ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ನರ ಬಲ, ಸೋತವರ ಛಲ

ಹೊರಗೆ ಚಳಿ, ಒಳಗೆ ಮಿದುಳಿಗೆ ಕಚಗುಳಿ
Last Updated 16 ಜನವರಿ 2015, 20:05 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಶ್ನೆಗೆ ಮಕ್ಕಳು ಸರಿ ಉತ್ತರ ನೀಡುತ್ತಿದ್ದಂತೆ ಪೋಷಕರ ಖುಷಿ ಮುಗಿಲು ಮುಟ್ಟುತ್ತಿತ್ತು. ಉತ್ತರ ತಪ್ಪಾ­ದಾಗ ಏನೋ ಚಡಪಡಿಕೆ. ‘ಛೇ’ ಎಂಬ ಉದ್ಗಾರ. ಫೈನಲ್‌ ಸ್ಪರ್ಧೆಯು ಟೈಬ್ರೇಕರ್‌ ಹಂತ ತಲುಪಿದಾಗಲಂತೂ ಮೊಗದಲ್ಲಿ ಮತ್ತಷ್ಟು ದುಗುಡ.

ಚಾಂಪಿಯನ್‌ ಆಗುತ್ತಿದ್ದಂತೆ ತಮ್ಮ ಪುತ್ರಿಯ­ರನ್ನು ತಬ್ಬಿಕೊಂಡ ಆ ಪೋಷಕರ ಕಂಗಳಲ್ಲಿ ಏನನ್ನೋ ಸಾಧಿಸಿದ ಖುಷಿ.
ಇಂಥ ಭಾವುಕತೆ, ಸಂತಸ ಹಾಗೂ ಜ್ಞಾನದ ಸಂಗಮಕ್ಕೆ ವೇದಿಕೆಯಾಗಿದ್ದು ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌­ಷಿಪ್‌’ನ ಗ್ರ್ಯಾಂಡ್‌ ಫೈನಲ್‌. ಈ ವಿಶೇಷ ಕ್ವಿಜ್‌ನ ಪ್ರಾಯೋಜಕತ್ವ ವಹಿಸಿದ್ದು ದೀಕ್ಷಾ ನೆಟ್‌ವರ್ಕ್‌ ಸಂಸ್ಥೆ.

ನಗರದ ಕುವೆಂಪು ಕಲಾ ಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ­ಗಳಲ್ಲಿ ಪ್ರತಿ ಪ್ರಶ್ನೆಗೂ ಉತ್ತರಿಸುವ ತವಕ, ಚಾಂಪಿಯನ್‌ ಆಗಲೇ­ಬೇಕೆಂಬ ಛಲ, ತಮ್ಮ ಜ್ಞಾನ ಭಂಡಾರವನ್ನು  ಬಿಚ್ಚಿಡುವ ಉತ್ಸುಕತೆ ಮೇಳೈಸಿತ್ತು.

ಚಾಂಪಿಯನ್‌ ಆದ ಮೈಸೂರಿನ ಮರಿಮಲ್ಲಪ್ಪ ಪ್ರೌಢಶಾಲೆಯ ವಿದ್ಯಾರ್ಥಿ­ನಿಯರಾದ ಸಿ.ವೈಷ್ಣವಿ ಹಾಗೂ ಎಸ್‌.ಸುಶ್ಮಿತಾ ತಮ್ಮ ಪೋಷಕರೊಂದಿಗೆ ಬಂದಿದ್ದರು. ಒತ್ತಡ, ಆತಂಕವನ್ನು ದಾಟಿ ಗೆಲುವಿನ ಹೊನಲಿನಲ್ಲಿ ತೇಲಿದರು. ತಮ್ಮ ಪುತ್ರಿಯರ ಸಾಧನೆ ಹೇಳಿಕೊಂಡು ಹೆಮ್ಮೆಯಿಂದ ಬೀಗಿದ್ದು ಪೋಷಕರು.

ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆ­ದವರು ಖುಷಿಯಿಂದ ಜಿಗಿದಾ­ಡಿದರೆ, ಉಳಿದ ತಂಡದವರು ಹೊಸ ವಿಷಯ ಕಲಿತ ಸವಿ­ನೆನಪಿನ ಬುತ್ತಿ­ಯೊಂ­ದಿಗೆ ಮರಳಿದರು. ಮೂರನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಬ್ಬರು, ‘ಸದ್ಯಕ್ಕೆ ಗೆಲು­ವನ್ನು ಮುಂದೂಡಿದ್ದೇವೆ. ಮುಂದಿನ ಬಾರಿ ನಾವೇ ಚಾಂಪಿಯನ್‌’ ಎಂದಾಗ ಅವರ ಕಂಗಳಲ್ಲಿ ಜ್ಞಾನದಾಹ ಹಾಗೂ ಛಲ ಎದ್ದು ಕಾಣುತಿತ್ತು.

ಬೆಳಿಗ್ಗೆಯಿಂದಲೇ ಚಡಪಡಿಕೆ: ಬೆಳಿಗ್ಗೆ 8 ಗಂಟೆಗೆ ಬಂದಿದ್ದ ವಿದ್ಯಾರ್ಥಿ­­ಗಳು ಪುಸ್ತಕ ಹಿಡಿದು ಕೊನೆಯ ಹಂತದ ಸಿದ್ಧತೆ ನಡೆಸುತ್ತಿದ್ದ ದೃಶ್ಯ

ಕಂಡುಬಂತು. ಪುಸ್ತಕ, ನಿಯತಕಾಲಿಕೆ, ಪತ್ರಿಕೆ­ಗ­ಳನ್ನು ಹಿಡಿದ ಪೋಷಕರು ತಮ್ಮ ಮಕ್ಕಳಿಗೆ ಮಾಹಿತಿ ನೀಡುತ್ತಿದ್ದರು.

ಮತ್ತೊಬ್ಬರು ತಮ್ಮ ಪುತ್ರಿಗೆ ತಿಂಡಿ ತಿನಿಸುತ್ತಲೇ ‘ಇಸ್ರೊಗೆ ಸಂಬಂಧಿಸಿದ ಪ್ರಶ್ನೆ ಕೇಳಬಹುದು. ನಾನು ಹೇಳಿ­ಕೊಟ್ಟಿ­ದ್ದನ್ನು ಮರೆಯಬೇಡ’ ಎನ್ನುತ್ತಿದ್ದರು. ಇನ್ನೊಬ್ಬರು ಸ್ಮಾರ್ಟ್‌ ಫೋನ್‌ ನೆರವಿನಿಂದ ತಮ್ಮ ಪುತ್ರನಿಗೆ ‘ಭಾರತ ರತ್ನ’ ಪುರಸ್ಕೃತರ ಪಟ್ಟಿ ತೋರಿಸುತ್ತಿದ್ದರು.


‘ಇಂಥ ಕಾರ್ಯಕ್ರಮಗಳು ಮತ್ತೆ ಮತ್ತೆ ನಡೆಯುತ್ತಿರಬೇಕು ಕಣ್ರಿ. ಮಕ್ಕಳ ಜ್ಞಾನ ಹೆಚ್ಚಾಗುತ್ತೆ. ಜೊತೆಗೆ ಆಸ­ಕ್ತಿಯೂ ಬರುತ್ತೆ’ ಎಂದು ಮಕ್ಕಳೊಂದಿಗೆ ಶಿವಮೊಗ್ಗದಿಂದ ಬಂದಿದ್ದ ದಂಪತಿ ಕಲಾ­ಕ್ಷೇತ್ರದ ಮುಖ್ಯದ್ವಾರದಲ್ಲಿ ನಿಂತು ಮಾತನಾಡಿಕೊಳ್ಳುತ್ತಿದ್ದರು.

ಬಾಲಕಿಯರೇ ಮುಂದು: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಪ್ರತಿ ಬಾರಿ ಬಾಲಕಿ­ಯರೇ ಮೇಲುಗೈ ಸಾಧಿಸುವು­ದನ್ನು ಕೇಳಿದ್ದೇವೆ. ‘ಪ್ರಜಾವಾಣಿ’ ಕ್ವಿಜ್‌­ನಲ್ಲಿ ಅವರದ್ದೇ ಮೇಲುಗೈ. ಚಾಂಪಿ­ಯನ್‌ ಆದ ತಂಡದಲ್ಲಿದ್ದದ್ದು ಬಾಲಕಿ­ಯರು. ದ್ವಿತೀಯ ಸ್ಥಾನ ಪಡೆದ ತಂಡದ ಇಬ್ಬ­ರಲ್ಲಿ ಒಬ್ಬರು ಬಾಲಕಿ ಎನ್ನುವುದು ವಿಶೇಷ.  ಅಷ್ಟೇ ಅಲ್ಲ, ಬೆಂಗಳೂರು ನಗ­ರದ ಮಕ್ಕಳನ್ನು ಹಿಂದಿಕ್ಕಿ ಮಿಂಚಿದರು. ನಿಖರ ಉತ್ತರ ಹೇಳಿ ಭೇಷ್ ಎನಿಸಿ­ಕೊಂಡರು. ಕೌತುಕದ ಪ್ರಶ್ನೆಗಳಿಗೆ ಅಷ್ಟೇ ಸ್ವಾರಸ್ಯಕರವಾಗಿ ಉತ್ತರಿಸಿದರು.

ಮಿಂಚಿದ ಪ್ರೇಕ್ಷಕರು: ತಮ್ಮತ್ತ ತೂರಿ­ಬಂದ ಎಲ್ಲಾ ಪ್ರಶ್ನೆಗಳಿಗೆ ಚಾಣಾಕ್ಷತನದ ಉತ್ತರ ನೀಡಿ ಮಿಂಚಿದ್ದು ಪ್ರೇಕ್ಷಕರು. ವೇದಿಕೆ ಮೇಲಿದ್ದ ಸ್ಪರ್ಧಿಗಳು ಉತ್ತರಿಸದ ಪ್ರಶ್ನೆಗಳನ್ನು ಅವರಲ್ಲಿ ಕೇಳ­ಲಾ­ಯಿತು. ಜೊತೆಗೆ ಪ್ರೇಕ್ಷಕರಿಗೆಂದೇ ಕೆಲ ಪ್ರಶ್ನೆಗ­ಳನ್ನು ಹಾಕಲಾ­ಯಿತು. ಸರಿ ಉತ್ತರ ನೀಡಿದ­ವರಿಗೆ ಉಡುಗೊರೆಯೂ ಇತ್ತು.

ಸಾವಿರಕ್ಕೂ ಅಧಿಕ ತಂಡ: ಆರು ವಲಯ­ಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಸಾವಿ­ರಕ್ಕೂ ಅಧಿಕ ತಂಡಗಳು ಪಾಲ್ಗೊಂ­ಡಿದ್ದವು. ಪ್ರತಿ ವಲಯದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ 12 ತಂಡ­ಗಳು (24 ವಿದ್ಯಾರ್ಥಿಗಳು) ಸೆಮಿಫೈನಲ್‌ ಕಣದಲ್ಲಿದ್ದವು. ಗ್ರ್ಯಾಂಡ್‌ ಫೈನಲ್‌ನಲ್ಲಿ ಆರು ತಂಡಗಳ (12 ವಿದ್ಯಾರ್ಥಿಗಳು) ನಡುವಿನ ಪೈಪೋಟಿ ಆರಂಭದಿಂದಲೇ ಕುತೂಹಲ ಮೂಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT