ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗೆ ಮುದುರುವ ಥೈರಾಯ್ಡ್ ಗ್ರಂಥಿ

Last Updated 30 ಜನವರಿ 2015, 19:30 IST
ಅಕ್ಷರ ಗಾತ್ರ

ಚಳಿಗಾಲಕ್ಕೂ ರೋಗಗಳಿಗೂ ತುಂಬಾ ನಂಟು. ಚಳಿಗಾಲ ಬರುವುದೇ ತಡ, ಹಲವು ಆರೋಗ್ಯ ಸಮಸ್ಯೆಗಳೂ ಹುಟ್ಟಿಕೊಳ್ಳುತ್ತವೆ. ಅದರಲ್ಲೂ ಥೈರಾಯ್ಡ್‌ನ ಹಾರ್ಮೋನು ಉತ್ಪಾದನೆಯಲ್ಲಿ ವ್ಯತ್ಯಾಸವಾಗಿ ‘ಹೈಪೊಥೈರಾಯ್ಡ್’ ಸಮಸ್ಯೆಗೂ ಎಡೆ ಮಾಡಿಕೊಡುತ್ತದೆ.
ಈ ಹೈಪೊಥೈರಾಯ್ಡ್ ಸಮಸ್ಯೆ ಹಾಗೂ ಅದನ್ನು ತಡೆಯಬಹುದಾದ ಕ್ರಮಗಳ ಕುರಿತು ಎಸ್‌ಆರ್‌ಎಲ್‌ ಡಯಾಗ್ನಿಸ್ಟಿಕ್ ಸಂಸ್ಥೆಯ ಡಾ. ಸುವರ್ಣಾ ರವೀಂದ್ರನಾಥನ್ ಅವರು ಮಾತನಾಡಿದ್ದಾರೆ.

* ಹೈಪೊಥೈರಾಯ್ಡಿಸಂ ಎಂದರೇನು?
ಥೈರಾಯ್ಡ್ ಗ್ರಂಥಿ ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗದೆ, ಥೈರಾಯ್ಡ್ ಹಾರ್ಮೋನಿನ ಉತ್ಪತ್ತಿಯಲ್ಲಿ ಅಸಮತೋಲನ ಉಂಟಾಗುವುದು ಈ ಸಮಸ್ಯೆಯ ಮೂಲ. ಹಾರ್ಮೋನು ಉತ್ಪಾದನೆ ಕುಂಠಿತಗೊಳ್ಳುವುದನ್ನು ‘ಹೈಪೊಥೈರಾಯ್ಡಿಸಂ’ ಎನ್ನುತ್ತಾರೆ.

* ಹೈಪೊಥೈರಾಯ್ಡಿಸಂಗೆ ಪ್ರಮುಖ ಕಾರಣವೇನು?
ಹೈಪೊಥೈರಾಯ್ಡಿಸಂಗೆ ಮುಖ್ಯ ಕಾರಣ ಅಯೊಡಿನ್ ಕೊರತೆ. ಜೊತೆಗೆ ಕುಟುಂಬದಲ್ಲಿ ಥೈರಾಯ್ಡ್ ಸಮಸ್ಯೆ ಇದ್ದರೆ, ಟೈಪ್1 ಡಯಾಬಿಟಿಸ್ ಇದ್ದರೆ, ವಯಸ್ಸು, ಒತ್ತಡದ ಪ್ರಮಾಣವೂ ಕಾರಣವಾಗಿರುತ್ತದೆ.

* ಹೈಪೊಥೈರಾಯ್ಡಿಸಂ ಸಮಸ್ಯೆಯನ್ನು ಗುರುತಿಸುವುದು ಹೇಗೆ?
ಇದ್ದಕ್ಕಿದ್ದಂತೆ ತೂಕ ಹೆಚ್ಚುವುದು ಇದರ ಪ್ರಮುಖ ಲಕ್ಷಣ. ಚರ್ಮ ಒಣಗುವುದು, ಋತುಚಕ್ರದಲ್ಲಿ ಏರುಪೇರು, ಸುಸ್ತು, ಮಲಬದ್ಧತೆ, ಅತಿಯಾದ ಶೀತ ಇರುತ್ತದೆ. ಮಕ್ಕಳ ಲ್ಲಾ ದರೆ ಬೆಳವಣಿಗೆ ಕುಂಠಿತಗೊಳ್ಳುವುದು, ಏಕಾಗ್ರತೆ ಕೊರತೆ, ಕಲಿಕೆಯಲ್ಲಿ ನಿರಾಸಕ್ತಿ ಹೀಗೆ ಹಲವು ಸಮಸ್ಯೆಗಳು ಕಂಡುಬರುತ್ತವೆ.

* ಚಳಿಗಾಲಕ್ಕೂ ಹೈಪೊಥೈರಾಯ್ಡ್‌ಗೂ ಇರುವ ಸಂಬಂಧವೇನು?
ಚಳಿಗಾಲದಲ್ಲಿ ದೇಹಕ್ಕೆ ಹೆಚ್ಚು ಉಷ್ಣ ಹಾಗೂ ಶಕ್ತಿ ನೀಡಲು ಮೆಟಬಾಲಿಸಂ ಕಾರ್ಯ ಚಟುವ ಟಿಕೆ ಹೆಚ್ಚಾಗಬೇಕಾದ ಅವಶ್ಯಕತೆಯಿದ್ದು, ದೇಹದ ಚಯಾಪಚಯ ಕ್ರಿಯೆಗೆ ಥೈರಾಯ್ಡ್ ಹಾರ್ಮೋನ್ ಕೂಡ ಹೆಚ್ಚು ಅಗತ್ಯ. ಕೆಲವರಲ್ಲಿ ಚಳಿಗಾಲದಲ್ಲಿ ಥೈರಾಯ್ಡ್ ಹಾರ್ಮೋನುಗಳಾದ ಟಿ3 ಮತ್ತು ಟಿ4 ಕಡಿಮೆಯಾಗಿ, ಟಿಎಸ್‌ಎಚ್ (ಥೈರಾಯ್ಡ್ ಸ್ಟಿಮುಲೇಟಿಂಗ್ ಹಾರ್ಮೋನು) ಮಟ್ಟ ಇದ್ದಕ್ಕಿದ್ದಂತೆ ಹೆಚ್ಚಾಗಿಬಿಡುತ್ತದೆ. ಇದು ಹೈಪೊಥೈರಾ ಯ್ಡಿಸಂ ಬರಲು ಕಾರಣ. ಇನ್ನೊಂದು ಕಾರಣ, ಅಯೊಡಿನ್ ಕೊರತೆ. ಚಳಿಗಾಲದಲ್ಲಿ ಥೈರಾಯ್ಡ್‌ ಹಾರ್ಮೋನು ಉತ್ಪತ್ತಿಗೆ ಅತಿ ಅಗತ್ಯವಾಗಿರುವ ಅಂಶ ಅಯೊಡಿನ್ ದೇಹದಲ್ಲಿ ಕಡಿಮೆಯಾಗುತ್ತದೆ. ಇದೂ ಹೈಪೊಥೈರಾಯ್ಡಿಸಂಗೆ ಕಾರಣವಾಗಬಹುದು. ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದ ಸಮಯದಲ್ಲಿ ಇದು ಲಕ್ವ, ಹೃದಯ ಸಮಸ್ಯೆಗಳು, ಬಂಜೆತನ, ಮರೆಗುಳಿ ಕಾಯಿಲೆಗೂ ತಿರುಗಬಹುದು.

* ಥೈರಾಯ್ಡ್  ಸಮಸ್ಯೆಗೆ ಲಭ್ಯವಿರುವ ಚಿಕಿತ್ಸೆಗಳೇನು?
ಸಮಸ್ಯೆಯ ಗಂಭೀರತೆಯನ್ನು ಪರೀಕ್ಷಿಸಿ ಚಿಕಿತ್ಸೆಗಳು ಲಭ್ಯ. ಪ್ರಾರಂಭಿಕ ಹಂತದಲ್ಲಿ ಮಾತ್ರೆಗಳನ್ನು ನೀಡುತ್ತೇವೆ. ತುಂಬಾ ಗಂಭೀರ ಪರಿಸ್ಥಿತಿ ಇದ್ದರೆ ಕಸಿ ಮಾಡುತ್ತೇವೆ.

* ಈ ಸಮಸ್ಯೆ ಬರದಂತೆ ತಡೆಗಟ್ಟಲು ಏನು ಮಾಡಬಹುದು?
ಥೈರಾಯ್ಡ್ ಹಂತ ಪರೀಕ್ಷೆ
: ಚಳಿಗಾಲದಲ್ಲಿ ಥೈರಾಯ್ಡ್ ಹಾರ್ಮೋನು ಚಿಕಿತ್ಸೆ ಕಡ್ಡಾಯವಾಗಿ ಮಾಡಿಸಬೇಕು. ‘ಥೈರಾಯ್ಡ್ ಪ್ರೊಫೈಲ್’ ಪರೀಕ್ಷೆಯಲ್ಲಿ ಟಿಸಿಎಚ್ ಮಟ್ಟವನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬಹುದು. 35 ವಯಸ್ಸು ದಾಟಿದ ನಂತರ ಪ್ರತಿಯೊಬ್ಬರೂ ಪ್ರತಿ ಐದು ವರ್ಷಕ್ಕೊಮ್ಮೆ ಈ ಥೈರಾಯ್ಡ್ ಪರೀಕ್ಷೆ ಮಾಡಿಸಿಕೊಂಡರೆ ಒಳ್ಳೆಯದು.

ವ್ಯಾಯಾಮ ಅಗತ್ಯ: ಚಳಿಗಾಲದಲ್ಲಿ ಕೆಲಸ ಮಾಡಲು ಸೋಮಾರಿತನ ಕಾಡಬಹುದು. ಆದರೂ ಬಿಡದೆ ವ್ಯಾಯಾಮ ಮಾಡಬೇಕು.

ಸೂರ್ಯನ ಬಿಸಿಲು: ದಿನಕ್ಕೆ 20ರಿಂದ 30 ನಿಮಿಷವಾದರೂ ಸೂರ್ಯನ ಬಿಸಿಲಿಗೆ ದೇಹವನ್ನು ಒಡ್ಡಿಕೊಳ್ಳಬೇಕು. ಸೂರ್ಯನ ಕಿರಣಗಳು ಮೆದುಳು ಮತ್ತು ಹಾರ್ಮೋನಿನ ಮೇಲೂ ಪರಿಣಾಮ ಬೀರುತ್ತದೆ. ಜೊತೆಗೆ ಒತ್ತಡ ಮತ್ತು ಸುಸ್ತು ಕೂಡ ಇದರಿಂದ ಕಡಿಮೆಯಾಗುತ್ತದೆ.

ಅಯೊಡಿನ್ ಹೆಚ್ಚಿರುವ ಆಹಾರ ಸೇವನೆ: ಚಳಿಗಾಲದಲ್ಲಿ ಬಿಸಿಬಿಸಿಯಾಗಿ ತಿನ್ನುವ ಆಸೆ ಸಹಜ. ಆದರೂ ಪೋಷಕಾಂಶ ಹೆಚ್ಚಿರುವ ಆಹಾರದ ಆಯ್ಕೆಯೇ ಒಳ್ಳೆಯದು. ಪಾಲಾಕ್, ಬೆಳ್ಳುಳ್ಳಿ, ಎಳ್ಳು, ಮೀನು, ಮಾಂಸ, ಅಣಬೆ, ಸೂರ್ಯಕಾಂತಿ ಬೀಜ, ಸೋಯಾಬೀನ್‌ನಲ್ಲಿ ಅಯೊಡಿನ್ ಮತ್ತು ಸೆಲೆನಿಯಂ ಅಂಶ ಹೆಚ್ಚಿರುವುದರಿಂದ ಇವುಗಳನ್ನು ಸೇವಿಸಿದರೆ ಒಳ್ಳೆಯದು.

ಒಳ್ಳೆಯ ನಿದ್ದೆ: ಥೈರಾಯ್ಡ್ ಸಮಸ್ಯೆಯಿಲ್ಲದವರಿಗೆ ದಿನಕ್ಕೆ ಏಳರಿಂದ ಎಂಟು ಗಂಟೆ ನಿದ್ದೆ ಒಳ್ಳೆಯದು. ಥೈರಾಯ್ಡ್ ಸಮಸ್ಯೆ ಇದ್ದವರಿಗೆ ನಿದ್ದೆಯ ಅವಶ್ಯಕತೆಯೂ ಹೆಚ್ಚಿರುತ್ತದೆ. ಚಳಿಗಾಲದಲ್ಲಿ ನಿದ್ದೆಯನ್ನೂ ಚೆನ್ನಾಗಿ ಮಾಡಬೇಕು. ಜೊತೆಗೆ ಒತ್ತಡವನ್ನು ಕಡಿಮೆ ಮಾಡಿಕೊಂಡು ಯಾವುದೇ ಸೋಂಕಿಗೆ ಒಳಗಾಗದಂಗೆ ನಮ್ಮನ್ನು ನಾವು ನೋಡಿಕೊಳ್ಳುವುದು ತುಂಬಾ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT