ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಾಸಕ್ತ ಮೋದಿ ಭಕ್ತ ನಿಹಲಾನಿ

ವ್ಯಕ್ತಿ
Last Updated 18 ಜೂನ್ 2016, 19:30 IST
ಅಕ್ಷರ ಗಾತ್ರ

2015ರ ಜನವರಿ 19. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್‌ಸಿ) ಅಧ್ಯಕ್ಷರಾಗಿ ಪಹಲಾಜ್ ನಿಹಲಾನಿ ನೇಮಕಗೊಂಡರು. ಕುರ್ಚಿ ಮೇಲೆ ಕುಳಿತ ಕೆಲವೇ ದಿನಗಳಲ್ಲಿ ಸಿನಿಮಾಗಳಿಗೆ ಪ್ರಮಾಣಪತ್ರ ನೀಡುವ ವಿಷಯದಲ್ಲಿ ಇದ್ದ ನಿಯಮಾವಳಿಗಳನ್ನು ಅವರು ಭಾರತದ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಅತಿಯಾಗಿ ಬಿಗಿಗೊಳಿಸಿದರು.

ಅವರು ಎಷ್ಟರಮಟ್ಟಿಗೆ ಸಂಪ್ರದಾಯವಾದಿಯಾಗಿದ್ದರೆಂದರೆ, ‘ಸಿಬಿಎಫ್‌ಸಿ’ಯ ಇಬ್ಬರು ಸದಸ್ಯರಾಗಿದ್ದ ಅಶೋಕ್ ಪಂಡಿತ್ ಹಾಗೂ ಚಂದ್ರಪ್ರಕಾಶ್ ದ್ವಿವೇದಿ ಆ ವರ್ಷ ಮಾರ್ಚ್ 12ರಂದು, ತಮ್ಮ ಅಧ್ಯಕ್ಷರ ಕಟುವಾದ ಧೋರಣೆಯನ್ನು ಖಂಡಿಸಿದರು. ಸಂಸ್ಥೆಯನ್ನು ನಡೆಸುವುದು ಹೀಗಲ್ಲ ಎಂಬ ಅವರ ಅಭಿಪ್ರಾಯಕ್ಕೆ ಕಾರಣಗಳಿದ್ದವು.

ಅದರಿಂದ ಕಿಂಚಿತ್ತೂ ವಿಚಲಿತರಾಗದ ಪಹಲಾಜ್‌, 2015ರ ಜುಲೈ 9ರಂದು ಇನ್ನೊಂದು ತಿದ್ದುಪಡಿ ತಂದರು. ‘ಎ’ ಪ್ರಮಾಣಪತ್ರ ಪಡೆಯುವ ಸಿನಿಮಾಗಳನ್ನು ಟಿ.ವಿ. ವಾಹಿನಿಗಳಲ್ಲಿ ಸುತರಾಂ ಪ್ರದರ್ಶಿಸುವ ಹಾಗಿಲ್ಲ ಎನ್ನುವುದೇ ಆ ತಿದ್ದುಪಡಿ. ಅದಕ್ಕೂ ಮೊದಲು ‘ಎ’ ಪ್ರಮಾಣಪತ್ರ ಪಡೆದ ಸಿನಿಮಾಗಳ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ, ಮರುಪರಿಶೀಲಿಸಿ, ಕಿರುತೆರೆಯಲ್ಲಿ ಪ್ರದರ್ಶಿಸಲು ಅವಕಾಶ ನೀಡುವ ಪರಿಪಾಠವಿತ್ತು. ಪಹಲಾಜ್ ಅದಕ್ಕೂ ಕಡಿವಾಣ ಹಾಕಿದರು.

‘ಮೊದಲಿನ ‘ಎ’ ಪ್ರಮಾಣಪತ್ರ ಪಡೆದ ಸಿನಿಮಾಗಳಿಗೂ, ಈಗ ಪಡೆಯುವ ಸಿನಿಮಾಗಳಿಗೂ ಅಜಗಜಾಂತರ. ಈಗ ಸೆಕ್ಸ್ ತೋರುವುದು ಹೆಚ್ಚಾಗಿದ್ದು, ಮಕ್ಕಳು ಅದನ್ನು ನೋಡಬೇಕೇ’ ಎಂದು ಸಂಪ್ರದಾಯನಿಷ್ಠ ಅಜ್ಜನ ಶೈಲಿಯಲ್ಲಿ ಅವರು ಕೇಳಿದ್ದರು. ಟೀಕೆಗಳ ಮಹಾಪೂರವೇ ಹರಿಯಿತು. ಕೊನೆಗೆ ತಮ್ಮ ಅಭಿಪ್ರಾಯ ಬದಲಿಸಿಕೊಂಡು, ಆ ವಿಷಯದಲ್ಲಿ ಹಿಂದೆ ಇದ್ದ ನಿಯಮವನ್ನೇ ಮತ್ತೆ ಜಾರಿಗೆ ತಂದರು.

ಮೊನ್ನೆ ಮೊನ್ನೆ ‘ಉಡ್ತಾ ಪಂಜಾಬ್’ ಸಿನಿಮಾಗೆ 89 ಕಡೆ ಕತ್ತರಿ ಪ್ರಯೋಗ ಆಗಬೇಕು ಎಂದು ಸೂಚಿಸಿದಾಗ ಪಹಲಾಜ್ ನಿಹಲಾನಿ ಮತ್ತೆ ಸುದ್ದಿಮನೆಯ ಕೇಂದ್ರವಾದರು. ಸುದ್ದಿ ಮಾಡುವುದು ಅವರಿಗೆ ಮೊದಲಿನಿಂದಲೂ ಸಿದ್ಧಿಸಿದೆ. ‘ಸಿಬಿಎಫ್‌ಸಿ’ ಅಧ್ಯಕ್ಷ ಸ್ಥಾನಕ್ಕೆ ಲೀಲಾ ಸ್ಯಾಮ್ಸನ್ ರಾಜೀನಾಮೆ ಕೊಟ್ಟಮೇಲೆ ಆ ಗಾದಿ ಇವರಿಗೆ ಸಿಕ್ಕಿದ್ದು. ಆ ಕ್ಷಣವೇ ಲೀಲಾ ಮೇಲೆ ಮಾತಿನ ಕತ್ತಿ ಬೀಸಿದರು. ಭಾರತೀಯ ಸಂಸ್ಕೃತಿಗೆ ಚ್ಯುತಿ ತರುವ ಸಂಗತಿಗಳು ಸಿನಿಮಾದಲ್ಲಿ ಇರಕೂಡದು ಎಂದು ಹಳೆಯ ಮೇಷ್ಟರ ಶೈಲಿಯಲ್ಲಿ ಗುಡುಗಿದರು.

‘ನಾನು ಮೋದಿಯ ಚಮಚ’, ‘ಗಾಂಧಿ, ನೆಹರೂ ನಂತರ ದೇಶ ಕಾಯಬಲ್ಲ ವ್ಯಕ್ತಿಯಂತೆ ನನಗೆ ಕಂಡಿರುವುದು ಮೋದಿ’, ‘ಮೋದಿ ಅವರು ನನ್ನ ಗುರುವೂ ಹೌದು’ ಎಂದೆಲ್ಲಾ ಮುಕ್ತವಾಗಿ ಹೇಳಿಕೊಳ್ಳುವ ಪಹಲಾಜ್‌ಗೂ ಚಿತ್ರಲೋಕಕ್ಕೂ ಹಳೆಯ ನಂಟು.

ಹಿಂದಿಯಲ್ಲಿ ಭಿನ್ನ ಅಲೆಯ ಸಿನಿಮಾಗಳ ನಿರ್ದೇಶನದ ಮೂಲಕ ಪಳಗಿದ ಗೋವಿಂದ ನಿಹಲಾನಿ ಅವರ ಸಹೋದರ ಪಹಲಾಜ್. ಇಬ್ಬರ ನಡುವೆ ಹತ್ತು ವರ್ಷಗಳ ಅಂತರ; ಯೋಚನೆಯಲ್ಲೂ (ಗೋವಿಂದ ಹುಟ್ಟಿದ್ದು ಪಾಕಿಸ್ತಾನ ವಿಭಜನೆಯಾಗುವ ಮೊದಲು, ಸಿಂಧ್ ಪ್ರಾಂತ್ಯದಲ್ಲಿ). 1950ರ ಜನವರಿ 19ರಂದು ಹುಟ್ಟಿದ ಪಹಲಾಜ್ ‘ಹತ್‌ಕಡಿ’ ಸಿನಿಮಾ ಮೂಲಕ ನಿರ್ಮಾಣಕ್ಕೆ ಇಳಿದವರು.

ಸಂಜೀವ್ ಕುಮಾರ್, ಶತ್ರುಘ್ನ ಸಿನ್ಹಾ, ರೀನಾ ರಾಯ್ ಅಭಿನಯಿಸಿದ್ದ ಆ ಸಿನಿಮಾ ಗಳಿಕೆ ಉತ್ತಮವಾಗಿತ್ತಾದರೂ ಎರಡನೇ ಚಿತ್ರಕ್ಕೆ ಕೈಹಾಕಲು ಅವರಿಗೆ ಇನ್ನೂ ಮೂರು ವರ್ಷ ಬೇಕಾಯಿತು (ಎರಡನೇ ಸಿನಿಮಾ: ಆಂಧಿ-ತೂಫಾನ್). ಗೋವಿಂದ (ಇಲ್ಜಾಮ್-1986), ಚಂಕಿ ಪಾಂಡೆ (ಆಗ್ ಹಿ ಆಗ್-1987) ತರಹದ ಹೊಸ ಮುಖಗಳಿಗೆ ಅವಕಾಶ ಕೊಟ್ಟರು. ‘ಗುನಾಹೋಂ ಕಾ ಫೈಸ್ಲಾ’, ‘ಪಾಪ್ ಕಿ ದುನಿಯಾ’, ‘ಮಿಟ್ಟಿ ಔರ್ ಸೋನಾ’, ‘ಶೋಲಾ ಔರ್ ಶಬ್‌ನಮ್’, ‘ಆಂಖೆ’ ಅವರ ನಿರ್ಮಾಣದ ಹೆಸರಿಸಬಹುದಾದ ಚಿತ್ರಗಳು.

‘ಪಹ್ಲಾಜ್’ ಹಾಗೂ ‘ಅವತಾರ್’ ಸಿನಿಮಾಗಳನ್ನು ನಿರ್ಮಿಸಿದ್ದೇ ಅಲ್ಲದೆ ನಿರ್ದೇಶಕನ ಟೋಪಿಯನ್ನೂ ತೊಟ್ಟು ಒಂದು ಕೈ ನೋಡಿದ್ದ ಪಹಲಾಜ್, 2008ರಲ್ಲಿ ‘ಹಲ್ಲಾ ಬೋಲ್’ ಸಿನಿಮಾದ ಪಾತ್ರವೊಂದಕ್ಕೆ ಬಣ್ಣವನ್ನೂ ಹಚ್ಚಿದ್ದರು. ನಟ ಗೋವಿಂದ ಹಾಗೂ ಪಹಲಾಜ್ ನಡುವೆ ಅಪರೂಪದ ನಂಟು. ತಮ್ಮ ಪುತ್ರಿ ನರ್ಮದಾ ಅಹುಜಾ ನಟಿಯಾಗಬಯಸಿದ್ದಾಳೆ ಎಂದು ಗೋವಿಂದ ಹೇಳಿದ್ದೇ, ತಾನೇ ನಿರ್ಮಿಸುವುದಾಗಿ ಭರವಸೆ ಕೊಡುವಷ್ಟು ಅವರು ಆಪ್ತರು.
2014ರ ಚುನಾವಣೆ ಸಂದರ್ಭದಲ್ಲಿ ಪಹಲಾಜ್ ನಿಹಲಾನಿ ಅವರ ಮೋದಿ ಜಪ ಜಾಹೀರಾಯಿತು. ‘ಹರ್ ಹರ್ ಮೋದಿ, ಘರ್ ಘರ್ ಮೋದಿ’ ಎಂಬ ಯೂಟ್ಯೂಬ್ ವಿಡಿಯೊ ತಯಾರಿಸಿ ಅವರು ತಮ್ಮ ಅಭಿಮಾನ ಮೆರೆದರು.

ಅವರ ಭಜನೆ ಖುದ್ದು ಮೋದಿಯವರಿಗೂ ಒಮ್ಮೆ ಪೇಚನ್ನು ಉಂಟುಮಾಡಿತು. ಕಳೆದ ವರ್ಷ ನವೆಂಬರ್ 10ರಂದು ‘ಮೇರಾ ದೇಶ್ ಮಹಾನ್’ ಎಂಬ ಸಂಗೀತದ ವಿಡಿಯೊ ಒಂದನ್ನು ಪಹಲಾಜ್ ನಿರ್ಮಾಣ ಮಾಡಿದರು. ‘ಪ್ರೇಮ್ ರತನ್ ಧನ್‌ಪಾಯೊ’ ಸಿನಿಮಾ ತೆರೆಕಂಡಾಗ, ಮಧ್ಯಂತರದಲ್ಲಿ ಆ ವಿಡಿಯೊದ ಸಂಕಲನ ಮಾಡಿದ ಪ್ರತಿಯನ್ನು ಕೆಲವು ಚಿತ್ರಮಂದಿರಗಳು ಪ್ರದರ್ಶಿಸಿದವು.

ಅದರಲ್ಲಿ ಮೋದಿ ಗುಣಗಾನ ಉತ್ಪ್ರೇಕ್ಷಿತ ಮಟ್ಟಕ್ಕೆ ಇತ್ತು ಎಂದು ಸುದ್ದಿಯಾದದ್ದೇ ವಾರ್ತಾ ಮತ್ತು ಪ್ರಸಾರ ಇಲಾಖೆಗೆ ಮಾಹಿತಿ ಹೋಯಿತು. ತಮ್ಮ ಸ್ಥಾನ ಬಳಸಿ ಪಹಲಾಜ್ ಮಾಡಿದ ಈ ‘ವಾಚ್ಯ ಮೋದಿ ಭಜನೆ’ಯನ್ನು ಇಲಾಖೆ ಖಂಡಿಸಿತು. ಈ ರೀತಿ ಮಾಡುವುದನ್ನು ಮುಂದುವರಿಸಿದರೆ ತಮ್ಮ ಕುರ್ಚಿಯಿಂದ ಕೆಳಗೆ ಇಳಿಯಬೇಕಾಗುತ್ತದೆ ಎಂದು ಮೋದಿ ಬೇರೆಯವರ ಮೂಲಕ ಪಹಲಾಜ್ ಅವರನ್ನು ಎಚ್ಚರಿಸಿದರು ಎಂದೂ ಕೆಲವು ಪತ್ರಿಕೆಗಳು ವರದಿ ಮಾಡಿದವು.

ಈ ಯಾವ ಘಟನೆಗಳಿಂದಲೂ ಪಹಲಾಜ್ ವಿಚಲಿತರಾಗುವುದಿಲ್ಲ. ಈಗಲೂ ಅವರು ಭಾರತೀಯ ಸಂಸ್ಕೃತಿಯ ವಕ್ತಾರ ತಾನು ಎನ್ನುವ ಧಾಟಿಯಲ್ಲೇ ಮಾತನಾಡುವುದು. ಸಿನಿಮಾಗೆ ಇರಬೇಕಾದ ದೃಶ್ಯ ಸ್ವಾತಂತ್ರ್ಯದ ಕುರಿತು ಚರ್ಚೆಗೆ ಎಳೆದರೂ ಜಗ್ಗದ ವ್ಯಕ್ತಿತ್ವ. ‘ಉಡ್ತಾ ಪಂಜಾಬ್’ಗೆ ಒಂದೇ ಕಟ್ ಸಾಕು ಎಂದು ನ್ಯಾಯಾಲಯ ಸೂಚಿಸಿದ ಮೇಲೆ ಅವರು ಕೊಂಚ ತಣ್ಣಗಾದಂತೆ ಕಾಣುತ್ತಿದ್ದಾರಾದರೂ, ನಿಲುವನ್ನು ಬದಲಿಸಿಕೊಳ್ಳಲು ಸಿದ್ಧರಿಲ್ಲ. ಅವರು ‘ಸಿಬಿಎಫ್‌ಸಿ’ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲಿ ಎಂಬ ಕೂಗಂತೂ ಈಗ ಜೋರಾಗಿದೆ.

ಸಿಬಿಎಫ್‌ಸಿ ಹೀಗೆ ಇರಕೂಡದು ಎಂದು ಟೀಕಿಸುತ್ತಿರುವವರಲ್ಲಿ ನಿರ್ದೇಶಕ ಕರಣ್ ಜೋಹರ್ ಕೂಡ ಪ್ರಮುಖರು. ಒಂದು ಕಾಲದಲ್ಲಿ ಕರಣ್ ತಂದೆ ಯಶ್ ಜೋಹರ್ ಕೂಡ ಪಹಲಾಜ್ ಅವರಿಗೆ ಆಪ್ತರಾಗಿದ್ದವರು.

ಚಿರಾಗ್ ನಿಹಲಾನಿ, ವಿಶಾಲ್ ನಿಹಲಾನಿ ಎಂಬ ಮಕ್ಕಳ ಅಪ್ಪನಾಗಿ ಅವರಿಗೂ ಸಂಸ್ಕೃತಿಯ ಪಾಠ ಹೇಳಿರುವ ಪಹಲಾಜ್, ‘ಸಂಸ್ಕಾರಿ’ ಎಂಬ ಸಿನಿಮಾ ಮಾಡಲು ಶೀರ್ಷಿಕೆಯನ್ನು ನೋಂದಾಯಿಸಿ ವರ್ಷಗಳೇ ಕಳೆದಿವೆ. ಅವರ ಸಂಸ್ಕಾರದ ಭಜನೆಗೂ ಈ ಸಿನಿಮಾ ಶೀರ್ಷಿಕೆಗೂ ಬಹಳ ಹೊಂದಾಣಿಕೆ ಇದೆ ಎಂದು ಕೆಲವರು ಟೀಕಿಸುತ್ತಿದ್ದರೆ, ಅವರು ಮಾತ್ರ ‘ಹೌದು... ನಾನು ಮೋದಿಯ ಭಕ್ತ... ಏನಿವಾಗ?’ ಎಂದು ಹಾರಿಕೆಯ ಪ್ರತಿಕ್ರಿಯೆ ನೀಡುವುದನ್ನು ಮುಂದುವರಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT