ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರಿಂದ ಬಂದ ಮೈಸೂರ ಮಲ್ಲಿಗೆ!

Last Updated 25 ಮೇ 2016, 19:32 IST
ಅಕ್ಷರ ಗಾತ್ರ

ಚಿಕ್ಕಂದಿನಲ್ಲಿ ಜತೆಗಿದ್ದ ಗೆಳೆತಿಯರು ‘ನೀನು ಸಿನಿಮಾ ಹೀರೋಯಿನ್ ಆಗಬಹುದು’ ಎಂದು ಹೇಳುತ್ತಿದ್ದ ಮಾತುಗಳನ್ನು ಕಾಲೇಜು ಮೆಟ್ಟಿಲೇರುವಾಗಲೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.

ಓದುವುದನ್ನಷ್ಟೇ ಗುರಿಯನ್ನಾಗಿರಿಸಿಕೊಂಡಿದ್ದ ಆಕೆಗೆ ರವಿಚಂದ್ರನ್‌ ಅವರ ಇ–ಮೇಲ್ ವಿಳಾಸ ದೊರಕಿತ್ತು. ಸುಮ್ಮನೆ ನೋಡೋಣ ಎಂದು ಸ್ನೇಹಿತರು ತೆಗೆದಿದ್ದ ತಮ್ಮ ಚಿತ್ರಗಳನ್ನು ರವಿಚಂದ್ರನ್ ಅವರ ಇ–ಮೇಲ್‌ಗೆ ರವಾನಿಸಿ ಸುಮ್ಮನಾದರು.

ಕೆಲದಿನಗಳಲ್ಲೇ ಆಕೆಗೆ ಅಚ್ಚರಿ ಕಾದಿತ್ತು. ರವಿಚಂದ್ರನ್ ಅವರಿಂದ ಕರೆ ಬಂದಿತ್ತು. ಆಕೆ ಕಳುಹಿಸಿದ್ದ ಚಿತ್ರಗಳಲ್ಲಿ ಒಂದು ಚಿತ್ರ ರವಿಚಂದ್ರನ್ ಅವರಿಗೆ ತುಂಬಾ ಇಷ್ಟವಾಗಿತ್ತು. ಮತ್ತೊಂದು ಫೋಟೊಶೂಟ್‌ಗೆ ವ್ಯವಸ್ಥೆ ಮಾಡಿ ಸಿನಿಮಾದ ಬೇರೆ ಕೆಲಸದಲ್ಲಿ ಮಗ್ನರಾದರು. ಬಳಿಕ ಫೋಟೊಶೂಟ್‌ನಲ್ಲಿ ತೆಗೆದ ಚಿತ್ರಗಳು ಅವರಿಗೆ ಇಷ್ಟವಾಗಲಿಲ್ಲ.

ಸರಿ ಈಕೆ ಬೇಡ ಎಂದು ವಾಪಸ್‌ ಕಳುಹಿಸಿದರು. ಆದರೆ ಆ ಒಂದು ಚಿತ್ರ ಅವರನ್ನು ಕಾಡುತ್ತಿತ್ತು. ಬೇರೆ ಯಾರೋ ಅಷ್ಟು ಚೆನ್ನಾಗಿ ಫೋಟೊ ತೆಗೆದಿರುವಾಗ ಇಲ್ಲಿ ಏಕೆ ಅಷ್ಟು ಚೆನ್ನಾಗಿ ಬರಲಿಲ್ಲ ಎಂಬ ಪ್ರಶ್ನೆ ಹುಟ್ಟುಕೊಂಡಿತು.

ಮತ್ತೆ ಆಕೆಯನ್ನು ಕರೆಯಿಸಿ ಖುದ್ದು ನಿಂತು ಉಡುಪು, ಮೇಕಪ್, ಹೇರ್‌ಸ್ಟೈಲ್‌ ಎಲ್ಲವೂ ಹೀಗೆಯೇ ಇರಬೇಕೆಂದು ಹೇಳಿ ಚಿತ್ರ ತೆಗೆಸಿದರು. ತಾವಂದುಕೊಂಡಂತೆಯೇ ಚಿತ್ರಗಳು ಚೆನ್ನಾಗಿ ಬಂದಿದ್ದವು. ಈ ಹುಡುಗಿಯೇ ಚಿತ್ರದ ನಾಯಕಿ ಎಂದು ಘೋಷಿಸಿದರು ರವಿಚಂದ್ರನ್‌.

ಹೀಗೆ ಅನಿರೀಕ್ಷಿತವಾಗಿ ‘ಅಪೂರ್ವ’ ಚಿತ್ರದ ನಾಯಕಿಯಾಗಿ ಆಯ್ಕೆಯಾದ ಅಪೂರ್ವ ಅವರಲ್ಲಿ ಬಣ್ಣದ ಸ್ಪರ್ಶ ಪುಳಕ ಮೂಡಿಸಿದೆ. ತಮ್ಮ ಮುಂದಿನ ಪಯಣವೇನಿದ್ದರೂ ಬೆಳ್ಳಿಪರದೆ ಮೇಲೆಯೇ ಎಂದು ನಿರ್ಧರಿಸಿದ್ದಾರೆ.

ಹೊಸ ನಾಮಕರಣ
ಚಿತ್ರದ ಶೀರ್ಷಿಕೆಯೂ ನಾಯಕಿಯ ಹೆಸರೂ ಒಂದೇ ಆಗಿರುವುದು ಕಾಕತಾಳೀಯವಲ್ಲ. ಏಕೆಂದರೆ ಚಿತ್ರದ ಶೀರ್ಷಿಕೆಯನ್ನೇ ನಾಯಕಿಗೆ ಇರಿಸಿದವರು ರವಿಚಂದ್ರನ್‌. ಅಪೂರ್ವ ಎನ್ನುವುದು ರವಿಚಂದ್ರನ್ ತಮ್ಮ ಚಿತ್ರಕ್ಕಾಗಿ ಇರಿಸಿದ ಹೆಸರು. ಮೂಲ ಹೆಸರನ್ನು ಎಲ್ಲಿಯೂ ಹೇಳಿಕೊಳ್ಳಬಾರದು ಎಂಬ ಷರತ್ತನ್ನು ಅವರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ.

ಈ ಹೆಸರಿನಿಂದಲೇ ಆಕೆಯ ಹೊಸ ಬದುಕು ಶುರುವಾಗಿದೆ ಎನ್ನುತ್ತಾರೆ ರವಿಚಂದ್ರನ್. ಅಪೂರ್ವ ಮೂಲತಃ ಚಿಕ್ಕಮಗಳೂರಿನವರು. ಈಗ ನೆಲೆಸಿರುವುದು ಮೈಸೂರಿನಲ್ಲಿ. 

ಸಿನಿಮಾ ಅವರ ಆಸಕ್ತಿ ಆಗಿರಲಿಲ್ಲ. ನೋಡುತ್ತಾರೋ ಇಲ್ಲವೋ ಎಂದು ಕಳುಹಿಸಿದ್ದ ಚಿತ್ರಗಳನ್ನು ರವಿಚಂದ್ರನ್‌ ಇಷ್ಟಪಟ್ಟಿದ್ದರು. ಅವರಿಗೆ ಬೇಕಿದ್ದದ್ದು ಇದೇ ವಯಸ್ಸಿನ, ಮುಗ್ಧ ಮುಖಭಾವದ ಯುವತಿ. ಆಕೆಗೆ ನಟನೆ ಕೂಡ ಬರಬಾರದು. ಸಾಮಾನ್ಯ ಯುವತಿಯಂತೆಯೇ ಇರಬೇಕು ಎನ್ನುವುದು ಅವರ ಅಪೇಕ್ಷೆಯಾಗಿತ್ತು. ಪಾತ್ರಕ್ಕೆ ಅನುಗುಣವಾಗಿ ಅಪೂರ್ವ ಅವರನ್ನು ಸಿದ್ಧಪಡಿಸಿದರು. ಶಿಸ್ತು, ಸಮಯ ಪರಿಪಾಲನೆ ಮತ್ತು ಬದ್ಧತೆ ಅವರು ಮೊದಲು ಕಲಿಸಿದ ಪಾಠ.

‘ಮೊದಲ ಫೋಟೊಶೂಟ್‌ನಲ್ಲಿ ನರ್ವಸ್‌ ಆಗಿದ್ದೆ. ಹೀಗಾಗಿ ಚಿತ್ರಗಳು ಸರಿಬಂದಿರಲಿಲ್ಲ. ಆಮೇಲೆ ಅದರ ಬಗ್ಗೆ ಯೋಚಿಸಿರಲಿಲ್ಲ. ಮತ್ತೆ ಕರೆಸಿದಾಗ ಸಿದ್ಧತೆ ಮಾಡಿಕೊಂಡು ಹೋಗಿದ್ದೆ. ಆಗ ಚಿತ್ರಗಳು ಚೆನ್ನಾಗಿ ಬಂದವು’ ಎನ್ನುತ್ತಾರೆ ಅಪೂರ್ವ.

‘ಅಪೂರ್ವ’ದ ಭಾಗವಾದ ಬಳಿಕ ಅವರು ಸಿನಿಮಾ ಕಲಿಕೆಗೆ ಒತ್ತು ನೀಡಿದ್ದಾರೆ. ಹೀಗಾಗಿ ವಿದ್ಯಾಭ್ಯಾಸವನ್ನೂ ಮೊಟಕುಗೊಳಿಸಿದ್ದಾರೆ. ಅವಕಾಶ ಬಂದಾಗ ದೂರಶಿಕ್ಷಣದ ಮೂಲಕ ಬಿ.ಕಾಂ ಪದವಿ ಮುಗಿಸುವುದಾಗಿ ಹೇಳಿಕೊಳ್ಳುತ್ತಾರೆ. ಮೊದಲ ಸಿನಿಮಾದ ಅನುಭವ ಅವರಲ್ಲಿ ಹೊಸ ಆಸಕ್ತಿ ಹುಟ್ಟುಹಾಕಿದೆ. ಅವರ ಕಣ್ಣೀಗ ಸಿನಿಮಾ ಜಗತ್ತಿನ ಮೇಲೆಯೇ. 

‘ಕ್ಯಾಮೆರಾ, ಲೈಟಿಂಗ್ಸ್‌ ಕುರಿತು ಸ್ವಲ್ಪವೂ ತಿಳಿವಳಿಕೆ ಇರಲಿಲ್ಲ. ಕಾಲೇಜು ದಿನಗಳಲ್ಲಿ ವೇದಿಕೆ ಮೇಲೆ ಹಾಡಿಗೆ ಹೆಜ್ಜೆ ಹಾಕಿದ್ದಷ್ಟೇ ನನಗಿದ್ದ ಅನುಭವ. ಮೊದಲು ಮಾಡಿದ ಆಡಿಷನ್‌ ಅನ್ನು ಚಿತ್ರೀಕರಣ ಎಂದೇ ಭಾವಿಸಿದ್ದೆ. ರವಿಚಂದ್ರನ್‌ ಅವರೊಂದಿಗೆ ನಟಿಸುವಾಗ ಸ್ವಲ್ಪವೂ ಭಯ ಇರಲಿಲ್ಲ. ಇದ್ದ ಭಯವನ್ನು ಅವರು ಮೊದಲೇ ಕಿತ್ತುಹಾಕಿದ್ದರು. ಹೀಗಾಗಿ ನಟನೆ ಕಷ್ಟವಾಗಲಿಲ್ಲ’ ಎನ್ನುವ ಅಪೂರ್ವ ಈಗ ಸಿನಿಮಾದ ಮುಂದಿನ ಪಯಣಕ್ಕೆ ತಯಾರಿ ನಡೆಸುತ್ತಿದ್ದಾರಂತೆ.

ಯಾವ ಭಾಷೆಯಿಂದಾದರೂ ಒಳ್ಳೆಯ ಅವಕಾಶ ಸಿಕ್ಕರೆ ನಟಿಸಲು ಸಿದ್ಧ ಎನ್ನುವ ಅಪೂರ್ವ, ತಮ್ಮ ಪ್ರತಿ ಹೆಜ್ಜೆಗೂ ರವಿಚಂದ್ರನ್ ಅವರ ಸಲಹೆ ಪಡೆದುಕೊಳ್ಳುವುದಾಗಿ ಹೇಳುತ್ತಾರೆ. ‘ಅವರೇ ನನ್ನ ಗಾಡ್‌ಫಾದರ್‌. ಉದ್ಯಮ ನನಗೆ ಹೊಸತು. ಇಲ್ಲಿ ಏನೂ ತಿಳಿದಿಲ್ಲ. ಅವರೊಂದಿಗೆ ಚರ್ಚಿಸದೆ ಮುಂದುವರಿಯುವುದಿಲ್ಲ’ ಎಂದು ಹೇಳುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT