ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಸ್‌ನಲ್ಲಿ ‘ಸಮರ್ಥ’

Last Updated 4 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಹೊನ್ನಾವರದ ಈ ಚೆಸ್ ಆಟಗಾರನ ಹೆಸರು ಸಮರ್ಥ ಜೆ.ರಾವ್‌. ಆದರೆ ಕಾಲುಗಳಲ್ಲಿ ಸ್ವಾಧೀನವಿಲ್ಲ. ಕೈ ಸಹ ಸಂಪೂರ್ಣ ನಿಯಂತ್ರಣದಲ್ಲಿಲ್ಲ. ಮುಖದಲ್ಲಿ ಮಂದಹಾಸ ಮೂಡುತ್ತಿದ್ದರೂ ಅಸ್ಪಷ್ಟ ಮಾತು. ‘ಸೆರೆಬ್ರಲ್‌ ಪಾಲ್ಸಿ’ ಸಮಸ್ಯೆಯಿಂದ ಬಳಲುತ್ತಿರುವ ಈ ಹುಡುಗನಿಗೆ ಚೆಸ್‌ ಎಂದರೆ ಅತೀವ ಪ್ರೇಮ.
ದೈಹಿಕ ನ್ಯೂನತೆಗಳ ನಡುವೆಯೂ ವಿವಿಧ ಕಡೆ ಈತ ಒಟ್ಟು 28 ಟೂರ್ನಿಗಳಲ್ಲಿ ಆಡಿದ್ದಾನೆ.

ರಾಜ್ಯ ಮತ್ತು ರಾಷ್ಟ್ರ ಮಟ್ಟದ ಟೂರ್ನಿಗಳಲ್ಲಿ ತಂದೆ ಜಗದೀಶ ರಾವ್‌ ಅವರೇ ಮಗನನ್ನು ಕರೆದುಕೊಂಡು ಹೋಗುತ್ತಾರೆ. ಮಗುವಿನಂತೆ ಎತ್ತಿಕೊಂಡು ಆಡಲು ನಿಗದಿಯಾದ ಬೋರ್ಡ್‌ ಮುಂದೆ ಕೂರಿಸುತ್ತಾರೆ. ಆತನ ಸೂಚನೆ ಪಾಲಿಸುತ್ತಾರೆ. ಸಮರ್ಥ ಕೂಡ ಅಪ್ಪನ ಈ ಪ್ರಯತ್ನಕ್ಕೆ ಪೂರಕವಾಗಿ ಸ್ಪಂದಿಸಿ, ಸುಧಾರಿತ ಪ್ರದರ್ಶನಗಳ ಮೂಲಕ ಯಶಸ್ಸು ಕಾಣುತ್ತಿದ್ದಾನೆ. ಫಿಡೆ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಈತನ ರೇಟಿಂಗ್‌ 1326.

ಯಶಸ್ಸಿನ ಹಾದಿ....
ಕೇವಲ ಮೂರು ವರ್ಷಗಳ ಹಿಂದೆ, ಸ್ಪರ್ಧಾತ್ಮಕ ಚೆಸ್‌ ಆಡಲು ಆರಂಭಿಸಿದ ಸಮರ್ಥ, ಇತ್ತೀಚಿನ ತಿಂಗಳಲ್ಲಿ ಎರಡು ಪ್ರಮುಖ ಯಶಸ್ಸು ಗಳಿಸಿದ್ದಾನೆ. ಮೂರು ತಿಂಗಳ ಹಿಂದೆ ಸ್ಲೊವಾಕಿಯಾದ ಬ್ರಾಟಿಸ್ಲಾವಾದಲ್ಲಿ ನಡೆದ ವಿಶ್ವ ದೈಹಿಕ ಅಸಮರ್ಥರ ಚೆಸ್‌ ಟೂರ್ನಿಯ ಜೂನಿಯರ್‌ ಬಾಲಕರ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದು ಗಮನ ಸೆಳೆದಿದೆ. ಸೆಪ್ಟೆಂಬರ್‌ ತಿಂಗಳ ಮಧ್ಯದಲ್ಲಿ ಚಿತ್ರದುರ್ಗದಲ್ಲಿ ನಡೆದ ರಾಜ್ಯ ರ್‍ಯಾಪಿಡ್‌ ಟೂರ್ನಿಯಲ್ಲಿ 16 ವರ್ಷದೊಳಗಿನವರ ಓಪನ್‌ ವಿಭಾಗದಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು ಕೂಡ ಕಡಿಮೆ ಸಾಧನೆಯೇನಲ್ಲ. ರಾಜ್ಯದ ವಿವಿಧ ಕಡೆಗಳಿಂದ 223 ಆಟಗಾರರು ಈ ವಿಭಾಗ ದಲ್ಲಿ ಸ್ಪರ್ಧಿಸಿದ್ದರು. ಈತ 9 ಪಂದ್ಯಗಳಲ್ಲಿ ಎಂಟು ಗೆದ್ದಿದ್ದ!

ಸಮರ್ಥ ಹೊನ್ನಾವರದ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾನೆ. ಗಣಿತದಲ್ಲಿ ಪ್ರತಿಭಾವಂತ. ತಂದೆ ಹೊನ್ನಾವರದಲ್ಲಿ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿ. ತಾಯಿ ವಿನುತಾ ಶಿಕ್ಷಕಿ. ಈತನಿಗೆ 4ನೇ ತರಗತಿ ಓದುತ್ತಿರುವ ತಂಗಿ ಇದ್ದಾಳೆ.

ಹುಟ್ಟಿನಿಂದಲೇ ಸಮಸ್ಯೆ
ಅವಧಿಪೂರ್ವ ಹುಟ್ಟಿದ್ದ ಈತನಿಗೆ ಒಂದು ವರ್ಷದೊಳಗೆ ಕಾಮಾಲೆ ಕಾಣಿಸಿಕೊಂಡು ಅಂಗವೈಕಲ್ಯ ಶುರುವಾಯಿತು. ಕುಳಿತುಕೊಳ್ಳಲೂ ಕಷ್ಟವಾಯಿತು. ವೈದ್ಯರ ಬಳಿ ತೋರಿಸಿ ಸೋತ ನಂತರ, ಇರುವ ಹಾಗೆಯೇ ಮಗನನ್ನು ಬೆಳೆಸಲು ನಿರ್ಧರಿಸಿದರು.ಮಗನಿಗೆ ಚೆಸ್ ಕಲಿಸಿದ್ದು ತಾಯಿ ವಿನುತಾ ಅವರು. ಈ ಆಟದಲ್ಲಿ ಮಗನ ಆಸಕ್ತಿ ಅರಿತ ತಂದೆ ಜಗದೀಶ್ ರಾವ್, ಮಗನನ್ನು ಇನ್ನಷ್ಟು ಪ್ರೋತ್ಸಾಹಿಸಿದರು. ದಾವಣಗೆರೆಯಲ್ಲಿ 2013ರಲ್ಲಿ ನಡೆದ ಚೆಸ್ ಟೂರ್ನಿ ಈತ ಭಾಗವಹಿಸಿದ್ದ ಮೊದಲನೇ ಪಂದ್ಯಾವಳಿ. ಅಲ್ಲಿ 4 ಪಾಯಿಂಟ್ ಪಡೆದ. ಬಾಲಕನ ಪ್ರದರ್ಶನ ನೋಡಿದ ಆಯೋಜಕರು ಸಮಾಧಾನಕರ ಬಹುಮಾನ ನೀಡಿದರು.

‘ಪ್ರತಿ ಪಂದ್ಯದಲ್ಲೂ ಆಯೋಜಕರು ಸಮಾಧಾನಕರ ಬಹುಮಾನಗಳನ್ನು ನೀಡಿ ಉತ್ತೇಜಿಸುತ್ತಿದ್ದರು. ಆದರೆ, ಸಮರ್ಥ ಮುಖ್ಯ ಬಹುಮಾನ ಪಡೆಯಬೇಕು. ರಾಷ್ಟ್ರೀಯ ಮಟ್ಟದಲ್ಲಿ ಆಡಬೇಕು ಎಂದು ಅಪೇಕ್ಷಿಸಿದ್ದ. ಆತನ ಬಯಕೆ ಯಂತೆ ತಿರುಚ್ಚಿಯಲ್ಲಿ ನಡೆದ ರಾಷ್ಟ್ರೀಯ ಅಂಗವಿಕಲರ ಚೆಸ್ ಟೂರ್ನಿಗೆ ಕರೆದೊಯ್ದೆ. 32 ಮಂದಿ ಆಟಗಾರರ ನಡುವೆ ಸಮರ್ಥ 2ನೇ ಸ್ಥಾನ ಗಳಿಸಿದ’ ಎಂದು ತಂದೆ ಜಗದೀಶ್ ರಾವ್ ಹೇಳುತ್ತಾರೆ.

‘ಸಮರ್ಥನ ಸಾಧನೆಯ ಹಿಂದೆ ತಾಯಿಯ ಶ್ರಮವೂ ಇದೆ. ಆದರೆ ಅದು ಹೊರಗೆ ಕಾಣುವುದಿಲ್ಲ’ ಎನ್ನುತ್ತಾ ಪತ್ನಿಯ ಶ್ರಮವನ್ನು ಶ್ಲಾಘಿಸುತ್ತಾರೆ ಜಗದೀಶ್. ‘ಮಗ ಹೀಗಾದನಲ್ಲಾ ಎಂದು ಕೊರಗಿದ್ದೂ ಇದೆ. ಆದರೆ ಮಗನ ಚೆಸ್‌ ಆಸಕ್ತಿಯನ್ನು ಪ್ರೋತ್ಸಾಹಿಸಿದ್ದರಿಂದ ಈ ಮಟ್ಟಕ್ಕೇರಲು ಸಾಧ್ಯವಾಯಿತು’ ಎನ್ನುತ್ತಾರೆ ಭಾವುಕರಾಗಿ.

‘ಇವತ್ತು ಸಮರ್ಥನ ಅಪ್ಪ ಜಗದೀಶ್ ಎಂದು ಜನ ನನ್ನನ್ನು ಗುರುತಿಸುತ್ತಿದ್ದಾರೆ. ಇಂಥ ಅವಕಾಶ ಎಷ್ಟು ಪೋಷ ಕರಿಗೆ ಸಿಗುತ್ತದೆ ಹೇಳಿ’ ಎನ್ನುತ್ತಾರೆ ಅವರು ಹೆಮ್ಮೆಯಿಂದ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈ ತಿಂಗಳ 14ರಿಂದ ನಡೆಯಲಿರುವ ಲಾಯರ್ಸ್‌ ಕಪ್‌ ಇಂಟರ್‌ ನ್ಯಾಷನಲ್‌ ಫಿಡೆ ರೇಟೆಡ್‌ ಟೂರ್ನಿಯಲ್ಲಿ ಮಗನನ್ನು ಆಡಿಸುತ್ತಿದ್ದೇನೆ. ಮುಂದಿನ ವರ್ಷವೂ ವಿಶ್ವ ಅಂಗವಿಕಲರ ಟೂರ್ನಿಯಲ್ಲಿ ಆಡಿಸಬೇಕೆನ್ನುವ ಬಯಕೆಯಿದೆ ಎನ್ನುತ್ತಾರೆ. ಮಧುರೆಯ ತರಬೇತುದಾರ ಜ್ಯೋತಿಪ್ರಕಾಶ್‌, ಎರಡು ತಿಂಗಳಿಗೊಮ್ಮೆ ಹೊನ್ನಾವರಕ್ಕೆ ಬಂದು ಸಮರ್ಥನಿಗೆ ತರಬೇತಿ ನೀಡುತ್ತಾರೆ.
*
ವಿರಳ ಆಟಗಾರರು
ಭಾರತದಲ್ಲಿ ಇಷ್ಟೊಂದು ದೈಹಿಕ ನ್ಯೂನತೆ ಇದ್ದುಕೊಂಡು ಸಕ್ರಿಯವಾಗಿ ಚೆಸ್‌ ಆಡುವವರು ಅತಿ ವಿರಳ. ಪ್ರಸ್ತುತ ಇಬ್ಬರಷ್ಟೇ ನೆನಪಿಗೆ ಬರುತ್ತಾರೆ. ಮಹಾರಾಷ್ಟ್ರದ ಶೈಲೇಶ್‌ ನೆರ್ಲಿಕರ್‌ ಇಂಥ ಇನ್ನೊಬ್ಬ ಆಟಗಾರ. 36 ವರ್ಷದ ಈ ಆಟಗಾರ ಮೂಳೆಯ ವಿರಳ ಕಾಯಿಲೆಯಿಂದ ಓಡಾಡಲು ಅಸಮರ್ಥನಾಗಿದ್ದಾರೆ. ಡೆಸ್ಕ್‌ ಮೇಲೆ ಮಲಗಿದ ಕಡೆಯಿಂದಲೇ ಸಣ್ಣ ಕೋಲಿನ ಮೂಲಕ ಅವರು ಚೆಸ್‌ ಕಾಯಿಗಳನ್ನು ನಡೆಸುತ್ತಾರೆ. ಇವರೂ ರೇಟೆಡ್‌ (ಪ್ರಸಕ್ತ 1479) ಆಟಗಾರರೇ. ತಾಯಿಯೇ ದೂರದ ಊರುಗಳಿಗೆ ಮಗನನ್ನು ಕರೆದುಕೊಂಡು ಹೋಗುತ್ತಾರೆ ಎನ್ನುತ್ತಾರೆ ಬೆಂಗಳೂರಿನ ಅಂತರರಾಷ್ಟ್ರೀಯ ಆರ್ಬಿಟರ್‌ ವಸಂತ್‌.

‘ಇಂಥ ಆಟಗಾರರು ಸೂಚಿಸುವ ನಡೆಗಳನ್ನು ಇಡಲು ತಂದೆ ಅಥವಾ ತಾಯಿ, ಸಹಕರಿಸಿದರೆ  ಎದುರಾಳಿ ಆಟಗಾರರು ಸಾಮಾನ್ಯವಾಗಿ ಆಕ್ಷೇಪಿಸು ವುದಿಲ್ಲ. ಒಂದು ವೇಳೆ ತಕರಾರು ಎತ್ತಿದ್ದಲ್ಲಿ, ಪಂದ್ಯ ಮುಗಿಸಿದ ಬೇರೆ ಆಟಗಾರರನ್ನು ಅಥವಾ ಚೆಸ್‌ ಗೊತ್ತಿದ್ದವರನ್ನು ಕೂರಿಸಿ ಪಂದ್ಯ ಮುಂದುವರಿಸಲಾಗುತ್ತದೆ’ ಎನ್ನುತ್ತಾರೆ ಶಿವಮೊಗ್ಗದ ಆರ್ಬಿಟರ್‌ ಮಂಜುನಾಥ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT