ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಚೆಸ್‌ ಆಟದ ಚೆಂದ

Last Updated 24 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಚುಟುಕು ಕ್ರಿಕೆಟ್‌ ಚೆಂದವನ್ನು ಸವಿಯಲು ಮೈಸೂರಿನ ಜನರು ಕಾದಿದ್ದಾರೆ. ಆದರೆ, ಕಳೆದ ವಾರವೇ ಚದುರಂಗಪ್ರಿಯರು ಚುಟುಕು ಚೆಸ್‌ನ ರೋಚಕ ರಸದೌತಣ ಸವಿದರು. ರ್‌್ಯಾಪಿಡ್‌ ಚೆಸ್ ಮತ್ತು ಬ್ಲಿಟ್ಜ್‌ ಚೆಸ್‌ ಆಟದ ಮಜಾ ನೋಡುವ ಅವಕಾಶ ಆಗಸ್ಟ್‌ 15ರಿಂದ 17ವರೆಗೆ ಲಭಿಸಿತ್ತು.

ಮೈಸೂರು ಚೆಸ್‌ ಸೆಂಟರ್, ಮೈಸೂರು ಜಿಲ್ಲಾ ಚೆಸ್‌ ಸಂಸ್ಥೆ ಮತ್ತು ಯುನೈಟೆಡ್‌ ಕರ್ನಾಟಕ ಚೆಸ್‌ ಸಂಸ್ಥೆಯು ಸಂಯುಕ್ತವಾಗಿ ಇದೇ ಮೊದಲ ಬಾರಿಗೆ ರಾಷ್ಟ್ರಮಟ್ಟದ ಫಿಡೆ ರೇಟಿಂಗ್ ರ್‌್ಯಾಪಿಡ್‌ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯನ್ನು ಆಯೋಜಿಸಿತ್ತು. ಇದೇ ಮೊದಲ ಬಾರಿಗೆ ಶಾಪಿಂಗ್ ಮಾಲ್‌ನಲ್ಲಿ ಈ ಟೂರ್ನಿ ನಡೆದದ್ದು ಕೂಡ ವಿಶೇಷ.

ಮಾಲ್‌ ಆಫ್‌ ಮೈಸೂರಿನಲ್ಲಿ ನಡೆದ ಎರಡೂ ಪಂದ್ಯಗಳು ಆಟಗಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವುದರ ಜೊತೆಗೆ ನೋಡುಗರನ್ನೂ ಸೆಳೆಯಿತು. ಏಕೆಂದರೆ ಕ್ಲಾಸಿಕಲ್ ಚೆಸ್‌ (ದೀರ್ಘ ಅವಧಿ) ಆಡುವವರಿಗೆ ಸವಾಲು ಮತ್ತು ರೋಚಕತೆಯನ್ನು ನೀಡಬಹುದು. ಆದರೆ, ವೀಕ್ಷಕರನ್ನು ಸೆಳೆಯುವುದು ಕಡಿಮೆ. ಅದೇ ರ್‌್ಯಾಪಿಡ್‌ ಮತ್ತು ಬ್ಲಿಟ್ಜ್‌ ಮಾದರಿಗಳು ಮಾತ್ರ ತದ್ವಿರುದ್ಧ. 25 ನಿಮಿಷಗಳ ಅವಧಿಯ ರ್‌್ಯಾಪಿಡ್‌ ಮತ್ತು ಕೇವಲ 3 ನಿಮಿಷಗಳ ಚೆಸ್ ಮಾದರಿಗಳು ಟ್ವೆಂಟಿ –20 ಕ್ರಿಕೆಟ್‌ ಮಾದರಿಯ ಮಜಾ ನೀಡುತ್ತವೆ.

ಮಿಂಚಿನ ವೇಗದ ಬ್ಲಿಟ್ಜ್‌;
ಚೆಸ್‌ನಲ್ಲಿ ಕ್ಲಾಸಿಕಲ್, ರ್‌್ಯಾಪಿಡ್ ಮತ್ತು ಲೈಟ್ನಿಂಗ್ ಎಂಬ ಮೂರು ವಿಭಾಗಗಳಿವೆ.  ಭಾರತದಲ್ಲಿ ಮೊದಲ ಎರಡು ಮಾದರಿಗಳು ಸಾಕಷ್ಟು ಜನಪ್ರಿಯವಾಗಿವೆ. ಆದರೆ, ಲೈಟ್ನಿಂಗ್ ವಿಭಾಗದ ಬ್ಲಿಟ್ಜ್ ಮತ್ತು ಬುಲೆಟ್ ಚೆಸ್‌ ಇನ್ನೂ ಬೆಳವಣಿಗೆಯ ಹಾದಿಯಲ್ಲಿವೆ. ಬ್ಲಿಟ್ಜ್ ಚೆಸ್ ಯುರೋಪ್ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಬಹಳಷ್ಟು ಜನಪ್ರಿಯವಾಗಿದೆ.

ಒಂದು ಪಂದ್ಯದಲ್ಲಿ ಇಬ್ಬರೂ ಆಟಗಾರರಿಗೆ ತಲಾ ಮೂರು ನಿಮಿಷ ಅವಧಿ ಮತ್ತು 2 ಸೆಕೆಂಡುಗಳ ಹೆಚ್ಚುವರಿ ಅವಧಿ ಇರುತ್ತದೆ. ಮಿಂಚಿನ ವೇಗದಲ್ಲಿ ಯೋಚನೆ ಮಾಡಬೇಕು. ವೇಗ, ಚುರುಕುತನಗಳಿಗೇ ಇಲ್ಲಿ ಜಯ. ಸ್ವಲ್ಪ ತಪ್ಪಿದರೂ ಎದುರಾಳಿ ವಿಜಯದ ನಗೆ ಬೀರುವುದು ಖಚಿತ.

ಈ ಮಾದರಿಯ ಚೆಸ್‌ ಆಟವು ಆರಂಭವಾದಾಗ ವಿಶ್ವದ ಖ್ಯಾತನಾಮ ಚೆಸ್ ಆಟಗಾರರು ಟೀಕಿಸಿದ್ದರು. ಸೃಜನಶೀಲತೆ, ಸಕಾರಾತ್ಮಕ ಚಿಂತನೆ ಬೆಳೆಸುವ ಚೆಸ್‌ ಆಟಕ್ಕೆ ಸಾಕಷ್ಟು ಅವಧಿಯ ಕ್ಲಾಸಿಕಲ್‌ ಮಾದರಿಯೇ ಸೂಕ್ತ ಎಂದಿದ್ದರು. ಆದರೂ ವೇಗದ ರೋಚಕತೆ ಯಾವಾಗಲೂ ಮನಸೋಲುತ್ತದೆ. ಆದ್ದರಿಂದಲೇ ಲೈಟ್ನಿಂಗ್ ಮಾದರಿಗಳು ವೇಗದಲ್ಲಿ ಜನಪ್ರಿಯತೆ ಪಡೆಯುತ್ತಿವೆ. ಮೈಸೂರಿನ ಟೂರ್ನಿಯಲ್ಲಿ 150 ಆಟಗಾರರು ಭಾಗವಹಿಸಿದ್ದರು.

ರ್‌್ಯಾಪಿಡ್ ಮಾದರಿಯ ಚೆಸ್  ಹೊಸದಲ್ಲ. ಇಲ್ಲಿಯ ಎಂ.ಎಸ್. ತೇಜಕುಮಾರ್, ವಿಜೇಂದ್ರ, ಪವನ್ ಮತ್ತಿತರ ಆಟಗಾರರು ರಾಜ್ಯ, ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಮಿಂಚಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ನಾಲ್ಕು ಬಾರಿ ರಾಜ್ಯ ರ್‌್ಯಾಪಿಡ್ ಚೆಸ್ ಟೂರ್ನಿ ನಡೆಸಲಾಗಿದೆ. 2008, 2009, 2013, 2014ರಲ್ಲಿ ಟೂರ್ನಿಗಳನ್ನು ಆಯೋಜಿಸಲಾಗಿತ್ತು. ಪ್ರತಿ ಪಂದ್ಯದಲ್ಲಿ ಆಟಗಾರರಿಗೆ ತಲಾ 25 ನಿಮಿಷದ ಅವಧಿಯನ್ನು ನೀಡಲಾಗುತ್ತದೆ. ಹತ್ತು ಸೆಕೆಂಡುಗಳ ಇನ್‌ಕ್ರಿಮೆಂಟ್ ನೀಡಲಾಗುತ್ತದೆ. ಇದು ಆಟಗಾರರ ಬುದ್ಧಿಮತ್ತೆ ಮತ್ತು ಚುರುಕುತನಕ್ಕೂ ಸವಾಲು. ಟೂರ್ನಿಯಲ್ಲಿ 140 ಆಟಗಾರರು ಸ್ಪರ್ಧಿಸಿದ್ದರು.

ಚಿನಕುರುಳಿಗಳ ಆಟ
ರೋಚಕತೆ ಮತ್ತು ವೇಗವನ್ನು ಮೈದುಂಬಿಕೊಂಡಿರುವ ಈ ಟೂರ್ನಿಯಲ್ಲಿ ಮೈಸೂರಿನ ಇಬ್ಬರು ಚಿನಕುರುಳಿಗಳು  ಗಮನ ಸೆಳೆದರು. ಟೂರ್ನಿಯಲ್ಲಿ  ಕೇವಲ 4.5 ವರ್ಷದ ವಿಶ್ವಜಿತ್ ಮತ್ತು ಅಮೈ ಅವರ ಆಟ ಜನರ ಮೆಚ್ಚುಗೆಗೆ ಪಾತ್ರವಾಯಿತು. ಅದೇ ರೀತಿ 78 ವರ್ಷ ವಯಸ್ಸಿನ ಶೀಲಚಂದ್ರ ಅವರೂ ತಮ್ಮ ಚದುರಂಗ ಪ್ರೀತಿಯನ್ನು ತೋರಿದರು.

ಇಂಟಿಗ್ರಲ್ ಕೋಚ್‌ ಫ್ಯಾಕ್ಟರಿಯ ಉದ್ಯೋಗಿ, ಗ್ರ್ಯಾಂಡ್‌ಮಾಸ್ಟರ್ ಆರ್.ಆರ್. ಲಕ್ಷ್ಮಣ್  ಮತ್ತು 11 ಜನ ಇಂಟರ್‌ನ್ಯಾಷನಲ್ ಮಾಸ್ಟರ್‌ಗಳೂ ಟೂರ್ನಿಯಲ್ಲಿ ಭಾಗವಹಿಸಿದ್ದರು. ಫಿಡೆ ಈ ಎರಡೂ ಮಾದರಿಗಳನ್ನು ಮಾನ್ಯತೆ ಮಾಡಿರುವುದರಿಂದ ಆ ವಿಭಾಗಗಳಲ್ಲಿಯೂ ‘ಮಾಸ್ಟರ್‌’ ಆಗುವ ಪೈಪೋಟಿ ಈಗ ಆರಂಭವಾಗಿದೆ.

ಜನಪ್ರಿಯತೆ ಹೆಚ್ಚುತ್ತಿದೆ
ಮೊದಲ ಬಾರಿ ಆಯೋಜಿಸಿದ ಟೂರ್ನಿಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. ಈ ಎಲ್ಲ ಮಾದರಿಗಳೂ ವೃತ್ತಿಪರವಾಗಿವೆ. ಮೂರರಲ್ಲಿಯೂ ಆಡಿದರೆ ಆಟಗಾರರಿಗೆ ಒಳ್ಳೆಯದು. ಆ ಕೌಶಲಗಳು ಒಂದಕ್ಕೊಂದು ಮಾದರಿಯಲ್ಲಿ ಪೂರಕವಾಗಿ ನೆರವಾಗುತ್ತವೆ. ವೇಗವಾಗಿ ಯೋಚನೆ ಮಾಡುವ ಮತ್ತು ಏಕಾಗ್ರತೆಯನ್ನು ಹೆಚ್ಚು ಸುಧಾರಿಸಿಕೊಳ್ಳಬಹುದು. ಸಮಯವು ಕಡಿಮೆ ಬೇಕಾಗಿರುವುದರಿಂದ ಬಹಳಷ್ಟು ಆಟಗಾರರು ರ್‌್ಯಾಪಿಡ್ ಮತ್ತು ಬ್ಲಿಟ್ಜ್‌ನತ್ತ ಹೆಚ್ಚು ಒಲವು ತೋರುತ್ತಿದ್ದಾರೆ.
–ಎಂ.ನಾಗೇಂದ್ರ
ಸಂಘಟನಾ ಕಾರ್ಯದರ್ಶಿ, ಮೈಸೂರು ಚೆಸ್‌ ಸೆಂಟರ್

ಮಗನಿಗಾಗಿ ಬಡ್ತಿ ತ್ಯಾಗ ಮಾಡಿದ ಅಪ್ಪ!
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿರುವ ಜಗದೀಶ್ ಅವರ ಹಿರಿಯ ಪುತ್ರ ಸಮರ್ಥ್. ಬಾಲ್ಯದಿಂದಲೇ ಸೆರೆಬ್ರಲ್ ಪಾಲ್ಸಿಯಿಂದ ನರಳುತ್ತಿದ್ದಾರೆ.  ಕೈ, ಕಾಲುಗಳು ವಕ್ರವಾಗಿದ್ದು, ಮಾತನಾಡಲೂ ಕಷ್ಟಪಡುತ್ತಾರೆ. ಆದರೂ ತಮ್ಮ ಕೈಗಳಿಂದಲೇ ಕಷ್ಟಪಟ್ಟು ಚೆಸ್‌ ಕಾಯಿಗಳನ್ನು ನಡೆಸುತ್ತಾರೆ. ಸಮರ್ಥನನ್ನು ಸೆರೆಬ್ರಲ್ ಪಾಲ್ಸಿಯ ಬಿಗಿಹಿಡಿತದಿಂದ  ಪಾರು ಮಾಡಿ ಚೆಸ್‌ ಕ್ರೀಡೆಯ ಉತ್ತುಂಗಕ್ಕೇರಿಸುವ ಛಲದಿಂದ ತಮಗೆ ಸಿಕ್ಕ ಬಡ್ತಿಯನ್ನೇ ಜಗದೀಶ್ ತ್ಯಾಗ ಮಾಡಿದ್ದಾರೆ.

ಕಳೆದ ವರ್ಷ ಜಗದೀಶ್ ಅವರಿಗೆ ಸೇವಾ ಬಡ್ತಿ ನೀಡಿ, ಗೋವಾದ ಪಣಜಿಗೆ ವರ್ಗಾಯಿಸಲಾಯಿತು. ಮಗನನ್ನು ಚೆಸ್‌ ಟೂರ್ನಿಗೆ ಕರೆದುಕೊಂಡು ಹೋಗಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬಡ್ತಿಯನ್ನೇ ತಿರಸ್ಕರಿಸಿ, ಹೊನ್ನಾವರದಲ್ಲಿಯೇ ಮುಂದುವರೆದರು. ಅದಕ್ಕೆ ತಕ್ಕಂತೆ ಪ್ರಮುಖ ಟೂರ್ನಿಗಳಲ್ಲಿ ಸಮರ್ಥ್ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಸಮರ್ಥ ಅವರು ಕ್ಲಾಸಿಕಲ್ ಚೆಸ್ (ದೀರ್ಘ ಅವಧಿಯ ಮಾದರಿ) ಫಿಡೆ 1178ನೇ ರೇಟಿಂಗ್ ಗಳಿಸಿದ್ದಾರೆ.

ರ್‌್ಯಾಪಿಡ್‌ ಚೆಸ್‌ನಲ್ಲಿಯೂ  ಉತ್ತಮ  ಕೈಚಳಕ ತೋರಿ ಅಚ್ಚರಿ ಮೂಡಿಸಿದರು. ನಾಲ್ಕು ಅಂಕಗಳನ್ನು ಗಳಿಸಿದರು. ಆದರೆ, ಕೇವಲ ಮೂರು ನಿಮಿಷಗಳ ಅವಧಿಯ ಪಂದ್ಯವಿರುವ ಬ್ಲಿಟ್ಜ್ ಚೆಸ್ ಟೂರ್ನಿಗೆ ಮಾತ್ರ ಅವರಿಗೆ ಅವಕಾಶ ಕೊಡಲಿಲ್ಲ. ‘ಕಾಯಿಗಳನ್ನು ನಡೆಸುವಾಗ ಸಮರ್ಥ್ ಕೈಗಳು ನಿತ್ರಾಣಗೊಂಡು ನಡುಗುತ್ತವೆ. ಬ್ಲಿಟ್ಜ್‌ನಲ್ಲಿ ವೇಗದಿಂದ ಚಿಂತಿಸಿ, ಕಾಯಿ ನಡೆಸಬೇಕು. ಆ ವೇಗಕ್ಕೆ ಆತ ಹೊಂದುವುದಿಲ್ಲ ಎಂದು ಅವಕಾಶ ಕೊಟ್ಟಿಲ್ಲ. ಆದರೆ, ರ್‌್ಯಾಪಿಡ್‌ನಲ್ಲಿ ಆತ ಉತ್ತಮವಾಗಿ ಆಡುತ್ತಿದ್ದಾನೆ.

ನನ್ನ ಪತ್ನಿ ವಿನುತಾ ಭಟ್ ಕೂಡ ಐಟಿಐ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನನ್ನ ಚಿಕ್ಕ ಮಗಳು ಕೂಡ ಅಣ್ಣನೊಂದಿಗೆ ಚೆಸ್ ಆಡುತ್ತಾಳೆ. ತಾನೇ ಈಗ ಡಿಜಿಟಲ್ ಟ್ಯಾಬ್ಲೆಟ್ ಬಳಸುವುದನ್ನು ಕಲಿತಿದ್ದಾನೆ. ಅದರಲ್ಲಿಯೇ ಅಭ್ಯಾಸವನ್ನೂ ಮಾಡುತ್ತಾನೆ. ಇಂಟರ್‌ನೆಟ್‌ನಲ್ಲಿ ಎಲ್ಲೆಲ್ಲಿ ಟೂರ್ನಿಗಳಿವೆ ಎಂಬುದನ್ನು ನೋಡಿ, ಹೆಸರು ನೋಂದಾಯಿಸಲು ತಿಳಿಸುತ್ತಾನೆ. ನಾನು ಹೆಸರು ನೋಂದಾಯಿಸಿ, ಕರೆದುಕೊಂಡು ಹೋಗುತ್ತೇನೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಜಗದೀಶ್.

15 ವರ್ಷದ ಸಮರ್ಥ್ ಅವರನ್ನು ಹೊತ್ತುಕೊಂಡೇ ತಿರುಗಾಡುವ ಅವರು, ಆತನ ಪ್ರತಿಯೊಂದು ಅಗತ್ಯವನ್ನು ಪೂರೈಸುತ್ತಿದ್ದಾರೆ. ಶತಾಯಗತಾಯ ತಮ್ಮ ಮಗನನ್ನು ಗ್ರ್ಯಾಂಡ್‌ ಮಾಸ್ಟರ್‌ನನ್ನಾಗಿ ರೂಪಿಸಿ, ಸೆರೆಬ್ರಲ್ ಪಾಲ್ಸಿ ರೂಪದಲ್ಲಿ ಕಾಡಿದ ವಿಧಿಯನ್ನು ಸೋಲಿಸುವ ಗುರಿ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT