ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣ್ಣರ ರಂಗದ ಪ್ರತಿಬಿಂಬ

ರಂಗಭೂಮಿ
Last Updated 16 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಹಿರಿಯ ರಂಗಕರ್ಮಿ ಎ.ಎಸ್‌. ಮೂರ್ತಿ 1989ರಲ್ಲಿ ಎ.ಎಂ. ಪ್ರಕಾಶ್‌, ವನಮಾಲಾ ಪ್ರಕಾಶ್‌ ಹಾಗೂ ಗೌರಿ ದತ್‌ ಅವರ ಸಹಯೋಗದೊಂದಿಗೆ ಹನುಮಂತನಗರ ಬಿಂಬವನ್ನು ಸ್ಥಾಪಿಸಿದರು.

‘‘ಅ.ನಾ.ಸುಬ್ಬರಾವ್‌ ಅವರ ಸಾರಥ್ಯದಲ್ಲಿ ಆರಂಭಿಸಿದ ಕಲಾಮಂದಿರದ ಒಂದು ಭಾಗವೇ ಹನುಮಂತನಗರ ಬಿಂಬ. ಕಲಾಮಂದಿರದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಮೂರ್ತಿ 1981ರಲ್ಲಿ ಯುವಕರ ರಂಗಭೂಮಿ ‘ಅಭಿನಯ ತರಂಗ’ವನ್ನು ಸ್ಥಾಪಿಸಿದರು. ಬಳಿಕ ಎಂಟು ವರ್ಷಗಳ ಬಳಿಕ ಮಕ್ಕಳಿಗಾಗಿ ‘ಹನುಮಂತನಗರ ಬಿಂಬ’ವನ್ನು ಪ್ರಾರಂಭಿಸಿದರು’’ ಎಂದು ಎ.ಎಂ. ಪ್ರಕಾಶ್‌ ಹೇಳುತ್ತಾರೆ.

ತಂಡದ ಹುಟ್ಟು
ಎ.ಎಸ್‌. ಮೂರ್ತಿ ಹಾಗೂ ಎ.ಎಂ. ಪ್ರಕಾಶ್‌ ಅವರು 1989ರಲ್ಲಿ ದೂರದರ್ಶನಕ್ಕಾಗಿ ‘ನಾವು– ನೀವು ಜಿಗಿ ಜಿಗಿ ಗೊಂಬೆಯಾಟ’ ಎಂಬ ಮಕ್ಕಳ ಧಾರಾವಾಹಿಯನ್ನು ನಿರ್ದೇಶಿಸಿದ್ದರು (ಇದು ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಕನ್ನಡ ಧಾರಾವಾಹಿ). ಈ ಧಾರಾವಾಹಿ ಸುಮಾರು 52 ಸಂಚಿಕೆ ಮುಂದುವರಿಯಿತು. ಆದರೆ ಧಾರಾವಾಹಿ  ಪ್ರಸಾರ ನಿಲ್ಲಿಸಿದಾಗ ವೀಕ್ಷಕರಿಂದ ಮತ್ತಷ್ಟು ಮಕ್ಕಳ ಕಾರ್ಯಕ್ರಮಕ್ಕೆ ಒತ್ತಾಯ ಕೇಳಿಬಂತು. ಆಗ ಹೊಳೆದಿದ್ದೇ ‘ಹನುಮಂತನಗರ ಬಿಂಬ’ ಕಲ್ಪನೆ.

ಮಕ್ಕಳಿಗೆ ರಂಗ ತರಬೇತಿ ಕುರಿತ ಶಾಲೆ ಆರಂಭಿಸಬೇಕು. ಮಕ್ಕಳನ್ನು ರಂಗ ಚಟುವಟಿಕೆಯತ್ತ ಆಕರ್ಷಿಸಬೇಕು. ಮಕ್ಕಳ ಮನೋಬಲವನ್ನು ಗಟ್ಟಿಗೊಳಿಸಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು ಪ್ರಜ್ಞೆಯನ್ನು ಮೂಡಿಸಬೇಕು ಎಂಬ ಉದ್ದೇಶದಿಂದ ಎ.ಎಸ್‌.ಮೂರ್ತಿ ಅವರು ಆರಂಭದಲ್ಲಿ 15 ದಿನಗಳ ಬೇಸಿಗೆ ಶಿಬಿರ ಪ್ರಾರಂಭಿಸಿದರು.

ಇದರಲ್ಲಿ  ರಂಗಗೀತೆ, ನಟನೆ, ಸಂಗೀತ, ಚಿತ್ರಕಲೆ ಹೀಗೆ ಎಲ್ಲಾ ಪ್ರಕಾರಗಳ ಬಗ್ಗೆ ಮಕ್ಕಳಿಗೆ ಕಲಿಸಲಾಯಿತು. ಈ ಶಿಬಿರಕ್ಕೆ ಮಕ್ಕಳು ಹಾಗೂ ಹೆತ್ತವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತಲ್ಲದೇ, ಮಕ್ಕಳ ರಂಗ ಚಟುವಟಿಕೆ ಕಾರ್ಯಾಗಾರಗಳನ್ನು ಮುಂದುವರಿಸುವಂತೆ ಒತ್ತಾಯ ಕೇಳಿಬಂತು. ಹೀಗಾಗಿ ಹನುಮಂತನಗರ ಬಿಂಬ ಬಳಿಕ ಆರು ತಿಂಗಳ ರಂಗ ಚಟುವಟಿಕೆ ತರಬೇತಿ ಕಾರ್ಯಾಗಾರವನ್ನು ಆರಂಭಿಸಿ, ಮಕ್ಕಳ ರಂಗತಂಡಕ್ಕೆ ರೂಪು ನೀಡಿತು.

ಕಳೆದ 26 ವರ್ಷಗಳಿಂದ ಹನುಮಂತನಗರ ಬಿಂಬ ಸತತ ರಂಗ ತರಬೇತಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿದ್ದು, ಪ್ರತಿ ಕಾರ್ಯಾಗಾರದಲ್ಲಿ ಮಕ್ಕಳ ನಾಟಕಗಳನ್ನು ನಿರ್ಮಾಣ ಮಾಡಿಕೊಂಡು ಬರುತ್ತಿದೆ. ಮಕ್ಕಳ ರಂಗ ಚಟುವಟಿಕೆ ಆರಂಭದ ದಿನಗಳ ಬಗ್ಗೆ ನಿರ್ದೇಶಕ ಎ.ಎಂ. ಪ್ರಕಾಶ್‌ ಅವರು ವಿವರಿಸುವುದು ಹೀಗೆ:

‘ಮಕ್ಕಳ ರಂಗ ಚಟುವಟಿಕೆಗಾಗಿ ಎ.ಎಸ್‌. ಮೂರ್ತಿ ಅವರು ಸಾಕಷ್ಟು ನಾಟಕಗಳನ್ನು ಬರೆದು ರಂಗರೂಪಕ್ಕೆ ತಂದಿದ್ದಾರೆ. ಇತ್ತೀಚಿನ ಕೆಲ ವರ್ಷಗಳಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಂಗ ತರಬೇತಿ ಕಾರ್ಯಾಗಾರದಲ್ಲಿ ಹಾಡು, ಭಾವಗೀತೆ, ರಂಗಗೀತೆ, ಮೂಕಾಭಿನಯ, ನಾಟಕ, ಕಿರುಚಿತ್ರ ನಿರ್ಮಾಣ, ಛಾಯಾಗ್ರಹಣವನ್ನು ಕಲಿಸಿಕೊಡಲಾಗುತ್ತದೆ’ ಎಂದು ಪ್ರಕಾಶ್‌ ಹೇಳುತ್ತಾರೆ. ಮೂರ್ತಿ ಅವರ ಬಳಿಕ  ಎ.ಎಂ ಪ್ರಕಾಶ್ ಹಾಗೂ ವನಮಾಲಾ ಪ್ರಕಾಶ್‌ ಅವರು ‘ಹನುಮಂತನಗರ ಬಿಂಬ’ವನ್ನು ಮುನ್ನಡೆಸುತ್ತಿದ್ದಾರೆ.

ಹೆಸರಿನ ಹಿಂದೆ
ಆರಂಭದಲ್ಲಿ ಎ.ಎಸ್‌. ಮೂರ್ತಿ ಅವರು ಈ ತಂಡಕ್ಕೆ ‘ಬಿಂಬ’ ಎಂಬ ಹೆಸರನ್ನಿಟ್ಟಿದ್ದರು. ‘ಬಿಂಬ ಎಂದರೆ ಪ್ರತಿರೂಪ. ಮಕ್ಕಳ ಮನಸ್ಸಿನ ಅಂತರಂಗವನ್ನು ನಾಟಕಗಳ ಮೂಲಕ ತೆರೆದಿಡುವ ಪ್ರಯತ್ನ ಎಂದು ಆ ಹೆಸರನ್ನು ಆಯ್ದುಕೊಂಡೆವು’ ಎಂದು ಹೆಸರಿನ ಮೂಲದ ಬಗ್ಗೆ ಪ್ರಕಾಶ್‌ ತಿಳಿಸುತ್ತಾರೆ. ‘ವಿಜಯನಗರ ಬಿಂಬ’ ರಂಗತಂಡ ಆರಂಭವಾದ ಬಳಿಕ ಗುರುತಿಸಲು ಸುಲಭವಾಗುವಂತೆ ಪ್ರದೇಶದ ಹೆಸರನ್ನು ಸೇರಿಸಿಕೊಂಡು ‘ಹನುಮಂತನಗರ ಬಿಂಬ’ ಎಂದು ಮರು ನಾಮಕರಣ ಮಾಡಲಾಯಿತು’ ಎಂದು ಅವರು ತಿಳಿಸುತ್ತಾರೆ.

ಪ್ರಮುಖ ನಾಟಕಗಳು
ಹನುಮಂತನಗರ ಬಿಂಬ ಕಳೆದ ಎರಡು ದಶಕಗಳಲ್ಲಿ 40ಕ್ಕೂ ಹೆಚ್ಚು ನಾಟಕಗಳನ್ನು ನಿರ್ಮಾಣ ಮಾಡಿದೆ. ಮಕ್ಕಳ ಮನಮುಟ್ಟುವಂತಹ ವಿಚಾರಗಳನ್ನೇ ಈ ತಂಡ ಆರಿಸಿಕೊಳ್ಳುತ್ತದೆ. ಭೂಮಿಕಾ, ಪುಟ್ಟಿ, ಬೆಳಕು, ಕೋಡಂಗಿ ಬಂದ, ತಥಾಸ್ತು ಇತ್ಯಾದಿ ಈ ತಂಡದ ಪ್ರಮುಖ ನಾಟಕಗಳು.

ರಂಗ ಚಟುವಟಿಕೆಗಳು
ಮಕ್ಕಳ ನಾಟಕದೊಂದಿಗೆ ಪೋಷಕರಿಗೂ ವೇದಿಕೆ ಕಲ್ಪಿಸುತ್ತಿರುವುದು ಹನುಮಂತನಗರ ಬಿಂಬದ ವಿಶೇಷ. ‘ಈ ಮೂಲಕ ಮಕ್ಕಳ ಪೋಷಕರನ್ನು ರಂಗಭೂಮಿ ಕಡೆಗೆ ಆಕರ್ಷಿಸುವುದು ಇದರ ಉದ್ದೇಶ’ ಎಂದು ಎ.ಎನ್‌. ಪ್ರಕಾಶ್‌ ಹೇಳುತ್ತಾರೆ. ಹನುಮಂತನಗರದ ಮತ್ತೊಂದು ವಿಶೇಷ ಗೊಂಬೆಯಾಟ.

ಗೋವಿನ ಹಾಡು  ಹಾಗೂ ರಾಮಾಯಣದ ವಿವಿಧ ಪ್ರಸಂಗಗಳನ್ನು ಆರಿಸಿಕೊಂಡು, ಗೊಂಬೆಗಳ ಮೂಲಕ ನಾಟಕ ರೂಪದಲ್ಲಿ  ಕತೆಯನ್ನು ಪ್ರಸ್ತುತಪಡಿಸಲಾಗುತ್ತದೆ. ತಂಡದ ಸಂಚಾಲಕಿ ವನಮಾಲಾ ಪ್ರಕಾಶ್‌ ಅವರ ಸಾರಥ್ಯದಲ್ಲಿ ಮಕ್ಕಳೇ ಈ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಇದಲ್ಲದೇ, ಮಕ್ಕಳು ಬೀದಿ ನಾಟಕಗಳಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬೀದಿ ನಾಟಕಗಳಿಗೆ ಬಿಂಬದ ಪುಟಾಣಿ ಕಲಾವಿದರು ‘ವಿನಂತಿ ವೇದಿಕೆ’ ಎಂದು ಹೆಸರನ್ನಿಟ್ಟಿದ್ದಾರೆ.

‘ಇಂದಿನ ಯಾಂತ್ರಿಕ ಬದುಕಿನಲ್ಲಿ ಮಕ್ಕಳು ಮಾನಸಿಕವಾಗಿ ಪೋಷಕರಿಂದ ದೂರವಾಗುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಆದರೆ ಅದಕ್ಕೆ ಕಾರಣ ಪೋಷಕರೇ ಆಗಿದ್ದಾರೆ. ಬೀದಿ ನಾಟಕಗಳ ಮೂಲಕ ಪೋಷಕರ ಜವಾಬ್ದಾರಿಗಳನ್ನು ಮಕ್ಕಳು ಪರಿಣಾಮಕಾರಿ ಕಟ್ಟಿಕೊಡುತ್ತಾರೆ’ ಎಂದು ಮಕ್ಕಳ ಬೀದಿ ನಾಟಕಗಳ ಬಗ್ಗೆ ವಿವರಿಸುತ್ತಾರೆ ಪ್ರಕಾಶ್‌.

ಹಿರಿತೆರೆಗೆ ಬಿಂಬ ಪ್ರತಿಭೆಗಳು
ಹನುಮಂತನಗರ ಬಿಂಬದಲ್ಲಿ ತರಬೇತಿ ಪಡೆದ ಅನೇಕ ಮಕ್ಕಳು ಇಂದು ಹಿರಿತೆರೆ, ಕಿರುತೆರೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಆರ್‌.ಜೆ. ಅವಿನಾಶ್‌, ವಿನಾಯಕ ಜೋಷಿ, ದೀಪಾ, ನಂಜುಂಡ ಮೊದಲಾದವರು ನಮ್ಮ ತಂಡದ ಹಿರಿಯ ವಿದ್ಯಾರ್ಥಿಗಳು’ ಎಂದು ನೆನಪಿಸಿಕೊಳ್ಳುತ್ತಾರೆ ಪ್ರಕಾಶ್‌.

ಮಕ್ಕಳ ಚಟುವಟಿಕೆಗಳಿಗೆ ಸೀಮಿತ
‘ಹನುಮಂತನಗರ ಬಿಂಬ’ ಮಕ್ಕಳ ಚಟುವಟಿಕೆಗಳನ್ನಷ್ಟೇ ಪ್ರೋತ್ಸಾಹಿಸುತ್ತದೆ. ‘ಹನುಮಂತನಗರ ಬಿಂಬ ಆರು ತಿಂಗಳ ರಂಗ ತರಬೇತಿ ಕಾರ್ಯಾಗಾರ ಹಾಗೂ ಕಲಾಭಿರುಚಿ ಶಿಬಿರಗಳ ಮೂಲಕ ಮಕ್ಕಳ ಪ್ರತಿಭೆ ಹೊರತರಲು ಅವಕಾಶ ನೀಡುತ್ತದೆ. ಈ ಮೂಲಕ ಪ್ರತಿ ಕಾರ್ಯಾಗಾರದಲ್ಲಿ ಹೊಸ ಹೊಸ ಪ್ರತಿಭೆಗಳು ನಾಟಕ ಲೋಕಕ್ಕೆ ಪರಿಚಯವಾಗುತ್ತಿರುತ್ತಾರೆ’ ಎಂದು ಪ್ರಕಾಶ್‌ ಹೇಳುತ್ತಾರೆ. ಮಕ್ಕಳ ನಾಟಕಗಳು ಕಡಿಮೆಯಾಗುತ್ತಿದೆ ಎಂಬ ಅಪಸ್ವರ ಇತ್ತೀಚೆಗೆ ಕೇಳಿಬರುತ್ತಿದೆ.

ಆದರೆ ವಾಸ್ತವವಾಗಿ ವಯಸ್ಕರ ರಂಗಭೂಮಿಗೆ ಹೋಲಿಸಿದರೆ ಮಕ್ಕಳ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನವಾಗುವುದರೊಂದಿಗೆ ಅಭಿವೃದ್ಧಿಯಾಗುತ್ತಿದೆ. ಸರ್ಕಾರ ಹಾಗೂ ಮಕ್ಕಳ ಮನೋವಿಕಸನಕ್ಕೆ ಸಂಬಂಧಪಟ್ಟ ಸಂಸ್ಥೆಗಳು ಹಾಗೂ ಪೋಷಕರ ಮುತುವರ್ಜಿಯಿಂದ ಮಕ್ಕಳು ಸಹ ರಂಗಭೂಮಿಯಲ್ಲಿ ಹೆಚ್ಚಾಗಿ ತೊಡಗುತ್ತಿದ್ದಾರೆ. ಮಕ್ಕಳು ತಾವು ಬರುವುದಲ್ಲದೇ ತಮ್ಮ ಸುತ್ತಮುತ್ತಲಿನವರನ್ನು ನಾಟಕದತ್ತ ಸೆಳೆಯುತ್ತಾರೆ. ಇದು ಮಕ್ಕಳ ರಂಗಭೂಮಿಯ ಹೆಚ್ಚುಗಾರಿಕೆ’ ಎಂದು ಪ್ರಕಾಶ್‌ ವಿವರಿಸುತ್ತಾರೆ.

ರಂಗತರಬೇತಿ ಚಟುವಟಿಕೆ
ರಂಗತರಬೇತಿ ಕಾರ್ಯಾಗಾರ ಆರು ತಿಂಗಳ ಚಟುವಟಿಕಾ ಶಿಬಿರವಾಗಿದ್ದು, ಇದನ್ನು ಪ್ರತಿ ಶನಿವಾರ 5ರಿಂದ 7 .30ರ ತನಕ ನಡೆಸಲಾಗುತ್ತಿದೆ. ಇನ್ನು ಬಿಂಬ  ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಕಲಾಭಿರುಚಿ ಶಿಬಿರವನ್ನು ನಡೆಸುತ್ತದೆ. ಕಾರ್ಯಾಗಾರ ಹಾಗೂ ಶಿಬಿರಗಳಲ್ಲಿ ಮಕ್ಕಳಿಂದಲೇ ನಾಟಕಗಳನ್ನು ಪ್ರದರ್ಶನ ಮಾಡಲಾಗುತ್ತದೆ. ನಂತರ ಇವುಗಳನ್ನು ಕೆಲ ವಿಶೇಷ ಸಂದರ್ಭಗಳಲ್ಲಿ ಪ್ರದರ್ಶಿಸಲಾಗುತ್ತದೆ. ಬಳಿಕ ಸರ್ಕಾರಿ ಶಾಲೆ ಅಥವಾ ಸರ್ಕಾರೇತರ ಸಂಸ್ಥೆಗಳ ವಿನಂತಿ ಮೇರೆಗೆ  ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನ ಮಾಡುತ್ತೇವೆ ಎಂದು  ಪ್ರಕಾಶ್‌ ವಿವರಿಸುತ್ತಾರೆ.

***
ಆದಾಯ ಮೂಲ
ಹನುಮಂತನಗರ ಬಿಂಬದ ಮೂಲ ಆದಾಯ ಕಾರ್ಯಾಗಾರ ಹಾಗೂ ಕಲಾಭಿರುಚಿ ಶಿಬಿರದ ಶುಲ್ಕ. ಬೇರೆ ಬೇರೆ ಕಡೆಗಳಲ್ಲಿ ನಾಟಕ ಪ್ರದರ್ಶನಕ್ಕೆ ತಗುಲುವ ವೆಚ್ಚವನ್ನು ಪ್ರಕಾಶ್‌ ಹಾಗೂ ವನಮಾಲಾ ಭರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT