ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕಿಯರಿಂದ ಪರಿಹಾರ?

ಟ್ಯಾಕ್ಸಿ ಸೇವೆ ಆತಂಕ ತರವೇ?
Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಟ್ಯಾಕ್ಸಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಸುದೀರ್ಘ ಚರ್ಚೆ– ಸಂವಾದಗಳು ನಡೆಯು­ತ್ತಿರುವ ಬೆನ್ನಲ್ಲೇ, ಈ ಸಮಸ್ಯೆಗೆ ‘ಮಹಿಳಾ ಚಾಲಕರು’ ಪರಿಹಾರ ಆಗಬಲ್ಲರೇ  ಎನ್ನುವ ಮಾತು ಕೇಳಿಬರುತ್ತಿದೆ. ಟ್ಯಾಕ್ಸಿ ಕಂಪೆನಿಗಳು ಹೆಚ್ಚು ಹೆಚ್ಚು ಚಾಲಕಿಯರನ್ನು ನೇಮಿಸಿಕೊಳ್ಳುವ ಮೂಲಕ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಲು ಸಾಧ್ಯ ಎನ್ನುವುದು ಅನೇಕರ ವಾದ.


‘ಮಹಿಳಾ ಸಿಬ್ಬಂದಿ ನೇಮಕದಿಂದ ಅತ್ಯಾಚಾರಕ್ಕೆ ಕಡಿ­ವಾಣ ಹಾಕ­ಬ­ಹುದು. ಅದಕ್ಕಾಗಿ ಮಹಿಳೆಯರಿಗೆ ಸೂಕ್ತ ತರಬೇತಿ, ಪ್ರೋತ್ಸಾಹ, ಸೌಲಭ್ಯಗಳ ಅಗತ್ಯ­ವಿದೆ. ಚಾಲಕಿಯರು ಗ್ರಾಹಕರನ್ನು ಸುರಕ್ಷಿತ­ವಾಗಿ ಮನೆಗೆ ತಲುಪಿಸು­ವುದರ ಜೊತೆಗೆ ತಾವೂ ಅಷ್ಟೇ ಸುರಕ್ಷಿತವಾಗಿ ಮನೆ ಸೇರುವಂತೆ ಆಗಬೇಕು’ ಎನ್ನು­ತ್ತಾರೆ ಬೆಂಗಳೂರಿನ ಜನೋದಯ ಸಂಘಟನೆ ಅಧ್ಯಕ್ಷೆ ಸಂತೋಷಾ ವಾಸ್.

ಈ ಹಿನ್ನೆಲೆಯಲ್ಲಿ ಸಂಘಟನೆಯು ಆಸಕ್ತ ಮಹಿಳೆಯರಿಗೆ ಚಾಲನಾ ತರಬೇತಿ, ವೈಯಕ್ತಿಕ ಸುರಕ್ಷತೆ ಸೇರಿ­ದಂತೆ ವಿವಿಧ ಹಂತಗಳಲ್ಲಿ ತರಬೇತಿ ನೀಡುತ್ತಿದೆ. ಮುಖ್ಯವಾಹಿನಿ­ಯಿಂದ ದೂರ ಉಳಿದಿರುವ ಲೈಂಗಿಕ ಕಾರ್ಯ­ಕರ್ತೆ­ಯರು, ಹಿಜಡಾಗಳನ್ನೂ ಈ ಗುಂಪಿಗೆ ಸೇರಿಸುವ ಪ್ರಯತ್ನ ನಡೆದಿದೆ.

‘ರಾತ್ರಿ ಪಾಳಿಯಲ್ಲಿ ದುಡಿಯುವ ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟು ಲೈಂಗಿಕ ಅಲ್ಪಸಂಖ್ಯಾತರಿಗೆ ತರಬೇತಿ ನೀಡುವ ನಿಮಿತ್ತ ‘ಸಂಗಮ’ ಸಂಸ್ಥೆಯೊಂದಿಗೆ ಚರ್ಚಿಸಲಾಗಿದೆ’ ಎನ್ನುತ್ತಾರೆ ಸಂತೋಷಾ.

‘ಯಾವುದೇ ಅಹಿತಕರ ಘಟನೆ ನಡೆಯಲು ಮನುಷ್ಯನ ವ್ಯಗ್ರ ಆಲೋಚನೆಗಳು ಕಾರಣವಾಗಿರುತ್ತವೆ. ಆದ್ದರಿಂದ ಚಾಲಕರಿಗೆ ವ್ಯಕ್ತಿತ್ವ ವಿಕಸನ­ದಂತಹ ಪರಿವರ್ತನಾ ಕಾರ್ಯಾಗಾರಗಳು, ಶಿಬಿರಗಳು ನಡೆಯಬೇಕು. ಹೆಚ್ಚು ಹೆಚ್ಚು ಜನರಿಗೆ ತರಬೇತಿ ಹಾಗೂ ಅಗತ್ಯ ಪ್ರೋತ್ಸಾಹ ನೀಡಿ ಚಾಲಕಿ­ಯ­ರನ್ನು ಸಬಲಗೊಳಿಸಬೇಕು’ ಎನ್ನುವುದು ಸುಮಾರು 12 ವರ್ಷಗಳಿಂದ ಬೆಂಗಳೂರಿನಲ್ಲಿ ಟ್ಯಾಕ್ಸಿ ಚಾಲಕಿಯಾಗಿರುವ ವಿ.ಭಾರತಿ ಅವರ ಅಭಿಪ್ರಾಯ.

‘ಮಾಲೀಕರಿಂದ, ಸಹ ಕೆಲಸಗಾರರಿಂದ ಚಾಲಕಿಯರಿಗೇ ಸಾಕಷ್ಟು ಕಿರುಕುಳವಿದೆ. ಅದನ್ನೆಲ್ಲ ಸರಿಪಡಿಸಿದರೆ ಹೆಚ್ಚು ಮಹಿಳೆಯರು ಇತ್ತ ಮುಖ ಮಾಡುತ್ತಾರೆ. ಅವರಿಗೂ ಭದ್ರತೆ ಸಿಗುತ್ತದೆ, ಗ್ರಾಹಕರಿಗೂ ನೆಮ್ಮದಿಯ ಪ್ರಯಾಣ ಲಭ್ಯವಾಗುತ್ತದೆ’ ಎನ್ನುತ್ತಾರೆ ಎಂಟು ವರ್ಷಗಳಿಂದ ಟ್ಯಾಕ್ಸಿ ಚಾಲಕಿಯಾಗಿರುವ ಮಂಜುಳಾ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT