ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕನ್‌ ಖಾದ್ಯಗಳ ಸಂತುಷ್ಟಿ

ರಸಾಸ್ವಾದ
Last Updated 19 ಅಕ್ಟೋಬರ್ 2015, 19:56 IST
ಅಕ್ಷರ ಗಾತ್ರ

ಬಾಣಸಿಗರ ಒಂದು ಸಣ್ಣ ಸ್ಪರ್ಶ ಕೂಡ ಖಾದ್ಯಗಳ ರುಚಿಯಲ್ಲಿ ದೊಡ್ಡ ಬದಲಾವಣೆಯನ್ನೇ ತರುತ್ತದೆ. ಇದೇ ನಂಬಿಕೆಯೊಂದಿಗೆ ವಿಶ್ವ ಆಹಾರೋದ್ಯಮಕ್ಕೆ ಕಾಲಿರಿಸಿರುವ ‘ನಂಡೋಸ್‌’ ರೆಸ್ಟೋರೆಂಟ್‌ ರುಚಿರುಚಿಯಾದ ಆಫ್ರೋ–ಪೋರ್ಚುಗೀಸ್‌ ಖಾದ್ಯಗಳಿಗೆ ಪ್ರಸಿದ್ಧಿ ಪಡೆದಿದೆ. ನಂಡೋಸ್ ಸಿಗ್ನೇಚರ್‌ ತಿನಿಸು ಪೆರಿಪೆರಿ ಚಿಕನ್‌. ಇಲ್ಲಿ ಚಿಕನ್‌ ಬಿಟ್ಟು ಮತ್ತಿನ್ಯಾವುದೇ ಮಾಂಸದ ಖಾದ್ಯಗಳು ಸಿಗುವುದಿಲ್ಲ. ಹಾಗೆಯೇ, ಇಲ್ಲಿ ಗ್ರಿಲ್ಡ್‌ ಚಿಕನ್‌ ಸಿಗುತ್ತದೆಯೇ ಹೊರತು, ಫ್ರೈ ಚಿಕನ್‌ ಸಿಗುವುದಿಲ್ಲ. ಇವೆಲ್ಲವೂ ನಂಡೋಸ್‌ನ ಅನನ್ಯ ಲಕ್ಷಣಗಳು.

ನಂಡೋಸ್‌ ರೆಸ್ಟೋರೆಂಟ್‌ನ ಒಳಹೊಕ್ಕರೆ ಪೋರ್ಚುಗೀಸ್‌ ಪ್ರವೇಶಿಸಿದಷ್ಟೇ ಫೀಲ್‌ ಆಗುತ್ತದೆ. ಇಡೀ ರೆಸ್ಟೋರೆಂಟ್‌ ಅನ್ನು ಪೋರ್ಚುಗೀಸ್‌ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ‘ಒನ್‌ ಬ್ರಾಂಡ್‌, ಒನ್‌ ವರ್ಲ್ಡ್‌, ಒನ್‌ ನಂಡೋಸ್‌’ ಈ ಪರಿಕಲ್ಪನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ರೆಸ್ಟೋರೆಂಟ್‌ ವಿಶ್ವದೆಲ್ಲೆಡೆ ಇರುವ ತನ್ನೆಲ್ಲಾ ಔಟ್‌ಲೆಟ್‌ಗಳ ಒಳಾಂಗಣವನ್ನು ಒಂದೇ ರೀತಿಯಲ್ಲಿ ವಿನ್ಯಾಸಗೊಳಿಸಿದೆ. ವಿನ್ಯಾಸವಷ್ಟೇ ಅಲ್ಲದೆ  ಮೆನು, ಸೇವೆ, ರುಚಿ ಎಲ್ಲದರಲ್ಲೂ ಏಕರೂಪತೆ ಕಾಯ್ದುಕೊಂಡಿದೆ. 1200 ರೆಸ್ಟೋರೆಂಟ್‌ಗಳಲ್ಲೂ ಒಂದೇ ಬಗೆಯ ಸಂಗೀತ (ಆಫ್ರೋವ್ಯೂಸೋ ಟ್ಯೂನ್‌) ಕೇಳಿಸುತ್ತದೆ.

1987ರಲ್ಲಿ ಶುರುವಾದ ನಂಡೋಸ್‌ ದಕ್ಷಿಣ ಆಫ್ರಿಕಾದ ಬ್ರಾಂಡ್‌. ಫರ್ನಾಂಡೊ ಡುವಾರ್ಟೆ ಮತ್ತು ರಾಬರ್ಟ್‌ ಬ್ರೌಸನ್‌ ಎಂಬ ಇಬ್ಬರು ಗೆಳೆಯರು ಸೇರಿ ಇದನ್ನು ಶುರುಮಾಡಿದರು. ರಾಬರ್ಟ್ ಒಮ್ಮೆ ದಕ್ಷಿಣ ಆಫ್ರಿಕಾದ ರೆಸ್ಟೋರೆಂಟ್‌ನಲ್ಲಿ ಚಿಕನ್‌ ಅನ್ನು ಪೆರಿಫೆರಿ ಸಾಸ್‌ ಜೊತೆಗೆ ತಿಂದು ತುಂಬ ಸಂತುಷ್ಟರಾದರು. ತನ್ನ ಗೆಳೆಯನಿಗೂ ಆ ರುಚಿ ತೋರಿಸಿದರು. ಇಬ್ಬರಿಗೂ ಪೆರಿಪೆರಿ ಚಿಕನ್‌ ತುಂಬ ಇಷ್ಟವಾದದ್ದರಿಂದ ಅದನ್ನು ಇಡೀ ಜಗತ್ತಿಗೆ ಪರಿಚಯಿಸಲು ನಂಡೋಸ್‌ ರೆಸ್ಟೋರೆಂಟ್‌ ತೆರೆದರು. ನಂಡೋಸ್‌ ಈಗ 26 ದೇಶಗಳಲ್ಲಿ ಒಟ್ಟು 1200 ರೆಸ್ಟೋರೆಂಟ್‌ಗಳನ್ನು ಹೊಂದಿದೆ. 

‘ಆಫ್ರೋ–ಪೋರ್ಚುಗೀಸ್‌ ಕ್ವಿಸಿನ್‌ ಬಡಿಸುವ ನಂಡೋಸ್‌ನ ತಿನಿಸುಗಳು ಭಾರತೀಯ ಖಾದ್ಯಗಳಿಗೆ ತುಂಬ ಹತ್ತಿರವಾದಂತಹವು. ಇಲ್ಲಿನವರು ಬಳಸುವ ರೆಡ್‌ಚಿಲ್ಲಿ, ಬೆಳ್ಳುಳ್ಳಿ, ನಿಂಬೆ ಮೊದಲಾದವುಗಳನ್ನು ಪೋರ್ಚುಗೀಸ್‌ ಅಡುಗೆಯಲ್ಲೂ ಕಾಣಬಹುದು. ನಂಡೋಸ್‌ ಮೆನು ಟೇಸ್ಟ್‌ ಮಾಡಿದವರಿಗೆ ಹೆಚ್ಚುಕಡಿಮೆ ಭಾರತೀಯ ಮೆನು ಟಚ್‌ ಮಾಡಿದ ಅನುಭವವೇ ಸಿಗುತ್ತದೆ. ಆದರೆ, ಇಲ್ಲಿ ನಾವು ಬಳಸಿಕೊಳ್ಳುವ ಖಾರದ ಪ್ರಮಾಣದ ಏರಿಳಿತದಿಂದ ತುಸು ಭಿನ್ನ ಎನಿಸಿಕೊಳ್ಳುತ್ತದೆ.

ನಂದೋಸ್‌ ವಿಶ್ವಪ್ರಸಿದ್ಧಿಯಾಗಿರುವುದು ಪೆರಿಫೆರಿ ಚಿಕನ್‌ನಿಂದ. ತಾಜಾ ಚಿಕನ್‌ ಅನ್ನು 24 ಗಂಟೆ ಕಾಲ ನೆನೆಸಿಡುತ್ತೇವೆ. ಈ ವೇಳೆ ಅದಕ್ಕೆ ಯಾವುದೇ ಬಗೆಯ ಬಣ್ಣವನ್ನಾಗಲೀ, ಸಂರಕ್ಷಕಗಳನ್ನಾಗಲೀ ಮಿಶ್ರಣ ಮಾಡುವುದಿಲ್ಲ. 24 ಗಂಟೆ ಆದ ನಂತರ ಅದನ್ನು ತೆಗೆದು ಬೇಯಿಸುವ ಮುನ್ನ ಚಿಕನ್‌ನಲ್ಲಿರುವ ಛರ್ಬಿಯನ್ನು ಟ್ರಿಮ್‌ ಮಾಡುತ್ತೇವೆ. ಆಮೇಲೆ ಆ ಚಿಕನ್‌ ಗ್ರಿಲ್‌ ಮಾಡಿದಾಗ ಅದರಲ್ಲಿ ಉಳಿದುಕೊಂಡಿರುವ ಅಲ್ಪಸ್ವಲ್ಪ ಕೊಬ್ಬಿನಂಶವೂ ಕರಗಿಹೋಗುತ್ತದೆ. ಹಾಗಾಗಿ, ನಮ್ಮ ತಿನಿಸುಗಳೆಲ್ಲವೂ ಆರೋಗ್ಯಪೂರ್ಣವಾಗಿವೆ.

ಇಲ್ಲಿ ನೀವು ಯಾವುದೇ ಖಾದ್ಯವನ್ನು ಆಯ್ಕೆ ಮಾಡಿಕೊಂಡರೂ ಅದರ ಖಾರದ ಮಟ್ಟವನ್ನು ನೀವೆ ನಿರ್ಧರಿಸುವ ಅವಕಾಶವಿದೆ. ಆ ಖಾದ್ಯಕ್ಕೆ ಹೊಂದುವಂತಹ ಸೈಡ್ಸ್‌, ಸಲಾಡ್‌, ಡ್ರಿಂಕ್‌ ಅನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ಎಸ್ಪಿಟಿಡಾ ಖಾದ್ಯ ರುಚಿಯ ಜೊತೆಗೆ ನೋಡಲು ತುಂಬ ಸೊಗಸಾಗಿದೆ. ಒಬ್ಬರ ಟೇಬಲ್‌ ಮೇಲೆ ಈ ಖಾದ್ಯ ಬಂದು ಕುಳಿತರೆ ಅದು ಅನೇಕರ ಕಣ್ಣು ಕುಕ್ಕುತ್ತದೆ. ಅವರೂ ಆರ್ಡರ್‌ ಮಾಡುವಂತೆ ಪ್ರಚೋದಿಸುತ್ತದೆ. ಈ ರೆಸ್ಟೋರೆಂಟ್‌ನಲ್ಲಿ ಬಳಸುವ ಸಾಸ್‌ಗಳೆಲ್ಲವೂ ದಕ್ಷಿಣ ಆಫ್ರಿಕಾದಿಂದಲೇ ಬರುತ್ತವೆ.
ದಕ್ಷಿಣ ಆಫ್ರಿಕಾದ ಬಡ ಕಲಾವಿದನ್ನು ಪ್ರೋತ್ಸಾಹಿಸುವ ಸಲುವಾಗಿ ಅವರ ಕಲಾಕೃತಿಗಳನ್ನು ಕೊಂಡು ನಾವು ಎಲ್ಲ ರೆಸ್ಟೋರೆಂಟ್‌ಗಳಲ್ಲಿ ಪ್ರದರ್ಶಿಸುತ್ತಿದ್ದೇವೆ.

ನಂಡೋಸ್‌ ಅಂದರೆ ಬರೀ ಚಿಕನ್‌ ಎಂಬ ಭಾವನೆ ಅನೇಕರಲ್ಲಿ ಇದೆ. ಆದರೆ, ನಾವು ಸಸ್ಯಾಹಾರಿಗಳಿಗೆಂದೇ ಒಂದು ವಿಶೇಷ ಮೆನು ಕೂಡ ಸಿದ್ಧಪಡಿಸಿದ್ದೇವೆ. ಸಸ್ಯಾಹಾರಿಗಳಿಗೆ ಇಷ್ಟವಾಗುವ ಕಾಂಬೊಗಳು ಈ ಮೆನುವಿನಲ್ಲಿವೆ. ಸಿಹಿ ಹೆಚ್ಚಿರುವ ತಿನಿಸುಗಳ ಕಿಡ್ಸ್‌ ಮೆನು ಕೂಡ ಇದೆ. ಬರ್ಗರ್‌, ಪೀಟಾ ಮತ್ತು ವ್ರಾಪ್‌ಗಳ ವಿಶಾಲ ಆಯ್ಕೆಯನ್ನು ನಂದೋಸ್ ಒದಗಿಸಿದೆ’ ಎನ್ನುತ್ತಾರೆ ನಂಡೋಸ್‌ನ ಮಾರುಕಟ್ಟೆ ವ್ಯವಸ್ಥಾಪಕಿ ಶಾಂಭವಿ ಮಿಶ್ರಾ. 
***
ರೆಸ್ಟೋರೆಂಟ್‌: ನಂಡೋಸ್‌
ಶೈಲಿ:
ಆಫ್ರೋ–ಪೋರ್ಚುಗೀಸ್‌ (ಚಿಕನ್‌ ಖಾದ್ಯಗಳು ಮಾತ್ರ ದೊರೆಯುತ್ತವೆ)

ಸಿಗ್ನೇಚರ್‌ ಖಾದ್ಯಗಳು: ಪೆರಿಫೆರಿ ಚಿಕನ್‌, ಎಸ್ಪಿಟಿಡಾ

ಬಾರ್‌: ಇದೆ

ಸ್ಥಳ: ನಂಡೋಸ್‌, ಜಿ 9, ಅಸೆಂಡಾಸ್‌ ಪಾರ್ಕ್‌ ಸ್ಕ್ವೇರ್‌ ಮಾಲ್‌, ಐಟಿಪಿಎಲ್‌, ವೈಟ್‌ಫೀಲ್ಡ್‌ ರಸ್ತೆ.

ಇಬ್ಬರಿಗೆ ತಗಲುವ ವೆಚ್ಚ: ₹1200

ಟೇಬಲ್‌ ಕಾಯ್ದಿರಿಸಲು: 080-2802 6668

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT