ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕ ಅಪಾರ್ಟ್‌ಮೆಂಟ್‌ಗೆ ಎಸ್‌ಟಿಪಿ

ಕಡ್ಡಾಯ ಜಾರಿಗೊಳಿಸಲು ಜಲ ಮಂಡಳಿ ಚಿಂತನೆ
Last Updated 2 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೈಗಾರಿಕೆಗಳು ಹಾಗೂ ವಸತಿ ಸಮುಚ್ಚಯಗಳ ಕೊಳಚೆ ನೀರು ಜಲ ಮೂಲಗಳಿಗೆ ಸೇರಿ ನೀರು ಕಲುಷಿತಗೊಳ್ಳುತ್ತಿದೆ. ಹೀಗಾಗಿ   ಐದು  ಫ್ಲ್ಯಾಟ್‌ಗಳಿರುವ ಅಪಾರ್ಟ್‌ ಮೆಂಟ್‌ಗಳಲ್ಲೂ ಕೊಳಚೆ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ಕಡ್ಡಾಯಗೊಳಿಸಲು ಜಲಮಂಡಳಿ ಚಿಂತನೆ ನಡೆಸಿದೆ.

ನಗರದಲ್ಲಿ ಪ್ರತಿದಿನ 110 ಕೋಟಿ ಲೀಟರ್ ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಆದರೆ, ನಗರದಲ್ಲಿರುವ ಜಲಶುದ್ಧೀಕರಣ ಘಟಕಗಳ ಸಾಮರ್ಥ್ಯ ಸುಮಾರು 78 ಕೋಟಿ ಲೀಟರ್‌. ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೇವಲ 48 ಕೋಟಿ ಲೀಟರ್‌ ಕೊಳಚೆ ನೀರನ್ನು ಶುದ್ಧೀಕರಣ ಘಟಕಗಳಿಗೆ ಹರಿಸಲು ಸಾಧ್ಯವಾಗುತ್ತಿದೆ. ಉಳಿದ 65 ಕೋಟಿ ಲೀಟರ್ ಕೊಳಚೆ ನೀರು ನೇರವಾಗಿ ಕೆರೆಗಳು ಹಾಗೂ ಇತರ ಜಲಮೂಲಗಳಿಗೆ ಸೇರುತ್ತಿದೆ.

ವರ್ತೂರು, ಬೆಳ್ಳಂದೂರು, ಮಡಿವಾಳ ಮತ್ತು ಪುಟ್ಟೇನಹಳ್ಳಿ ಕೆರೆಗಳು ತೀರಾ ಕಲುಷಿತಗೊಂಡಿವೆ. ಸುಮಾರು 40 ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದೆ ಎಂದು ಜಲಮಂಡಳಿ ಅಂದಾಜಿಸಿದೆ. ಇತ್ತೀಚೆಗೆ ಕಲುಷಿತ ನೀರಿನಿಂದಾಗಿ ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು.

‌ಕೊಳಚೆ ನೀರು ಮತ್ತು ಕೈಗಾರಿಕಾ ತ್ಯಾಜ್ಯ ಬೆಂಗಳೂರಿನ ಕೆರೆಗಳಿಗೆ ಹರಿಯುವುದನ್ನು ತಡೆಯಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೊಳಚೆ ನೀರು ಸೇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಲಮಂಡಳಿ ಮುಂದಾಗಿದೆ.

50 ಫ್ಲ್ಯಾಟ್‌ಗಳನ್ನು ಹೊಂದಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ಕಡ್ಡಾಯವಾಗಿ ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರ 2010ರಲ್ಲಿ ಕಾನೂನು ಜಾರಿಗೆ ತಂದಿತ್ತು. ಈ ಅಪಾರ್ಟ್‌ಮೆಂಟ್‌ಗಳಲ್ಲಿ ಘಟಕ ಸ್ಥಾಪನೆಗೆ ₹50ಲಕ್ಷದಿಂದ ₹60 ಲಕ್ಷ ವೆಚ್ಚ ತಗಲುತ್ತಿದೆ.
‘ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ಘಟಕ ಸ್ಥಾಪನೆ ದುಬಾರಿ ಅಲ್ಲ. ಮಾರುಕಟ್ಟೆಗಳಲ್ಲಿ ₹2ಲಕ್ಷದಿಂದ ₹3 ಲಕ್ಷ ಬೆಲೆಯ ಎಸ್‌ಟಿಪಿ ಮಾದರಿಗಳು ಲಭ್ಯ ಇವೆ. ಇವುಗಳ ಗಾತ್ರ ಫ್ರಿಜ್‌ನಷ್ಟೇ ಇವೆ. ಇವುಗಳನ್ನು ಮನೆಗಳಲ್ಲಿ ಅಳವಡಿಸಿಕೊಳ್ಳಬಹುದು. ಈ ನೀರನ್ನು ಕುಡಿಯಲು ಹೊರತುಪಡಿಸಿ ವಿವಿಧ ಉದ್ದೇಶಗಳಿಗೆ ಬಳಸಬಹುದು’ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ.

ಮನವೊಲಿಕೆ ಪ್ರಯತ್ನ: ‘ಕೊಳಚೆ ನೀರಿನ ಶುದ್ಧೀಕರಣದ ಬಗ್ಗೆ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸಲು ಮಂಡಳಿ ಮುಂದಾಗಿದೆ. ಹೊಸದಾಗಿ ನಿರ್ಮಾಣವಾಗಲಿರುವ ಐದು  ಫ್ಲ್ಯಾಟ್‌ನ ಅಪಾರ್ಟ್‌ಮೆಂಟ್‌ಗಳಲ್ಲೂ ಒಳಚರಂಡಿ ಘಟಕಗಳನ್ನು ಸ್ಥಾಪಿಸುವಂತೆ ಜನರಿಗೆ ಮನವರಿಕೆ ಮಾಡಲಾಗುವುದು’ ಎಂದು ಜಲಮಂಡಳಿಯ ಪ್ರಧಾನ ಎಂಜಿನಿಯರ್‌ ಎಸ್‌. ಕೃಷ್ಣಪ್ಪ  ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT