ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗಿರಿ, ಪ್ರಕೃತಿ ಸೊಬಗು

ಪ್ರವಾಸಿ ದಿಕ್ಸೂಚಿ ನೋಡು ಬಾ ನಮ್ಮೂರ...
Last Updated 26 ಮಾರ್ಚ್ 2016, 5:50 IST
ಅಕ್ಷರ ಗಾತ್ರ

ಜಾನಪದ ಕಲೆಗಳ ತವರೂರು ಚಾಮರಾಜನಗರ ಜಿಲ್ಲೆ. ಗಿರಿ, ಶಿಖರ,  ಅರಣ್ಯ ಭಾಗದಿಂದ ಆವೃತವಾಗಿರುವ ಜಿಲ್ಲೆ  ಪೂರ್ವ ಮತ್ತು ಪಶ್ಚಿಮ ಘಟ್ಟಗಳಿಗೆ ಬೆಸುಗೆ ಹಾಕುವ ಜಿಲ್ಲೆ. ಇಲ್ಲಿನ ದೇವಾಲಯಗಳು, ಪ್ರವಾಸಿ ತಾಣಗಳು, ಗಿರಿಗಳ ಕುರಿತು ಕೆ.ಎಚ್‌. ಓಬಳೇಶ್‌ ಇಲ್ಲಿ ವಿವರ ನೀಡಿದ್ದಾರೆ.

ಚಾಮರಾಜನಗರ ಜಿಲ್ಲೆಯು ಜಾನಪದ ಕಲೆಗಳ ತವರೂರು. ಶೇ 49ರಷ್ಟು ಅರಣ್ಯ ಪ್ರದೇಶವಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟಗಳಿಗೆ ಇಲ್ಲಿನ ಬಿಳಿಗಿರಿರಂಗನ ಬೆಟ್ಟ ಬೆಸುಗೆ ಹಾಕುತ್ತದೆ. ಹೇರಳವಾಗಿ ವನ್ಯಜೀವಿ ಸಂಪತ್ತು ಇರುವುದು ಇಲ್ಲಿನ ವೈಶಿಷ್ಟ್ಯ. ಪ್ರಸಿದ್ಧ ದೇವಾಲಯಗಳು, 2 ಹುಲಿ ರಕ್ಷಿತಾರಣ್ಯಗಳು ದೇಶದ ಗಮನಸೆಳೆದಿವೆ. ಆದರೆ, ಜಾಗತಿಕಮಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆದಿಲ್ಲ.

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಕೇವಲ ದಾಖಲೆಗಷ್ಟೇ ಸೀಮಿತವಾಗಿದೆ. ಕನಿಷ್ಠ ಜಿಲ್ಲಾ ಕೇಂದ್ರದಿಂದ ವಾರಾಂತ್ಯದಲ್ಲಿ ಪ್ರವಾಸಿ ತಾಣಗಳಿಗೆ ಪ್ಯಾಕೇಜ್‌ ರೂಪದಲ್ಲಿ ಪ್ರವಾಸಿ ಬಸ್‌ ಸೌಲಭ್ಯ ಒದಗಿಸುವ ಪ್ರಯತ್ನ ನಡೆಯಬೇಕಿದೆ. ವರ್ಷದ ಎಲ್ಲ ಕಾಲದಲ್ಲೂ ಜಿಲ್ಲೆಯಲ್ಲಿ ಪ್ರವಾಸ ಮಾಡಬಹುದು. ಸ್ವಂತ ವಾಹನದಲ್ಲಿ ಪ್ರವಾಸಿಗರು ಬಂದರೆ ಇಲ್ಲಿನ ತಾಣಗಳ ರಸದೌತಣ ಸವಿಯಬಹುದು.

ಚಾಮರಾಜೇಶ್ವರಸ್ವಾಮಿ ದೇಗುಲ
ಚಾಮರಾಜನಗರದ ಪುರಾತನ ಹೆಸರು ಅರಿಕುಠಾರ. ಇಲ್ಲಿ ಮೈಸೂರಿನ ಮಹಾರಾಜ ಚಾಮರಾಜೇಂದ್ರ ಒಡೆಯರ್‌ 1774ರಲ್ಲಿ ಜನಿಸಿದರು. ಹಾಗಾಗಿ, ಅವರ ಪುತ್ರ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಈ ನಗರಕ್ಕೆ ‘ಚಾಮರಾಜನಗರ’ ಎಂದು ನಾಮಕರಣ ಮಾಡಿದರು. ಚಾಮರಾಜೇಶ್ವರ ಸ್ವಾಮಿ ದೇವಸ್ಥಾನವು ಜಿಲ್ಲಾ ಕೇಂದ್ರಕ್ಕೆ ಕಳಶಪ್ರಾಯವಾಗಿದೆ. 1826ರಲ್ಲಿ ಇದನ್ನು ನಿರ್ಮಿಸಲಾಗಿದೆ. 75 ಅಡಿಗಳ ಪಂಚಸ್ವರ್ಣಯುಕ್ತ ಗೋಪುರ ಮನ ಸೆಳೆಯುತ್ತದೆ. ಆಷಾಢ ಮಾಸದ ಪೂರ್ವಾಷಾಢ ನಕ್ಷತ್ರದಲ್ಲಿ ಜಾತ್ರೆ ನಡೆಯುತ್ತದೆ. 

ರಾಮಲಿಂಗೇಶ್ವರ ದೇವಾಲಯ
ನರಸಮಂಗಲ ಜಿಲ್ಲಾ ಕೇಂದ್ರದಿಂದ 24 ಕಿ.ಮೀ. ದೂರದಲ್ಲಿದೆ. ಇಲ್ಲಿ ರಾಮಲಿಂಗೇಶ್ವರ ದೇವಸ್ಥಾನವಿದೆ. ಈ ದೇಗುಲಕ್ಕೆ ಸುಮಾರು 1,500 ವರ್ಷದ ಇತಿಹಾಸ ಇದೆ. ಈ ದೇವಾಲಯವು ಗಂಗರ ಕಾಲದ ಶಿಲ್ಪಕಲೆಗೆ ಸಾಕ್ಷಿಯಾಗಿದೆ. ಇದು ತಲಕಾಡಿನ ಗಂಗರಿಗೆ ಪ್ರಿಯವಾದ ದೇವಾಲಯವಾಗಿತ್ತು.

ದೇಗುಲದ ಆಗ್ನೇಯ ಭಾಗಕ್ಕೆ ಸಪ್ತ ಮಾತೃಕೆಯರ ವಿಗ್ರಹಗಳಿವೆ. ವೀರಭದ್ರ, ಗಣೇಶ, ದಕ್ಷಬ್ರಹ್ಮ, ಭೈರವ, ಮಹಿಷಾಸುರ ಮರ್ದಿನಿ, ಕುಮಾರ, ಜನಾರ್ದನ ವಿಗ್ರಹಗಳಿವೆ. ದಕ್ಷಿಣಕ್ಕೆ ಇರುವ ಶಾಸನಗಳಲ್ಲಿ ಹೊಯ್ಸಳ, ವೀರಬಲ್ಲಾಳ ದೇವಸ್ಥಾನಕ್ಕೆ ದತ್ತಿ ಬಿಟ್ಟಿರುವ ವಿಷಯ ನಿರೂಪಿತವಾಗಿದೆ. ತಮಿಳು ಶಾಸನಗಳು ದೊರೆ ತಿವೆ. ದೇವಸ್ಥಾನಕ್ಕೆ ತೆರಳಲು ಜಿಲ್ಲಾ ಕೇಂದ್ರದಿಂದ ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯವಿದೆ.

ಕನಕಗಿರಿ ಕ್ಷೇತ್ರ
ಚಾಮರಾಜನಗರ ತಾಲ್ಲೂಕಿನ ಮಲೆಯೂರಿನಲ್ಲಿ ಕನಕಗಿರಿ ಕ್ಷೇತ್ರವಿದೆ. ಇದು ಜೈನರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ. ಕನಕಗಿರಿ ಪಾರ್ಶ್ವನಾಥ ಬಸದಿ ಅತಿ ಪುರಾತನವಾದುದು. ಕ್ರಿ.ಶ. 1501ರಲ್ಲಿ ಪೂಜ್ಯಪಾದರು ಇಲ್ಲಿ ತಪಸ್ಸು ಮಾಡಿದ್ದರು. ಇಲ್ಲಿ ನಿರ್ಮಿಸಿರುವ ಭವ್ಯ ಮಂಟಪಗಳಲ್ಲಿ ಅವರ ಪಾದುಕೆಗಳಿವೆ. ಕಲ್ಲುಬಂಡೆ, ಬೆಟ್ಟಗಳ ನಡುವೆ ಇರುವ ಜೈನ ಬಸದಿಯ ಸೊಬಗು ಕಣ್ತುಂಬಿಕೊಳ್ಳಲು ಪ್ರವಾಸಿಗರು ಚಾಮರಾಜನಗರದಿಂದ 24 ಕಿ.ಮೀ. ಕ್ರಮಿಸಬೇಕು. ಮಲೆಯೂರಿಗೆ ಖಾಸಗಿ ಬಸ್‌ ಇದೆ.

ಬಂಡೀಪುರ
ಬಂಡೀಪುರ ರಾಷ್ಟ್ರೀಯ ಉದ್ಯಾನ ದೇಶದ ಪ್ರಮುಖ ಹುಲಿ ರಕ್ಷಿತಾರಣ್ಯಗಳ ಪೈಕಿ ಒಂದಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ಹುಲಿಗಳನ್ನು ಹೊಂದಿರುವ ರಕ್ಷಿತಾರಣ್ಯವೆಂಬ ಕೀರ್ತಿಗೆ ಪಾತ್ರವಾಗಿದೆ. ಮೈಸೂರಿನಿಂದ 80 ಕಿ.ಮೀ. ಹಾಗೂ ಬೆಂಗಳೂರಿ ನಿಂದ 220 ಕಿ.ಮೀ. ದೂರವಿದೆ.

ಬೆಳಿಗ್ಗೆ ಮತ್ತು ಸಂಜೆ ಸಫಾರಿ ವ್ಯವಸ್ಥೆ ಇದೆ. ಮಧುಮಲೈ, ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ಬಂಡೀಪುರವು ಗುಂಡ್ಲುಪೇಟೆ ತಾಲ್ಲೂಕಿಗೆ ಸೇರಿದೆ. ಜಿಲ್ಲಾ ಕೇಂದ್ರದಿಂದ 50 ಕಿ.ಮೀ. ದೂರದಲ್ಲಿದೆ. ಕೇರಳ ಮತ್ತು ತಮಿಳುನಾಡಿನ ಊಟಿಗೆ ಈ ಮಾರ್ಗವಾಗಿಯೇ ತೆರಳಬೇಕಿದೆ. ಹಾಗಾಗಿ, ಇಲ್ಲಿಗೆ ತೆರಳಲು ಬಸ್‌ಗಳಿಗೆ ಕೊರತೆಯಿಲ್ಲ. ಜತೆಗೆ, ವಾಸ್ತವ್ಯಕ್ಕೆ ಅರಣ್ಯ ಇಲಾಖೆ ವಸತಿಗೃಹದ ಸೌಲಭ್ಯವಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟ
ಹಿಮವದ್ ಗೋಪಾಲಸ್ವಾಮಿ ಬೆಟ್ಟ ಕರ್ನಾಟಕದ ಪ್ರಸಿದ್ಧ ಗಿರಿಧಾಮ. ಸಮುದ್ರಮಟ್ಟದಿಂದ ಸುಮಾರು 1,450 ಮೀಟರ್‌ ಎತ್ತರವಿದ್ದು, ಪ್ರವಾಸಿಗರ ನೆಚ್ಚಿನ ತಾಣ. ಸದಾ ಹಿಮದಿಂದ ಕೂಡಿರುವುದರಿಂದ ಇದಕ್ಕೆ ‘ಹಿಮವದ್‌’ ಎಂಬ ಹೆಸರು ಬಂದಿದೆ. ವಿಶಾಲ ಹುಲ್ಲುಗಾವಲು, ಶೋಲಾ ಅರಣ್ಯ ಕಣ್ಮನ ಸೆಳೆಯುತ್ತದೆ. ಇದು ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಗೆ ಸೇರಿದೆ. ದಟ್ಟವಾದ ಕಾಡಿನಿಂದ ಆವರಿಸಿರುವ ಬೆಟ್ಟವನ್ನು ನೋಡುವುದೇ ಕಣ್ಣಿಗೆ ಆನಂದ.

ಬೇಸಿಗೆಯಲ್ಲಿಯೂ ಹಿತಕರ ಹವಾಗುಣ ಮನಸ್ಸಿಗೆ ಮುದ ನೀಡುತ್ತದೆ. ಗೋಪಾಲಸ್ವಾಮಿ ದೇವಾಲಯವಿದ್ದು, ಪ್ರತಿವರ್ಷ ಜಾತ್ರೆ ನಡೆಯುತ್ತದೆ. ವಿಶೇಷ ಪೂಜೆ ಹಾಗೂ ಶನಿವಾರ, ಭಾನುವಾರ ಬೆಟ್ಟದ ತಪ್ಪಲಿನಿಂದ ಮೇಲ್ಭಾಗಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವಾಸಿಗರು ಸ್ವಂತ ವಾಹನದಲ್ಲಿ ಬೆಟ್ಟಕ್ಕೆ ಹೋಗುವುದು ಉತ್ತಮ. ಇದು ಗುಂಡ್ಲುಪೇಟೆಯಿಂದ 15 ಕಿ.ಮೀ. ದೂರವಿದೆ.

ಮಲೆಮಹದೇಶ್ವರ ಬೆಟ್ಟ 
ಇದು ನಿಸರ್ಗದ ಮಡಿಲಿನಲ್ಲಿರುವ ಪುಣ್ಯಕ್ಷೇತ್ರ. ಕರ್ನಾಟಕದ ಸುಪ್ರಸಿದ್ಧ ಪ್ರವಾಸಿ ತಾಣವೂ ಹೌದು. ಮಾದಪ್ಪನ ದೇಗುಲವು ಮುಜರಾಯಿ ಇಲಾಖೆಗೆ ಒಳಪಟ್ಟಿದೆ. ಅತಿಹೆಚ್ಚು ಆದಾಯ ಗಳಿಸುವ ರಾಜ್ಯದ ದೇಗುಲಗಳಲ್ಲಿ ಇದಕ್ಕೆ 2ನೇ ಸ್ಥಾನವಿದೆ. ಮಾದಪ್ಪನಿಗೆ ಕರ್ನಾಟಕ ಸೇರಿದಂತೆ ತಮಿಳುನಾಡಿನಲ್ಲಿಯೂ ಅಪಾರ ಸಂಖ್ಯೆಯ ಭಕ್ತರಿದ್ದಾರೆ.

ಮಹಾಶಿವರಾತ್ರಿ, ದಸರಾ, ಯುಗಾದಿ, ದೀಪಾವಳಿಯಂದು ವಿಶೇಷ ಜಾತ್ರೆ ನಡೆಯುತ್ತದೆ. ಕೊಳ್ಳೇಗಾಲದಿಂದ 80  ಕಿ.ಮೀ. ದೂರ. ಚಾಮರಾಜ ನಗರ, ಕೊಳ್ಳೇಗಾಲದಿಂದ ಬಸ್‌ ಸೌಲಭ್ಯವಿದೆ. ದೇವಸ್ಥಾನದ ಪ್ರಾಧಿಕಾರದಿಂದ ಬೆಂಗಳೂರು, ಮೈಸೂರಿನಿಂದ ಬೆಟ್ಟಕ್ಕೆ ಬಸ್‌ ಸೌಲಭ್ಯ ಕಲ್ಪಿಸಲಾಗಿದೆ. ವಸತಿಗೃಹಗಳ ಸೌಲಭ್ಯ ಉಂಟು.

ಭರಚುಕ್ಕಿ ಜಲಪಾತ
ಕಾವೇರಿ ನದಿಯು ಸತ್ತೇಗಾಲದ ಬಳಿ ಕವಲೊಡೆದು ಹರಿಯುತ್ತದೆ. ಒಂದೆಡೆ ಗಗನಚುಕ್ಕಿಯಲ್ಲಿ ನೀರು ಧುಮ್ಮಿಕ್ಕುತ್ತದೆ. ಅನತಿ ದೂರದಲ್ಲಿ ಭರಚುಕ್ಕಿ ಜಲಪಾತದಲ್ಲಿ ಕಾವೇರಿಯ ವೈಯ್ಯಾರ ಮನತಣಿಸುತ್ತದೆ. ಗಗನಚುಕ್ಕಿ ಮಂಡ್ಯ ಜಿಲ್ಲೆಗೆ ಸೇರಿದೆ. ಭರಚುಕ್ಕಿ ಜಲಪಾತ ಕೊಳ್ಳೇಗಾಲ ತಾಲ್ಲೂಕಿಗೆ ಸೇರಿದೆ. ಗಗನಚುಕ್ಕಿಯನ್ನೂ ಜಿಲ್ಲೆಯ ಭೂಭಾಗದಿಂದ ನೋಡಬಹುದು. ಜುಲೈ– ಅಕ್ಟೋಬರ್‌ ಪ್ರವಾಸಕ್ಕೆ ಸೂಕ್ತ ಕಾಲ. ಭರಚುಕ್ಕಿಗೆ ಕೊಳ್ಳೇಗಾಲದಿಂದ 17 ಕಿ.ಮೀ. ದೂರದಲ್ಲಿದೆ. ಪ್ರವಾಸಿಗರು ಸ್ವಂತ ವಾಹನದಲ್ಲಿ ತೆರಳಬೇಕಿದೆ.

ಬಳೆ ಮಂಟಪ
ಚೋಳ ವಂಶದ ಶ್ರೀದೇವಭೂಪಾಲ 1550ರಲ್ಲಿ ಈ ದೇಗುಲ ನಿರ್ಮಿಸಿದ. ಕಲ್ಲಿನಿಂದ ಬಳೆಗಳನ್ನು ಮಾಡಿ ಮಂಟಪದ ಮೂಲೆಯಲ್ಲಿ ಒಂದರೊಳಗೆ ಒಂದರಂತೆ ಜೋಡಿಸಿರುವ ಮಂಟಪ ವಿಸ್ಮಯ ಮೂಡಿಸುತ್ತದೆ. ಕಲ್ಲುಗಳಿಗೆ ಬಳೆ ರೂಪ ನೀಡಿ ಕೆತ್ತಿರುವುದು ಇಲ್ಲಿನ ವಿಶೇಷ. ಯಳಂದೂರು ತಾಲ್ಲೂಕು ಕೇಂದ್ರದಲ್ಲಿರುವ ಈ ದೇಗುಲವು ಅತ್ಯಂತ ಮನಮೋಹಕ ಹಾಗೂ ಪ್ರವಾಸಿಗರ ಆಕರ್ಷಣೆ ಕೇಂದ್ರ. ಮಹಾದ್ವಾರದ ಮುಂಭಾಗ ಬ್ರಹ್ಮ ಮತ್ತು ಸರಸ್ವತಿ ಕೆತ್ತಲಾಗಿದೆ. ದ್ರಾವಿಡ ಶೈಲಿಯ ಬಳೆ ಮಂಟಪದ ಜೀರ್ಣೋದ್ಧಾರ ಕೆಲಸ ಪ್ರಗತಿಯಲ್ಲಿದೆ.

ಬಿಳಿಗಿರಿರಂಗನ ಬೆಟ್ಟ
ಯಳಂದೂರಿನಿಂದ ಸುಮಾರು 28 ಕಿ.ಮೀ. ದೂರದಲ್ಲಿದೆ. ಇಲ್ಲಿ ಸೋಲಿಗರ ಆರಾಧ್ಯ ದೈವ ರಂಗನಾಥಸ್ವಾಮಿಯ ದೇಗುಲವಿದೆ. ಸಮುದ್ರಮಟ್ಟದಿಂದ ಸುಮಾರು 1,500 ಮೀಟರ್ ಎತ್ತರವಿದೆ. ಈ ಬೆಟ್ಟಕ್ಕೆ ಬಿಳಿಗಿರಿಬೆಟ್ಟ, ಬಿಳಿಕಲ್ಲು ಬೆಟ್ಟ, ಶ್ವೇತಾದ್ರಿ ಎಂಬ ಹೆಸರಿದೆ. ಪ್ರತಿವರ್ಷದ ಸಂಕ್ರಾಂತಿ ಹಬ್ಬದ ಮಾರನೇ ದಿನ ಚಿಕ್ಕಜಾತ್ರೆ ಹಾಗೂ ಏಪ್ರಿಲ್‌, ಮೇನಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ.

ಈ ದೇಗುಲ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯಕ್ಕೆ ಒಳಪಟ್ಟಿದೆ. ದೇವಾಲಯದ ಸಮೀಪ ಗಂಗಾಧರೇಶ್ವರ ದೇವಸ್ಥಾನವಿದೆ. ಜಿಲ್ಲಾ ಕೇಂದ್ರ, ಯಳಂದೂರಿನಿಂದ ಬಸ್‌ ಸೌಲಭ್ಯವಿದೆ. ವಾಸ್ತವ್ಯಕ್ಕೆ ವಸತಿಗೃಹಗಳಿವೆ. ಪ್ರವಾಸಿಗರು ಸ್ವಂತ ವಾಹನದಲ್ಲಿ ತೆರಳುವುದು ಸೂಕ್ತ.

ಕೆ. ಗುಡಿ
ಇದು ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿದೆ. ಸಮುದ್ರಮಟ್ಟದಿಂದ 1450 ಮೀಟರ್ ಎತ್ತರದಲ್ಲಿದೆ. ಇಲ್ಲಿ ಜಂಗಲ್ ಲಾಡ್ಜ್‌ ಸಂಸ್ಥೆಯ ಅತಿಥಿ ಗೃಹವಿದೆ. ಆನೆ ಶಿಬಿರವಿದ್ದು, ಇಲ್ಲಿಗೆ ದೇಶ ಮತ್ತು ವಿದೇಶಗಳಿಂದ ಪ್ರವಾಸಿಗರು ಆಗಮಿ ಸುತ್ತಾರೆ. ವನ್ಯಜೀವಿಗಳು, ಪ್ರಕೃತಿ ಸಂಶೋಧಕರು ಮತ್ತು ಪ್ರವಾಸಿಗರಿಗೆ ಕೆ. ಕ್ಯಾತದೇವರ ಗುಡಿ ರಮಣೀಯ ತಾಣ. ಜಿಲ್ಲಾ ಕೇಂದ್ರದಿಂದ ಬಸ್‌ ಸೌಲಭ್ಯವಿದೆ. ಸ್ವಂತ ವಾಹನದಲ್ಲಿ ತೆರಳಿದರೆ ಅನುಕೂಲ.

ಹೊಗೇನಕಲ್‌ ಜಲಪಾತ
ಕರ್ನಾಟಕ- ಮತ್ತು ತಮಿಳುನಾಡಿನ ಗಡಿಯಲ್ಲಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ವಿಶಾಲ ದ್ವೀಪ ಸ್ವಮೂಹ. ಇಲ್ಲಿ ದೋಣಿ ವಿಹಾರ, ಎಣ್ಣೆಸ್ನಾನ, ಮೀನು ಊಟ ಪ್ರವಾಸಿಗರ ಆಕರ್ಷಣೆಯಾಗಿದೆ. ವರ್ಷ ಪೂರ್ತಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಕೊಳ್ಳೇಗಾಲದಿಂದ 110 ಕಿ.ಮೀ, ಬೆಂಗಳೂರಿನಿಂದ 180 ಕಿ.ಮೀ. ದೂರದಲ್ಲಿದೆ.

ಮಲೆಮಹದೇಶ್ವರ ಬೆಟ್ಟದಿಂದ ಸುಮಾರು 52 ಕಿ.ಮೀ. ದೂರದಲ್ಲಿದೆ. ಸುಮಾರು 80ಕ್ಕೂ ಹೆಚ್ಚು ಚಿಕ್ಕ ಜಲಧಾರೆ ಹಾಗೂ 25ಕ್ಕೂ ಹೆಚ್ಚು ದೊಡ್ಡ ಜಲಧಾರೆಗಳಿವೆ. ಪ್ರವಾಸಿಗರು ಸ್ವಂತ ವಾಹನದಲ್ಲಿ ತೆರಳಿದರೆ ಜಲಪಾತದ ಸೊಬಗು ವೀಕ್ಷಿಸಬಹುದು.

ಸುವರ್ಣಾವತಿ–ಚಿಕ್ಕಹೊಳೆ
ಈ ಅವಳಿ ಜಲಾಶಯಗಳು ಚಾಮರಾಜನಗರ ತಾಲ್ಲೂಕಿನ ರೈತರ ಜೀವನಾಡಿ. ಚಾಮರಾಜನಗರದಿಂದ ಸತ್ಯಮಂಗಲದ ರಸ್ತೆಯಲ್ಲಿ ತಮಿಳುನಾಡಿನತ್ತ ಸಾಗುವಾಗ ಮೊದಲಿಗೆ ಚಿಕ್ಕಹೊಳೆ ಸಿಗುತ್ತದೆ. ಬಳಿಕ ಸುವರ್ಣಾವತಿ ಜಲಾಶಯ ಮನಸೆಳೆಯುತ್ತದೆ.  ಮರಾಜನಗರದಿಂದ 18 ಕಿ.ಮೀ. ದೂರದಲ್ಲಿವೆ. ಸುವರ್ಣಾವತಿ ಜಲಾಶಯವು ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದೊಂದಿಗೆ ಬೆಸೆದುಕೊಂಡಿದೆ.

ದೊಡ್ಡಸಂಪಿಗೆ
ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ ಕೆರೆದಿಂಬ ಪೋಡಿನ ಬಳಿಯಿದೆ. ಸುಮಾರು 130 ಅಡಿ ಎತ್ತರದ ದೊಡ್ಡಸಂಪಿಗೆ ಮರವಿದೆ. ಇದು ಸುಮಾರು 1 ಸಾವಿರದಷ್ಟು ಹಳೆ ಮರ ಎನ್ನುತ್ತಾರೆ ತಜ್ಞರು.  ಇಲ್ಲಿ ವರ್ಷಕ್ಕೊಮ್ಮೆ ಸೋಲಿಗರ ‘ರೊಟ್ಟಿ ಹಬ್ಬ’ ಆಚರಿಸುತ್ತಾರೆ. ಇಲ್ಲಿಗೆ ತೆರಳಲು ಅರಣ್ಯ ಇಲಾಖೆಯಿಂದ ಅನುಮತಿ ಬೇಕು.

ಮಧ್ಯರಂಗ
ಶಿವನಸಮುದ್ರವನ್ನು ಮಧ್ಯರಂಗವೆಂದು ಕರೆಯುತ್ತಾರೆ. ಎರಡೂವರೆ ಮೀಟರ್‌ ಉದ್ದದ ಶಯನ ಭಂಗಿಯ ಶ್ರೀರಂಗನಾಥ ಸ್ವಾಮಿಯನ್ನು ಜಲನ್ಮೋಹನ ರಂಗನಾಥ ಎಂದು ಕರೆಯುತ್ತಾರೆ. ಭರಚುಕ್ಕಿಗೆಹೋಗುವ ಮಾರ್ಗದಲ್ಲಿಯೇ ಈ ದೇಗುಲಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT