ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಪೇಟೆ ಚಿಕ್ಕ ನಿವೇಶನದ ದೊಡ್ಡ ಮನೆ

Last Updated 10 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶವಾದ ಅದು ಅಕ್ಷರಶಃ ಕಿಷ್ಕಿಂದೆಯೇ. ಕಿರಿದಾದ ರಸ್ತೆಗಳು, ವಾಹನ ದಟ್ಟಣೆ ಬೇರೆ. ಇನ್ನೊಂದೆಡೆ ಗಲ್ಲಿಗಳಂತಹ ರಸ್ತೆಯಲ್ಲಿ ಚಿಕ್ಕ ನಿವೇಶನಗಳಲ್ಲಿ ಒಂದಕ್ಕೊಂದು ಅಂಟಿಕೊಂಡಂತಹ ಕಟ್ಟಡಗಳು. ಇದೇ ಪ್ರದೇಶದಲ್ಲಿ ವಾಸವಿರುವ, ಚಿನ್ನಾಭರಣ ವರ್ತಕ ಲಕ್ಷ್ಮಣ್‌ ಅವರು ಅತಿ ಚಿಕ್ಕ ನಿವೇಶನದ ನಕ್ಷೆಯೊಂದಿಗೆ ಕಚೇರಿಗೆ ಬಂದರು.

ಕೇವಲ 23 ಅಡಿ ಅಗಲ, 25 ಅಡಿ ಉದ್ದದ ನಿವೇಶನದಲ್ಲಿ ತಮ್ಮ ಕುಟುಂಬಕ್ಕೆ ಅನುಕೂಲಕಾರಿಯಾದ, ಎಲ್ಲ ಸೌಲಭ್ಯಗಳನ್ನೂ ಒಳಗೊಂಡ ಮನೆ ನಿರ್ಮಿಸಿಕೊಳ್ಳಲು ಒಂದು ಅಚ್ಚು ಕಟ್ಟಾದ ಪ್ಲಾನ್ ರಚಿಸಿಕೊಡಿ ಎಂಬುದು ಅವರ ಬೇಡಿಕೆ. ಆ ನಕ್ಷೆ ನೋಡಿ ಪ್ಲಾನ್ ಮಾಡುವುದಕ್ಕಿಂತ ಒಮ್ಮೆ ನಿವೇಶನ ವನ್ನು ನೋಡುವುದೇ ಉತ್ತಮ ಎನಿಸಿತು. ಕೋಟಿಗಟ್ಟಲೆ ವಹಿವಾಟು ನಡೆಸುವ ಆ ಚಿಕ್ಕಪೇಟೆ, ಬಳೇಪೇಟೆ, ಕಾಟನ್ ಪೇಟೆ ಎಂಬ ಆ ಪ್ರದೇಶ ದೊಳಕ್ಕೆ ಪ್ರವೇಶಿಸುವುದು ಅಷ್ಟು ಸುಲಭವಲ್ಲ.

ರಸ್ತೆಗೇ ಚಾಚಿಕೊಂಡಿರುವ ಕಟ್ಟಡಗಳು, ವಾಣಿಜ್ಯ ಮಳಿಗೆಗಳು, ಪಾದಚಾರಿ ಮಾರ್ಗವೇ ಇರದ ರಸ್ತೆ. ಬಹಳ ಕಷ್ಟಪಟ್ಟು ಲಕ್ಷ್ಮಣ್‌ ಅವರ ಮನೆಯನ್ನು ಹುಡುಕಿದ್ದಾಯಿತು. ಮೊದಲಿಗೆ ಅಂದು ಕೊಂಡಿದ್ದಂತೆ ಆ ನಿವೇಶನವೇನೂ ರಸ್ತೆಗೆ ಮುಖ ಮಾಡಿರಲಿಲ್ಲ. 23X25 ಅಡಿಗಳ ಆ ಪುಟ್ಟ ನಿವೇಶನ ಬಹುತೇಕ ನಾಲ್ಕೂ ದಿಕ್ಕುಗಳಿಂದಲೂ ಸುತ್ತುವರಿದಿತ್ತು. ನಿವೇಶನಕ್ಕೆ ತಲುಪಲು ಮಧ್ಯದಲ್ಲಿ ಬಿಟ್ಟಿದ್ದ ಮೂರೂವರೆ ಅಡಿ ಜಾಗವೇ ಆ ಕಟ್ಟಡಗಳ ಗಾಳಿ ಬೆಳಕಿನ ಪ್ರವೇಶ ದ್ವಾರವಾಗಿತ್ತು.

ನಿವೇಶನದ ಸುತ್ತಲೂ ಇದ್ದ, ಮೂರ್ನಾಲ್ಕು ಮಹಡಿ ಎತ್ತರಕ್ಕೆ ಚಾಚಿಕೊಂಡಿದ್ದ ಕಟ್ಟಡಗಳನ್ನು ನೋಡಿದ ನಂತರ ಅನಿಸಿದ್ದೇ ನೆಂದರೆ; ಇಲ್ಲಿ ಒಂದು ಕುಟುಂಬಕ್ಕೆ ಬೇಕಾದ ಅಚ್ಚುಕಟ್ಟಾದ ಮನೆಗೆ ನೀಲನಕ್ಷೆ ರಚಿಸುವುದು ನಿಜಕ್ಕೂ ಸವಾಲಿನ ಕೆಲಸ. ಹಾಗೆಂದು ಅದೇ ಮಾತನ್ನು ಹೇಳಿ ಲಕ್ಷ್ಮಣ ಅವರ ಕುಟುಂಬದ ಸದಸ್ಯರನ್ನು ನಿರಾಶೆಗೊಳಿಸಲೂ ಮನಸ್ಸು ಒಪ್ಪಲಿಲ್ಲ.

ಲಕ್ಷ್ಮಣ್ ಅವರು ಆ ಪುಟ್ಟ ನಿವೇಶನ ಮಾರಲು ಇಚ್ಛಿಸಿದ್ದರೆ ಭಾರಿ ಬೆಲೆಗೆ ಮಾರಾಟವಾಗುತ್ತಿತ್ತು. ಆ ದುಡ್ಡಿನಲ್ಲಿ ಹೊಸ ಬಡಾ ವಣೆಗಳಲ್ಲಿ ದೊಡ್ಡ ನಿವೇಶನ ಖರೀದಿಸಿ ಬಂಗಲೆಯನ್ನೇ ಕಟ್ಟಿಸ ಬಹುದಿತ್ತು. ಆದರೆ, ಲಕ್ಷ್ಮಣ್ ಅವರಿಗೆ ಆ ಪುಟ್ಟ ನಿವೇಶನವನ್ನು ಮಾರುವುದು ಸುತಾರಾಂ ಇಷ್ಟವಿರ ಲಿಲ್ಲ. ಏಕೆಂದರೆ ಅದು ಪಿತ್ರಾರ್ಜಿತ ವಾಗಿ ಬಂದ ಆಸ್ತಿ. ಅವರ ಅಪ್ಪ, ಅಜ್ಜ ಎಲ್ಲರೂ ಅಲ್ಲಿ ಬಾಳಿದವರು. ಅಲ್ಲದೇ, ಆ ನಿವೇಶನದ ಎಡಬಲದಲ್ಲಿದ್ದ ಮನೆಗಳಲ್ಲಿ ಲಕ್ಷ್ಮಣ್ ಅವರ ಹಿರಿಯ ಸೋದರರ ಕುಟುಂಬಗಳು ವಾಸವಿದ್ದವು. ಹಾಗಾಗಿ ಅವರೂ ಅಲ್ಲೇ ಮನೆ ಕಟ್ಟಿಕೊಂಡು ಬಾಳಲು ಇಚ್ಛಿಸುತ್ತಿದ್ದರು.

ವಾಸ್ತವವಾಗಿ ಲಕ್ಷ್ಮಣ್ ಅವರ ತಂದೆಯ ಕಾಲದಲ್ಲಿ ಆ ನಿವೇಶನ 85 ಅಡಿ ಅಗಲ ಮತ್ತು 100 ಅಡಿ ಉದ್ದವಿತ್ತು. ಆರು ಸೋದರರ ನಡುವೆ ಹಂಚಿಕೆಯಾದಾಗ ಲಕ್ಷ್ಮಣ್‌ಗೆ 23X25 ಅಡಿ ಸಿಕ್ಕಿತು. ಆ ಕುಟುಂಬದಲ್ಲಿರುವುದು ಪತಿ, ಪತ್ನಿ ಮತ್ತು 21 ವರ್ಷದ ಪುತ್ರಿ. ಹಾಗಾಗಿ ಒಂದು ಹಜಾರ, ಅಡುಗೆ ಮನೆ, ಎರಡು ಕೊಠಡಿ ಮತ್ತು ಬಾತ್ ಇರುವ ಮನೆಗೆ ಪ್ಲಾನ್ ಮಾಡಿದರೆ ಸಾಕೆನಿಸುತ್ತದೆ ಎಂದುಕೊಂಡಿದ್ದೆ. ಆ ಕುಟುಂಬದ ಬೇಡಿಕೆ ಬೇರೆಯದೇ ಇತ್ತು!

ವ್ಯಾಪಾರಿ ಕುಟುಂಬದಿಂದಲೇ ಬಂದಿದ್ದ ಲಕ್ಷ್ಮಣ್ ಅವರಿಗೆ ಸಹಜವಾಗಿಯೇ ವಾಣಿಜ್ಯ ಮಳಿಗೆಗಳತ್ತ ಒಲವು. ತಾವು ಕಟ್ಟಿಸಲಿರುವ ಹೊಸ ಕಟ್ಟಡದಲ್ಲಿ ತಮ್ಮ ಚಿನ್ನಾಭರಣ ವಹಿವಾಟಿಗೂ ಒಂದು ಮಳಿಗೆ ಕಟ್ಟಿಸಿಕೊಳ್ಳಬೇಕು. ಜತೆಗೆ ಬೇಸರವಾದಾಗಲೆಲ್ಲಾ ಸಿನಿಮಾವನ್ನು ದೊಡ್ಡ ಪರದೆ ಅಥವಾ ಅಗಲವಾದ ಟಿವಿಯಲ್ಲಿ ನೋಡಲು ಒಂದು ಹೋಂ ಥಿಯೇಟರ್ ಸಹ ಇರಬೇಕು ಎಂಬುದು ಅವರ ಬಹುದಿನದ ಕನಸು.

ಅವರ ಪತ್ನಿಗೆ ಅಡುಗೆ ಮನೆ ದೊಡ್ಡದಾಗಿರಬೇಕು. ದಿನಸಿ ಪದಾರ್ಥಗಳನ್ನು ಜೋಡಿಸಿಕೊಳ್ಳಲು ಸಾಕಷ್ಟು ಸ್ಥಳಾವಕಾಶವಿರ ಬೇಕು. ಸಾಧ್ಯವಾದರೆ ಒಂದು ಸ್ಟೋರ್ ರೂಂ ಸಹ ಇರಬೇಕು. ಜತೆಗೆ ಅಡುಗೆ ಮನೆಗೆ ಹೊಂದಿಕೊಂಡಂತೆಯೇ ಡೈನಿಂಗ್ ಹಾಲ್ ಸಹ ಇರಬೇಕು. ಅದೇನೇ ಕಷ್ಟ ವಾದರೂ ಸರಿ, ದೇವರ ವಿಗ್ರಹವಿಟ್ಟು ಕುಳಿತುಕೊಂಡು ಪೂಜೆ ಮಾಡಲು ಒಂದು ಪೂಜಾ ಗೃಹವೂ ಬೇಕು. ಇದೆಲ್ಲದರ ಜತೆಗೇ ದಂಪತಿಗೊಂದು ಮಾಸ್ಟರ್ ಬೆಡ್‌ರೂಂ ಬೇಕು. ಅದು ಸಾಕಷ್ಟು ದೊಡ್ಡದಾಗಿರಬೇಕು.

ಕೊಠಡಿಯಲ್ಲೇ ಸ್ನಾನಗೃಹವೂ ಸೇರಿ ಕೊಂಡಿರಬೇಕು. ಚಿಕ್ಕದಾಗಿಯಾ ದರೂ ಸರಿ, ಬಾಲ್ಕನಿಯೂ ಇರಬೇಕು. ಮಗಳಿಗೊಂದು ಕೊಠಡಿ. ಮೆಜೆಸ್ಟಿಕ್ ಮತ್ತು ರೈಲ್ವೆ ನಿಲ್ದಾಣ ಸಮೀಪದಲ್ಲೇ ಇರುವುದರಿಂದ ನೆಂಟರಿಷ್ಟರು ಬರು ವುದು ಜಾಸ್ತಿ. ಹಾಗಾಗಿ ಆ ನೆಂಟರಿ ಗೆಂದೇ ಪ್ರತ್ಯೇಕ ಕೊಠಡಿ ಬೇಕು. ಮಗಳ ಬೇಡಿಕೆಯೂ ಕಡಿಮೆ ಇರ ಲಿಲ್ಲ. ಆಕೆಗೂ ಅಟ್ಯಾಚ್ಡ್ ಬಾತ್‌ನ ಕೊಠಡಿ ಬೇಕು. ಡ್ರೆಸ್ಸಿಂಗ್‌ಗೇ ಪ್ರತ್ಯೇಕ ಜಾಗವಿರಬೇಕು. ಮಲಗುವ ಜಾಗದಲ್ಲಿ ಓದು, ಬರಹಕ್ಕೆ, ಗೆಳತಿಯರು ಬಂದರೆ ಕುಳಿತು ಮಾತನಾಡುವುದು ಸಾಧ್ಯ ವಿಲ್ಲ. ಅದಕ್ಕೂ ಬೇರೆಯದೇ ಜಾಗ ಬೇಕು. ಅದು ವಿಶೇಷ ವಿನ್ಯಾಸದಿಂದ ಕೂಡಿರಬೇಕು.

23X25 ಅಡಿ ಉದ್ದಗಲದ ಅತ್ಯಂತ ಚಿಕ್ಕ ನಿವೇಶನದಲ್ಲಿ ಮನೆ ಕಟ್ಟಿಸಿಕೊಳ್ಳುವ ವಿಚಾರದಲ್ಲಿ ಲಕ್ಷ್ಮಣ್ ಕುಟುಂಬದ ಮೂರು ಮಂದಿಯದೂ ನೂರಾರು ಕನಸು. ಒಂದೆಡೆ ನಿವೇಶನದ ನಾಲ್ಕೂ ಪಾರ್ಶ್ವಗಳಲ್ಲಿ 25ರಿಂದ 30 ಅಡಿಗಳಷ್ಟು ಎತ್ತರದವರೆಗೂ ಬೆಳೆದು ನಿಂತಿದ್ದ ಕಟ್ಟಡಗಳು. ಇಂತಹ ಕಿರಿದಾದ ಜಾಗದಲ್ಲಿ ಮನೆ ಕಟ್ಟುವ ಮುನ್ನ ಆ ಮನೆಯ ಒಳಕ್ಕೆ ಗಾಳಿ ಬೆಳಕು ತಕ್ಕಮಟ್ಟಿಗಾದರೂ ಬರುವಂತೆ ಮಾಡಲು ಜಾಗ ಬಿಡಬೇಕಿತ್ತು. ಆದರೆ, ಇಲ್ಲಿ ‘ಜಾಗ ಬಿಡುವುದು’ ಎಂದರೆ ಅದುವೇ ದೊಡ್ಡ ಬಲು ಕಷ್ಟದ ಮಾತು.

ಆಗ ಗಾಳಿ ಬೆಳಕಿಗಾಗಿ ಎಡ ಬಲ, ಮುಂದೆ ಹಿಂದಿನ ಪಾರ್ಶ್ವಗಳನ್ನು ನೋಡುವುದಕ್ಕೆ ಬದಲು ಆಕಾಶವನ್ನು ನೋಡುವುದೇ ಸರಿಯಾದ ಪರಿಹಾರ ಎನಿಸಿತು. ಹಾಗಾಗಿ, ಗಾಳಿಯ ಪ್ರವೇಶಕ್ಕಾಗಿ ಕಟ್ಟಡದ ಮುಖ ಭಾಗದಲ್ಲಿ ಗೋಡೆಯ ಎತ್ತರ ಅಗಲ ಎಷ್ಟಿದೆಯೋ ಅಷ್ಟೂ ಹರಡಿಕೊಳ್ಳುವಂತಹ ಅತ್ಯಂತ ದೊಡ್ಡ (9 ಅಡಿ ಅಗಲ, 9 ಅಡಿ ಎತ್ತರ) ಕಿಟಕಿಗಳನ್ನು ಇರಿಸುವುದು ಸರಿ ಎನಿಸಿತು. ಜತೆಗೆ ಕಟ್ಟಡದ ಮಧ್ಯಭಾಗದಲ್ಲಿ ಮೂರೂವರೆ ಅಡಿ ಅಗಲ, ಎರಡಡಿ ಉದ್ದದ ಆಯತಾಕಾರದ ಜಾಗವನ್ನು ಆಕಾಶಕ್ಕೆ ಮುಖ ಮಾಡಿ ದಂತೆ ಬಿಟ್ಟು ಎ.ಸಿ ಡಕ್ ಮಾದರಿ ನಿರ್ಮಾಣ ಸೂಕ್ತವೆನಿಸಿತು. ಇನ್ನು ಬೆಳಕಿನ ಪ್ರವೇಶಕ್ಕಾಗಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಸ್ಕೈ ಲೈಟ್‌ಗೆ ಅವಕಾಶ ಮಾಡಿಕೊಡುವುದು ಸರಿ ಎನಿಸಿತು.

ಹೀಗೆ ಆ ಚಿಕ್ಕ ನಿವೇಶನದ ನಡುವೆ ನಿಂತುಕೊಂಡೇ ಆ ಕುಟುಂಬಕ್ಕೆ ಬೇಕಾದ ‘ದೊಡ್ಡ ಮನೆ’ ಬಗ್ಗೆ ಆಲೋಚಿಸಲಾರಂಭಿಸಿದೆ. ಜತೆಗೆ ಒಂದು ಉತ್ತಮ ಮನೆಗೆ ಇರಲೇಬೇಕಾದ ಗಾಳಿ ಬೆಳಕಿನ ಪ್ರವೇಶದ ಕುರಿತೂ ಚಿಂತಿಸಲಾರಂಭಿಸಿದೆ. ಕುಟುಂಬದ ಮುಖ್ಯಸ್ಥರ ಮೊದಲ ಬೇಡಿಕೆಯಂತೆ ನೆಲ ಮಹಡಿಯಲ್ಲಿ ಒಂದು ಚಿಕ್ಕದು, ಇನ್ನೊಂದು ದೊಡ್ಡದಾದ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಹಾಗೂ ಮಹಡಿಗೆ ಹೋಗಲು ಬೇಕಾದ ಮೆಟ್ಟಿಲುಗಳಿಗೂ ಜಾಗ ಮೀಸಲಿಟ್ಟೆ.

ಆ ಮೆಟ್ಟಿಲುಗ ಳನ್ನು ಎರಡೂವರೆ ಅಡಿ ಅಗಲಕ್ಕೇ ಸೀಮಿತಗೊಳಿಸುವುದು ಅನಿ ವಾರ್ಯವಾಯಿತು. ಮೆಟ್ಟಿಲೇರಿ ಮೊದಲ ಮಹಡಿಗೆ ಕಾಲಿಟ್ಟೊ ಡನೆ 4.6 ಅಡಿ ಅಗಲ, 6 ಅಡಿ ಉದ್ದದ ಒಂದು ವರಾಂಡ, ಮುಂಬಾಗಿಲು ತೆರೆ ಯುತ್ತಿದ್ದಂತೆ 12.6 ಅಡಿ ಅಗಲ, 16 ಅಡಿ ಉದ್ದದ ಹಜಾರ, ಅದರಲ್ಲಿಯೇ ಎರಡೂ ವರೆ ಅಡಿ ಅಗಲದಲ್ಲಿ ಮಹಡಿಗೆ ಮೆಟ್ಟಿಲು, ಹಜಾರದ ಇನ್ನೊಂದು ಪಾರ್ಶ್ವದಲ್ಲಿ 17.6 ಅಡಿ ಉದ್ದ, 10 ಅಡಿ ಅಗಲದಲ್ಲಿ ಅಡುಗೆ ಕೋಣೆ, ಡೈನಿಂಗ್ ಮತ್ತು ಪೂಜಾ ಕೋಣೆ. ಅಡುಗೆ ಕೋಣೆ ಹಿಂಬದಿಯಲ್ಲಿ ಡಕ್ ಮತ್ತು ಯುಟಿಲಿಟಿಗೆ ಪುಟ್ಟ ಜಾಗ ಮೀಸಲಿಟ್ಟೆ.

ಈ ಹಜಾರದ ವಿಶೇಷವೆಂದರೆ ಮೆಟ್ಟಿಲ ಕೆಳಭಾಗದಲ್ಲಿ ಒಂದು ಪುಟ್ಟ ಜಲಪಾತ ವನ್ನು ನಿರ್ಮಿಸಿ ಅದಕ್ಕೆ ನೀಲಿ ಬೆಳಕು ಬೀಳುವಂತೆ ಮಾಡಲಾ ಗಿದೆ. ಮೆಟ್ಟಿಲಿಗೆ ಆಧಾರವಾಗಿ ನಿರ್ಮಿಸಿದ ಕಾಂಕ್ರಿಟ್ ಕಂಬಕ್ಕೇ ಎರಡು ಪುಟ್ಟ ಷೋಕೇಸ್‌ಗಳು ಜೋತುಬಿದ್ದಿವೆ. ಒಂದಿಡೀ ಗೋಡೆಗೆ ನ್ಯಾಚುರಲ್ ಸ್ಟೋನ್ ಅಳವಡಿಸಲಾಗಿದೆ. ಈ ಮೂರೂ ಅಂಶಗಳು ಇಡೀ ಹಜಾರದ ಶೋಭೆಯನ್ನು ಹೆಚ್ಚಿಸಿವೆ. ಮನೆಗೆ ಬಂದವರು ಕಣ್ಣಗಲಿಸಿ ನೋಡುವಂತೆ ಮಾಡಿವೆ ಎಂಬುದೇ ಈ ಹಜಾರದ ವಿಶೇಷ.

ಎರಡನೇ ಮಹಡಿಯಲ್ಲಿ ಮಾಸ್ಟರ್ ಬೆಡ್ ರೂಂ, ಅಟ್ಯಾಚ್ಡ್ ಬಾತ್, ವಾರ್ಡ್‌ರೋಬ್ ಕಂ ಡ್ರೆಸ್ಸಿಂಗ್. ಇನ್ನೊಂದೆಡೆ ಗೆಸ್ಟ್ ರೂಂ ಮತ್ತು ಬಾತ್ ರೂಂ. ಗೆಸ್ಟ್ ರೂಂನಲ್ಲಿ ಸಾಮಾನು ಜೋಡಿಸಿಟ್ಟುಕೊಳ್ಳಲು ಅವಕಾಶವಿರುವ ಬಾಕ್ಸ್ ಮಂಚಗಳು. ಮೆಟ್ಟಿಲಿನ ನೇರಕ್ಕೇ ಮುಂಬದಿಗೆ ಮುಖ ಮಾಡಿದಂತೆ 4.6 ಅಡಿ ಉದ್ದ 3 ಅಡಿ ಅಗಲದ ಪುಟ್ಟ ಬಾಲ್ಕನಿಗೂ ಅವಕಾಶ ಮಾಡಿ ಕೊಡಲಾಗಿದೆ. ಮೂರನೇ ಮಹಡಿಯಲ್ಲಿ ಲಕ್ಷ್ಮಣ್ ಅವರ ಮಗಳ ಕೋಣೆ ಯನ್ನು ವಿಶೇಷವಾಗಿ ಸಿದ್ಧಪಡಿಸಲಾಯಿತು. ಹೇಗೆಂದರೆ ಆ ಕೊಠಡಿಯ ತಾರಸಿಯನ್ನು 15 ಅಡಿಗಳಷ್ಟು ಎತ್ತರಕ್ಕೇರಿಸಲಾ ಯಿತು.

ಮಧ್ಯದಲ್ಲಿ ಕೋಣೆಯ ಅರ್ಧ ಭಾಗಕ್ಕೆ ಬರುವಂತೆ ಮತ್ತೊಂದು ತಾರಸಿ ಹಾಕಿ ಲಾಫ್ಟ್ (ಅಟ್ಟ) ನಿರ್ಮಿಸಲಾಯಿತು. ಇದು ಮಗಳ ವ್ಯಾಸಂಗಕ್ಕೆ, ಸಂಗೀತ ಕಲಿಕೆಗೆ, ಗೆಳತಿಯರ ಜತೆ ಹರಟೆ ಮತ್ತು ಆಟಕ್ಕೆ ಪ್ರತ್ಯೇಕ ಜಾಗವೆಂದೇ ಮೀಸಲಾಯಿತು. ಈ ಅಟ್ಟವೇ ಈ ಕೊಠಡಿಯ ಪ್ಲಸ್ ಪಾಯಿಂಟ್. ಒಂದರ್ಧ ಭಾಗದಲ್ಲಿ 15 ಅಡಿ ಎತ್ತರದ ತಾರಸಿ. ಇನ್ನ ರ್ಧದಲ್ಲಿ ವಿಶೇಷ ವಿನ್ಯಾಸದ ಅಟ್ಟ ವಿಭಿನ್ನ ನೋಟಕ್ಕೆ ಕಾರಣವಾಗಿವೆ.

ಅಟ್ಟದ ಅಡಿಯಲ್ಲಿ ಅಟ್ಯಾಚ್ಡ್ ಬಾತ್ ಮತ್ತು ಡ್ರೆಸ್ಸಿಂಗ್ ಕಂ ವಾರ್ಡ್‌ರೋಬ್‌ಗೆ ಜಾಗ ಸಿಕ್ಕಿತು. ಅಟ್ಟದಲ್ಲಿ ಸ್ಕೈಲೈಟ್‌ಗೆ ಅವಕಾಶ ಮಾಡಲಾಯಿತು. ತಾರಸಿಗೆ ಗಾಜಿನ ಇಟ್ಟಿಗೆಗಳನ್ನು ಅಳವಡಿಸಿದ್ದ ರಿಂದ ಸೂರ್ಯನ ಬೆಳಕು ಯಥೇಚ್ಚವಾಗಿ ಕೊಠಡಿಯೊಳಕ್ಕೆ ಬರಲು ಸಾಧ್ಯವಾಗಿದೆ. ಇದೇ ಮಹಡಿಯ ಇನ್ನೊಂದು ಪಾರ್ಶ್ವವನ್ನು ಲಕ್ಷ್ಮಣ್ ಅವರ ಕೋರಿಕೆಯಂತೆ ಹೋಂ ಥಿಯೇಟರ್‌ಗೆ 10X17 ಅಡಿ ಉದ್ದಗಲ ಜಾಗ ಮೀಸಲಿಡಲಾಯಿತು. ಪಕ್ಕದಲ್ಲಿಯೇ ಪುಟ್ಟ ಸ್ಟೋರ್ ರೂಂ ಸಹ ನಿರ್ಮಿಸಲಾಗಿದೆ. ಹಾಗಾಗಿ ಈ ಮಹಡಿಯಲ್ಲಿ ಬಾಲ್ಕನಿ ಇಲ್ಲ.

ಈ ಮಹಡಿಯಿಂದ ಮತ್ತೆ ಮೆಟ್ಟಿಲೇರಿದರೆ ತಾರಸಿ. ಆ ತಾರಸಿ ನೆಲದಿಂದ 45 ಅಡಿ ಎತ್ತರದಲ್ಲಿದೆ. ಒಂದೆಡೆ ಸೋಲಾರ್ ವಾಟರ್ ಹೀಟರ್ ಇದೆ. ಇನ್ನೊಂದೆಡೆ ನೀರಿನ ಪ್ಲಾಸ್ಟಿಕ್ ಟ್ಯಾಂಕ್ ಇರಿಸಲು ನಿರ್ಮಿಸಿದ ಮೂರು ಗೋಡೆಗಳು ಮತ್ತು ತಾರಸಿಯ ಜಾಗವನ್ನೇ ಬಳಸಿಕೊಂಡು ಒಂದು ಪುಟ್ಟ ವ್ಯಾಯಾಮ ಶಾಲೆ ಮಾಡಲಾಗಿದೆ. ಒಂದು ದಿಕ್ಕಿನಲ್ಲಿ ಏಳು ದಾಪು, ಇನ್ನೊಂದು ದಿಕ್ಕಿನಲ್ಲಿ ಎಂಟು ದಾಪು ಹಾಕುವಷ್ಟೇ ಉದ್ದ ಅಗಲ ಇರುವ ಈ ಪುಟ್ಟ ತಾರಸಿಯಡಿ ಲಕ್ಷ್ಮಣ್ ಅವರ ಕುಟುಂಬದ ಎಲ್ಲ ಕನಸು ಗಳನ್ನೂ ಸಾಕಾರಗೊಳಿಸಿದ ಮನೆ ನಿರ್ಮಾಣವಾಗಿದೆ.

ಅಂದರೆ, ಒಂದಿಚು ಜಾಗವೂ ವ್ಯರ್ಥವಾಗದಂತೆ ಯೋಜಿಸಿ ಮನೆ ನಿರ್ಮಿ ಸಲಾಗಿದೆ. ಜಾಗದ ಸದ್ಬಳಕೆಗಾಗಿ ಎಲ್ಲ ಕೊಠಡಿಗಳಲ್ಲಿನ ವಾರ್ಡ್‌ ರೋಬ್‌ಗೂ ಸ್ಲೈಡಿಂಗ್ ಡೋರ್‌ಗಳನ್ನೇ (ಪಕ್ಕಕ್ಕೆ ಜಾರಿದಂತೆ ಸರಿಸುವ ಬಾಗಿಲುಗಳನ್ನೇ) ಅಳವಡಿಸಲಾಗಿದೆ.
ರಾಧಾ ರವಣಂ,ವಾಸ್ತುಶಿಲ್ಪಿ ಮೊ: 98453 93580

ಈ 23X25 ಅಡಿ ನಿವೇಶನದಲ್ಲಿ ವರ್ಷದ ಹಿಂದೆ ನಿರ್ಮಿಸಿದ ನಾಲ್ಕು ಮಹಡಿಗಳ ಕಟ್ಟಡಕ್ಕೆ ಒಟ್ಟು ₹ 50 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ. ಹಣ ಹೊಂದಿ ಸುವುದಕ್ಕಿಂತ ಮುಖ್ಯ ವಾಗಿ ಈ ಕಿರಿದಾದ ರಸ್ತೆಯಲ್ಲಿ ಮರಳು, ಜಲ್ಲಿ, ಇಟ್ಟಿಗೆ, ಕಬ್ಬಿಣ ಮೊದಲಾದ ಸಾಮಗ್ರಿಗಳನ್ನು ಸಾಗಿಸಿ ತರುವುದೇ ಬಹಳ ಕಷ್ಟದ ಕೆಲಸವಾಗಿತ್ತು.

ಬಹುತೇಕ ನಡು ರಾತ್ರಿ ಮತ್ತು ನಸುಕಿನಲ್ಲಿಯೇ ಸಾಗಣೆ ಕೆಲಸ ನಡೆಸಬೇಕಾಯಿತು. ಬಹಳಷ್ಟು ಶ್ರಮವಾ ದರೂ ಕಡೆಗೂ ಕನಸಿನ ಮನೆ ನಮ್ಮೆಲ್ಲರ ಇಷ್ಟದಂತೆ ನಿರ್ಮಾಣವಾಗಿದ್ದು ನಮ್ಮ ಕುಟುಂಬಕ್ಕೆ ಬಹಳ ಖುಷಿಯನ್ನು ಉಂಟು ಮಾಡಿದೆ. ಇಂತಹ ಕಿಷ್ಕಿಂದೆಯಲ್ಲೂ ತಕ್ಕಮಟ್ಟಿಗೆ ಗಾಳಿ ಬೆಳಕಿಗೆ ಅವಕಾಶವಾಗುವಂತೆ ಮನೆ ನಿರ್ಮಿಸಲು ಸಾಧ್ಯವಾಗಿದೆ. ಅವಕಾ ಶವಿದ್ದೆಡೆಗೆಲ್ಲ ಟೆರ್ರಕೋಟಾ ಇಟ್ಟಿಗೆ ಬಳಸಿದ್ದರಿಂದ ಬೇಸಿಗೆಯಲ್ಲೂ ಮನೆ ತಂಪಾಗಿರುತ್ತದೆ. ಕನಸು ಕೈಗೂಡಿರುವುದು ಮನಸನ್ನೂ ತಂಪಾಗಿಸಿದೆ.
ಲಕ್ಷ್ಮಣ್ ಮನೆ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT