ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಲಿಯುಗೆ ಚಿನ್ನದ ಪದಕ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್: ನಡಿಗೆಯಲ್ಲಿ ಭಾರತದ ಕುಶ್‌ಬೀರ್ ಕೌರ್‌ಗೆ 37ನೇ ಸ್ಥಾನ
Last Updated 28 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಬೀಜಿಂಗ್: ಶುಕ್ರವಾರ ಬಿರುಬಿಸಿಲಿನಲ್ಲಿ ಅತ್ಯಂತ ತುರುಸಿನ ಪೈಪೋಟಿ ಕಂಡ ಮಹಿಳೆಯರ 20 ಕಿಲೋಮೀಟರ್ ನಡಿಗೆ ಸ್ಪರ್ಧೆಯಲ್ಲಿ ಶುಕ್ರವಾರ ಚೀನಾದ ಲಿಯು ಹಾಂಗ್ ಪ್ರಥಮ ಸ್ಥಾನ ಪಡೆದರು. ಇದೇ ಸ್ಪರ್ಧೆಯಲ್ಲಿ ಭಾರತದ ಕುಶ್‌ಬೀರ್ ಕೌರ್ 37ನೇ ಸ್ಥಾನ ಪಡೆದರು.

ಬೀಜಿಂಗ್‌ನ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 15ನೇ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ನಡಿಗೆ ಸ್ಪರ್ಧೆಯು ರೋಚಕತೆ ಕಣವಾಗಿತ್ತು.

ಆತಿಥೇಯ ದೇಶದ ಅಥ್ಲೀಟ್ ಲಿಯು ಹಾಂಗ್ ಒಂದು ಗಂಟೆ, 27 ನಿಮಿಷ, 45.1 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.  ಅದೇ ದೇಶದ ಲು ಕ್ಸಯುಜಿ ಒಂದು ಗಂಟೆ, 27ನಿಮಿಷ, 45.2 ಸೆಕೆಂಡುಗಳಲ್ಲಿ ಗುರಿ ಸೇರಿದರು. ಉಕ್ರೇನ್‌ನ ಯುಡಿಮಿಲಾ ಒಲಿಯಾನೊವಸ್ಕಾ (1ಗಂ, 28ನಿ, 13.3ಸೆ) ಕಂಚಿನ ಪದಕ ಪಡೆದರು.

ವಿಶ್ವದಾಖಲೆ ಹೊಂದಿರುವ ಲಿಯು ತಮ್ಮ ದೇಶದ ಅಥ್ಲೀಟ್ ಮತ್ತು ಉಕ್ರೇನ್  ಸ್ಪರ್ಧಿಯಿಂದ ಪ್ರತಿಕ್ಷಣವೂ ಕಠಿಣ ಸ್ಪರ್ಧೆ ಎದುರಿಸಿದರು.  ಸುಮಾರು ಎಂಟು ಕಿಲೋಮೀಟರ್ ನಂತರ ಈ ಮೂವರು ಅಥ್ಲೀಟ್‌ಗಳ ನಡುವೆ ಪೈಪೋಟಿ ಮುಗಿಲು ಮುಟ್ಟಿತ್ತು.  ಆದರೆ, ಕೊನೆಯ ಕ್ಷಣದಲ್ಲಿ ವಿಜಯದ ನಗೆ ಬೀರಿದ್ದು ಮಾತ್ರ ಲಿಯು.  ಕೇವಲ 0.1 ಸೆಕೆಂಡಿನಲ್ಲಿ ಚಿನ್ನ ಅವರಿಗೆ ಒಲಿಯಿತು.

ಕೌರ್ ಪ್ರಯಾಸದ ನಡಿಗೆ
ಒಟ್ಟು 49 ಸ್ಪರ್ಧಿಗಳು ಇದ್ದ ನಡಿಗೆ ವಿಭಾಗದಲ್ಲಿ ಭಾರತದ ಕುಶ್‌ಬೀರ್ ಕೌರ್ ಒಂದು ಗಂಟೆ, 38ನಿಮಿಷ, 53 ಸೆಕೆಂಡುಗಳಲ್ಲಿ ಗುರಿ ತಲುಪಿದರು. 37ನೇ ಸ್ಥಾನ ಪಡೆದರು. ಭಾರತದ ಇನ್ನೊಬ್ಬ ಸ್ಪರ್ಧಿ ಸಪ್ನಾ ಮೊದಲ ಐದು ಕಿಲೋಮೀಟರ್ ಅಂತರವನ್ನು ದಾಟುವಷ್ಟರಲ್ಲಿ ಸ್ಪರ್ಧೆಯಿಂದ ಅನರ್ಹಗೊಂಡರು. 

ಆದರೆ, ರಾಷ್ಟ್ರೀಯ ಚಾಂಪಿಯನ್ ಕುಶ್‌ಬೀರ್ ಬೀಜಿಂಗ್‌ನ ಬಿರುಬಿಸಿಲಿನಲ್ಲಿ  ಮುಕ್ತಾಯ ಗೆರೆ ಮುಟ್ಟಲು ಸಾಕಷ್ಟು ಬೆವರು ಹರಿಸಿದರು. ಅವರ ರಾಷ್ಟ್ರೀಯ ದಾಖಲೆಯ (1 ಗಂ, 31 ನಿ, 40 ಸೆ) ಗಿಂತಲೂ ಹೆಚ್ಚು ಸಮಯ ತೆಗೆದುಕೊಂಡರು.

ಡಾಫ್ನೆ ನೂತನ ದಾಖಲೆ
ನೆದರ್ಲೆಂಡ್‌ನ ಡಾಫ್ನೆ ಶಿಪ್ಪರ್ಸ್ ಮಹಿಳೆಯರ 200 ಮೀಟರ್ಸ್ ಓಟದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದರು.
ಅವರು 21.63ಸೆಕೆಂಡುಗಳಲ್ಲಿ ಗುರಿ ಮುಟ್ಟಿ ದಾಖಲೆ ಬರೆದರು. 1987ರಲ್ಲಿ ಜರ್ಮನಿಯ ಸಿಲ್ಕೆ ಗ್ಲಾಡಿಷ್ ಅವರು ನಿರ್ಮಿಸಿದ್ದ ದಾಖಲೆಯನ್ನು (21.74 ಸೆಕೆಂಡು)  ಡಾಫ್ನೆ ಅಳಿಸಿಹಾಕಿದರು.

ಫಲಿತಾಂಶಗಳು:  ಪುರುಷರು: 110 ಮೀಟರ್ಸ್ ಹರ್ಡಲ್ಸ್: ಸರ್ಗೇಯ್ ಶುಭನೆಕೋವ್ (ರಷ್ಯಾ; 12.98ಸೆ)–1, ಹಂಸ್ಲೆ ಪಾರ್ಚ್‌ಮೆಂಟ್ (ಜಮೈಕಾ)–2, ಏರೀಸ್ ಮೆರಿಟ್ (ಅಮೆರಿಕ)–3;
ಮಹಿಳೆಯರು: 200 ಮೀ ಓಟ: ಡಾಫ್ನೆ ಶಿಪ್ಪರ್ಸ್ (ನೆದರ್ಲೆಂಡ್ಸ್ ;  ನೂತನ ದಾಖಲೆ 21.63ಸೆ; ಹಳೆಯದು: 21.74ಸೆ–ಸಿಲ್ಕೆ ಗ್ಲ್ಯಾಡಿಷ್ 1987)–1, ಎಲೈನೆ ಥಾಂಪ್ಸನ್ (ಜಮೈಕಾ)–2, ವೆರೊನಿಕಾ ಕ್ಯಾಂಪ್‌ಬೆಲ್ ಬ್ರೌನ್ (ಜಮೈಕಾ)–3;  100 ಮೀ ಹರ್ಡಲ್ಸ್‌: ಡೇನಿಯಲ್ ವಿಲಿಯಮ್ಸ್ (ಜಮೈಕಾ; 12.57ಸೆ)–1, ‌ಸಿಂಡಿ ರೋಲ್ಡರ್ (ಜರ್ಮನಿ)–2, ಅಲಿನಾ ಟಾಲೆ (ಬೆಲಾರೂಸ್)–3,  ಲಾಂಗ್ ಜಂಪ್ ಟಿಯನ್ನಾ ಬಾರ್ಟೊಲೆಟ್ಟಾ (ಅಮೆರಿಕ; ದೂರ: 7.14 ಮೀ)–1. ಶಾರಾ ಪ್ರೋಕ್ಟರ್ (ಬ್ರಿಟನ್)–2, ಇವಾನಾ ಸ್ಪಾನೊವಿಕ್ (ಸರ್ಬಿಯಾ)–3  20 ಕಿ.ಮೀ ನಡಿಗೆ: ಲಿಯು ಹಾಂಗ್ (ಚೀನಾ; ಕಾಲ: 1ಗಂಟೆ, 27ನಿಮಿಷ, 45.1ಸೆಕೆಂಡು)–1, ಲು ಕ್ಸಿಯುಜಿ (ಚೀನಾ; 1ಗಂ,27ನಿ, 45.2ಸೆ) ಯುಡಿಮಿಲಾ ಒಲಿಯಾನೊವಸ್ಕಾ (ಉಕ್ರೇನ್; 1ಗಂ, 28ನಿ,13.3ಸೆ)–3

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT