ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ಪ್ರತ್ಯಕ್ಷ ವದಂತಿ: ಆತಂಕ

Last Updated 9 ಫೆಬ್ರುವರಿ 2016, 20:00 IST
ಅಕ್ಷರ ಗಾತ್ರ

ಬೆಂಗಳೂರು: ವರ್ತೂರಿನ ವಿಬ್ಗಯೊರ್ ಶಾಲೆಗೆ ಚಿರತೆ ನುಗ್ಗಿ ಆತಂಕ ಸೃಷ್ಟಿಸಿದ್ದ ಬೆನ್ನಲ್ಲೇ, ಮಂಗಳವಾರ ರಾತ್ರಿ ಹತ್ತಿರದ ಅಪಾರ್ಟ್‌ಮೆಂಟ್ ಬಳಿ ಇನ್ನೊಂದು ಚಿರತೆ ಪ್ರತ್ಯಕ್ಷವಾಗಿದೆ ಎಂದು ಹಬ್ಬಿದ ವದಂತಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತು.

ಈ ಸಂಬಂಧ ರಾತ್ರಿ ವೇಳೆ ತೆಗೆಯಲಾದ ಚಿರತೆಯ ಚಿತ್ರವೊಂದು ವಾಟ್ಸ್‌ಆ್ಯಪ್‌ನಲ್ಲಿ ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡಿತು.

ರಾತ್ರಿ 10.30ರ ಸುಮಾರಿಗೆ ವಿಬ್ಗಯೊರ್ ಶಾಲೆ ಎದುರಿನ ಅಪಾರ್ಟ್‌ಮೆಂಟ್‌ ಬಳಿ ಚಿರತೆ ಕಣ್ಣಿಗೆ ಬಿದ್ದಿದೆ ಎಂದು ಸಮೀಪದ ನಿವಾಸಿಯೊಬ್ಬರು,  ಚಿರತೆ ಬಂದಿದ್ದಾಗ ಮೊಬೈಲ್‌ನಲ್ಲಿ ತೆಗೆದ ಚಿತ್ರ ಎಂದು ಗೂಗಲ್‌ನಲ್ಲಿ ಡೌನ್‌ಲೋಡ್‌ ಮಾಡಿದ್ದ ಚಿತ್ರವನ್ನು ಸ್ನೇಹಿತರಿಗೆ ಕಳುಹಿಸಿದ್ದರು.

ಇದನ್ನೇ ನಿಜ ಎಂದು ನಂಬಿದ ಸ್ಥಳೀಯರು, ಪೊಲೀಸ್ ಮತ್ತು  ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿ, ಅಲ್ಲಲ್ಲಿ ಪಟಾಕಿ ಸಿಡಿಸಿ ಚಿರತೆ ಓಡಿಸುವ ಪ್ರಯತ್ನ ಮಾಡಿದರು.

ಚಿರತೆ ಹಿಡಿಯಲು ಸ್ಥಳಕ್ಕೆ ಬಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಜತೆ, ಜನರು ಗುಂಪಾಗಿ  ಟಾರ್ಚ್‌ಗಳೊಂದಿಗೆ ಜತೆ ಸಾಗಿದರು. ಅಲ್ಲದೆ, ಜನರ ಭಯ ದೂರ ಮಾಡುವ ಸಲುವಾಗಿ ಸಿಬ್ಬಂದಿ, ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಮೈಕ್‌ ಮೂಲಕ ಘೋಷಣೆ ಮಾಡುತ್ತಾ ಎಚ್ಚರಿಕೆ  ಕೂಡ   ನೀಡಿದರು.

ಶೆಡ್‌ಗಳಲ್ಲಿ ವಾಸಿಸುತ್ತಿದ್ದ ಜನರು, ಭಯಭೀತರಾಗಿ ಶೆಡ್‌ ತೊರೆದು ಸ್ನೇಹಿತರ ಸ್ಥಳಕ್ಕೆ ಹೋಗುತ್ತಿದ್ದ ದೃಶ್ಯ ಕಂಡುಬಂತು. ಅದೇ ಚಿತ್ರ ಎಲ್ಲರ ಮೊಬೈಲ್‌ಗಳಿಗೂ ಹರಿದಾಡಿದ್ದರಿಂದ, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಗೆ ಕಾರಣವಾಯಿತು.

‘ವಿಷಯ ತಿಳಿದ ಕೂಡಲೇ ಇಲಾಖೆಯ 7 ಸಿಬ್ಬಂದಿ ಹಾಗೂ ವೈಟ್‌ಫೀಲ್ಡ್ ಪೊಲೀಸರು ಸಂಜೆ 4.30ರಿಂದ 6.30ರವರೆಗೆ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೆ, ರಾತ್ರಿ 9.30ಕ್ಕೆ ತಂಡ ಮತ್ತೊಂದು ಸುತ್ತು ಹುಡುಕಾಟ ನಡೆಸಿದೆ. ಆದರೆ,ಎಲ್ಲೂ ಚಿರತೆ ಪತ್ತೆಯಾಗಿಲ್ಲ’ ಎಂದು ವಲಯ ಅರಣ್ಯಾಧಿಕಾರಿ ವೀರಣ್ಣ  ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿರತೆ ಕಾಣಿಸಿಕೊಂಡಿದೆ ಎಂದು ಸಂಜೆ ವೈಟ್‌ಪೀಲ್ಡ್‌ ಠಾಣೆಗೆ ಕರೆ ಮಾಡಿದ್ದ ನಿವೃತ್ತ ಎಎಸ್‌ಐ ಅವರನ್ನು ವಿಚಾರಣೆ ನಡೆಸಿದಾಗ, ತೋಪಿನಲ್ಲಿ ಪೊದೆ ಅಲು ಗಾಡಿತು. ಸ್ವಲ್ಪ ಸಮಯ ದಲ್ಲೇ ಚಿರತೆ ಮಾದರಿ ಪ್ರಾಣಿ ಯೊಂದು ಓಡಿ ಹೋದಂತಾಯಿತೆಂದು ಹೇಳಿ ದ್ದಾರೆ. ಈ ಭಾಗದ ಜನ ವಿಬ್ಗಯೊರ್ ಶಾಲೆಗೆ ಚಿರತೆ ನುಗ್ಗಿದ್ದ ಆತಂಕದಲ್ಲೇ ಇದ್ದಾರೆ. ಹಾಗಾಗಿ ಸುಳ್ಳು ಸುದ್ದಿಯನ್ನೇ ನಿಜ ಎಂದು ನಂಬಿದ ಜನ ಭಯ ಗೊಂಡಿದ್ದಾರಷ್ಟೆ’ ಎಂದರು.

‘ಗುಂಜೂರು ಅರಣ್ಯ ಪ್ರದೇಶದಲ್ಲಿ ಈಚೆಗೆ ಎರಡು ಚಿರತೆಗಳು ಪತ್ತೆಯಾ ಗಿದ್ದರಿಂದ ಈ ಭಾಗದಲ್ಲೂ ಎಚ್ಚರ ವಹಿಸಲಾಗಿದೆ. ನಿಜವಾಗಿಯೂ ಚಿರತೆ ಕಾಣಿಸಿಕೊಂಡ ಬಗ್ಗೆ ಜನರಿಂದ ದೂರು ಬಂದ ಕೂಡಲೇ ಮಾಹಿತಿ ನೀಡುವಂತೆ ಪೊಲೀಸರಿಗೆ ಹೇಳಿದ್ದೇವೆ’ ಎಂದರು.

ಸ್ನೇಹಿತರು ಕಳುಹಿಸಿದ್ದು
‘ವಿಬ್ಗಯೊರ್ ಸಮೀಪ ಅಪಾರ್ಟ್‌ಮೆಂಟ್ ಬಳಿ ವಾಸವಿರುವ ಸ್ನೇಹಿತರೊಬ್ಬರು, ಇಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದೆ ಎಂದು ರಾತ್ರಿ 8 ಸುಮಾರಿಗೆ ಚಿರ ತೆಯ ಚಿತ್ರ ಕಳುಹಿಸಿದರು’ ಎಂದು ಚಿರತೆ ಚಿತ್ರ ಕಳುಹಿಸಿದ್ದ ಮಂಜುಳಾ ಅವರು ಹೇಳಿದರು.

‘ನಿಜ ಎಂದು ನಂಬಿ, ನನ್ನೆಲ್ಲ ಸ್ನೇಹಿ ತರಿಗೂ ಅದನ್ನು ಫಾರ್ವರ್ಡ್‌ ಮಾಡಿದೆ. ಆ ಪೈಕಿ ಒಬ್ಬರು ಅದನ್ನು  ಪರಿಶೀಲಿಸಿ, ಇದು ಆಫ್ರಿಕಾದ ದೇಶವೊಂದರ ಕಾಡಲ್ಲಿ ರಾತ್ರಿ ಸಫಾರಿ ವೇಳೆ ತೆಗೆದಿರುವ ಚಿತ್ರ.  ಗೂಗಲ್‌ ನಲ್ಲಿರುವ ಇದನ್ನು ನಿಮಗೆ ಯಾರೊ ಡೌನ್‌ಲೋಡ್‌ ಮಾಡಿ ಕೊಂಡು ಕಳುಹಿಸಿದ್ದಾರೆ ಎಂದು ಚಿತ್ರದ ಮೂಲ ಹುಡುಕಿ ಕೊಟ್ಟರು’ ಎಂದು ಅವರು ತಿಳಿಸಿದರು.

ಮುಖ್ಯಾಂಶಗಳು
* ಚಿರತೆ ಓಡಿಸಲು ಪಟಾಕಿ ಸಿಡಿಸಿದ ಸ್ಥಳೀಯರು

* ರಾತ್ರೊ ರಾತ್ರಿ ಕಾರ್ಯಾ ಚರಣೆ ನಡೆಸಿದ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT