದಾಗಿ ಕಾಯಿಲೆಯನ್ನು ನಿವಾರಿಸಬಹುದು. ನಿಮ್ಮ ಮಗು ಪದೇ ಪದೇ ಸೀನುವಿಕೆ ಮತ್ತು ಕೆಮ್ಮುತ್ತಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ನಿಮ್ಮ ತಜ್ಞರ ಸಂಪರ್ಕ ವಿವರಗಳನ್ನು ಯಾವಾಗಲೂ ತುರ್ತು ಸಂದರ್ಭದಲ್ಲಿ ಸೂಕ್ತವಾಗಿ ಇಟ್ಟುಕೊಂಡಿರಬೇಕು.

ಚಳಿಗಾಲವು ಬಂಧಕ ಶಕ್ತಿಯನ್ನು ಹೊಂದಿರುತ್ತದೆ ಮತ್ತು ಚಳಿಗಾಲದಲ್ಲಿ ಪೋಷಕರು ಯಾವಾಗಲೂ ತಮ್ಮ ಮಗುವನ್ನು ಎದೆಗೆ ಅಪ್ಪಿಕೊಂಡಿರುವಂತೆ ಇರಿಸಿಕೊಳ್ಳಲು ಶಿಫಾರಸು ಮಾಡಲಾಗುತ್ತದೆ. ಹೈಜಿನ್, ಸುತ್ತಮುತ್ತಲೂ ಸ್ವಚ್ಛವಾಗಿರಿಸುವುದರಿಂದ ಮಗು ಯಾವುದೇ ಸೋಂಕಿನಿಂದ ಮುಕ್ತವಾಗಿರುತ್ತದೆ. ಮಗುವನ್ನು ಎತ್ತಿಕೊಳ್ಳುವಾಗ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಮತ್ತು ನೆಲ ಯಾವಾಗಲೂ ಶುದ್ಧಗೊಳಿಸುವುದರಿಂದ ಸೋಂಕಿನಿಂದ ಬರುವ ಕಾಯಿಲೆಗಳನ್ನು ತಪ್ಪಿಸಬಹುದು. ಮಗುವಿಗೆ ಕೆಂಪುಗುಳ್ಳೆಗಳು ಬರದಂತಿರಲು 100%  ಕಾಟನ್ ಡಯಪರ್‌ಗಳನ್ನು ಬಳಸಬೇಕು. ಈ ಮೇಲಿನ ಎಲ್ಲಾ ಸಲಹೆಗಳನ್ನು ಪಾಲಿಸುವುದರಿಂದ ನಿಮಗಿರುವ ಕಡಿಮೆ ಸಮಯದಲ್ಲಿ ನಿಮ್ಮ ಮಗುವಿನ ಪ್ರೀತಿ ಹೊಂದಬಹುದು ಹಾಗೂ ಆರೋಗ್ಯವನ್ನು ಕಾಪಾಡಬಹುದು. ನಿಮ್ಮ ಸ್ವಯಂ ಕಾಳಜಿಯಿಂದಾಗಿ ಈ ಚಳಿಗಾಲವನ್ನು ಆನಂದಿಸಿ.

(ಲೇಖಕರು ಶಿಶುವೈದ್ಯ ಮತ್ತು ಮಕ್ಕಳ ತಜ್ಞರು, ವಾತ್ಸಲ್ಯ ಆಸ್ಪತ್ರೆ, ಚಿಕ್ಕಮಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT