ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನು ಆರೋಗ್ಯಕ್ಕೆ ಹೊನ್ನು

Last Updated 4 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಆಯುರ್ವೇದ ಎಂದರೆ ಬರೀಯ ಗಿಡಮೂಲಿಕೆಗಳು ಎಂಬ ಕಲ್ಪನೆ ಇತ್ತು. ಅತಿಯಾದ ಪ್ರಮಾಣದಲ್ಲಿ ಔಷಧಿ ಸೇವನೆ, ಕಹಿಯಾದ ಅದರ ರುಚಿ, ದೀರ್ಘ ಕಾಲೀನ ಹಾಗೂ ತೀವ್ರವಾದ ರೋಗಗಳ ಮೇಲೆ ಅದರ ನಿದಾನ ಗತಿಯ ಪರಿಣಾಮ ಆಯುರ್ವೇದ ದೊಡ್ಡ ಸವಾಲುಗಳಾಗಿದ್ದವು. ಆಗ ನಮ್ಮ ಆಚಾರ್ಯರು ಕಂಡುಕೊಂಡ ಉತ್ತರ ರಸೌಷಧಿ(ಲೋಹಾದಿ ಧಾತು). ಅದರಲ್ಲಿ ಮುಖ್ಯವಾದ, ಬಹುಗುಣವುಳ್ಳ, ನಿರ್ವಿಷವಾದ ಧಾತುವೇ ಚಿನ್ನ(ಸುವರ್ಣ).

ಚಿನ್ನವನ್ನು ಅತಿ ಸುಲಭದಲ್ಲಿ ಶುದ್ಧೀಕರಿಸಬಹುದು. ಇದನ್ನು ಯಾವುದೇ ಗಿಡಮೂಲಿಕೆಯ ಔಷಧಿಯೊಂದಿಗೆ ನಿಯಮಿತವಾದ ಪ್ರಮಾಣದಲ್ಲಿ ಬೆರೆಸಿದರೆ ಅದರ ಗುಣ ವರ್ಧಿಸುತ್ತದೆ ಕಾಯಿಲೆಯ ಮೇಲೆ ಶೀಘ್ರ ಪರಿಣಾಮ ಬೀರುತ್ತದೆ.

ಇದು ವಿಷಹರವಾಗಿದ್ದು ನಮ್ಮ ದೇಹದಲ್ಲಿರುವ ಎಲ್ಲಾ ದೋಷವನ್ನು ಶಮನಗೊಳಿಸುತ್ತದೆ. ಹೃದಯದ ಹಾಗೂ ಕಣ್ಣಿನ ತೊಂದರೆಗಳಿಗೆ ಉತ್ತಮ, ಆಯುಷ್ಯವನ್ನು ವೃದ್ಧಿಸುತ್ತದೆ, ದೇಹಕ್ಕೆ ಪುಷ್ಟಿ ನೀಡುತ್ತದೆ. ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಯನ ಹೆಚ್ಚಿಸುತ್ತದೆ, ಅಸ್ಪಷ್ಟ ಮಾತನ್ನು ಸರಿಪಡಿಸುತ್ತದೆ.
ಪ್ರಾಚೀನ ಭಾರತದ ಮಕ್ಕಳ ತಜ್ಞ ಕಾಶ್ಯಪಾಚಾರ್ಯರು ೧೬ ಸಂಸ್ಕಾರಗಳಾದ ಅನ್ನ ಪ್ರಾಶನ, ವಿದ್ಯಾಭ್ಯಾಸ ಮುಂತಾದವುಗಳೊಂದಿಗೆ ಸ್ವರ್ಣಪ್ರಾಶನ ಸಂಸ್ಕಾರವನ್ನು ಸೇರಿಸಿದರು.

ಸ್ವರ್ಣಪ್ರಾಶನ ಎಂದರೇನು?
ಹಿಂದಿನ ಕಾಲದಲ್ಲಿ, ಮಕ್ಕಳಿಗೆ ಗಿಡಮೂಲಿಕೆಗಳನ್ನು ತೇಯ್ದು ಹಾಕುತ್ತಿದ್ದರು. ಇದನ್ನು ಸುತ್ತುಕಾರ ಎನ್ನುತ್ತಾರೆ. ಅದರೊಂದಿಗೆ ಹಳೆಯ ಚಿನ್ನವನ್ನು ಹಾಕುತ್ತಿದ್ದರು, ಇದು ಕೂಡ ಒಂದು ವಿಧವಾದ ಸ್ವರ್ಣ ಪ್ರಾಶನ. ಆದರೆ ಆ ಚಿನ್ನವು ಶುದ್ಧವಾಗಿಲ್ಲ. ಅದರಿಂದ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಂಭವವಿತ್ತು. ಆದ್ದರಿಂದ ಶೋಧಿಸಿದ ಚಿನ್ನದ ತಂತಿಯನ್ನು ಬಜೆಯ ಬೇರಿನ ನಡುವಿಟ್ಟು ತೇಯ್ದು ಕೊಡಬಹುದು. ಇದನ್ನು ವಚಾಸ್ವರ್ಣವೆಂದು ಕರೆಯುತ್ತಾರೆ.

ಸುವರ್ಣ ಬಿಂದು ಪ್ರಾಶನ ಇನ್ನೊಂದು ವಿಧ. ಇದು ಗಿಡಮೂಲಿಕೆಗಳಿಂದ ಮಾಡಿರುವ ತುಪ್ಪ ಹಾಗೂ ಜೇನುತುಪ್ಪವನ್ನು ಸಮಪ್ರಮಾಣದಲ್ಲಿ ಬೆರೆಸಿ ಅದಕ್ಕೆ ಬಜೆ, ಜೇಷ್ಟಮಧು, ಬ್ರಾಹ್ಮೀ, ನೆಲ್ಲೀಕಾಯಿ, ಅಳಲೇಕಾಯಿ, ತಾರೇ ಕಾಯಿ, ಚಿತ್ರಕ, ಶತಪುಷ್ಪ, ಶತಾವರಿ ಮುಂತಾದ ೯ ಗಿಡಮೂಲಿಕೆಗಳನ್ನು ಸೇರಿಸಿ ಅದರೊಂದಿಗೆ ಶುದ್ಧ ಸ್ವರ್ಣ ಭಸ್ಮವನ್ನು ಸೇರಿಸಿ ಮಾಡುವಂತಹ ಒಂದು ಮಿಶ್ರಣ.

ಸ್ವರ್ಣಪ್ರಾಶನವನ್ನು ಹೇಗೆ, ಯಾವಾಗ ಹಾಕಿಸಬೇಕು: ವಚಾಸ್ವರ್ಣವಾದರೆ ಮಗು ಹುಟ್ಟಿದಾಗಿನಿಂದ ೫ ವರ್ಷದವರೆಗೆ ಪ್ರತೀ ಮಂಗಳವಾರ, ಶುಕ್ರವಾರ ಬೇರೆ ಗಿಡಮೂಲಿಕೆಗಳೊಂದಿಗೆ ತೇಯ್ದು ಹಾಕಬೇಕು.

ಸ್ವರ್ಣ ಬಿಂದು ಪ್ರಾಶನವಾದರೆ ಹುಟ್ಟಿದಾಗಿನಿಂದ ೧೬ ವರ್ಷದ ಒಳಗೆ ಕನಿಷ್ಠ ಒಂದು ತಿಂಗಳು ಸತತವಾಗಿ ಹಾಕಿಸಬೇಕು. ಸತತ ೬ ತಿಂಗಳು ಹಾಕಿಸಿದರೆ ಹೆಚ್ಚು ಪರಿಣಾಮಕಾರಿ. ಇದನ್ನು ಪ್ರತಿದಿನ ಬೆಳಿಗ್ಗೆ ಖಾಲೀ ಹೊಟ್ಟೆಯಲ್ಲೇ ಹಾಕಬೇಕು.

ಸ್ವರ್ಣ ಪ್ರಾಶನದ ಉಪಯೋಗಗಳು: ಪಚನಶಕ್ತಿ ಹೆಚ್ಚಿಸಿ, ಸರಿಯಾದ ಆಹಾರ ಕೊಟ್ಟಲ್ಲಿ ಪೌಷ್ಟಿಕಾಂಶದ ಕೊರತೆ ನೀಗಿಸುತ್ತದೆ. ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ,  ಪದೇ ಪದೇ ಜ್ವರ, ಶೀತ, ಕೆಮ್ಮು, ಹೊಟ್ಟೆನೋವು ಇತ್ಯಾದಿ ಸಮಸ್ಯೆಗಳು ಬಾರದಂತೆ ತಡೆಗಟ್ಟುತ್ತದೆ ಹಾಗೂ ಮಾನಸಿಕ ಒತ್ತಡವನ್ನು ನಿಭಾಯಿಸುವ ಸಾಮರ್ಥ್ಯ ನೀಡುತ್ತದೆ.

ತಪ್ಪು ತಿಳಿವಳಿಕೆ ಹಾಗೂ ಪರಿಣಾಮ
ಸ್ವರ್ಣ ಪ್ರಾಶನವನ್ನು ಪ್ರತಿ ತಿಂಗಳ ಪುಷ್ಯ ನಕ್ಷತ್ರ ದಿನದಂದು ಹಾಕಿಸುತ್ತಾರೆ ಆದರೆ ಇದು ಸರಿಯಾದ ಹಾಗೂ ಪರಿಣಾಮಕಾರಿ ಯೋಜನೆಯಲ್ಲ. ಸ್ವರ್ಣ ಪ್ರಾಶನವನ್ನು ದಿನ ಪುಷ್ಯಾ ನಕ್ಷತ್ರದಂದು ಶುರುಮಾಡಿ ಸತತವಾಗಿ ಕನಿಷ್ಠ ಒಂದು ತಿಂಗಳಾದರೂ ಹಾಕಿಸಬೇಕು. ಇದುವರೆಗೆ ಮಾಡಿರುವ ಸಂಶೋಧನೆಯಲ್ಲಿ ಇದರಿಂದ ಯಾವುದೇ ತರಹದ ದುಷ್ಪರಿಣಾಮಗಳಿಲ್ಲವೆಂದು ಕಂಡುಬಂದಿದೆ.

ಆದ್ದರಿಂದ ನಿರ್ಭಯರಾಗಿ ನಿಮ್ಮ ಮಗುವಿನ ಉತ್ತಮ ಮಾನಸಿಕ, ದೈಹಿಕ ಆರೋಗ್ಯ, ಮತ್ತು ಬೆಳವಣಿಗೆಗಾಗಿ ಹತ್ತಿರದ ಆಯುರ್ವೇದ ವೈದ್ಯರನ್ನು ನಿತ್ಯ ಸ್ವರ್ಣ ಪ್ರಾಶನಕ್ಕಾಗಿ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT