ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಗೆದ್ದ ಸತೀಶ್‌, ಜಿತು

ವೇಟ್‌ಲಿಫ್ಟಿಂಗ್‌, ಶೂಟಿಂಗ್‌ನಲ್ಲಿ ಭಾರತದ ಪ್ರಾಬಲ್ಯ
Last Updated 28 ಜುಲೈ 2014, 19:30 IST
ಅಕ್ಷರ ಗಾತ್ರ

ಗ್ಲಾಸ್ಗೊ (ಪಿಟಿಐ/ಐಎಎನ್ಎಸ್‌): ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ  ಭಾರತದ ಪದಕದ ಬೇಟೆ ಮುಂದುವ­ರಿದಿದೆ. ಸತೀಶ್‌ ಶಿವಲಿಂಗಮ್‌ ಹಾಗೂ ಜಿತು ರಾಯ್‌ ಅವರು ಕ್ರಮವಾಗಿ ವೇಟ್‌ಲಿಫ್ಟಿಂಗ್‌ ಹಾಗೂ ಶೂಟಿಂಗ್‌­ನಲ್ಲಿ ಬಂಗಾರದ ಪದಕ ಗೆದ್ದು­ಕೊಂಡರು.

ತಮಿಳುನಾಡಿನ ಸತೀಶ್‌ 77 ಕೆ.ಜಿ. ವಿಭಾಗದ ಪೈಪೋಟಿಯಲ್ಲಿ ಒಟ್ಟು 328 ಕೆ.ಜಿ. ಭಾರ ಎತ್ತಿ ಚಿನ್ನದ ಪದಕಕ್ಕೆ ಕೊರಳೊಡಿದ್ದರು.  ದೆಹಲಿ ಕಾಮನ್‌­ವೆಲ್ತ್‌ ಕೂಟದ 69 ಕೆ.ಜಿ. ವಿಭಾಗದಲ್ಲಿ ಚಿನ್ನ ಜಯಿಸಿದ್ದ ಒಡಿಶಾದ ಕೆ. ರವಿ ಕುಮಾರ್‌ ಈ ಸಲ ಬೆಳ್ಳಿ   ಗೆದ್ದರು.

ಶೂಟಿಂಗ್‌ನಲ್ಲೂ ತಪ್ಪದ ಗುರಿ: 50ಮೀ. ಪಿಸ್ತೂಲ್‌ ಸ್ಪರ್ಧೆಯಲ್ಲಿ  ನಿಖರ ಪ್ರದರ್ಶನ ತೋರಿದ ಜಿತು ರಾಯ್ ಬಂಗಾರದ ಪದಕ  ತಮ್ಮದಾ­ಗಿಸಿಕೊಂಡರು. ವಿಶ್ವ ಯಾಂಕ್‌­ನಲ್ಲಿ ನಾಲ್ಕನೇ ಸ್ಥಾನ ಹೊಂದಿರುವ ಜಿತು ಒಟ್ಟು 194.1 ಪಾಯಿಂಟ್‌­ಗಳನ್ನು ಕಲೆ ಹಾಕಿದರು. ಇದೇ ಸ್ಪರ್ಧೆಯಲ್ಲಿ ಭಾರತಕ್ಕೆ ಗುರ್ಪಾಲ್‌ ಸಿಂಗ್‌ ಇನ್ನೊಂದು ಪದಕ ತಂದಿತ್ತರು. ಇವರು ಒಟ್ಟು 187.2 ಪಾಯಿಂಟ್‌ ಗಳಿಸಿ ಎರಡನೇ ಸ್ಥಾನ ಪಡೆದರು.

ಮೆಲ್ಬರ್ನ್‌ ಹಾಗೂ ದೆಹಲಿ ಕಾಮನ್‌ವೆಲ್ತ್‌ ಕೂಟಗಳಲ್ಲಿ ಸ್ವರ್ಣ ಜಯಿಸಿದ್ದ ಹಿರಿಯ ಶೂಟರ್‌ ಗಗನ್‌ ನಾರಂಗ್ 50ಮೀ. ರೈಫಲ್‌ ಪ್ರೊನೊ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದರು. ನಿರಾಸೆ: ಸ್ಕ್ವಾಷ್‌, ಟೇಬಲ್‌ ಟೆನಿಸ್‌ ಹಾಗೂ ಬ್ಯಾಡ್ಮಿಂಟನ್‌ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕ ಗೆಲ್ಲುವ ಅವಕಾಶ ತಪ್ಪಿ ಹೋಯಿತು. ಸ್ಕ್ವಾಷ್‌ನ ಸಿಂಗಲ್ಸ್‌ನಲ್ಲಿ ಸೌರವ್ ಘೋಷಾಲ್‌ ‘ಪ್ಲೇ ಆಫ್‌’ ಪಂದ್ಯದಲ್ಲಿ ಸೋಲು ಕಂಡರು.

ಟೇಬಲ್‌ ಟೆನಿಸ್‌ನಲ್ಲಿ ಭಾರತ ಪುರುಷರ ತಂಡ 1–3ರಲ್ಲಿ ನೈಜೀರಿಯದ ಎದುರು ಪರಾಭವ­ಗೊಂಡಿತು. ಬಾಕ್ಸಿಂಗ್‌ನಲ್ಲಿ ಎಲ್‌. ದೇವೇಂದ್ರೂ ಸಿಂಗ್‌ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ್ದು, ಪದಕದ ಭರವಸೆ ಮೂಡಿಸಿದ್ದಾರೆ. ಆದರೆ, ಶಿವ ಥಾಪಾ ನಿರಾಸೆ ಅನುಭವಿಸಿದರು.

ಸೋಮವಾರದ ವೇಳೆಗೆ ಭಾರತ ಒಟ್ಟು 25 ಪದಕಗಳನ್ನು ಜಯಿಸಿತ್ತು. ಅದರಲ್ಲಿ ನಾಲ್ಕು ಚಿನ್ನ ಸೇರಿದಂತೆ 12 ಪದಕಗಳು ಶೂಟಿಂಗ್‌ನಲ್ಲಿಯೇ ಬಂದಿವೆ. ವೇಟ್‌ಲಿಫ್ಟಿಂಗ್‌ನಲ್ಲಿ 9 ಪದಕಗಳು ಲಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT