ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆರ್ರಿತೋಟದ ಬೆರಗು

ರಂಗಭೂಮಿ
Last Updated 12 ಜೂನ್ 2015, 19:30 IST
ಅಕ್ಷರ ಗಾತ್ರ

100ವರ್ಷಗಳಿಗೂ ಹಿಂದೆ ಬರೆದ ‘ಚೆರ್ರಿ ಆರ್ಚರ್ಡ್’, ಆಂಟೋನ್ ಚೆಕೋವ್‌ನ ಕೊನೆಯ ನಾಟಕ. ಬರಹಗಾರನ ಮನಸ್ಸಿನಲ್ಲಿ ಹುಟ್ಟಿದ ಕಥೆ, ನಾಟಕ ಮತ್ತೆ ಸಹೃದಯರ ಮನಸ್ಸಿನಲ್ಲಿ ತನಗೆ ಬೇಕಾದಂತೆ, ಅಲ್ಲಿನ ಮಣ್ಣಿಗೆ ತಕ್ಕಂತೆ ಕುಡಿಯೊಡೆಯುತ್ತಾ ಹೋಗುತ್ತದೆ ಎನ್ನುವ ಮಾತಿಗೆ ಈ ನಾಟಕ ಒಂದು ಉದಾಹರಣೆ. ರಂಗಶಂಕರದ ‘ಕನ್ನಡ ಯುವ ನಾಟಕೋತ್ಸವ’ದ ಅಂಗವಾಗಿ ‘ಬೆಂಗಳೂರು ಥಿಯೇಟರ್ ಕಂಪೆನಿ’ ಇದನ್ನು ಕೈಗೆತ್ತಿಕೊಂಡಿತ್ತು. ವೆಂಕಟೇಶ್ ಪ್ರಸಾದ್ ನಾಟಕದ ಅನುವಾದ ಮತ್ತು ನಿರ್ದೇಶನ ಮಾಡಿದ್ದರು.

ಸಾಧಾರಣವಾಗಿ ಅನುವಾದಗೊಂಡ ನಾಟಕಗಳನ್ನು ನೋಡಿದಾಗ ಆ ನಾಟಕಗಳ ದೇಶ ಮತ್ತು ಕಾಲ ಬೇರೆ ಎನ್ನುವ ಗೆರೆ ಹಾಗೇ ಉಳಿದಿರುತ್ತದೆ. ಅದನ್ನು ‘ಇಲ್ಲಿ’ಗೆ ಅಳವಡಿಸಿಕೊಳ್ಳುವ ಪ್ರಯತ್ನ ಸಹ ನಡೆಸಿರುವುದನ್ನು ನಾವು ಕಂಡಿದ್ದೇವೆ. ಆ ಪ್ರಯತ್ನ ಎಷ್ಟೋ ಸಾರಿ ಬೇರೆ ನಾಟಕವನ್ನೇ ಸೃಷ್ಟಿಸುತ್ತದೆ. ಆದರೆ ಇಲ್ಲಿ ಚೆರ್ರಿತೋಟವನ್ನು ಬಲವಂತದಿಂದ ಕಾಫಿತೋಟ ಅಥವಾ ದ್ರಾಕ್ಷಿತೋಟ ಮಾಡಲು ಹೋಗಿಲ್ಲ. ನಾಟಕದ ದೇಶ ಮತ್ತು ಕಾಲ ಎರಡೂ ನಮಗೆ ಅದರ ಮೂಲರೂಪದಲ್ಲಿಯೇ ದಕ್ಕುತ್ತದೆ. ನಾಟಕದ ಸಾಂದ್ರತೆ ಮತ್ತು ಪರಿಣಾಮ ಎರಡೂ ತೆಳುವಾಗಿಲ್ಲ. ಅದಕ್ಕಾಗಿ ನಿರ್ದೇಶಕ ಮತ್ತು ತಂಡವನ್ನು ಅಭಿನಂದಿಸಬೇಕು.

ನಾಟಕದ ಕಾಲ 20ನೆಯ ಶತಮಾನದ ಆದಿಭಾಗ. ರಷ್ಯಾದಲ್ಲಿ, ಅಷ್ಟೇ ಏಕೆ ಇಡೀ ಜಗತ್ತಿನಲ್ಲಿ ರಾಜವಂಶಗಳ ಪ್ರಭಾವ ವಿಘಟನೆಗೊಂಡು, ಜಮೀನ್ದಾರಿ ವ್ಯವಸ್ಥೆ ಶಿಥಿಲವಾಗುತ್ತಿದ್ದ ಕಾಲ. ಅಲ್ಲಿಯವರೆಗೂ ತಿರಸ್ಕೃತವಾಗಿದ್ದ ದುಡಿಯುವ ವರ್ಗ, ತನ್ನ ದನಿಯನ್ನು ಕೇಳಬೇಕು ಎಂದು ಕೇಳುತ್ತಿದ್ದ ಕಾಲ. ಆ ಇಡೀ ವ್ಯವಸ್ಥೆ ಮತ್ತು ಸಮಾಜಕ್ಕೆ ಸಂಕೇತವಾಗಿ ಇಲ್ಲಿ ಚೆರ್ರಿತೋಟ ಬರುತ್ತದೆ. ಆ ಚೆರ್ರಿತೋಟದ ಒಡತಿ ಎಲ್ಲವನ್ನೂ ಬೇಜವಾಬ್ದಾರಿಯಿಂದಲೇ ನಿಭಾಯಿಸಿರುತ್ತಾಳೆ. ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ತನ್ನ ಪ್ರೇಮಿಯ ಜೊತೆ ಹೊರಟು ಹೋಗಿರುತ್ತಾಳೆ.

ಅವಳ ಎಸ್ಟೇಟನ್ನೂ, ತೋಟವನ್ನೂ ಕಾಪಾಡುವುದು ಅವಳ ಸಾಕುಮಗಳು. ಆ ಮನೆಯ ಮೇಲ್ವಿಚಾರಕಿ ವಾರಿಯಾ. ಆ ಮನೆಯ ಆಳುಮಗ ಲೋಪಾಹಿನ್ ಕಷ್ಟಪಟ್ಟು ಒಂದೊಂದೇ ಹೆಜ್ಜೆ ಇಟ್ಟು ಮೇಲೆ ಬಂದವನು.  ಮನೆಯ ಕೆಲಸದವಳು ದುನ್ಯಾಶಾ. ಜಮೀನ್ದಾರರ ಮನೆಯಲ್ಲಿ ಕೆಲಸ ಮಾಡುತ್ತಾ ತನ್ನನ್ನೂ ಆ ಮನೆಯ ಹೆಂಗಸರ ಪಾತ್ರದಲ್ಲಿ ಕಲ್ಪಿಸಿಕೊಳ್ಳುವವಳು. ಮಗಳು ಆನ್ಯಾ, ಅಮ್ಮ ಪ್ಯಾರಿಸಿನಲ್ಲಿ ಕೆಟ್ಟ  ಸ್ಥಿತಿಯಲ್ಲಿದ್ದಾಳೆ ಎಂದು ತಿಳಿದು ಹಿರಿಯಳಂತೆ ಹೋಗಿ ಅಮ್ಮನನ್ನು ಅಲ್ಲಿಂದ ಕರೆದುಕೊಂಡು ಬಂದಿರುತ್ತಾಳೆ. ಮನೆಯೊಡತಿಯ ಅಣ್ಣ ಗಯೇವ್ ಯಾವ ಕೆಲಸವನ್ನೂ ಮಾಡದೇ, ತನ್ನ ಗತವೈಭವದಲ್ಲಿ ಜೀವಿಸುವವನು. ಮನೆಯ ಆಳು ಪಿಯರ್ಸ್, ಆಳುತನಕ್ಕೆ ಎಷ್ಟು ಒಗ್ಗಿಹೋಗಿದ್ದಾನೆಂದರೆ ಜೀತ ವಿಮುಕ್ತಿಯ ದಿನ ಅವನ ಪಾಲಿಗೆ ಕೇಡಿನ ದಿನ. ಈ ಮನೆಗೆ ತಾನು ಅನಿವಾರ್ಯ ಎನ್ನುವ ನಂಬಿಕೆಯಲ್ಲೇ ಅವನ ಬದುಕು ಕಳೆದಿರುತ್ತದೆ. ಜಮೀನ್ದಾರಿ ವ್ಯವಸ್ಥೆ ತನ್ನ ವೈಭವವನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದರೆ, ಮಧ್ಯಮ ವರ್ಗ ಹೊಸ ವ್ಯವಸ್ಥೆಯಲ್ಲಿ ತನ್ನ ಸ್ಥಾನ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತದೆ. ಕಡೆಗೆ ಚೆರ್ರಿ ತೋಟ ಉಳಿಯುತ್ತದಾ ಇಲ್ಲವಾ ಎನ್ನುವುದರ ಸುತ್ತ ನಾಟಕವನ್ನು ಹೆಣೆಯಲಾಗಿದೆ.

ಇಂತಹ ಸಂಕೀರ್ಣ ಕಥೆಯನ್ನು ನಾಟಕವಾಗಿಸುವುದು ಸುಲಭದ ಕೆಲಸವಲ್ಲ. ದೇಶ ಕಾಲಗಳ ಪಲ್ಲಟದ ನಡುವೆಯೂ, ಮೂಲ ಸೊಗಡನ್ನು ಹಾಗೆಯೇ ಉಳಿಸಿಕೊಳ್ಳುವುದರಲ್ಲಿ ನಿರ್ದೇಶಕ ವೆಂಕಟೇಶ ಪ್ರಸಾದ್ ಯಶಸ್ವಿಯಾಗಿದ್ದಾರೆ. ನಾಟಕದ ಪಾತ್ರಗಳು ತಮ್ಮ ಎಲ್ಲಾ ಮಾನವ ಸಹಜ ದೌರ್ಬಲ್ಯಗಳ ಜೊತೆ ಜೊತೆಯಲ್ಲಿಯೇ ನಮ್ಮೊಳಗಿಳಿಯುತ್ತಾರೆ. ಅವರೊಡನೆ ಸ್ಪಂದಿಸುವುದು ನಮಗೆ ಸಾಧ್ಯವಾಗುತ್ತದೆ. ಯಾವುದೇ ಪಾತ್ರದ ಬಾಯಲ್ಲಿ ಏನನ್ನೂ ಹೇಳಿಸದೆಯೇ ಅವರು ನಮ್ಮನ್ನು ನೇರವಾಗಿ ನಾಟಕದ ಜೊತೆಯಲ್ಲಿ ಅನುಸಂಧಾನ ನಡೆಸಲು ಬಿಡುತ್ತಾರೆ. ಅವರ ಈ ಪ್ರಯತ್ನದಲ್ಲಿ ಸಹಾಯ ಮಾಡಿರುವುದು ಅವರ ಇಡೀ ತಂಡ.

ಕುಸಿಯುತ್ತಿರುವ ಜಮೀನ್ದಾರಿ ಮನೆತನದವರ ವೈಭವದ ದಿರಿಸು, ಆಭರಣಗಳಿಂದ ಆ ಕಾಲವನ್ನು ಕಟ್ಟಿಕೊಟ್ಟಿರುವ ಸುಷ್ಮಾ, ಅರ್ಥಪೂರ್ಣವಾಗಿ ಬೆಳಕಿನ ವಿನ್ಯಾಸ ಮಾಡಿದ ವಿನಯ್ ಚಂದ್ರ, ಮೊದಲ ಪ್ರದರ್ಶನದಲ್ಲಿ ಮನಮುಟ್ಟುವ ಅಭಿನಯ ನೀಡಿದ ಇಡೀ ತಂಡ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.  ಮನೆಯೊಡತಿ ಲುಬೋವ್ ಆಗಿ ಸೌಮ್ಯ, ಕಾಲು, ನಿಂತ ನೆಲ ಭದ್ರವಾಗಿದ್ದರೂ ಭುಜ ಬಾಗಿಸಿಕೊಂಡ ಲೋಪಾಹೀನ್ ಆಗಿ ವಿಜಯ್ ಕುಲಕರ್ಣಿ, ಇಡೀ ಮನೆ ಜವಾಬ್ದಾರಿ ಹೊತ್ತಿದ್ದರೂ, ಲೋಪಾಹಿನ್ ವಿಷಯದಲ್ಲಿ ಅಸಹಾಯಕಳಾಗಿ ನಿಲ್ಲುವ ವಾರಿಯಾಳಾಗಿ ಸುರಭಿ, ಹದಿನೇಳನೆಯ ವಯಸ್ಸಿಗೆ ಮಾತ್ರ ಸಾಧ್ಯವಾಗುವ ಮುಗ್ಧತೆಯಲ್ಲಿ ಪ್ರೀತಿಸುವ ಆನ್ಯಾಳಾಗಿ ತೇಜು, ಚೆಲ್ಲುತನದ ದುನ್ಯಾಶಳಾಗಿ ಬೃಂದಾ, ಭೋಳೆ ಸ್ವಭಾವದ ಎಪಿಖೋಡೇವ್ ಆಗಿ ಸಂದೀಪ್ ಜೈನ್, ಪಿಯರ್ಸ್ ಆಗಿ ಗಿರೀಶ್ ಭಟ್, ಗಯೇಬ್ ಆಗಿ ಪ್ರದೀಪ್ ನಾಡಿಗ್, ಫಿಶ್ಚಿಕ್ ಆಗಿ ವಿನೀತ್, ಟ್ರೋಫಿಮೋವ್ ಆಗಿ ಅರುಣ್, ಯಾಶಾನಾಗಿ ವಾಸುಕಿ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಕೊನೆಯಲ್ಲಿ ಲೋಪಾಹಿನ್ ಎದುರಿಗೆ ಬೀಗದ ಕೈಯನ್ನು ಎಸೆವ ವಾರ್ಯಾ ಮತ್ತೆ ಬಂದು ಅವನೆದುರಿಗೆ, ಅವನ ಒಪ್ಪಿಗೆಯನ್ನು ಆಪೇಕ್ಷಿಸಿ ನಿಲ್ಲುತ್ತಾಳೆ. ಈ ಒಂದು ಘಟನೆ ಅವಳ ಇದುವರೆಗಿನ ವ್ಯಕ್ತಿತ್ವಕ್ಕೆ ವ್ಯತಿರಿಕ್ತವಾಗಿ ಬಂದಿದೆ ಅನ್ನಿಸಿತು. ನಂತರ ಕಡೆಯ ದೃಶ್ಯದಲ್ಲಿ ಚೆರ್ರಿ ಮರಗಳನ್ನು ಕಡಿದುರುಳಿಸುವ ಸದ್ದು ಕೇಳುತ್ತಿರುವಂತೆಯೇ ಬೆಳಕು ಮಂಕಾಗುತ್ತದೆ.  ನಾಟಕ ಮುಗಿದ ಮೇಲೆ, ದೀಪ ಹತ್ತಿಕೊಂಡಾಗ ಕಿಟಕಿಯ ಹೊರಗೆ ಚೆರ್ರಿ ಮರಗಳು ಮೊದಲಿನಂತೆಯೇ ನಿಂತಿರುತ್ತವೆ. ತಾಂತ್ರಿಕವಾಗಿ ಅದು ಸರಿಯೇ. ಆದರೆ ಕೊನೆಯಲ್ಲಿ ಕಿಟಕಿಯಾಚೆಗೆ ಖಾಲಿ ಜಾಗ ಕಂಡರೆ ಆ ಖಾಲಿತನದ ಪರಿಣಾಮ ಇನ್ನೂ ತೀವ್ರವಾಗಿರುತ್ತದೆ ಅನ್ನಿಸಿತು.

ಕಡೆಯಲ್ಲಿ ಚೆರ್ರಿತೋಟ ಹರಾಜಾದ ತಕ್ಷಣ ಪ್ರತಿಯೊಬ್ಬರೂ ನಿಂತ ಜಾಗದಲ್ಲೇ ಒಂದೊಂದು ದ್ವೀಪವಾದಂತೆ ಕಾಣುವ ಕಲ್ಪನೆಯೇ ಅನನ್ಯ. ಚೆರ್ರಿತೋಟಕ್ಕೆ ಕೊಡಲಿಯೇಟು ಬೀಳುವ ಸದ್ದಿನ ಜೊತೆಯಲ್ಲಿಯೇ ಒಬ್ಬೊಬ್ಬರು ಒಂದೊಂದು ದಾರಿ ಹಿಡಿದು ಮನೆಯಿಂದ ದೂರಾಗುತ್ತಾರೆ. ಈಗ ಒಡೆಯನ ಖುರ್ಚಿಯಲ್ಲಿ ಲೋಪಾಹಿನ್ ಕುಳಿತಿರುತ್ತಾನೆ. ಮೆಲ್ಲನೆ ಅವನ ಬಳಿ ಹೋಗಿ ಪಿಯರ್ಸ್ ಆಡುವ ಮಾತು ಹಲವು ಪ್ರಶ್ನೆಗಳನ್ನು ಒಮ್ಮೆಲೇ ಹುಟ್ಟಿಸುತ್ತದೆ. ಅಂದರೆ ಬದಲಾಗಿರುವುದು ವ್ಯವಸ್ಥೆಯಾ ಅಥವಾ ವ್ಯವಸ್ಥೆಯನ್ನು ನಿಯಂತ್ರಿಸುವ ವ್ಯಕ್ತಿಗಳಾ? ವ್ಯವಸ್ಥೆ ರೂಪ ಬದಲಾಯಿಸಿಕೊಂಡಾದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದಾ? ಈ ಪ್ರಶ್ನೆ ನಾಟಕ ಮುಗಿದ ಮೇಲೂ ನಮ್ಮನ್ನು ಕಾಡುತ್ತಲೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT