ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕನಾಯಕನಹಳ್ಳಿಯಲ್ಲಿ ಗಲಭೆ

Last Updated 4 ಅಕ್ಟೋಬರ್ 2015, 19:45 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ಬಲಿಜ ಜನಾಂಗದಿಂದ ಭಾನುವಾರ ಯೋಗಿನಾರೇಯಣ ಜಯಂತ್ಯುತ್ಸವ ಮೆರವಣಿಗೆ ನಡೆಯುತ್ತಿದ್ದ ವೇಳೆ ರಾಜ ಬೀದಿ ಪ್ರವೇಶದ ವಿಚಾರವಾಗಿ ಎರಡು ಜನಾಂಗದ ಮಧ್ಯೆ ಆರಂಭವಾದ ಜಗಳ ಗಲಭೆಗೆ ತಿರುಗಿ, 6 ಮಂದಿಗೆ ಗಾಯವಾಗಿ, ಪಟ್ಟಣದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ.

ಪಟ್ಟಣದ ರಾಮಮಂದಿರದಲ್ಲಿ ಆಯೋಜಿಸಿದ್ದ ಯೋಗಿನಾರೇಯಣ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಮುನ್ನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಸಾಗುತ್ತಿತ್ತು. ಖಾಸಗಿ ಬಸ್‌ ನಿಲ್ದಾಣ ದಾಟಿ ಹೊಸಬಾಗಿಲ ಬಳಿ ಮೆರವಣಿಗೆ ಬಂದಾಗ, ಹಳೆ ಅಂಚೆ ಕಚೇರಿ ರಸ್ತೆಯಲ್ಲಿ ಮೆರವಣಿಗೆ ಬರಲು ಬಿಡುವುದಿಲ್ಲ ಎಂದು ಅಪಾರ ಸಂಖ್ಯೆಯಲ್ಲಿದ್ದ ಕುರುಬ ಸಮಾಜದವರು ತಡೆದರು. ಈ ಬೀದಿಯಲ್ಲಿ ಮೆರವಣಿಗೆ ಹೋಗಲು ಬಲಿಜರಿಗೆ ಅಪ್ಪಣೆ ಇಲ್ಲ. ನೇರವಾಗಿ ಬ್ರಾಹ್ಮಣರ ಬೀದಿಯಲ್ಲಿ ಸಾಗಲಿ ಎಂದು ಪಟ್ಟು ಹಿಡಿದರು. ಎರಡೂ ಸಮಾಜದ ಮುಖಂಡರ ನಡುವೆ ಮಾತಿಗೆ ಮಾತು ಬೆಳೆಯಿತು.

ಬಲಿಜ ಮುಖಂಡರ ಧರಣಿ: ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಬಲಿಜ ಮುಖಂಡರು, ಧರಣಿ ಕುಳಿತರು. ಶಾಸಕ ಸಿ.ಬಿ.ಸುರೇಶ್‌ಬಾಬು ಹಾಗೂ ಜೆಡಿಎಸ್ ರಾಷ್ಟ್ರೀಯ ವಕ್ತಾರ ರಮೇಶ್‌ಬಾಬು ಎರಡೂ ಗುಂಪುಗಳ ಮನವೊಲಿಸಲು ಸತತ ಎರಡು ಗಂಟೆ ಪ್ರಯತ್ನಿಸಿ, ವಿಫಲರಾದರು. ಎರಡೂ ಗುಂಪುಗಳು ಪರಸ್ಪರ ಘೋಷಣೆ ಕೂಗಿದವು. ಆ ನಂತರ ಎರಡೂ ಗುಂಪುಗಳು ನಡುವೆ ತಳ್ಳಾಟ ನಡೆಯಿತು.
 
ಗಾಳಿಯಲ್ಲಿ ತೂರಿಬಂದ ಕಲ್ಲೊಂದು ಶಾಸಕ ಸಿ.ಬಿ.ಸುರೇಶ್‌ ಬಾಬು ಅವರ ಬಲಕೆನ್ನೆಯನ್ನು ಸವರಿ ಹೋಯಿತು. ಪೊಲೀಸ್ ಕಾನ್‌ಸ್ಟೆಬಲ್‌ ಒಬ್ಬರ ತಲೆಗೆ ಕಲ್ಲೇಟು ಬಿತ್ತು. ಕುರುಬ ಸಮಾಜದ ಯುವಕರು ಹಳೆ ಅಂಚೆ ಕಚೇರಿ ರಸ್ತೆ ಉದ್ದಕ್ಕೂ ಕಲ್ಲು ಚಪ್ಪಡಿ ಎಳೆದು, ಟೈರ್‌ಗೆ ಬೆಂಕಿ ಹೊತ್ತಿಸಿ ಆಕ್ರೋಶ ವ್ಯಕ್ತಪಡಿಸಿದರು. ಗಲಭೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಮೆರವಣಿಗೆಯನ್ನು ಹಿಂದಕ್ಕೆ ಕಳಿಸಲಾಯಿತು. ಬಲಿಜ ಸಮುದಾಯದವರು ಯೋಗಿನಾರೇಯಣ ಮಂಟಪ ಇದ್ದ ಟ್ರ್ಯಾಕ್ಟರ್ ಸಮೇತ ಬಿ.ಎಚ್.ರಸ್ತೆಯಲ್ಲಿ ಧರಣಿ ನಡೆಸಿದರು. ಮುಖಂಡ ರಮೇಶ್‌ ಬಾಬು ಮನವಿ ಮೇರೆಗೆ ಧರಣಿ ಕೈ ಬಿಟ್ಟು ಮೂರ್ತಿ ತೆಗೆದುಕೊಂಡು ಹೋದರು. ಘಟನೆ ಸಂಬಂಧ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT