ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕರಹಿತ ‘ವ್ಯೋಮ’ ವಿಮಾನ ಅಭಿವೃದ್ಧಿ

ನಗರದ ಆರ್.ವಿ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
Last Updated 1 ಏಪ್ರಿಲ್ 2015, 20:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಆರ್.ವಿ. ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಚಾಲಕರಹಿತ ‘ವ್ಯೋಮ’ ವಿಮಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಅಮೆರಿಕನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಏರೋನಾಟಿಕ್ಸ್‌ ಅಂಡ್‌ ಅಸ್ಟ್ರೋನಾಟಿಕ್ಸ್‌ (ಎಐಎಎ) ವತಿಯಿಂದ ಅಮೆರಿಕದಲ್ಲಿ ಇದೇ 10 ಹಾಗೂ 11ರಂದು ನಡೆಯುವ ಅಂತರರಾಷ್ಟ್ರೀಯ ಮಟ್ಟದ ರೇಡಿಯೊ ನಿಯಂತ್ರಿತ ಪುಟ್ಟ ವಿಮಾನ ಸ್ಪರ್ಧೆಯಲ್ಲಿ ಕಾಲೇಜಿನ ತಂಡ ಪಾಲ್ಗೊಳ್ಳಲಿದೆ. ಸ್ಪರ್ಧೆಯಲ್ಲಿ ವಿಮಾನ ರಚನೆಯ ವಿನ್ಯಾಸ, ತೂಕ ಹೊತ್ತು ಹಾರುವ ಸಾಮರ್ಥ್ಯವನ್ನು ಆಧರಿಸಿ ಬಹುಮಾನ ನೀಡಲಾಗುತ್ತದೆ.

ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಸಾಧನೆ ಬಗ್ಗೆ ಮಾಹಿತಿ ನೀಡಿದರು. ‘ವ್ಯೋಮ’ ಯೋಜನಾ ತಂಡದಲ್ಲಿ ದ್ವಿತೀಯ ಹಾಗೂ ನಾಲ್ಕನೇ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಇದ್ದಾರೆ.

ಈ ವಿಮಾನದ ತೂಕ ಎರಡು ಕೆ.ಜಿ. ಇದು 2.2 ಕೆ.ಜಿ.ಯಷ್ಟು ಸರಕನ್ನು ಹೊತ್ತು ಸಾಗುತ್ತದೆ. ಈ ವಿಮಾನ ತಯಾರಿಗೆ ವಿದ್ಯಾರ್ಥಿಗಳು ರೂ25 ಸಾವಿರ ವೆಚ್ಚ ಮಾಡಿದ್ದಾರೆ. ಟ್ರಾನ್ಸ್‌ಮೀಟರ್‌ ನೆರವಿನಿಂದ ವಿಮಾನಕ್ಕೆ ಸಂಚಾರ ಮಾರ್ಗದರ್ಶನ ನೀಡಲಾಗುತ್ತದೆ. 15 ಅಡಿ ಉದ್ದದ ರನ್‌ವೇಯಂತಹ ಖಾಲಿ ಜಾಗ ಇದ್ದರೆ ವಿಮಾನ ಸರಾಗವಾಗಿ ಎತ್ತರಕ್ಕೆ ಜಿಗಿಯುತ್ತದೆ. ಪ್ರಸ್ತುತ 300 ಅಡಿ ಎತ್ತರದ ವರೆಗೆ ಸಾಗುವ ಸಾಮರ್ಥ್ಯ ಹೊಂದಿದೆ.

ಯೋಜನಾ ತಂಡ: ವಿದ್ಯಾರ್ಥಿಗಳಾದ ವೈಭವ್‌ ಶ್ರೀನಿವಾಸ್‌, ಸಾಕೇತ್‌ ಶ್ರೀಧರ್‌, ಅಶೀಷ್‌ ರಾವ್‌, ಆದರ್ಶ್‌ ಪಿ.ಆರ್‌, ಗಣೇಶ್‌ ಅಗಿಲೆ, ಅನಿರುದ್ಧ್‌ ಸರಾಫ್‌, ಅವಿನಾಶ್‌ ಕಿಣಿ, ಶಿಶಿರ್‌ ಪಾಟೀಲ್‌, ಭಗತ್‌ಸಿಂಗ್‌ ಎ.ಬಿ, ಚೇತನ್‌ ವೈದ್ಯ, ರಾಜ್‌ ವಿ.ಜೈನ್‌ ತಂಡದ ಸದಸ್ಯರು.

ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾದ ಡಾ.ಆರ್.ಎಸ್‌.ಕುಲಕರ್ಣಿ, ಪ್ರೊ.ಎಂ.ಎಸ್‌.ಕೃಪಾಶಂಕರ್‌, ಡಾ.ಕೆ. ರಾಮಚಂದ್ರ ಮಾರ್ಗದರ್ಶನ ನೀಡಿದ್ದಾರೆ.

ಪುಟ್ಟ ವಿಮಾನದ ಉಪಯೋಗ ಏನು?
‘ಶತ್ರು ಪ್ರದೇಶದಲ್ಲಿ ಸೇನಾ ಕಾರ್ಯಾಚರಣೆ, ಪ್ರಕೃತಿ ವಿಕೋಪ ಸ್ಥಳಗಳಲ್ಲಿ ಪರಿಹಾರ ಕಾರ್ಯ ಮೊದಲಾದ ಉದ್ದೇಶಗಳಿಗಾಗಿ ಚಾಲಕ ರಹಿತ ವಿಮಾನಗಳನ್ನು ಬಳಸಲಾಗುತ್ತದೆ. ಕೀಟನಾಶಕ ಸಿಂಪರಣೆಯಂತಹ ಕೃಷಿ ಚಟುವಟಿಕೆಗಳು ಹಾಗೂ ಸಂಚಾರ ದಟ್ಟಣೆಯ ಸ್ಥಿತಿಗತಿಯ ಕ್ಷಣ ಕ್ಷಣದ ಮಾಹಿತಿ ನೀಡುವ ಕಾರ್ಯಕ್ಕೂ ಈ ಚಾಲಕ ರಹಿತ ವಿಮಾನ ಬಳಸಿಕೊಳ್ಳಬಹುದಾಗಿದೆ. ಈ ಕಾರಣದಿಂದ ಚಾಲಕ ರಹಿತ ಪುಟ್ಟ ವಿಮಾನಗಳ ಸಂಶೋಧನೆಯನ್ನು ಪ್ರೋತ್ಸಾಹಿಸಲು ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಪ್ರಶಸ್ತಿ ಜಯಿಸುವ ವಿಶ್ವಾಸ ಇದೆ’ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡುತ್ತಾರೆ.

‘ಏಳು ವರ್ಷಗಳಿಂದ ಹಂತ ಹಂತವಾಗಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.  ದಾನಿಗಳಿಂದ ಉತ್ತಮ ನೆರವು ಸಿಕ್ಕರೆ ಹತ್ತಾರು ಕೆ.ಜಿ. ಸರಕನ್ನು ಹೊತ್ತು ಸಾಗುವ ವಿಮಾನ ತಯಾರಿಸಲು ಸಿದ್ಧ’ ಎಂದು ಅವರು ಆತ್ಮವಿಶ್ವಾಸದಿಂದ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT