ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೂಸಿ ಶರ್ಮಿಳಾ

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ಕನ್ನಡ ಸಿನಿಮಾಗಳಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿರುವ ನಟಿ ಶರ್ಮಿಳಾ ಮಾಂಡ್ರೆ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ.  ಇಲ್ಲಿನ ಒಡನಾಟ, ಅಲ್ಲಿನ ಅನುಭವಗಳನ್ನು ಮೆಲುಕು ಹಾಕಿಕೊಂಡು ತಮ್ಮ ಸಿನಿಮಾ ಬದುಕಿನ ಆಗು ಹೋಗುಗಳನ್ನು ಬಿಚ್ಚಿಟ್ಟಿದ್ದಾರೆ. ಒಂದಿಷ್ಟು ತರಲೆ, ಅಷ್ಟೇ ಬೋಲ್ಡ್ ಅನಿಸುವ ಶರ್ಮಿಳಾ ಅವರೊಂದಿಗಿನ ಮಾತು ಕತೆ ಈ ಬಾರಿ...

* ನಿಮ್ಮ ಬಾಲಿವುಡ್ ಎಂಟ್ರಿ ಹೇಗಿದೆ?
‘ಕಥಾ’ ಸಿನಿಮಾಗೆ ಆಡಿಷನ್ ನಡೆದಿದ್ದು ಡಿಸೆಂಬರ್‌ನಲ್ಲಿ. ನಾನು ಆಯ್ಕೆ ಆಗಿದ್ದೇನೆ ಅಂತ ಫೋನ್‌ ಕಾಲ್ ಬಂದಿದ್ದೇ ಕುಣಿದಾಡುವಷ್ಟು ಖುಷಿ ಆಗಿತ್ತು. ಇದೇ ಜನವರಿ 2 ರಿಂದ ಶೂಟಿಂಗ್ ಶುರುವಾಗಿದ್ದು. ಈ ನಡುವೆ ಸರಾಗ ಭಾಷೆ, ಬಾಡಿ ಲಾಂಗ್ವೇಜ್ ಎಲ್ಲಕ್ಕೂ ತಯಾರಿ ನಡೆಸಿದೆ. ಅದೊಂಥರ ಭಿನ್ನ ಅನುಭವ. ಹೊಸ ಜನ, ಹೊಸ ಪರಿಸರದಲ್ಲಿ ಕೆಲಸ ಮಾಡುವುದು ಖುಷಿ ಅನ್ನಿಸುತ್ತೆ. ಕನ್ನಡದಲ್ಲಿದ್ದಂತೆ ಅಲ್ಲಿಯೂ ಹೊಂದಿಕೊಳ್ಳುವವರು ಇದ್ದಾರೆ.

*  ಕನ್ನಡದಲ್ಲಿ ನಟಿಸುವ ಯೋಜನೆ?
ಬಾಲಿವುಡ್‌ಗೆ ಹೋಗುವೆ ಎಂದಾಕ್ಷಣ ಬೇರೆ ಭಾಷೆ ಗಳಲ್ಲಿ ನಟಿಸಲ್ಲ ಎಂದೇನಿಲ್ಲ. ಸದ್ಯಕ್ಕೆ ಕನ್ನಡದಲ್ಲಿ ‘ಮುಮ್ತಾಜ್’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದೇನೆ.

* ನಿಮ್‌ ಫೋಟೊ ನೋಡಿ ಟ್ವಿಟ್ಟರ್‌ನಲ್ಲಿ ರಮ್ಯಾ ಕಾಂಪ್ಲಿಮೆಂಟ್‌ ಕೊಟ್ಟಿದ್ದಾರೆ....?
ರಮ್ಯಾ ನನಗೆ ತುಂಬಾ ಒಳ್ಳೆ ಸ್ನೇಹಿತೆ. ಮೊದಲಿನಿಂದಲೂ ಪರಿಚಯ. ಸುಮಾರು ಜನ ರಮ್ಯಾಗೆ ಜಂಭ ಇದೆ ಅನ್ನುತ್ತಾರೆ. ನನಗೆ ಎಂದೂ ಹಾಗನ್ನಿಸಲೇ ಇಲ್ಲ. ನನಗೆ ತುಂಬಾ ಬೆಂಬಲ, ಸಲಹೆ ನೀಡುವ ಸ್ನೇಹಿತೆ ಅವರು. ಸಿನಿಮಾ ಕ್ಷೇತ್ರದಲ್ಲಿ ಸ್ನೇಹಿತರು ಇರಲು ಸಾಧ್ಯವಿಲ್ಲ ಅನ್ನೋ ಮಾತಿದೆ. ಆದರೆ ಅದು ನನ್ನ ಪಾಲಿಗೆ ಸುಳ್ಳು.

ಕದ್ದು ತಿಂದು ಸಿಕ್ಕಿ ಬಿದ್ದದ್ದು

ಒಮ್ಮೆ ಕ್ಲಾಸ್‌ನಲ್ಲಿ ಟೀಚರ್ ಪಾಠ ಮಾಡುವಾಗ ಹಿಂದೆ ಬೆಂಚಿನಲ್ಲಿ ನಾನು ನನ್ನ ಗೆಳೆಯರು  ಊಟದ ಡಬ್ಬಿಗಳನ್ನು ತೆಗೆದು ತಿನ್ನಲು ಆರಂಭಿಸಿದ್ದೆವು. ಇದ್ದಕ್ಕಿದ್ದಂತೆ ಊಟದ ವಾಸನೆ ಎಲ್ಲಾ ಕಡೆ ಹರಡಿಬಿಟ್ಟಿತ್ತು. ಎಲ್ಲರೂ ಎಲ್ಲಿಂದ ವಾಸನೆ ಬರುತ್ತಿದೆ ಎಂದು ಹಿಂದೆ ತಿರುಗಿ ನೋಡಲು ಶುರು ಮಾಡಿದ್ದರು. ನಮ್ಮ ವಿಚಾರ ಗೊತ್ತಾಗಿ ನಮ್ಮನ್ನು ಆಚೆ ಓಡಿಸಿದರು. ಆಮೇಲಿನದು ಬಿಡಿ, ಅಮ್ಮನ್ನು ಕರೆಸಿ ಮೀಟಿಂಗ್ ಕೂಡ ಆಯ್ತು. ನಂಗೆ ಒಳ್ಳೆ ಬೈಯ್ಗುಳವೂ ಸಿಕ್ಕಿತ್ತು.

* ಕೊಚಾಡಿಯಾನ್ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆಗಿಂತ ನೀವೇ ಜಾಸ್ತಿ ಮಿಂಚ್ತಾ ಇದ್ದಿರಂತೆ? ಹೌದು, ನಿಮಗೂ ಕೊಚಾಡಿಯಾನ್‌ಗೂ ಏನ್‌ ನಂಟು?
ಹಾಗೇನಿಲ್ಲ. ಕೊಚಾಡಿಯನ್ ನಮ್ಮ ಬ್ಯಾನರ್ ಇಂದ ನಿರ್ಮಾಣಗೊಂಡಿದ್ದು. ಶಾರುಖ್, ರಜನಿಕಾಂತ್ ಅವರನ್ನು ಕಂಡರೆ ನನಗೆ ಚಿಕ್ಕವಳಿದ್ದಾಗಿಂದ ತುಂಬಾ ಇಷ್ಟ. ಅವರ ಚಿತ್ರಗಳನ್ನೆಲ್ಲಾ ತಪ್ಪದೇ ನೋಡುತ್ತಿದ್ದೆ. ಅವರನ್ನು ಭೇಟಿ ಮಾಡುವ ಅವಕಾಶಕ್ಕೆ ಆಗಿನಿಂದಲೂ ಕಾಯುತ್ತಿದ್ದೆ. ಅವಕಾಶ ಸಿಕ್ಕಿದ್ದೇ ತಡ,  ಅವರನ್ನು ಮಾತನಾಡಿಸಿ ಖುಷಿ ಪಟ್ಟೆ. ಅವರಿಬ್ಬರೂ ತುಂಬಾ ಸರಳ. ಅಷ್ಟು ದೊಡ್ಡ ಸ್ಟಾರ್ ಆಗಿದ್ದರೂ ಒಂದಿಷ್ಟೂ ಹಮ್ಮು ಬಿಮ್ಮು ಇಲ್ಲದೆ ಮಾತನಾಡಿದರು.

* ಅಲ್ಲಲ್ಲಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿ ದ್ದೀರಿ, ಆದರೆ ಸಿನಿಮಾಗಳಲ್ಲಿ ಮಾತ್ರ ನಿಮ್ಮ ದರ್ಶನ ಇಲ್ಲ. ಏಕೆ ಹೀಗಾಯ್ತು?
ನಾನು ಹೆಚ್ಚು ಹೊರಗೆ ಹೋಗುವವಳಲ್ಲ. ಎರಡು ವರ್ಷಗಳಿಂದಲೂ ಯಾವುದೇ ಕಾರ್ಯಕ್ರಮಕ್ಕೂ ಹೋಗಿಲ್ಲ. ನಾನು ತುಂಬಾ ಚೂಸಿ. ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದಲೂ ಎಲ್ಲವನ್ನೂ ಅಳೆದೂ ತೂಗಿ ಆರಿಸುತ್ತೇನೆ. ‘ಯಾವುದೇ ಕೆಲಸ ನಿನಗೆ ಇಷ್ಟವಿದ್ದರೆ ಮಾತ್ರ ಮಾಡು. ತುಂಬಾ ಬಿಜಿ ಇರಬೇಕು ಅನ್ನೊ ಕಾರಣಕ್ಕೆ ಎಲ್ಲವನ್ನೂ ಒಪ್ಪಿಕೊಬೇಡ’ ಎಂದು ನನ್ನ ಮೊದಲ ಸಿನಿಮಾದಿಂದಲೇ ಮನೆಯವರೂ ಹೇಳುತ್ತಿದ್ದರು. ಆದ್ದರಿಂದ ಸಿನಿಮಾಗಳನ್ನು ಆರಿಸುವಾಗಲೂ ಯೋಚಿಸಿ ಮಾಡುತ್ತೇನೆ.

* ನೀವು ಕಾಲಿಟ್ಟ ನಂತರ ಬಂದ ನಟಿಯರು ಹತ್ತಿಪ್ಪತ್ತು ಸಿನಿಮಾಗಳಲ್ಲಿ ಸುದ್ದಿ ಮಾಡಿದ್ದಾಯ್ತು. ಚಿತ್ರರಂಗಕ್ಕೆ ಕಾಲಿಟ್ಟು ಐದಾರು ವರ್ಷ ಆದರೂ, ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದರೂ ನಿಮಗ್ಯಾಕೆ ಹೀಗೆ?
ಎಲ್ಲ ಬಾಚಿಕೊಳ್ಳೋದು ನನಗಿಷ್ಟ ಇಲ್ಲ. ನನಗೆ ಒಪ್ಪಿಗೆಯಾದರೆ, ಒಳ್ಳೆಯದು ಅನ್ನಿಸಿದರೆ ಮಾತ್ರ ನಾನು ಮುಂದೆ ಹೋಗುತ್ತೇನೆ ಅಷ್ಟೆ.

* ಕಡೇಪಕ್ಷ ವಿವಾದವನ್ನೂ ಮಾಡುತ್ತಿಲ್ಲವಲ್ಲ. ನಟಿಯಾಗಿ ಇಷ್ಟೊಂದು ತಣ್ಣಗಾದರೆ ಹೇಗೆ?
ವಿವಾದ ಮಾಡೋದು ನನ್ನ ಉದ್ದೇಶವೇ ಅಲ್ಲ. ವಿವಾದ ಆದರೆ ಒಳ್ಳೆ ಪಬ್ಲಿಸಿಟಿ ಸಿಗುತ್ತೆ ಅಂತ ಕೆಲವರು ಸಲಹೆ ಕೊಡ್ತಾರೆ. ಆದರೆ ಅದು ಪಕ್ಕಾ ಸುಳ್ಳು. ನನ್ನ ಕೆಲಸ ಮುಗಿದ ತಕ್ಷಣ ಜಾಗ ಬಿಡುತ್ತೇನೆ. ಕೆಲಸ ಮಾಡುವಾಗ ಕೆಲಸ ಮಾತ್ರ ಮಾಡಬೇಕು.ಗಾಸಿಪ್ ಮಾಡಬೇಕೆಂದರೆ ಇಲ್ಲಿಗೇ ಬರಬೇಕೆಂದೇನಿಲ್ಲ. ಗಾಸಿಪ್ ಇಲ್ಲದಿದ್ದರೆ ಬೋರ್ ಅಂತ ಕೆಲವು ಪತ್ರಕರ್ತರೂ ಹೇಳಿದ್ದಾರೆ. ಒಳ್ಳೆಯದಿದ್ದರೆ ಮಾತ್ರ ಸುದ್ದಿ ಮಾಡಿ ಎಂದು ನಕ್ಕಿ ಸುಮ್ಮನಾಗಿದ್ದೇನೆ.

* ನಟಿಸೋದು ಬಿಟ್ಟು ಇನ್ನೂ ಏನೇನ್ ಮಾಡ್ತೀರಿ?
ಡಾನ್ಸ್ ಅಂದರೆ ತುಂಬಾ ಇಷ್ಟ. ನಾನು ಬಾತ್‌ರೂಮ್ ಸಿಂಗರ್ ಕೂಡ. ನನ್ನ ಸಿನಿಮಾ ಒಂದಕ್ಕೆ ನಾನೇ ಹಾಡಬೇಕೆಂಬ ಆಸೆ ಇದೆ. ಕಲಿತು ಪ್ರಯತ್ನಿಸುತ್ತೇನೆ. ಯೋಗ ಮತ್ತು ಜಿಮ್ ಅಂದರೆ ಪ್ರಾಣ. ಒಂದು ದಿನವೂ ತಪ್ಪಿಸದೆ ಮಾಡುತ್ತೇನೆ.

* ಇಂಗ್ಲಿಷ್‌ನಲ್ಲಿ ನಿಮ್ಮ ಹೆಸರಿನ ಸ್ಪೆಲ್ಲಿಂಗ್‌ ಬದಲಿಸಿಕೊಂಡಿದ್ದು ಏಕೆ? (sharmila to sharmiela) ಗ್ರಹಗತಿ ಮೇಲಿನ ನಂಬಿಕೆನಾ?
ಚಿಕ್ಕ ವಯಸ್ಸಲ್ಲಿ ಸ್ಪೆಲ್ಲಿಂಗ್ ಹಾಗೇ ಇದ್ದದ್ದು. ಆದರೆ ಶಾಲೆ, ಕಾಲೇಜಲ್ಲಿ ಬದಲಾಯ್ತು. ಗ್ರಹಗತಿ ಅನ್ನೋದು ಕಾರಣ ಅಲ್ಲ.

* ಹೆಸ್ರು ಚೇಂಜ್‌ ಮಾಡಿಕೊಂಡ ಮೇಲೆ ನಿಮ್ಮಲ್ಲಿ ಏನಾದ್ರೂ ಚೇಂಜಸ್‌ ಆಯ್ತಾ?
ಹಾಗೇನೂ ಇಲ್ಲ. ಕಷ್ಟ ಪಟ್ಟು ಕೆಲಸ ಮಾಡಿದರೆ, ಮಾಡುವ ಕೆಲಸದಲ್ಲಿ ಆಸಕ್ತಿ ಇದ್ದರೆ ಒಳ್ಳೆಯ ಬದಲಾವಣೆ ತಂತಾನೇ ಆಗುತ್ತಿರುತ್ತದೆ.

* ಕಣ್ ಕಣ್ಣ ಸಲಿಗೆ ಅಂಥ ಹಾಡಿ ಎಷ್ಟು ಮಂದಿಯನ್ನು ಸುಲಿಗೆ ಮಾಡಿದ್ದೀರಿ?
ಸುಲಿಗೆ ಮಾಡೇ ಇಲ್ಲ. ಏಕೆಂದರೆ ನಾನು ಕಾಲೇಜು ದಿನಗಳಲ್ಲಿ ತುಂಬಾ ಬೋರಿಂಗ್ ಹುಡುಗಿ. ತುಂಬಾ ದಪ್ಪಗಿದ್ದೆ ಬೇರೆ. ನನ್ನ ಜೊತೆ ಇದ್ದವರು ನನ್ನನ್ನು ಬರಿ ಸ್ನೇಹಿತೆಯಂತೆ ನೋಡುತ್ತಿದ್ದರು. ಬೇರೆ ಹುಡುಗಿ ಲವ್‌ ಮಾಡೋಕೆ ನನ್ನ ಸಲಹೆ ಕೇಳ್ತಿದ್ರು.

* ಈಗಲೂ ನೋಡೋಕೆ ಮೊದಲ ಚಿತ್ರದಲ್ಲಿ ಇದ್ದಂತೆಯೇ ಕಾಣಿಸುತ್ತೀರಿ. ಇದರ ಗುಟ್ಟೇನು?
ಸೌಂದರ್ಯ ಅನ್ನೋದು ತಾತ್ಕಾಲಿಕ. ಆದರೆ ಗೆಲ್ಲುವ ಹಟದಲ್ಲಿ ನಗು ಕಳೆದುಕೊಳ್ಳಬಾರದು. ಸದಾ ನಗುತ್ತಿರಬೇಕು. ಅದೇ ನನ್ನ ಗುಟ್ಟು.

* ನಿಮ್ಮ ಜೀವನದ ಬೆಸ್ಟ್ ಶಾಟ್?
ಸಜನಿ ರಿಲೀಸ್ ಆದ ಮೊದಲ ದಿನ ಪರಿಚಯದ ಟೈಟಲ್‌ನಲ್ಲಿ ನನ್ನ ಹೆಸರು ಕಾಣಿಸಿಕೊಂಡಾಗ ತುಂಬಾ ಭಾವುಕವಾಗಿದ್ದೆ. ನನ್ನ ಅಷ್ಟೂ ವರ್ಷಗಳ ಕನಸು ಸಾಕಾರಗೊಂಡ ದಿನ ಅದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT