ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾಕ್ಕೆ ತಂತ್ರಜ್ಞಾನದ ಭಯ

ಅಕ್ಷರ ಗಾತ್ರ

ಮೂರೂವರೆ ದಶಕಗಳ ಹಿಂದೆ ಬೀಜಿಂಗ್‌ ತನ್ನನ್ನು ಪಶ್ಚಿಮ ಜಗತ್ತಿಗೆ ತೆರೆದುಕೊಂಡಾಗಿನಿಂದ ವಿದೇಶಿಯರು, ವಿದೇಶಿ ಕಂಪೆನಿಗಳು ಮತ್ತು ವಿದೇಶಿ ತಂತ್ರಜ್ಞಾನಗಳು ಚೀನಾದ ಕೆಲವು ಸರ್ಕಾರಿ ಇಲಾಖೆಗಳ ಸಂಶಯದ ದೃಷ್ಟಿಗೆ ಬೀಳುತ್ತಲೇ ಇವೆ. ದೇಶದಲ್ಲಿ ಆಳವಾಗಿ ಬೇರೂರಿರುವ ಈ ಸಾಂಸ್ಕೃತಿಕ ಭಯವನ್ನು ನಿವಾರಿಸಿಕೊಂಡು ಬರುವಲ್ಲಿ ಚೀನಾದ ಸುಧಾರಣಾವಾದಿಗಳು ಭಾರಿ ದೊಡ್ಡ ಸವಾಲನ್ನು ಎದುರಿಸಿದ್ದಾರೆ.

ಚೀನಾದ ಅಧಿಕಾರಿಗಳ ಮತಿಭ್ರಮಣೆ 1985ರಲ್ಲಿ ಬಿಡುಗಡೆಯಾದ ‘ದಿ ಬ್ಲ್ಯಾಕ್‌ ಕ್ಯಾನನ್‌ ಇನ್ಸಿಡೆಂಟ್‌’ ಸಿನಿಮಾದ ಹೃದಯದಲ್ಲೇ ಕುಳಿತುಬಿಟ್ಟಿದೆ. ಈ ಚಿತ್ರದಲ್ಲಿ ಝವೊ ಷುಕ್ಸಿನ್‌ನದು ಪ್ರಧಾನ ಪಾತ್ರ. ಆತ ಸರ್ಕಾರಿ ಸ್ವಾಮ್ಯದ ಗಣಿಗಾರಿಕೆ ಕಂಪೆನಿಯಲ್ಲಿ ಜರ್ಮನ್‌ ಭಾಷೆ ಬಲ್ಲ ಒಬ್ಬ ಸಮರ್ಥ ಎಂಜಿನಿಯರ್‌. ಆ ಕಂಪೆನಿಗೆ ಜರ್ಮನ್‌ ತಂತ್ರಜ್ಞಾನವನ್ನು ಪಡೆದುಕೊಳ್ಳುವ ಇರಾದೆ ಇರುತ್ತದೆ. ಝವೊ ಅತ್ಯುತ್ಸಾಹದ ಚೆಸ್‌ ಆಟಗಾರ. ಆತನ ಒಂದು ಕಪ್ಪು ಕಾಯಿ (ಬ್ಲ್ಯಾಕ್‌ ಕ್ಯಾನನ್‌) ಕಳೆದುಹೋಗಿರುವುದು ಗೊತ್ತಾಗುತ್ತದೆ. ಆತ ಈ ಹಿಂದೆ ಉಳಿದುಕೊಂಡಿದ್ದ ಹೋಟೆಲ್‌ಗೆ ಟೆಲಿಗ್ರಾಂ ಕಳುಹಿಸಿ ಆ ಕಾಯಿಯನ್ನು ಹುಡುಕಿ ಕೊಡುವಂತೆ ಕೋರುತ್ತಾನೆ. ‘ಮಿಸ್ಸಿಂಗ್‌ ಬ್ಲ್ಯಾಕ್‌ ಕ್ಯಾನನ್‌. 301. ಸರ್ಚ್‌ ಫಾರ್‌ ಝವೊ’ ಎಂಬ ಟೆಲಿಗ್ರಾಂ ಸಂದೇಶ ರವಾನೆಯಾದ ತಕ್ಷಣ ಚೀನಾದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ. ಝವೊ ವಿದೇಶಿಯರಿಗಾಗಿ ಗೂಢಚರ್ಯೆ ನಡೆಸುತ್ತಿದ್ದಾನೆ ಮತ್ತು ಅಕ್ರಮ ಶಸ್ತ್ರಾಸ್ತ್ರ ವಹಿವಾಟಿನಲ್ಲಿ ತೊಡಗಿದ್ದಾನೆ ಎಂದು ಭಾವಿಸಿದ ಪೊಲೀಸರು ಆತನನ್ನು ಬಂಧಿಸುತ್ತಾರೆ.  ಕೊನೆಗೂ ಚೆಸ್‌ ಕಾಯಿ ಪತ್ತೆಯಾಗುತ್ತದೆ ಮತ್ತು ಝವೊ ಎಲ್ಲ ಆರೋಪಗಳಿಂದ ಮುಕ್ತನಾಗುತ್ತಾನೆ. ಆದರೆ ಆತ ದುಡಿಯುತ್ತಿದ್ದ ಕಂಪೆನಿಯ ಕಮ್ಯುನಿಸ್‌್ಟ‌ ಪಕ್ಷದ ಮುಖ್ಯಸ್ಥ, ಆತ ಟೆಲಿಗ್ರಾಂ ಕಳುಹಿಸಿದ್ದಕ್ಕೆ ದಂಡಿಸಿಯೇ ಬಿಟ್ಟಿದ್ದ.

ನೀರಸ ಸಂವಹನವೊಂದನ್ನು ಬಹುದೊಡ್ಡ ಪಿತೂರಿ ಮತ್ತು ರಾಷ್ಟ್ರೀಯ ಭದ್ರತೆಗೆ ಒದಗಿದ ಬೆದರಿಕೆ ಎಂಬಂತೆ ವಿಶ್ಲೇಷಿಸಬಹುದು ಎಂಬುದನ್ನು“‘ದಿ ಬ್ಲ್ಯಾಕ್ ಕ್ಯಾನನ್‌’”ಪ್ರಸಂಗ ಪ್ರತಿಬಿಂಬಿಸುತ್ತದೆ. ಇದು ಮತಿಭ್ರಮಣೆಗೊಳಗಾದ ಚೀನಾದ ಅಧಿಕಾರಿಗಳ ವರ್ತನೆಯ ವಿರುದ್ಧ ಮೂಡಿಬಂದ ಸಣ್ಣ ರೂಪದ ಪ್ರತಿಭಟನೆಯೂ ಆಗಿತ್ತು. 1985ರಲ್ಲಿ ಸರ್ಕಾರದಲ್ಲಿದ್ದ ಸುಧಾರಣಾವಾದಿಗಳು ಈ ರಾಜಕೀಯ ವಿಡಂಬನೆಯನ್ನು ಸಣ್ಣ ಪ್ರಮಾಣದಲ್ಲಿ ದೇಶದಲ್ಲಿ ಹರಿಯಲು ಬಿಟ್ಟು ವಿದೇಶಿ ನೇರ ಹೂಡಿಕೆ ಆಕರ್ಷಿಸಲು ಮತ್ತು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ವಿದೇಶಿಯರಲ್ಲಿ ಹೆಚ್ಚಿನ ನಂಬಿಕೆ ಇಟ್ಟುಕೊಳ್ಳಬೇಕು ಎಂಬ ಸಂದೇಶವನ್ನು ಜನತೆಗೆ ನೀಡಿದ್ದರು. ಇದೀಗ ಚೀನಾದಲ್ಲಿ ಸರಣಿ ರೀತಿಯಲ್ಲಿ ನೀತಿಗಳು ರೂಪುಗೊಳ್ಳತೊಡಗಿವೆ. ಇದರಿಂದ ಮಾಹಿತಿ ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದೇಶಿ ಸರಕುಗಳು ಮತ್ತು ಸೇವೆಗಳು ದೇಶಕ್ಕೆ ಹರಿದುಬರುವುದಕ್ಕೆ ತಡೆ ಉಂಟಾಗಬಹುದು ಎಂಬ ಕಳವಳ ಆರಂಭವಾಗಿದೆ.

ಸರ್ಕಾರದ ಇಂತಹ ನಿರ್ಬಂಧಿತ ನೀತಿಗಳು ದೇಶ ಮತ್ತು ದೇಶದಲ್ಲಿನ ಕಂಪೆನಿಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಅನಾನುಕೂಲಗಳನ್ನು ಸೃಷ್ಟಿಸಲಿವೆ. ದೇಶದ ಭಯೋತ್ಪಾದನೆ ನಿಗ್ರಹ ಮತ್ತು ರಾಷ್ಟ್ರೀಯ ಭದ್ರತಾ ನೀತಿಗಳು ಚೀನಾವನ್ನು ತಾಂತ್ರಿಕವಾಗಿ ಜಗತ್ತಿನ ಇತರ ರಾಷ್ಟ್ರಗಳಿಂದ ಪ್ರತ್ಯೇಕಿಸಬಹುದು. ಜಗತ್ತಿನಲ್ಲಿ ಅತ್ಯಂತ ಸ್ಪರ್ಧಾತ್ಮಕ ತಂತ್ರಜ್ಞಾನ ಮತ್ತು ಸಂಶೋಧನೆಯನ್ನು ಸಂಪಾದಿಸಿಕೊಳ್ಳುವ ದೇಶದ ಅವಕಾಶವನ್ನು ಈ ನೀತಿಗಳು ನಿರ್ಬಂಧಿಸಬಹುದು. ಉದಾಹರಣೆಗೆ ಹೇಳುವುದಾದರೆ ಸದ್ಯ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಪರಿಶೀಲನೆಯಲ್ಲಿರುವ ಉದ್ದೇಶಿತ ಭಯೋತ್ಪಾದನೆ ನಿಗ್ರಹ ಕಾನೂನು ಬಹಳ ಕಟ್ಟುನಿಟ್ಟಿನ ನಿರ್ಬಂಧವನ್ನು ಮಾಹಿತಿ ಸಂವಹನ ತಂತ್ರಜ್ಞಾನ ಪೂರೈಕೆ ದಾರರಿಗೆ ವಿಧಿಸುತ್ತದೆ.

ದೇಶದೊಳಗೇ ಮಾಹಿತಿಗಳನ್ನು ಸಂಗ್ರಹಿಸಿ ಇಡುವುದು ಹಾಗೂ ಅವರ ಉತ್ಪನ್ನಗಳು, ಸೇವೆಗಳನ್ನು ಅಧಿಕಾರಿಗಳ ಭಯೋತ್ಪಾದನೆ ನಿಗ್ರಹ ಕೆಲಸದಲ್ಲಿ ನೆರವಾಗುವಂತೆ ರೂಪಿಸಬೇಕು ಎಂದು ಈ ಕಾನೂನು ಹೇಳುತ್ತದೆ.  ಚೀನಾ ಮಾರುಕಟ್ಟೆಯಲ್ಲಿ ಟೆಲಿಕಾಂ ಮತ್ತು ಇಂಟರ್‌ನೆಟ್ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಬಳಸುವುದು ಅಥವಾ ಮಾರಾಟ ಮಾಡುವುದಕ್ಕೆ ಮೊದಲು ಮಾಹಿತಿ ಸೋರಿಕೆಯನ್ನು ತಡೆಗಟ್ಟುವ ಮತ್ತು ಗೂಢಲಿಪಿಯನ್ನು ಸಾಮಾನ್ಯ ಭಾಷೆಗೆ ತಿರುಗಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.

ಚೀನಾದಲ್ಲಿ ಕಳೆದ ಡಿಸೆಂಬರ್‌ನಲ್ಲಿ ಹೊಸ ಬ್ಯಾಂಕಿಂಗ್ ಮಾರ್ಗಸೂಚಿಗಳನ್ನು ಅಳವಡಿಸಲಾಗಿದೆ. ದೇಶದಲ್ಲಿನ ಹಣಕಾಸು ಕ್ಷೇತ್ರದಲ್ಲಿ“ಅತ್ಯಂತ ಸುರಕ್ಷಿತ ಮತ್ತು ನಿಯಂತ್ರಿಸ ಬಲ್ಲ”ತಾಂತ್ರಿಕ ಉತ್ಪನ್ನಗಳನ್ನು ಮಾತ್ರ ಬಳಸಿಕೊಳ್ಳುವುದಕ್ಕೆ ಬೇಕಾದ ಕಠಿಣ ಸುರಕ್ಷತಾ ಮಾನದಂಡಗಳನ್ನು ಇದು ಒಳಗೊಂಡಿದೆ.

ಇಂತಹ ಪ್ರಮಾಣಪತ್ರ ಪಡೆಯಬೇಕಿದ್ದರೆ ದೇಶದ ಹೊರಗೆ ಅಥವಾ ದೇಶದಲ್ಲಿ ತಯಾರಾದಂತಹ ಕಾರ್ಯಾ ಚರಣೆಯ ಪದ್ಧತಿಯಲ್ಲಿನ ಮೂಲದ ಸಂಕೇತಗಳು ಮತ್ತು ಡೇಟಾಬೇಸ್ ಸಾಫ್ಟ್‌ವೇರ್‌ಗಳು ಸರ್ಕಾರದಿಂದ ನೋಂದಣಿ ಗೊಂಡಿರಬೇಕು. ಮೂಲ ಕೋಡ್‌ಗಳು ಮತ್ತು ಇತರ ಮಹತ್ವದ ಮಾಹಿತಿಗಳನ್ನು ಒದಗಿಸಿದರೆ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಬೌದ್ಧಿಕ ಹಕ್ಕುಸ್ವಾಮ್ಯಕ್ಕೆ ಬಹಳ ದೊಡ್ಡ ಅಪಾಯ ಉಂಟಾಗುತ್ತದೆ. ಭದ್ರತಾ ವ್ಯವಸ್ಥೆಗಳನ್ನು ರೂಪಿಸಿಕೊಂಡ ಬಗ್ಗೆ ಮಾಹಿತಿ ನೀಡುವಂತೆ ಚೀನಾದ ಬ್ಯಾಂಕಿಂಗ್ ನಿಯಂತ್ರಣ ಆಯೋಗ ಈಗಾಗಲೇ ಬ್ಯಾಂಕ್‌ಗಳಿಗೆ ನೋಟಿಸ್ ನೀಡಿದೆ.

ಮಾಹಿತಿ ಪ್ರಸಾರಕ್ಕೆ ಸರ್ಕಾರ ತಡೆ ಒಡ್ಡಲು ಪ್ರಯತ್ನಿಸಿರುವಂತೆಯೇ ವಿದೇಶಿ ವೆಬ್‌ಸೈಟ್‌ ಗಳನ್ನು ತಡೆಹಿಡಿಯುವ ಪ್ರಯತ್ನವೂ ಆರಂಭ ವಾಗಿದೆ. ಇದರಿಂದ ಇಂಟರ್‌ನೆಟ್ ವೇಗ ಗಮನಕ್ಕೆ ಬರುವ ರೀತಿಯಲ್ಲಿ ನಿಧಾನಗೊಂಡಿದೆ ಮತ್ತು ಖಾಸಗಿ ನೆಟ್‌ವರ್ಕ್ ಸೇವೆಯನ್ನು ಬಹುತೇಕ ನಿರಾಕರಿಸಲಾಗುತ್ತಿದೆ. ಚೀನಾದಲ್ಲಿರುವ ಅಮೆರಿಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನಡೆಸಿದ ಇತ್ತೀಚಿನ ವ್ಯವಹಾರ ಸನ್ನಿವೇಶ ಸಮೀಕ್ಷೆಯಲ್ಲಿ, ಚೀನಾ ಸರ್ಕಾರ ವಿಧಿಸಿದ ಇಂಟರ್‌ನೆಟ್ ಸೆನ್ಸಾರ್‌ನಿಂದಾಗಿ ಶೇ 83ರಷ್ಟು ಸದಸ್ಯ ಕಂಪೆನಿಗಳಿಗೆ ದುಷ್ಪರಿಣಾಮ ಉಂಟಾಗಿರು ವುದು ಬೆಳಕಿಗೆ ಬಂದಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ ಕಠಿಣ ಕಾನೂನುಗಳ ಸಾಲಿಗೆ ಇದೀಗ ಭಯೋತ್ಪಾದನೆ ನಿಗ್ರಹ ಕಾನೂನು ಮತ್ತು ಹೊಸ ಬ್ಯಾಂಕಿಂಗ್ ನಿಯಮಗಳು ಸೇರಿಕೊಳ್ಳುತ್ತಿರುವುದರಿಂದ ಮಾಹಿತಿ ತಂತ್ರಜ್ಞಾನ ಕಂಪೆನಿಗಳಿಗೆ ಹಾಗೂ ಅವುಗಳ ಗ್ರಾಹಕರಿಗೆ ಇದೀಗ ಹೆಚ್ಚುವರಿಯಾಗಿ ನಿಯಂತ್ರಣ ಸವಾಲು ಗಳು ಎದುರಾಗಿವೆ. ಇಮೇಲ್ ಮತ್ತು ಇಂಟರ್‌ನೆಟ್ ಸಂಚಾರದ ಮೇಲೆ ಅತಿಯಾದ ನಿಯಂತ್ರಣದಿಂದಾಗಿ ವಾಣಿಜ್ಯ ವಹಿವಾಟು ನಿಧಾನಗತಿ ಹೊಂದುವಂತಾಗಿದೆ.

ಚೀನಾ ಸರ್ಕಾರ ನಿರ್ಬಂಧಾತ್ಮಕ ಭದ್ರತಾ ನೀತಿಗಳನ್ನು ರೂಪಿಸುವ ಬದಲಿಗೆ ಭದ್ರತಾ ವಿಷಯಗಳಿಗೆ ಸಂಬಂಧಿಸಿ ದಂತೆ ಇನ್ನಷ್ಟು ವಿವೇಚನಾಶೀಲ ಧೋರಣೆ  ಅಳವಡಿಸಿಕೊಳ್ಳಬೇಕಿತ್ತು. ಆರೋಗ್ಯಕರ ಅಭಿವೃದ್ಧಿ ಮತ್ತು ಚೀನಾದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಸಮಗ್ರತೆ ಯನ್ನು ಸಮಾನವಾಗಿ ಗಮನಿಸಬೇಕಿತ್ತು.  ಆರ್ಥಿಕ ಪ್ರಗತಿಯ ಮಟ್ಟವನ್ನು ಕಾಯ್ದುಕೊಂಡು ಆರ್ಥಿಕತೆಯಲ್ಲಿ ಸಮತೋಲನ ಸಾಧಿಸಲು ಹೋರಾಡುತ್ತಿರುವ ಬೀಜಿಂಗ್‌ಗೆ ಇದು ಬಹಳ ಮುಖ್ಯವಾಗಿತ್ತು.

‘ದಿ ಬ್ಲ್ಯಾಕ್ ಕ್ಯಾನನ್ ಇನ್ಸಿಡೆಂಟ್‌’ ಬಿಡುಗಡೆಯಾದ 30 ವರ್ಷಗಳ ನಂತರವೂ ನಾವು ಇಂದು ನಂಬಿಕೆ ಎಂಬುದು ಪ್ರಶ್ನಾರ್ಹವಾಗಿರುವ, ವಿದೇಶಿ ತಂತ್ರಜ್ಞಾನವನ್ನು ಶಂಕೆಯಿಂದ ನೋಡುವ ಹಾಗೂ ಭದ್ರತಾ ಹಿತಾಸಕ್ತಿಯ ಮತಿಭ್ರಮಣೆ ಈಗಲೂ ಉಳಿದುಕೊಂಡಿರುವ ಕಾಲಘಟ್ಟದಲ್ಲೇ ಬದುಕುತ್ತಿದ್ದೇವೆ.

(ಲೇಖಕರು ಬೀಜಿಂಗ್‌ನಲ್ಲಿ ವಕೀಲರು ಹಾಗೂ ಚೀನಾದಲ್ಲಿನ ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT