ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಟಿ ಬೀಸದಿದ್ದರೆ ಆದರ್ಶ ಮಣ್ಣುಪಾಲು

ಮುಖ್ಯಮಂತ್ರಿಗೆ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಸಲಹೆ
Last Updated 3 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಸಾಗರ: ಶಿವಮೊಗ್ಗ ಜಿಲ್ಲೆಯಲ್ಲಿ ಅರಣ್ಯಭೂಮಿ ಸಾಗುವಳಿ ಹಕ್ಕುಪತ್ರಕ್ಕಾಗಿ ಸಲ್ಲಿಸಿರುವ 1.70 ಲಕ್ಷ ಅರ್ಜಿಗಳು ಇತ್ಯರ್ಥವಾಗಬೇಕಿದೆ. ಅಧಿಕಾರಿಗಳು ಕಾನೂನನ್ನು ತಪ್ಪಾಗಿ ಅರ್ಥೈಸುತ್ತಿರುವುದರಿಂದ ಈ ವಿಷಯದಲ್ಲಿ ವಿಳಂಬವಾಗುತ್ತಿದೆ. ನೀವು ಅಧಿಕಾರಿಗಳಿಗೆ ಚಾಟಿ ಬೀಸದೇ ಇದ್ದರೆ ನಿಮ್ಮ ಆದರ್ಶಗಳು ಮಣ್ಣುಪಾಲಾಗುತ್ತವೆ. ಎಲ್ಲ ಭಾಗ್ಯ ಕೊಟ್ಟಿರುವ ನೀವು ಭೂಮಿಭಾಗ್ಯವೊಂದನ್ನೂ ಕೊಟ್ಟುಬಿಡಿ...

ಹೀಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದವರು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ.
ಇಲ್ಲಿನ ನೆಹರೂ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭೂಕಂದಾಯ ಅಧಿನಿಯಮ ಕಲಮು 94 ‘ಸಿ’ ಪ್ರಕಾರ ಬಿಪಿಎಲ್ ಕಾರ್ಡ್‌ ಇದ್ದವರಿಗೆ ಮಾತ್ರ ಹಕ್ಕುಪತ್ರ ನೀಡಲಾಗುವುದು ಎಂಬ ನಿಯಮಾವಳಿಗೆ ತಿದ್ದುಪಡಿ ತರುವ ಅಗತ್ಯವಿದೆ. ಏಕೆಂದರೆ ಮಲೆನಾಡಿನಲ್ಲಿ ಎಲ್ಲ ವರ್ಗಕ್ಕೆ ಸೇರಿದ ಜನರು ದೀರ್ಘ ಕಾಲದಿಂದ ಕಂದಾಯ ಭೂಮಿಯಲ್ಲಿ ವಾಸವಿದ್ದರೂ ಅವರಿಗೆ ಹಕ್ಕುಪತ್ರವಿಲ್ಲ. ಹುಟ್ಟಿ ಬೆಳೆದ ಭೂಮಿಯ ಒಡೆತನ ಸಿಗದೇ ಇದ್ದರೆ ಸತ್ತವರಿಗೆ ಸ್ವರ್ಗ ಸಿಗುವುದೇ ಎಂದು ಕಾಗೋಡು ಮಾರ್ಮಿಕವಾಗಿ ಕೇಳಿದರು.

ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿ: ‘ನಿಮ್ಮ ಮಾತಿನ ಲಹರಿ ನೋಡಿದರೆ ನಿಮಗೆ 84 ವರ್ಷವಲ್ಲ; 24 ವರ್ಷವೇನೊ ಎಂಬ ಅನುಮಾನ ಕಾಡುತ್ತದೆ. ನಿಮ್ಮ ಆಪ್ತರ ಬಳಿ ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿಕೊಂಡಿದ್ದೀರಂತೆ. ಆದರೆ, ನಿಮ್ಮ ಉತ್ಸಾಹ, ಕಾಳಜಿ, ಬದ್ಧತೆ ಗಮನಿಸಿದರೆ ನೀವು ಮತ್ತೊಮ್ಮೆ ಚುನಾವಣೆಗೆ ನಿಲ್ಲುವುದೇ ಸೂಕ್ತ’ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಕಾಗೋಡು ತಿಮ್ಮಪ್ಪ ಅವರು ಒಲ್ಲದ ಮನಸ್ಸಿನಿಂದಲೇ ಸ್ಪೀಕರ್ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರ ವಯಸ್ಸು ಮತ್ತು ಅನುಭವ ನೋಡಿ ಸ್ಪೀಕರ್ ಆಗುವಂತೆ ಒತ್ತಾಯಿಸಿದ್ದೇ ನಾನು. ಈಗ ಅವರು ಸ್ಪೀಕರ್ ಆಗಿ ವಿರೋಧ ಪಕ್ಷದವರ ಮನಸನ್ನೂ ಗೆದ್ದಿದ್ದಾರೆ. ಯಾವ ಮಂತ್ರಿಗಳಿಗೂ ಅವರ ಮಾತನ್ನು ತಳ್ಳಿ ಹಾಕುವ ಧೈರ್ಯ ಇಲ್ಲ’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT