ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳು ಕುಟುಕೀತು...

Last Updated 5 ಅಕ್ಟೋಬರ್ 2015, 19:34 IST
ಅಕ್ಷರ ಗಾತ್ರ

ಚೇಳು ಕುಟುಕಿದರೆ ಅತೀವ ನೋವಾಗುತ್ತದೆ. ಹಾಗೆಯೇ ಜಾನುವಾರುಗಳಲ್ಲೂ ಚೇಳು ಕಡಿದು ತೊಂದರೆಯನ್ನುಂಟುಮಾಡುತ್ತವೆ. ಆದ್ದರಿಂದ ರೈತರು ಈ ಕುರಿತು ಎಚ್ಚರ ವಹಿಸುವುದು ಒಳಿತು.

ಚೇಳಿನಲ್ಲೂ ವಿವಿಧ ಬಗೆಯಿವೆ. ಇದರಲ್ಲಿ ಮುಖ್ಯವಾದವು ಕಪ್ಪು, ಕಂದು ಬಣ್ಣದ ಚೇಳುಗಳು, ಕೆಂಪು ಕಾಲಿನ ಚೇಳುಗಳು, ಹಾರುವ ಮತ್ತು ಓಡುವ ಚೇಳುಗಳು ಇತ್ಯಾದಿ. ಒಟ್ಟಾರೆ ಪ್ರಾಣಿಗಳಲ್ಲಿ ಈ ಕಪ್ಪು ಬಣ್ಣದ ಚೇಳುಗಳು ನಾಯಿ ಮತ್ತು ಬೆಕ್ಕುಗಳನ್ನು ಹೆಚ್ಚಾಗಿ ಬಾಧಿಸುತ್ತಿದ್ದು ಇದರ ವೈಜ್ಞಾನಿಕ ಹೆಸರು ಲಾಟ್ರೋಡಕ್ಟಸ್ ಮ್ಯಾಕ್ಟನ್ಸ್. ಈ ಚೇಳು ಆಲ್ಫಾ ಲಾಟರೋಟಾಕ್ಸಿನ್ ಎಂಬ ವಿಷಕಾರಿ ಅಂಶವನ್ನು ಸ್ರವಿಸುತ್ತವೆ.

ಈ ಅಂಶ ಪ್ರಾಣಿ ಮತ್ತು ಮನುಷ್ಯನ ನರಮಂಡಲದ ಮೇಲೆ ಅತಿಯಾದ ಹಾನಿಯನ್ನುಂಟು ಮಾಡುವುದಲ್ಲದೇ, ಜೀವಕೋಶಗಳ ವಿವಿಧ ಜೈವಿಕ ಕ್ರಿಯೆಗಳಿಗೆ  ಅತ್ಯವಶ್ಯಕ ವಾದ ಕ್ಯಾಲ್ಸಿಯಂ ಕಾಲುವೆಗಳ  ಜೊತೆ ಅಂಟಿಕೊಂಡು ಜೀವಕೋಶದ ಒಳಭಾಗದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದಾಗಿ ಜೀವಕೋಶದ ಸಾಮಾನ್ಯ ಜೈವಿಕ ಕ್ರಿಯೆಗೆ ಧಕ್ಕೆಯನ್ನುಂಟುಮಾಡುತ್ತದೆ. ಈ ವಿಷಕಾರಿ ಅಂಶ ಲ್ಯೂಸಿನ್, ಟೈರೋಸಿನ್ ಮತ್ತು ಹಯಲುರಿನಿಡೇಸ್ ಎಂಬ ಅಂಶಗಳ ಮಿಶ್ರಣವಾಗಿದ್ದು ಸಾಮಾನ್ಯ ಹಾವಿನ ವಿಷಕ್ಕಿಂತ 10 ರಿಂದ 15ಕ್ಕಿಂತ ಹೆಚ್ಚುಪಟ್ಟು ತೀಕ್ಷ್ಣವಾದ ವಿಷವಾಗಿದೆ.

ಈ ಚೇಳುಗಳು ಪ್ರಾಣಿಗಳನ್ನು ಕಡಿದ ಜಾಗದಲ್ಲಿ ಅತಿಯಾದ ಬೇನೆ ಕಂಡುಬರುತ್ತದೆ, ಆ ಜಾಗವನ್ನು ಸ್ವಲ್ಪ ಬಲವಾಗಿ ಒತ್ತಿದಲ್ಲಿ ಗಟ್ಟಿಯಾದ ದ್ರವದಂತೆ ಕಡಿದ ಜಾಗದಲ್ಲಿ ಉರಿಯೂತ ಕಂಡುಬರುತ್ತದೆ. ಅತಿಯಾದ ನೋವಿನಿಂದ ಪ್ರಾಣಿಗಳು ಉದ್ರೇಕಗೊಳ್ಳುತ್ತವೆ, ಪಕ್ಕೆ ಮತ್ತು ಹೊಟ್ಟೆಯ ಮಾಂಸಖಂಡಗಳು ಹಿಡಿದುಕೊಂಡಂತಾಗುತ್ತದೆ. ಮಾಂಸಖಂಡದ ಬಿಗಿತದಿಂದ ನರವ್ಯೂಹದ ಕ್ರಿಯೆಯಲ್ಲೂ ಬದಲಾವಣೆ ಕಂಡುಬರುವುದರ ಜೊತೆಗೆ ರೋಗ ಲಕ್ಷಣಗಳಾದ ವಾಂತಿ, ಹಸಿವಾಗದಿರುವಿಕೆ, ನಿಶ್ಶಕ್ತಿ, ಉಸಿರಾಟದ ತೊಂದರೆಯಿಂದ ಪ್ರಾಣಿಗಳು ಹೆಚ್ಚು ಗಾಬರಿಗೊಳ್ಳುತ್ತವೆ.

ಚೇಳಿನ ವಿಷಕಾರಿ ಅಂಶ ದೇಹದ ರಕ್ತನಾಳಗಳ ಒಳಪದರವನ್ನು ಹಾನಿಗೊಳಿಸಿ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವಂತೆ ಮಾಡಿ ಜೀವಕೋಶಗಳಿಗೆ ರಕ್ತದ ಸರಬರಾಜನ್ನು ಕುಂಠಿತಗೊಳಿಸುತ್ತದೆ. ಇದರಿಂದಾಗಿ ದೇಹದ ಎಲ್ಲಾ ಜೀವಕೋಶಗಳು ತನ್ನ ಕ್ರಿಯೆ ನಿರ್ವಹಿಸಲು ಅಶಕ್ತಗೊಂಡು ಸಾವನ್ನಪ್ಪುತ್ತವೆ. ಕೆಲವು ಸಂದರ್ಭಗಳಲ್ಲಿ ಚೇಳು ಕಡಿದ ಬಳಿಕ ಕೇವಲ 4 ರಿಂದ 6 ಗಂಟೆಗಳ ಅವಧಿಯಲ್ಲೇ ಪ್ರಾಣಿಗಳು ಸಾವನ್ನಪ್ಪಿರುವುದನ್ನೂ ಗುರುತಿಸಲಾಗಿದೆ.
*
ಚೇಳು ಕಡಿದಾಗ ಈ ಚಿಕಿತ್ಸಾ ಕ್ರಮಗಳನ್ನು ಕೈಗೊಳ್ಳಬಹುದು

* ಚೇಳು ಕಡಿದ ಜಾಗದಲ್ಲಿ ತುಂಬಾ ನೋವು ಮತ್ತು ಬಾವು ಇರುವುದರಿಂದ, ಕಚ್ಚಿದ ಜಾಗಕ್ಕೆ ಮಂಜುಗಡ್ಡೆಯನ್ನು ತಗಲಿಸಿ ಹಿಡಿಯಬೇಕು.

* ಕಡಿದ ಜಾಗಕ್ಕೆ ಸೋಂಕು ತಗಲದಂತೆ, ಆ ಜಾಗವನ್ನು ಸೋಪು ಹಚ್ಚಿ, ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.

* ಸೋಂಕು ನಿವಾರಕ ಅರಿಶಿಣವನ್ನು ಬೇವಿನ ಎಣ್ಣೆಯಲ್ಲಿ ಮಿಶ್ರ ಮಾಡಿ ಹಚ್ಚಬಹುದು.

* ಕಚ್ಚಿದ ಜಾಗದ ಸ್ವಲ್ಪ ಮೇಲೆ ಬಟ್ಟೆಯೊಂದನ್ನು ಕಟ್ಟಿದರೆ, ವಿಷ ಶರೀರಕ್ಕೆ ಏರುವ ಸಾಧ್ಯತೆ ಕಡಿಮೆಯಾಗುತ್ತದೆ. ಆದರೆ ಈ ಚಿಕಿತ್ಸೆಯನ್ನು ಚೇಳು ಕಡಿದ ಒಂದೆರಡು ಗಂಟೆಯೊಳಗೆ ಮಾಡಬೇಕು. ಒಂದು ಸಲ ವಿಷ ಶರೀರ ಸೇರಿದರೆ, ಇದರಿಂದ ಪ್ರಯೋಜನವಾಗುವುದಿಲ್ಲ.

* ಜಾನುವಾರು ನೋವಿನಿಂದ ಕಂಗಾಲಾಗಿ ದಿಕ್ಕು ತಪ್ಪಿ ಓಡುವ ಸಾಧ್ಯತೆ ಇರುವುದರಿಂದ ಅದನ್ನು ಹಗ್ಗದಿಂದ ಸರಿಯಾಗಿ ಕಟ್ಟಬೇಕು.

* ಮನೆಯಲ್ಲಿ ಅಡುಗೆ ಸೋಡಾ ಇದ್ದೇ ಇರುವುದರಿಂದ, ಚೇಳು ಕಚ್ಚಿದ ಜಾಗಕ್ಕೆ, ಅಡುಗೆ ಸೋಡಾದ ದ್ರಾವಣ ಮಾಡಿ ಹಚ್ಚಿದರೆ ಊತ ಕಡಿಮೆಯಾಗುವ ಸಾಧ್ಯತೆ ಇದೆ.

* ಚೇಳು ಕಚ್ಚಿದಾಗ, ಅದರ ವಿಷದಿಂದ ಜಾನುವಾರಿನ ಅನ್ನನಾಳ ಮತ್ತು ಶ್ವಾಸನಾಳಗಳು ಮರಗಟ್ಟುವುದರಿಂದ, ಒತ್ತಾಯ ಪೂರ್ವಕವಾಗಿ ಅದಕ್ಕೆ ನೀರು ಅಥವಾ ನಾಟಿ ಔಷಧಿ ಕುಡಿಸಲು ಹೋಗಬಾರದು. ಇದರಿಂದ, ಶ್ವಾಸನಾಳದ ಮೂಲಕ ಶ್ವಾಸಕೋಶಗಳಿಗೆ ಇವು ಹೋದರೆ ಜಾನುವಾರಿನ ಜೀವಕ್ಕೇ ಕುತ್ತು ಬಂದೀತು. ತೀವ್ರತರವಾದ ವಿಷಬಾಧೆ ಇದ್ದಲ್ಲಿ, ತುರ್ತಾಗಿ ತಜ್ಞ ಪಶುವೈದ್ಯರನ್ನು ಕರೆದು ಚಿಕಿತ್ಸೆ ಕೊಡಿಸಬೇಕು.

* ಈ ವಿಷಬಾಧೆಗೆ ಯಾವುದೇ ರೀತಿಯ ಪ್ರತಿವಿಷಇಲ್ಲದಿರುವುದರಿಂದ ವಿಷಲಕ್ಷಣಕ್ಕೆ ತಕ್ಕಂತೆ ಅವರು ಚಿಕಿತ್ಸೆ ಮಾಡಬೇಕಾಗುತ್ತದೆ.

* ಮಾಂಸಖಂಡಗಳಲ್ಲಿ ಬಿಗಿತ ಹೆಚ್ಚಾಗಿರುವುದನ್ನು ಮತ್ತು ಪ್ರಾಣಿಗಳು ಅತಿರೇಕಗೊಂಡಿರುವುದನ್ನು ನಿಯಂತ್ರಿಸಲು ಕ್ಯಾಲ್ಸಿಯಂ ಗ್ಲೂಕೋನೇಟ್, ಸೋಡಿಯಂ ಬೈ ಕಾರ್ಬೊನೇಟ್ ಔಷಧ, ಇತ್ಯಾದಿಗಳನ್ನು ಬಳಸಬಹುದು.

* ಅಗತ್ಯವಾದ ಲವಣಾಂಶಗಳ ಬಳಕೆ ಮತ್ತು ಉಸಿರಾಟಕ್ಕೆ ಅನುಕೂಲವಾಗುವ ಔಷಧಗಳನ್ನು ಸಹ ಬಳಸಬಹುದು. ತುರ್ತು ಸಂದರ್ಭದಲ್ಲಿ ಸ್ಟಿರಾಯ್ಡ್‌ಗಳು ಮತ್ತು ಅಟ್ರೋಪಿನ್ ಎಂಬ ಔಷಧಗಳಿಂದಲೂ ಉಪಚರಿಸಬಹುದಾಗಿದೆ.

* ಕೊಟ್ಟಿಗೆ, ಜಾನುವಾರು ಮೇಯುವ ಸ್ಥಳ ಇತ್ಯಾದಿಗಳಲ್ಲಿ ಚೇಳು ಇರುವ ಸಾಧ್ಯತೆ ಇರುವುದರಿಂದ ಅವು ಪ್ರಾಣಿಗಳಿಗೆ ಕುಟುಕದಂತೆ ರೈತರು ನಿಗಾ ವಹಿಸುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT