ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರರಂಗದ ಇತಿಹಾಸ ರಕ್ಷಣೆಗೆ ಭಂಡಾರ

‘ಕನ್ನಡ ವಾಕ್ಚಿತ್ರ ಹುಟ್ಟು ಹಬ್ಬ’ ಆಚರಣೆ
Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಚಿತ್ರರಂಗದ ಇತಿ--ಹಾಸವನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಲು ದೊಡ್ಡ ಚಿತ್ರ ಭಂಡಾರ ನಿರ್ಮಿ­ಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಉದ್ದೇಶ ಹೊಂದಿದ್ದು, ಈ ಬಗ್ಗೆ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸ­ಲಾಗಿದೆ’ ಎಂದು ಅಕಾಡೆಮಿ ಅಧ್ಯಕ್ಷ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು ತಿಳಿಸಿದರು.

ಅಕಾಡೆಮಿಯಲ್ಲಿ ಮಂಗಳವಾರ ಆಯೋಜಿಸಿದ್ದ ‘ಕನ್ನಡ ವಾಕ್ಚಿತ್ರ ಹುಟ್ಟು ಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಈವರೆಗೆ ನಿರ್ಮಾಣವಾದ ಸುಮಾರು ಮೂರು ಸಾವಿರ ಕನ್ನಡ ಸಿನಿಮಾಗಳ ಪೈಕಿ ನೂರಾರು ಚಿತ್ರಗಳು ಸೂಕ್ತ ರಕ್ಷಣೆ ಇಲ್ಲದೆ ನಾಶವಾಗಿವೆ. ಉಳಿದ ಚಿತ್ರಗಳನ್ನಾದರೂ ಡಿಜಿಟಲೀಕ­ರಣ ಮಾಡಿ ಸಂರಕ್ಷಣೆ ಮಾಡಬೇಕೆಂಬ ಉದ್ದೇಶ ಅಕಾಡೆಮಿಗಿದೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ಅಕಾಡೆಮಿ ವತಿಯಿಂದ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ ಅನೇಕ ಮಹನೀಯರ ಕುರಿತ ಪುಸ್ತಕಗಳನ್ನು ಹೊರತರುವ ಮತ್ತು ನಗರದಲ್ಲಿರುವ ಹಳೆಯ ಚಿತ್ರ­ಮಂದಿರಗಳ ಬಗ್ಗೆ ಅಧ್ಯಯನ ನಡೆಸಿ, ವಿಚಾರ ಸಂಕಿರಣ ಮಾಡಿ ಪುಸ್ತಕ­ವೊಂದನ್ನು ಪ್ರಕಟಿಸುವ ಉದ್ದೇಶವಿದೆ’ ಎಂದರು.

‘ಮೇ ಅಥವಾ ಜೂನ್‌ನಲ್ಲಿ ಅಕಾ­ಡೆಮಿ ವತಿಯಿಂದ ರಾಜ್ಯದಾದ್ಯಂತ 250 ವಿದ್ಯಾರ್ಥಿಗಳನ್ನು ಆಹ್ವಾನಿಸಿ ಚಿತ್ರಕಥೆ ರಚನೆ ಮತ್ತು ಛಾಯಾಗ್ರಹಣ ಕುರಿತ 10–12 ದಿನಗಳ ಕೋರ್ಸ್‌ ನಡೆಸುವ ಚಿಂತನೆ ಇದೆ. ಇದಕ್ಕೆ ದೇಶದ ಎಲ್ಲ ಭಾಷೆಗಳ ಪ್ರಮುಖ ನಿರ್ದೇಶಕರನ್ನು ಸಂಪನ್ಮೂಲ ವ್ಯಕ್ತಿಗಳನ್ನಾಗಿ ಆಹ್ವಾನಿಸ­ಲಾಗುತ್ತದೆ’ ಎಂದು ತಿಳಿಸಿದರು.

‘ಕನ್ನಡ ಚಿತ್ರರಂಗಕ್ಕೆ ಅನುಪಮ ಸೇವೆ ಸಲ್ಲಿಸಿದವರ ಹೆಸರಿನಲ್ಲಿ ಮುಂದಿನ ವರ್ಷದಿಂದ ಅಕಾಡೆಮಿ ವತಿಯಿಂದ ಪ್ರಶಸ್ತಿಗಳನ್ನು ನೀಡಬೇಕೆಂಬ ಯೋಜನೆ ರೂಪಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸ­ಲಾಗಿದೆ. ಅನುಮೊದನೆ ದೊರತರೆ ಮೊದಲ ಕಂತಿನಲ್ಲಿ ಹುಣಸೂರು ಕೃಷ್ಣಮೂರ್ತಿ, ಜಿ.ವಿ.ಅಯ್ಯರ್‌, ಬಿ.ಎಸ್‌.­ರಂಗಾ, ಕಲ್ಪನಾ ಸೇರಿದಂತೆ 10 ಜನರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ’ ಎಂದು ಹೇಳಿದರು.

ಹಿರಿಯ ನಿರ್ದೇಶಕ ಕೆ.ಎಸ್‌.ಎಲ್‌.­ಸ್ವಾಮಿ ಮಾತನಾಡಿ, ‘ಒಂದು ಕಾಲದಲ್ಲಿ ಅಸ್ಪೃಶ್ಯತೆ ಎದುರಿಸುತ್ತಿದ್ದ ಸಿನಿಮಾ ಇಂದು ಜನಜೀವನದಲ್ಲಿ ಹಾಸುಹೊಕ್ಕಾ­ಗಿದೆ. 81 ವರ್ಷಗಳ ನಮ್ಮ ಚಿತ್ರರಂಗದ ಸಾಧನೆ ಅವಲೋಕಿಸಿದಾಗ ಮುಖ್ಯವಾ­ದವು­ಗಳನ್ನು ಕಳೆದುಕೊಂಡಿ­ದ್ದೇವೆ ಎನ್ನು­ವುದು ಅರಿವಾಗುತ್ತದೆ. 1934–64ರ ಅವಧಿಯಲ್ಲಿ ಚಿತ್ರರಂಗಕ್ಕಾಗಿ ದುಡಿದ­ವರನ್ನು ನಾವು ಮರೆಯಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಒಂದೊಮ್ಮೆ ಚಿತ್ರರಂಗದವರಿಗೆ ಜ್ಞಾನಪೀಠವೆನಾದರೂ ನೀಡುವು­ದಾ­ದರೆ ಮರಣೋತ್ತರವಾಗಿ ಆದರೂ ಹುಣ­ಸೂರು ಕೃಷ್ಣಮೂರ್ತಿ ಅವರಿಗೆ ನೀಡಬೇಕು. ಇಂದು ಕನ್ನಡ ಚಿತ್ರರಂಗ ಉಳಿದಿದೆ ಎಂದರೆ ಅದಕ್ಕೆ ನಿರ್ದೇಶಕ ಶಂಕರ್‌ ಸಿಂಗ್ ಅವರೇ ಕಾರಣ. ಆದರೆ,  ಸರ್ಕಾರ ಅವರ ಹೆಸರನ್ನು ಈವರೆಗೆ ಯಾವುದೇ ವೃತ್ತ, ಬೀದಿಗೆ ಇಟ್ಟಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ಯ ಹಿರಿಯ ಉಪ ಸಂಪಾದಕರಾದ ರಘುನಾಥ್‌ ಚ.ಹ ಅವರ ‘ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾ’ ಮತ್ತು ಎನ್‌.ವಿಶಾಖ ಅವರ ‘ನಮ್ಮ ನಿರ್ದೇಶಕಿಯರು’ ಪುಸ್ತಕ­ಗಳನ್ನು ವಿಧಾನ ಪರಿಷತ್ತಿನ ಸದಸ್ಯೆ ಜಯಮಾಲ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಜಯಮಾಲ, ‘ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರಿಗೆ ಅಷ್ಟೊಂದು ಆದ್ಯತೆ ನೀಡುತ್ತಿಲ್ಲ. ಈ ಪ್ರವೃತ್ತಿ ಬದಲಾಗಬೇಕು. ಡಿಜಿಟಲ್‌ ಯುಗದಲ್ಲಿ ಜೀವಿಸುತ್ತಿರುವ ನಾವು ಹೊಸ ಆವಿಷ್ಕಾರಗಳಿಗೆ ನಮ್ಮನ್ನು ಒಗ್ಗಿಸಿಕೊಳ್ಳಬೇಕಿದೆ. ಅನೇಕರ ಶ್ರಮ­ದಿಂದ ಬೆಳೆದಿರುವ ಚಿತ್ರೋದ್ಯಮವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಲು ಹೊಸ ಪ್ರತಿಭೆಗಳಿಗೆ ಮಣೆ ಹಾಕಬೇಕಿದೆ’ ಎಂದು ಅಭಿಪ್ರಾಯಪಟ್ಟರು.

1934ರಲ್ಲಿ ನಿರ್ಮಾಣವಾದ ಕನ್ನಡ ಮೊದಲ ಚಿತ್ರ ‘ಭಕ್ತಧ್ರುವ’ದಲ್ಲಿ ನಟಿಸಿದ ಹಿರಿಯ ನಟಿ ಎಸ್‌.ಕೆ.­ಪದ್ಮಾ­ದೇವಿ ಅವರನ್ನು ಕಾರ್ಯಕ್ರಮ­ದಲ್ಲಿ ಸನ್ಮಾನಿಸಲಾಯಿತು. ಪದ್ಮಾದೇವಿ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಎಂಟು ದಶಕಗಳಲ್ಲಿ ತೆರೆಕಂಡ ಕನ್ನಡ ಚಲನಚಿತ್ರಗಳ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.

ಪುಸ್ತಕಗಳ ಬೆಲೆ
*ಕನ್ನಡದ ಮೊದಲ ‘ವಾಕ್ಚಿತ್ರ ಸತಿ ಸುಲೋಚನಾ’  – ₨120
*ನಮ್ಮ ನಿರ್ದೇಶಕಿಯರು – ₨100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT