ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕರಹಿತ ಬಸ್‌ಗಳು ಬೇಗನೆ ಬರಲಪ್ಪಾ!

ಪ್ರಕಾಶ್‌ಶೆಟ್ಟಿ ಕಂಡ ಸಿಟಿ ಜನ್ರು
Last Updated 31 ಜುಲೈ 2014, 19:30 IST
ಅಕ್ಷರ ಗಾತ್ರ

ಒಂದು ಸಂಜೆ ಹಾಗೆ ಮಾತಿಗೆ ಸಿಗುವ ಕೆಲವು ಚಹರೆಗಳು ‘ಕ್ಯಾರಿಕೇಚರ್‌’ಗೆ ಯೋಗ್ಯ ಅನಿಸಿಬಿಡುತ್ತವೆ. ಹಾಗೆ ತಮ್ಮ ಮಾತು, ಚಹರೆ ಎರಡರ ಮೂಲಕ ದಕ್ಕುವ ಸಾಮಾನ್ಯರ ಮನದನಿ ಇದು. ಪ್ರತಿ ಶುಕ್ರವಾರದ ವಿಶೇಷ. ಈಸಲ ಜೆ.ಪಿ.ನಗರದಶ್ರೀಧರ್‌ ಕೊಮಾರಾವಲ್ಲಿ ‘ಕ್ಯಾರಿಕೇಚರ್‌’ ಆಗಿದ್ದಾರೆ.

*ನಿಮ್ಮ ಹೆಸರಲ್ಲಿ ಕೊಮಾರಾವಲ್ಲಿಗೆ ಏನು ಕೆಲಸ?
ಏನ್ಮಾಡೋಣ.. ಸರ್‌ನೇಮ್ ಹಾಗೇ ಸುಮ್ಮನೆ ಅಂಟಿಕೊಂಡುಬಿಟ್ಟಿದೆ. ಮೂಲತಃ ನಾನು ತಮಿಳುನಾಡಿನ ಕರೂರಿನವನು. ನಾನು ಹುಟ್ಟಿದ್ದು, ಬೆಳೆದದ್ದು, ವಿದ್ಯಾಭ್ಯಾಸ, ಕೆಲಸ ಮಾಡಿದ್ದು ...ಒಂದ್ನಿಮಿಷ... ಹೇಳ್ತೀನಿ...

*ಇನ್ನೆಲ್ಲಿ....ಇಲ್ಲೇ ಬೆಂಗಳೂರು ಮಹಾನಗರದಲ್ಲಿರಬೇಕಲ್ಲ?
ಅಲ್ಲ! ನಾನು ಹುಟ್ಟಿದ್ದು, ಬೆಳೆದದ್ದು, ವಿದ್ಯಾಭ್ಯಾಸ, ಕೆಲಸ ಮಾಡಿದ್ದು ಎಲ್ಲಿ ಎಂದು ಹೇಳುವುದು ಸ್ವಲ್ಪ ಕಷ್ಟಾನೇ!  ಯಾಕೆಂದರೆ ನನ್ನ ತಂದೆ ಬ್ಯಾಂಕ್‌ನಲ್ಲಿದ್ದರು. ಬ್ಯಾಂಕ್‌ನಲ್ಲಿದ್ದ ಮೇಲೆ ಗೊತ್ತಲ್ಲ. ಆಗಾಗ ಟ್ರಾನ್ಸ್‌ಫರ್... ಅಷ್ಟಕ್ಕೇ ನಿಲ್ಲದೆ ನಾನೂ ಬ್ಯಾಂಕಿಗೆ ಸೇರಬೇಕೇ!

*ನಿಮ್ಮ ಸಂತೃಪ್ತ ಮುಖ ನೋಡಿದರೆ ನಿವೃತ್ತಿಯಾಗಿದ್ದೀರಿ ಎಂದು ಗೋತ್ತಾಗುತ್ತೆ? ನಿವೃತ್ತಿಯಾದ ದಿವಸ ‘ನೀವು ಮುದುಕರಾಗಿದ್ದೀರಿ, ಇನ್ನು ಸಾಕು ನಿಮ್ಮ ಸೇವೆ!’ ಎಂದು ಒದ್ದೋಡಿಸಿದ ಭಾವನೆ ಬರಲಿಲ್ಲವೇ ?
ಹಾಗೆ ‘ಒದ್ದೋಡಿಸುವುದಕ್ಕೆ’ ನಾನು ಬಿಡಬೇಕಲ್ಲ! ನಾನು ಸ್ವಯಂ ನಿವೃತ್ತನಾಗಿಬಿಟ್ಟೆ.
  
*ಬಾಂಕಿಂಗ್‌ನಲ್ಲಿ ಸಾಕಷ್ಟು ಇಂಟರೆಸ್ಟ್ ಇಲ್ಲಾಂತ ವಿದ್ ಡ್ರಾ ಮಾಡಿಬಿಟ್ರಿ. ಅಲ್ಲ ಸಾರ್, ಬ್ಯಾಂಕ್‌ನವರಲ್ಲಿ ಶೇಕಡ ೮೫ರಷ್ಟು ಮಂದಿ ಸೀರಿಯಸ್ಸಾಗಿರುತ್ತಾರಲ್ಲ. ನೀವು ?
ಇಲ್ಲಪ್ಪಾ! ನಾನು ಎಟಿಎಂನಂತೆ ಎಟಿಎಸ್ ಮೆಷೀನು ರೀ! ಎಟಿಎಸ್ ಅಂದರೆ ‘ಎನಿ ಟೈಮ್ ಸ್ಮೈಲ್’!

*ಬೆಂಗಳೂರಿನಲ್ಲಿ ಚಾಲಕರಹಿತ ಬಸ್ ಬಂದರೆ ನಿಮಗೆ ಅದರಲ್ಲಿ ಪ್ರಯಾಣಿಸುವ ಧೈರ್ಯ ಇದೆಯಾ?
ನಾನು ಈಗ ಬಸ್ಸುಗಳಲ್ಲಿ ಹೋಗುವುದಕ್ಕೆ ಹೆದರುತ್ತೇನೆ. ಈಗಿನ ಬಸ್‌ಗಳಿಗಿಂತ ಚಾಲಕರಹಿತ ಬಸ್‌ಗಳೇ ಒಳ್ಳೆಯದು. ಸುಗಮ ಸಂಚಾರಕ್ಕಾಗಿ ಅಂತಹ ಬಸ್‌ಗಳು ಬೇಗನೆ ಬರಲಪ್ಪಾ, ದೇವರೆ.

*ಅಲ್ರೀ, ದೇವರು ಒಂದು ದಿವಸ ಪ್ರತ್ಯಕ್ಷ ಆಗಿಬಿಟ್ಟ ಅಂದ್ಕೊಳ್ಳಿ. ಏನು ವರ ಬೇಕು ಎಂದು ಕೇಳಿದರೆ ಅದೇ ಚಾಲಕರಹಿತ ಬಸ್ ಓಡಾಡಲಿ ಎಂದು ಕೋರುವಿರಾ?
ದೇವರು ಪ್ರತ್ಯಕ್ಷನಾದರೆ ನನ್ನ ಒಂದೇ ಒಂದು ಕೋರಿಕೆ ಇದೆ– ನನ್ನನ್ನು ಆರ್.ಕೆ. ಲಕ್ಷಣ್ ತರಹ ವ್ಯಂಗ್ಯಚಿತ್ರಕಾರನನ್ನಾಗಿ ಮಾಡು ಎಂದು ಸಾಷ್ಟಾಂಗ ಬಿದ್ದು ಕೋರುತ್ತೇನೆ.

*ಓಹ್! ಕಲೆ ‘ಗಾಡ್ಸ್ ಗಿಫ್ಟ್’ ಎಂದು ಕೇಳಿದ್ದೇನೆ. ಆದಷ್ಟು ಬೇಗ ದೇವರು ಪ್ರತ್ಯಕ್ಷನಾಗಲಿ. ಅಂದಹಾಗೆ ಒಂದು ಮುಂಜಾನೆ ನಿಮ್ಮ ಮನೆ ಮುಂದೆ ಯಾವುದೋ ಸಂಘಟನೆಯವರು ಪ್ರತ್ಯಕ್ಷರಾಗಿ, ಇಪ್ಪತ್ತೈದು ಸಾವಿರ ರೂಪಾಯಿ ಕೊಡಿ, ‘ಸಮಾಜ ಸೇವಕ’ ಪ್ರಶಸ್ತಿ ಕೊಟ್ಟು, ಸನ್ಮಾನ ಮಾಡ್ತೀವಿ ಎಂದು ಗೋಗರೆಯುತ್ತಾರೆ. ಒಪ್ಪುತ್ತೀರಾ?
ಇಂಪಾಸಿಬಲ್. ನಾನು  ತಮಾಷೆ ಮಾಡುವ ವ್ಯಕ್ತಿ ಮಾತ್ರವಲ್ಲ, ಒಂದಿಷ್ಟು ಕಾರ್ಟೂನು ಕೂಡ ಮಾಡುತ್ತಿರೋದ್ರಿಂದ ನನಗಾಗಲೇ ‘ಮಜಾ ಸೇವಕ’ ಎಂಬ ಹಣೆಪಟ್ಟಿ ಸಿಕ್ಕಿದೆ. ಅದರ ಮೇಲೆ ಈ ‘ಸಮಾಜ ಸೇವಕ’ ಬಿರುದು ‘ಕೊಂಡುಕೊಳ್ಳುವುದಿಲ್ಲ’ ಅಂತ ಹೇಳಿ  ಅವರನ್ನು ಸಾಗಹಾಕುತ್ತೇನೆ.

*ನಿಮ್ಮ ಮನೆಯಲ್ಲಿ ಯಾವತ್ತಾದರೂ ಇಲಿ ಹಿಡಿದಿದ್ದೀರಾ?
ಇಲ್ಲ. ಯಾಕ್ ಕೇಳಿದ್ದೀರಿ?

*ಬಿಬಿಎಂಪಿಯಲ್ಲಿ ಒಂದು ಇಲಿ ಹಿಡಿದರೆ ಹತ್ತು ಸಾವಿರ ರೂಪಾಯಿ ಕೊಡ್ತಾರಂತೆ! ನಿಮಗೆ ಇಲಿ ಹಿಡಿಯುವ ಪ್ರತಿಭೆ ಇದ್ದರೆ ಈ ನಿವೃತ್ತಿ ಜೀವನಕ್ಕೆ ದುಡ್ಡಾಗುತ್ತಲ್ಲಾಂತ ಕೇಳಿದೆ?
ಅಯ್ಯೋ, ನನಗೆ ಒಂದು ವೇಳೆ ಆ ಪ್ರತಿಭೆ ಇದ್ದಿದ್ದರೂ ಬಿಬಿಎಂಪಿ ಆಫೀಸ್‌ಗಳಲ್ಲಿನ ಇಲಿಗಳನ್ನು ಹಿಡಿಯೋಕೆ ನಿಮ್ಮಾಣೆಗೂ ಹೋಗಲ್ಲ! ಮೊದಲೇ ನಾನು ಭ್ರಷ್ಟಾಚಾರ ವಿರೋಧಿ. ಅಂತಹುದರಲ್ಲಿ ನಾನೇ ಯಾಕೆ ಆ ಕೊಳಚೆ ಪ್ರದೇಶಕ್ಕೆ ಹೋಗುತ್ತೇನೆ ಹೇಳಿ? ನನ್ನಂತಹವರಿಗೆ ಅಲ್ಲಿರುವ ‘ಮಾನವ ಸೈಜಿನ’ ಹೆಗ್ಗಣಗಳನ್ನು ಹಿಡಿಯಬೇಕೋ , ಚಿಕ್ಕಿಲಿಗಳನ್ನು ಹಿಡಿಯಬೇಕೋ ಎಂದು ಗಲಿಬಿಲಿಯಾಗಬಹುದು!

*ಮತ್ತೆ ನಿಮ್ಮ ಕೊಮರಾವಲ್ಲಿಗೆ ಬರುತ್ತೇನೆ. ತಮ್ಮನ್ನು ಕೊಮರಾವಲ್ಲಿ ಬದಲು ‘ಶ್ರೀಧರ್ ಕ್ಯಾಮರಾವಲ್ಲಿ’ ಎಂದು ಕರೆಯಬೇಕೆನಿಸುತ್ತದೆ.
ಓಹ್! ಇದಾ?! ನನ್ನ ಹೆಗಲ ಮೇಲೆ ಈ ಕ್ಯಾಮರಾ ಯಾವತ್ತೂ ಜೋತು ಬಿದ್ದಿರುತ್ತೆ . ಫೋಟೋಗ್ರಫಿ ಹುಚ್ಚು ಬೇರೆ ಇದೆ ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT