ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದ ಸೌತೆ ಕೋಟೆ

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಭೂಮಿ ಬೆದ್ದಲು. ಮಳೆ ಬಿದ್ದರೆ ಬೆಳೆ. ಬೆಳೆ ತ್ಯಾಜ್ಯವೇ ಗೊಬ್ಬರ, ಶ್ರಮದ ಉಳುಮೆ, ಮೂರು ತಿಂಗಳಲ್ಲಿ ಕೈ ತುಂಬಾ ಬೆಳೆ!
ಇದು ಚಿತ್ರದುರ್ಗದ ಹೊರವಲಯದಲ್ಲಿರುವ ಮದಕರಿಪುರದ ಸುತ್ತಮುತ್ತಲಿನ ರೈತರು ಸೌತೆಕಾಯಿ ಬೆಳೆಯುವ ಕಥೆ. ಈ ಭಾಗದ ಕಪ್ಪು ಭೂಮಿಯಲ್ಲಿ ನೀರಾವರಿ ಇಲ್ಲದೆ, ಮಳೆಗಾಲದಲ್ಲಿ ಬೆದ್ದಲು (ಹೊಲ) ಭೂಮಿಯಲ್ಲೇ ಕಡಿಮೆ ಖರ್ಚಿನಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆ ಬೆಳೆದು  ಹೆಚ್ಚಿನ ಹಣ ಸಂಪಾದಿಸುವ ಅತ್ಯುತ್ತಮ ಬೆಳೆಯಾಗಿದೆ.

ಜಿಲ್ಲೆಯಲ್ಲಿ ಪ್ರತಿ ವರ್ಷ ಸುಮಾರು 450 ರಿಂದ 500 ಹೆಕ್ಟೇರ್‌ ಪ್ರದೇಶದಲ್ಲಿ ಸೌತೆ ಬೆಳೆಯಲಾಗುತ್ತಿದೆ. ಜಿಲ್ಲೆಯಾದ್ಯಂತ ನೀರಾವರಿಯಲ್ಲಿ 250 ಹೆಕ್ಟೇರ್ ಹಾಗೂ ಮಳೆಯಾಶ್ರಿತವಾಗಿ (ಜುಲೈ ಮತ್ತು ಆಗಸ್ಟ್ ತಿಂಗಳವರೆಗೆ) ಸುಮಾರು 250 ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಯುತ್ತಿದ್ದಾರೆ. ನೀರಾವರಿ ಸೌಲಭ್ಯದಲ್ಲಿ ಸೌತೆ ಬೆಳೆಯುವ ರೈತರು ವರ್ಷ ಪೂರ್ತಿ ಬೆಳೆ ತೆಗೆಯುತ್ತಾರೆ. ವಿಶೇಷ ಎಂದರೆ, ಯಾವುದರಲ್ಲೇ ಬೆಳೆದರೂ, ಹೆಕ್ಟೇರ್‌ಗೆ 15 ರಿಂದ 20 ಟನ್ನಿನಷ್ಟು ಇಳುವರಿ ಪಡೆಯುತ್ತಾರೆ. ಆದರೆ ಬೆದ್ಲು ಭೂಮಿಯಲ್ಲಿ, ಮೂರು ತಿಂಗಳಿಗೆ ಬಂಡಾವಳ ಕಡಿಮೆ ಹಾಕಿ, ಅಷ್ಟು ಪ್ರಮಾಣದಲ್ಲಿ ಸೌತೆ ಇಳುವರಿ ತೆಗೆಯುವುದು ವಿಶೇಷ.

ಇಲ್ಲೆಲ್ಲ ಬೆಳೆಯುತ್ತಾರೆ
ಚಿತ್ರದುರ್ಗ ತಾಲ್ಲೂಕಿನ ಮಾನಂಗಿ, ದೊಡ್ಡಸಿದ್ದವ್ವನಹಳ್ಳಿ, ಹಳೆ ದ್ಯಾಮವ್ವನಹಳ್ಳಿ, ಕಸವರಹಟ್ಟಿ, ಗುಡ್ಡದ ರಂಗವ್ವನಹಳ್ಳಿ, ಕಸಬಾ ಹೋಬಳಿ, ತುರುವನೂರು ಸೇರಿದಂತೆ ಮದಕರಿಪುರದಲ್ಲಿ ಬೆಳೆಯುವ ರೈತರ ಸಂಖ್ಯೆ ಅಧಿಕ. ಬೆದ್ಲು ಭೂಮಿಯಲ್ಲಿ ಬೆಳೆಯುವ ಸೌತೆಗೆ ಸ್ವಲ್ಪ ಬೇಡಿಕೆ ಹೆಚ್ಚು. ಬೆದ್ಲು ಭೂಮಿಯ ಹಿಡುವಳಿದಾರರು ವರ್ಷದಲ್ಲಿ ಮೂರು ತಿಂಗಳಲ್ಲಿ ಮಾತ್ರ ಸೌತೆ ಬೆಳೆಯುತ್ತಾರೆ. ಅದು ಮಳೆಗಾಲದಲ್ಲಿ ಮಾತ್ರ. ಆದರೂ, ಆ ಮೂರು ತಿಂಗಳಲ್ಲಿ ವರ್ಷಕ್ಕಾಗುವಷ್ಟು ಲಾಭ ಪಡೆಯುತ್ತಾರೆ.  ಈ ಭಾಗದಲ್ಲಿ ಬೆಳೆಯುವುದೆಲ್ಲ ಬಹುತೇಕ ಜವಾರಿ ತಳಿ. ಜೂನ್‌ನಿಂದ ಬೆಳೆ ಪ್ರಾರಂಭ ವಾದರೆ, ಆಗಸ್ಟ್ ತಿಂಗಳ ಕೊನೆಯಲ್ಲಿ ಮಾರುಕಟ್ಟೆಯಲ್ಲಿ ರಾಶಿಯಾಗಿರುತ್ತದೆ. 

ಕಡಿಮೆ ಖರ್ಚು, ಅಧಿಕ ಲಾಭ
ಇಲ್ಲಿನ ಬಹಳಷ್ಟು ರೈತರು ಮಳೆಗಾಲದಲ್ಲಿ ಇದನ್ನು ಬೆಳೆಯುತ್ತಾರೆ. ಈ ರೈತರು ಒಂದು ಎಕರೆಗೆ ₨3 ರಿಂದ 4 ಸಾವಿರ ಹಣ ಖರ್ಚು ಮಾಡಿ ಅದರಿಂದ 50 ರಿಂದ 60 ಸಾವಿರ ರೂಪಾಯಿ ಲಾಭ ಪಡೆಯುತ್ತಾರೆ. ಈ ತರಕಾರಿ ಬೆಲೆ ಏರಿಕೆಯಾದರೆ, ಒಮ್ಮೊಮ್ಮೆ 90 ಸಾವಿರ ರೂಪಾಯಿ ದೊರೆತ ಉದಾಹರಣೆಗಳೂ ಇವೆ. ‘ಸೌತೆ ಕೃಷಿ ಸ್ವಲ್ಪ ಶ್ರಮದ ಬೇಸಾಯ ಎನ್ನುವುದನ್ನು ಹೊರತುಪಡಿಸಿದರೆ, ಕಾರ್ಮಿಕರ ಅವಲಂಬನೆ, ಔಷಧ ಸಿಂಪಡಣೆ, ಮೇಲ್ಗೊಬ್ಬರದ ಸಮಸ್ಯೆ.. ಇತ್ಯಾದಿಗಳಿಲ್ಲ’ ಎನ್ನುತ್ತಾರೆ ಮದಕರಿಪುರದ ರೈತ ರಮೇಶ್, ಹನುಮಂತಪ್ಪ.

ರುಚಿಗೆ ಚಿಕ್ಕದೇ ಮೇಲು
ಮದಕರಿಪುರದ ಸೌತೆ ಗುಣವೇ ಹಾಗೆ. ಗಾತ್ರದಲ್ಲಿ ಚಿಕ್ಕದು. ಗುಣ ಮತ್ತು ರುಚಿಯಲ್ಲಿ ಹಿರಿದು. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ಗ್ರಾಹಕರು ‘ಮದಕರಿಪುರದ ಸೌತೆ ಕೊಡ್ರಿ’ ಎಂದೇ ಹೇಳುತ್ತಾರೆ. ದುರ್ಗದ ಖಾನಾವಳಿಯಲ್ಲಿ ಮದಕರಿಪುರದ ಸೌತೆ ಸಲಾಡ್ ಆಗಿ ಬಳಕೆ. ಸಂಜೆ ಖಾರಾ ಮಂಡಕ್ಕಿಗೂ ಈರುಳ್ಳಿಗೆ ಪರ್ಯಾಯವಾಗಿ ಬಳಸುತ್ತಾರೆ. ಖಾನಾವಳಿ, ಡಾಬಾ, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನಿತ್ಯದ ರೊಟ್ಟಿ ಊಟದ ಜೊತೆಗೆ ಸೌತೆ ಬೇಕೇ ಬೇಕು.

ಇಲ್ಲಿಯ ಸೌತೆ ಬೆಳೆಗಾರರಲ್ಲಿ ಬಹುತೇಕರು ಸ್ವಾವಲಂಬಿಗಳು. ಬಿತ್ತನೆ ಬೀಜ ತಯಾರಿಸಿಕೊಳ್ಳುತ್ತಾರೆ. ಗೊಬ್ಬರವನ್ನೂ ಮನೆಯಲ್ಲೇ  ಮಾಡಿಕೊಳ್ಳುತ್ತಾರೆ. ಕಡಿಮೆ ಎಕರೆಯಲ್ಲಿ ಬೆಳೆಯುತ್ತಾರೆ. ಕುಟುಂಬದವರೇ ಆಳುಗಳಾಗುತ್ತಾರೆ. ಹೀಗಾಗಿ ಕಾರ್ಮಿಕರ ಅವಲಂಬನೆ ಕಡಿಮೆ. ಬೆಳೆದಿದ್ದು, ಗಳಿಸಿದ್ದು ಎಲ್ಲವೂ ಲಾಭವೇ ಸರಿ ಎಂಬುದಾಗಿ ಕೃಷಿಕ ದಾಸೇಗೌಡ ತಿಮ್ಮಣ, ಅವರ ಪತ್ನಿ ಪಾರ್ವತಮ್ಮ ಹೇಳುತ್ತಾರೆ.

ಮಹಾನಗರಕ್ಕೂ ರಫ್ತು
ಸ್ಥಳೀಯವಾಗಿ ಬೇಡಿಕೆ ಪೂರೈಕೆಯಾದ ಮೇಲೆ ಮದಕರಿಪುರದ ಚೋಟುದ್ದ ಸೌತೆ, ದೂರದ ಬೆಂಗಳೂರಿನ ಮಾರುಕಟ್ಟೆಗೆ ದಾಂಗುಡಿ ಇಡುತ್ತದೆ. ಬೆಂಗಳೂರಿಗೆ ಸಾಗುತ್ತಾ ನಡುವೆ ಹಿರಿಯೂರು, ಸಿರಾ, ತುಮಕೂರು, ಡಾಬಸ್ ಪೇಟೆ ಮಾರುಕಟ್ಟೆಗಳಲ್ಲೂ ಬೀಡು ಬಿಡುತ್ತದೆ. ಚೋಟುದ್ದ ಸೌತೆಯ ರುಚಿಕಂಡ ಮಹಾನಗರಗಳ ಗ್ರಾಹಕರು, ಅಂಗಡಿಗಳಲ್ಲಿ ಇದೇ ಸೌತೆ ತರಿಸಿಕೊಡಿ ಎಂದು ಬೇಡಿಕೆ ಇಡುತ್ತಾರಂತೆ. ಹೀಗಾಗಿ, ಚಿತ್ರದುರ್ಗದ ಸೌತೆ, ಹಾಸನ ಮತ್ತು ಬಳ್ಳಾರಿ ಸೌತೆಗೆ ಸ್ಪರ್ಧೆ ಒಡ್ಡುತ್ತದೆ ಎನ್ನುತ್ತಾರೆ ಮಹಾನಗರದ ತರಕಾರಿ ಮಾರಾಟಗಾರರು.

ಉತ್ತಮ ಫಸಲು
‘ಚಿತ್ರದುರ್ಗದ ಮದಕರಿಪುರ ಭಾಗದಲ್ಲಿ ಭೂಮಿ ಫಲವತ್ತಾಗಿದೆ. ಹಾಗಾಗಿ ಸೌತೆ ಬೆಳೆಯನ್ನು ಮಜಬೂತಾಗಿ ಬೆಳೆಯುತ್ತಿದ್ದಾರೆ. ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಬೆಳೆ ಬೆಳೆಯುತ್ತಿರುವುದರಿಂದ ಕೂಲಿ ಆಳಿನ ಸಮಸ್ಯೆ ಎದುರಾಗುವುದಿಲ್ಲ. ಸ್ವಾವಲಂಬಿಗಳಾಗಿರುವುದರಿಂದ ಗಳಿಸಿದ್ದೆಲ್ಲ ಲಾಭ. ತೋಟಗಾರಿಕಾ ಇಲಾಖೆ ಕೂಡ ಸೌತೆ ಬೆಳೆಗಾರರನ್ನು ಉತ್ತೇಜಿಸುತ್ತಿದೆ’ ಎನ್ನುತ್ತಾರೆ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ದೇವರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT