ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರ ನಿರ್ದೇಶಕನ ಅಡುಗೆಮನೆ!

ರಸಾಸ್ವಾದ
Last Updated 16 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮಹಾಲಕ್ಷ್ಮೀಪುರಂ ಆರನೇ ಮುಖ್ಯರಸ್ತೆಯಲ್ಲಿರುವ ನಂದಿನಿ ಥಿಯೇಟರ್‌ ಬಳಿ ಸಾಗುತ್ತಿದ್ದಂತೆ ‘ಅಡುಗೆಮನೆ’ ಉತ್ತರಕರ್ನಾಟಕ ಶೈಲಿಯ ಜೋಳದ ರೊಟ್ಟಿ ಊಟ ಎಂಬ ಬೋರ್ಡು ಕಾಣಿಸುತ್ತದೆ. ಆದರೆ ಮಾಮೂಲಿ ಹೋಟೆಲಿನ ಆಕರ್ಷಣೆ ಇಲ್ಲ. ನಾಲ್ಕು ಮೆಟ್ಟಿಲು ಇಳಿದು ನೆಲಮಹಡಿ ಪ್ರವೇಶಿಸಿದರೆ ಮನೆ. ಹಾಲ್‌ನಲ್ಲಿ ನಾಲ್ಕು ಊಟದ ಟೇಬಲ್‌. ಪಾತ್ರೆ ಪಗಡೆಗಳ ಸದ್ದಿಲ್ಲ. ಜನರ ಓಡಾಟವಿಲ್ಲ. ಶಾಂತ ವಾತಾವರಣ. ಮಧ್ಯಾಹ್ನ 12 ಆಗುತ್ತಿದ್ದಂತೆ ಒಬ್ಬೊಬ್ಬರೇ ಬಂದು ಟೇಬಲಿನ ಬಳಿ ಕುಳಿತುಕೊಳ್ಳುತ್ತಾರೆ. ಒಳಮನೆಯಿಂದ ತಟಪಟ ಸದ್ದು ಒಂದೇ ಸಮನೆ ಬರುತ್ತದೆ. ಬಿಸಿಬಿಸಿ ಜೋಳದ ರೊಟ್ಟಿ ಸುಡುವ ಪರಿಮಳ ಹೊಮ್ಮುತ್ತದೆ. ರೊಟ್ಟಿ ತಟ್ಟುವ ಸದ್ದು ಬಿಟ್ಟರೆ ಬೇರೆ ಸದ್ದಿಲ್ಲ. ಮನೆಯೊಡತಿ ರೊಟ್ಟಿ ತಟ್ಟಿ ಸುಟ್ಟುಕೊಟ್ಟರೆ, ಮನೆಯೊಡೆಯ ಬಂದವರಿಗೆ ಊಟ ಬಡಿಸಿ ತಟ್ಟೆ ಎತ್ತಿ, ಟೇಬಲ್‌ ಶುಚಿ ಮಾಡುತ್ತಾರೆ. ಮತ್ತೆ ಬಂದವರಿಗೆ ಇದೇ ರೀತಿಯ ಆತಿಥ್ಯ. ಹೀಗೆ ಮಧ್ಯಾಹ್ನ 3ರವರೆಗೂ ನಡೆಯುತ್ತದೆ. ನಂತರ ವಿರಾಮ.

ಆದರೆ ಹೋಟೆಲಿನ ಬಾಣಸಿಗ, ಸಪ್ಲಯರ್‌, ಕ್ಲೀನರ್‌ ಹೀಗೆ ಮೂರ್‍ನಾಲ್ಕು ಕೆಲಸ ಮಾಡುತ್ತಿರುವ ಮನೆಯೊಡೆಯ ಚಿತ್ರ ನಿರ್ದೇಶಕ ಎಂಬುದು ಅಲ್ಲಿ ಊಟಮಾಡಿ ಹೋಗುವ ಅನೇಕರಿಗೆ ಗೊತ್ತಿಲ್ಲ.

ಚಿತ್ರರಂಗದ ಸೆಳೆತದಿಂದ ಚಿತ್ರ ನಿರ್ದೇಶನ, ನಿರ್ಮಾಣದ ಜೊತೆಗೆ ಸಂಭಾಷಣೆಕಾರರಾಗಿ ಅದೃಷ್ಟ ಪರೀಕ್ಷೆಗೆ ಒಳಗಾದವರು ಗೊಡಚಿ ಮಹಾರುದ್ರ. ಗದಗ ಜಿಲ್ಲೆಯ ಇವರು ಉತ್ತರ ಕರ್ನಾಟಕದ ಕತೆಗಳು ಕನ್ನಡ ಸಿನಿಮಾಗಳಾಗುತ್ತಿಲ್ಲ ಎಂಬ ಕೊರಗಿನಿಂದಲೇ ಚಿತ್ರ ಪ್ರೀತಿ ಬೆಳೆಸಿಕೊಂಡವರು.

ಮೂವತ್ತು ವರ್ಷಗಳ ಹಿಂದೆ ಹೊಟ್ಟೆ ಹೊರೆಯುವುದಕ್ಕಾಗಿ ಫೋಟೊ ಸ್ಟುಡಿಯೋ ಇಟ್ಟುಕೊಂಡು, ಚಿತ್ರರಂಗದಲ್ಲೂ ತಮ್ಮ ಕನಸುಗಳನ್ನು ಸಾಕಾರಗೊಳಿಸುವತ್ತ ಹೆಜ್ಜೆ ಇಟ್ಟ ಗೊಡಚಿ ಮಹಾರುದ್ರ ಅವರ ನಿರ್ದೇಶನದ ‘ಬನ್ನಿ’ ಚಿತ್ರ ಮೂರು ವಿಭಾಗಗಳಲ್ಲಿ 2009–10ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿತ್ತು. ಇದೇ ಚಿತ್ರದ ಅತ್ಯುತ್ತಮ ಸಂಭಾಷಣೆಗಾರ ಪ್ರಶಸ್ತಿ ಕೂಡ ಅವರಿಗೆ ಲಭಿಸಿತ್ತು. ನಂತರ ‘ತಮಸೋಮ ಜ್ಯೋತಿರ್ಗಮಯ’ ಚಿತ್ರ ನಿರ್ದೇಶನ ಮಾಡಿದ್ದರು. ಮಗಳು ಹತ್ತು ವರ್ಷದ ಯಶಸ್ವಿನಿ ಈಗಾಗಲೇ ಬಾಲನಟಿಯಾಗಿ ಗುರುತಿಸಿಕೊಂಡಿದ್ದಾಳೆ. ಇತ್ತೀಚೆಗೆ ತೆರೆಕಂಡ ‘ಬೃಂದಾವನ’ ಚಿತ್ರದಲ್ಲಿ ಆಕೆ ಅಭಿನಯಿಸಿದ್ದಾಳೆ.

ಚಿತ್ರ ನಿರ್ಮಾಣದಲ್ಲಿ ಕೈಸುಟ್ಟುಕೊಂಡ ಇವರು ಬದುಕಿಗಾಗಿ ಕಂಡುಕೊಂಡದ್ದು ಹೋಟೆಲ್. ಅದಕ್ಕಾಗಿ ಮನೆಯನ್ನೇ ಹೋಟೆಲಾಗಿ

ಪರಿವರ್ತಿಸಿಕೊಂಡರು. ಗಂಡ, ಹೆಂಡತಿ ಇಬ್ಬರೇ ಸೇರಿ ದಿನಕ್ಕೆ ಐವತ್ತು ಮಂದಿಗೆ ಊಟ ಬಡಿಸುತ್ತಾರೆ. ‘ಅಡುಗೆಮನೆ’ ಇವರ ಹೋಟೆಲಿನ ಹೆಸರು. ಇಲ್ಲಿ ಸಿಗುವುದು ಸಸ್ಯಾಹಾರದ ಊಟ ಮಾತ್ರ. ಜೋಳದ ರೊಟ್ಟಿ, ಎಣ್ಣೆಗಾಯಿ, ಕಾಳಿನ ಪಲ್ಯ, ಚಟ್ನಿಪುಡಿ, ಸೊಪ್ಪಿನಸಾರು, ಮೊಸರು, ಮಜ್ಜಿಗೆ ಇವಿಷ್ಟು ಇಲ್ಲಿನ ‘ಮೆನು’. ಊಟದ ಟೇಬಲ್ಲಿನ ಮೇಲೆ ದಿನಕ್ಕೊಂದು ಬಗೆಯ ಹಸಿ ಸೊಪ್ಪು ಇಡುವುದು ಇವರ ವಿಶೇಷ.

ಬೇಕಾದವರು ಊಟದ ಜೊತೆಗೆ ಹಸಿ ಸೊಪ್ಪನ್ನು ಬೆರೆಸಿಕೊಳ್ಳಬಹುದು. ಆರೋಗ್ಯದ ದೃಷ್ಟಿಯಿಂದ ಕಡಿಮೆ ಮಸಾಲೆ, ಎಣ್ಣೆ ಬಳಸುತ್ತಾರೆ. ಹಸಿದು ಬಂದವರು ಕೊಡುವ ಹಣಕ್ಕೆ ಮೋಸವಾಗಬಾರದು. ಹೊಟ್ಟೆ ತುಂಬ ಉಣ್ಣಬೇಕು. ಹೋಟೆಲನ್ನು ಲಾಭದ ದೃಷ್ಟಿಯಿಂದ ಮಾತ್ರ ನಡೆಸಬಾರದು ಎನ್ನುವುದು ಇವರ ಉದ್ದೇಶ. 

ಊಟದಂತೆ ಚಿತ್ರವೂ ರುಚಿಯಾಗಿರಬೇಕು
ಏನೇನೋ ಕನಸುಗಳನ್ನು ಹೊತ್ತು ಬೆಂಗಳೂರಿಗೆ ಬಂದೆ. ಚಿತ್ರರಂಗದ ಸೆಳೆತ ಒಂದಷ್ಟು ಪಾಠ ಕಲಿಸಿದೆ. ‘ಊಟದಂತೆ ಚಿತ್ರವೂ

ರುಚಿಯಾಗಿರಬೇಕು’ ಎಂಬುದನ್ನು ಚಿತ್ರರಂಗದಿಂದ ಕಂಡುಕೊಂಡೆ. ಚಿತ್ರ ನಿರ್ಮಾಣದ ನಂತರ ಆರ್ಥಿಕ ನಷ್ಟ ಉಂಟಾದಾಗ ಕಂಡುಕೊಂಡದ್ದು ಹೋಟೆಲ್ ವೃತ್ತಿ. ಆದರೆ ಹಾಕಲು ಬಂಡವಾಳ ಇರಲಿಲ್ಲ. ಹೇಗೂ ಪ್ರೊಡಕ್ಷನ್‌ ಹುಡುಗರಿಗೆ ನಾನೇ ಅಡುಗೆ ಮಾಡಿ ಹಾಕಿದ ಅನುಭವವಿತ್ತು. ಹಾಗಾಗಿ ಮನೆಯಲ್ಲಿಯೇ ಊಟ ತಯಾರಿಸಿ ನೀಡುವುದು ಎಂದು ನಿರ್ಧರಿಸಿದೆ. ಮನೆಯಲ್ಲಿಯೇ ಹೋಟೆಲ್ ನಡೆಸುವಾಗ ಇದ್ದ ಪಾತ್ರೆ ಪಗಡಗಳೇ ಸಾಕಾಗುತ್ತವೆ. ‘ಅಡುಗೆ ಮನೆ’ ಎಂದು ಹೊರಗೆ ಬೋರ್ಡ್‌ ಹಾಕಿದೆ. ಸಾರು, ಪಲ್ಯ, ಚಟ್ನಿ, ಮೊಸರು, ಮಜ್ಜಿಗೆ ಸಿದ್ಧಪಡಿಸಿಟ್ಟುಕೊಳ್ಳುತ್ತೇವೆ. ಜೋಳದ ರೊಟ್ಟಿ ಮತ್ತು ಚಪಾತಿಯನ್ನು ತಕ್ಷಣವೇ ತಯಾರಿಸಿ ಕೊಡುತ್ತೇವೆ. ಪ್ರತಿದಿನ ಮಧ್ಯಾಹ್ನ ಸರಾಸರಿ ಐವತ್ತು ಜನ ಊಟಕ್ಕೆ ಬರುತ್ತಾರೆ. ಕೆಲವರು ಪಾರ್ಸೆಲ್‌ ಕೊಂಡೊಯ್ಯುತ್ತಾರೆ. ನಾನು, ಪತ್ನಿ ನಾಗರತ್ನ ಇಬ್ಬರೇ ಕೆಲಸಗಾರರು. ಹಾಗಾಗಿ ವೆಚ್ಚ ಕಡಿಮೆ. ಇದರಲ್ಲಿಯೇ ಬದುಕು ಸಾಗುತ್ತಿದೆ. ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಹಾಗಂತ ಚಿತ್ರರಂಗದ ತುಡಿತ ಕಡಿಮೆಯಾಗಿಲ್ಲ. ಒಳ್ಳೆಯ ಪುಸ್ತಕಗಳನ್ನು ಓದುವುದು, ಕತೆಗಳನ್ನು ಬರೆಯುವುದು, ಚಿತ್ರಕತೆ ಸಿದ್ಧಪಡಿಸುವುದು ಸಾಗುತ್ತಲೇ ಇದೆ. ನನ್ನ ಕತೆಗಳು ಕಮರ್ಷಿಯಲ್‌ ಗುಣ ಹೊಂದಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಹಾಗಾಗಿ ನನಗೆ ನಿರ್ಮಾಪಕರು ಸಿಗುತ್ತಿಲ್ಲ. ಮೊದಲು ನನ್ನ ಬದುಕನ್ನು ಭದ್ರಪಡಿಸಿಕೊಳ್ಳಬೇಕು. ನಂತರ  ಕನಸನ್ನು ನನಸಾಗಿಸಿಕೊಳ್ಳಬಹುದು. ಹಾಗಾಗಿ ಹೋಟೆಲು ವೃತ್ತಿಯನ್ನೇ ವಿಸ್ತರಿಸಬೇಕೆಂದಿದ್ದೇನೆ. ಹೆಚ್ಚು ಜನ ಬರುವ ಜಾಗದಲ್ಲಿ ಹೋಟೆಲು ಸ್ಥಾಪಿಸುವ ನಿರ್ಧಾರ ಮಾಡಿದ್ದೇನೆ. ಒಳ್ಳೆಯತನವಿದ್ದರೆ, ಪ್ರಾಮಾಣಿಕವಾಗಿ ದುಡಿದರೆ ಆ ವೃತ್ತಿ ನಮ್ಮ ಕೈ ಹಿಡಿಯುತ್ತದೆ.
–ಮಹಾರುದ್ರ, ಗೊಡಚಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT